ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯ ತಾಣ ಕೆಂಗೇರಿ

Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು. ಆಗೊಮ್ಮೆ–ಈಗೊಮ್ಮೆ ಬಸ್‌ ಬರುತ್ತಿತ್ತು. ಖಾಲಿಖಾಲಿ ರಸ್ತೆಗಳಲ್ಲಿ ಅಲ್ಲೊಬ್ಬರು–ಇಲ್ಲೊಬ್ಬರು ಕಾಣಿಸುತ್ತಿದ್ದರು. ಅಂದು ಬೆಂಗಳೂರಿನ ಹೊರವಲಯ ಎನಿಸಿಕೊಂಡಿದ್ದ ಕೆಂಗೇರಿ ಇಂದು ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಭರವಸೆಯ ತಾಣ ಎನಿಸಿಕೊಂಡಿದೆ.

ನಗರೀಕರಣದಿಂದ ಬಹು ದೂರವೇ ಉಳಿದಿದ್ದ ಈ ಪ್ರದೇಶದಲ್ಲಿ ಅಂದು ಹೆಚ್ಚು ಕಾಣಿಸುತ್ತಿದ್ದುದ್ದು ರೈತಾಪಿ ಜನರು. ವಿದ್ಯಾಪೀಠ ರಸ್ತೆ, ಸಂತೆಬೀದಿಯಲ್ಲಿ ಮಾತ್ರ ಜನಸಂದಣಿ ಕಾಣಿಸುತ್ತಿತ್ತು. ಇಂದು ಕೆಂಗೇರಿ ತನ್ನ ಕದಂಬ ಬಾಹುವನ್ನು ವಿಸ್ತರಿಸಿಕೊಂಡಿದೆ. ಪಾಲಿಕೆಯ ಕೊಂಡಿಯಿಂದ ಬೃಹತ್‍ ಬೆಂಗಳೂರಿಗೆ ಸೇರಿದ ಮೇಲಂತೂ ಇದರ ವಿಸ್ತಾರ ಇನ್ನಷ್ಟು ಹೆಚ್ಚಿ, ರಿಯಲ್ ಎಸ್ಟೇಟ್ ವ್ಯವಹಾರವೂ ಗರಿಗೆದರಿದೆ.

2000ನೇ ಇಸವಿಯಲ್ಲಿ ಭೂಮಿಯ ಬೆಲೆ ಕೈಗೆಟುಕುವಂತೆಯೇ ಇತ್ತು. ಚದರ ಅಡಿಯ ಮೌಲ್ಯ ಸಾವಿರ ರೂಪಾಯಿ ದಾಟಿರಲಿಲ್ಲ. ಆದರೆ ಇಂದು ಬೆಲೆ ಕೇಳುವಂತೆಯೇ ಇಲ್ಲ.

ಬಿಜಿಎಸ್ ಆಸ್ಪತ್ರೆ ಮತ್ತು ಕಾಲೇಜು, ಆರ್‍ಎನ್‍ಎಸ್ ಐಟಿ, ಜೆಎಸ್‍ಎಸ್ ಎಂಜಿನಿಯರಿಂಗ್ ಕಾಲೇಜು, ಆರ್.ವಿ. ಕಾಲೇಜು ಸೇರಿದಂತೆ ಹಲವು ಪ್ರತಿಷ್ಠಿತ ಕಾಲೇಜು ಹಾಗೂ ಆಸ್ಪತ್ರೆಗಳು ನಿರ್ಮಾಣವಾಗಿರುವುದು ಇಲ್ಲಿಯ ಹಿರಿಮೆ. ದಶಕಗಳ ಹಿಂದೆಯೇ ನಿರ್ಮಾಣವಾದ ಗ್ಲೋಬಲ್ ವಿಲೇಜ್, ಐಟಿ ಉದ್ಯಮಿಗಳು ಕೆಂಗೇರಿಯಲ್ಲಿ ನೆಲೆಯೂರಲು ಕಾರಣವಾಯಿತು. ಭೂಮಿ ಬೆಲೆ ಬೆಂಗಳೂರಿನ ಹಲವು ಪ್ರದೇಶಗಳಿಗೆ ಹೋಲಿಸಿದರೆ ಕಡಿಮೆಯಿರುವುದರ ಜೊತೆಗೆ ಕೈಗೆಟುಕುವ ಮತ್ತು ಲಕ್ಷುರಿ ಮನೆಗಳ ಆಯ್ಕೆ ಇಲ್ಲಿದೆ. ರಂಕಾ ಅಕ್ವಾಗ್ರೀನ್, ಡಿಎಸ್‌ ಮ್ಯಾಕ್ಸ್‌, ಎರಾ ಗ್ರೂಪ್, ಸುಪ್ರೀಮ್, ಭಗಿನಿ ಡೆವಲಪರ್‌ನಂತಹ ಹಲವು ಖಾಸಗಿ ಬಿಲ್ಡರ್‌ಗಳು ಇಲ್ಲಿ ಟೌನ್‌ಶಿಪ್ ಅಭಿವೃದ್ಧಿ ಪಡಿಸುತ್ತಿದ್ದಾರೆ.

ಕೆಂಗೇರಿ ಸುತ್ತಮುತ್ತಲ ಪ್ರದೇಶದಲ್ಲಿ ಭೂಮಿಗೆ ಈಗ ಚಿನ್ನದ ಬೆಲೆ ಬಂದಿದೆ. ಕೇವಲ ನಾಲ್ಕಾರು ರಸ್ತೆಗಳು ಹಾಗೂ ಕೆಲ ಓಣಿಗಳಿಗೆ ಸೀಮಿತಗೊಂಡಿದ್ದ ಕೆಂಗೇರಿ ತನ್ನ ವ್ಯಾಪ್ತಿ ಹೆಚ್ಚಿಸಿಕೊಂಡಿದೆ. ಸುಗಮ ಸಾರಿಗೆ ಸೌಲಭ್ಯವು ಸುಂಕನಪಾಳ್ಯ, ಕೋಡಿಪಾಳ್ಯ, ದೊಡ್ಡಬಸ್ತಿ, ಬಸವೇಶ್ವರನಗರ, ನಾಗದೇವನಹಳ್ಳಿ ಬನಶಂಕರಿ ಆರನೇ ಹಂತ ಸೇರಿದಂತೆ ಇನ್ನಿತರ ಪ್ರದೇಶಗಳು ಅಭಿವೃದ್ದಿ ಹೊಂದಲು ಕಾರಣವಾಗಿದೆ. ಔಟರ್ ರಿಂಗ್ ರೋಡ್ ಎಂದು ದಶಕಗಳ ಹಿಂದೆ ಕರೆಯುತ್ತಿದ್ದ ಕೆಂಗೇರಿ ಉಪನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಜನಜಂಗುಳಿ ಹೆಚ್ಚಿದೆ.

ವಿಶ್ವೇಶ್ವರಯ್ಯ ಬಡಾವಣೆ ಸೇರಿದಂತೆ ಬಿಬಿಎಂಪಿ ಖಾತಾ ಹೊಂದಿರುವ ಕೆಂಗೇರಿ- ಉಪನಗರ ಪ್ರದೇಶ ವ್ಯಾಪ್ತಿಯಲ್ಲಿರುವ ನಿವೇಶನಗಳ ಬೆಲೆ ಚದರ ಅಡಿಗೆ ಕನಿಷ್ಠ ₹4,000 ಇದ್ದರೆ, ಮುಖ್ಯರಸ್ತೆಯಲ್ಲಿ ₹8,000 ಬೆಲೆ ಇದೆ. ಇನ್ನು ರಾಜರಾಜೇಶ್ವರಿ ನಗರದಿಂದ ಕೆಂಗೇರಿ ಉತ್ತರಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿರುವ ನಿವೇಶನಗಳು ಚದರ ಅಡಿಗೆ ಗರಿಷ್ಠ ₹15,000ವರೆಗೂ ಇದೆ. ಕೆಂಗೇರಿಯ ಸುತ್ತಮುತ್ತ ಇರುವ ಬೃಂದಾವನ ಬಡಾವಣೆ, ಪೊಲೀಸ್ ಬಡಾವಣೆ ಮತ್ತು ಸ್ವಾತಿ ಬಡಾವಣೆಗಳಲ್ಲಿ 30x40 ಅಡಿ ನಿವೇಶನ ಮೌಲ್ಯ ₹3,00,00,00 ಬೆಲೆ ಇದೆ.

ಹಲವು ಅಪಾರ್ಟ್‍ಮೆಂಟ್‌ಗಳು ಕೆಂಗೇರಿ ಸುತ್ತಮುತ್ತಲೂ ತಲೆ ಎತ್ತಿವೆ. ಇನ್ನು ಹಲವು ನಿರ್ಮಾಣ ಹಂತದಲ್ಲಿವೆ. ₹45 ಲಕ್ಷದ ಆಸುಪಾಸಿನಲ್ಲಿ ಎರಡು ಕೋಣೆಯ ಮನೆ ದೊರಕಲಿದೆ. ಕೆ.ಎಚ್.ಬಿ ಇತ್ತೀಚೆಗೆ ಕೆಂಗೇರಿಯಲ್ಲಿ ಎರಡು ಅಪಾರ್ಟ್‍ಮೆಂಟ್ ನಿರ್ಮಿಸಿದೆ. ಬಂಡೆಮಠದ ಬಳಿಯಿರುವ ಅಪಾರ್ಟ್‍ಮೆಂಟ್ ಕೈಗೆಟಕುವ ದರ ಹೊಂದಿದ್ದು 2ಬಿಎಚ್‌ಕೆ ಮನೆ ಕೇವಲ ₹ 27 ಲಕ್ಷಕ್ಕೆ ದೊರಕಲಿದೆ.

ನಗರೀಕರಣದೊಂದಿಗೆ ಗ್ರಾಮೀಣ ಸೊಗಡು ಉಳಿಸಿಕೊಂಡಿರುವ ಕೆಂಗೇರಿಯ ಕೆಲ ಭಾಗಗಳು ಈಗಲೂ ಗ್ರಾಹಕಸ್ನೇಹಿ. ಮಧ್ಯಮ ವರ್ಗದವರೂ ಕೊಳ್ಳುವ ಬೆಲೆಯಲ್ಲಿ ನಿವೇಶನಗಳು ಇಂದಿಗೂ ಲಭ್ಯವಿವೆ. ಸೆಟಲೈಟ್ ಟೌನ್‌ನ ಭಾಗವಾಗಿರುವ ಕೆಂಗೇರಿ ಮುಖ್ಯ ರಸ್ತೆ ಹೂಡಿಕೆಗೆ ಅತ್ಯಂತ ಆಕರ್ಷಣೀಯ ತಾಣ.

ನೋಟು ರದ್ದತಿ ಹಾಗೂ ರೇರಾ ಬಂದ ನಂತರ ರಿಯಲ್‌ ಎಸ್ಟೇಟ್‌ ತುಸು ಕಳಾಹೀನವಾಗಿತ್ತು. ಆದರೆ ಬೆಲೆ ಕಡಿಮೆಯಾಗಿಲ್ಲ. ಬೆಲೆ ಇಳಿದಿದೆ ಎಂಬುದು ಸುಳ್ಳು. ಬೆಲೆ ಕಡಿಮೆ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಜನರು ಹಣ ಹೂಡಿಕೆ ಮಾಡುವುದನ್ನು ನಿಲ್ಲಿಸಿದ್ದರು. ಆದರೆ ಮಾಲೀಕರು ನಿಗದಿತ ಬೆಲೆಗಿಂತ ಕಡಿಮೆ ದರಕ್ಕೆ ನಿವೇಶನ ಮಾರಲು ಸಿದ್ಧರಿರಲಿಲ್ಲ. ಇದರಿಂದ ವ್ಯಾಪಾರದಲ್ಲಿ ಸ್ವಲ್ಪ ಹಿನ್ನಡೆಯಾಗಿತ್ತು. ಈಗ ರಿಯಲ್‌ ಎಸ್ಟೇಟ್ ಮತ್ತೆ ಚಿಗುರಿದೆ ಎನ್ನುತ್ತಾರೆ ರಿಯಲ್ ಎಸ್ಟೇಟ್ ಉದ್ಯಮಿ ನವೀನ್‌.

ಬೆಂಗಳೂರು ನಗರವನ್ನು ದಕ್ಷಿಣ ಭಾಗದೊಂದಿಗೆ ಸೇರಿಸುವ ಹಾಗೂ ಮೈಸೂರಿಗೆ ಸಂಪರ್ಕಿಸುವ ಸ್ಥಳ ಕೆಂಗೇರಿ ಮುಖ್ಯರಸ್ತೆ. ಮೈಸೂರಿಗೆ ಹೋಗುವ ಬಹುತೇಕ ರೈಲುಗಳಿಗೆ ಕೆಂಗೇರಿಯಲ್ಲಿ ನಿಲುಗಡೆ ಇದೆ. ಹೊರವರ್ತುಲ ರಸ್ತೆ ಕೂಡ ಸಮೀಪದಲ್ಲಿದೆ. ಹೀಗಾಗಿ ವಿಮಾನ ನಿಲ್ದಾಣ, ಆರ್ಟ್ ಆಫ್ ಲೀವಿಂಗ್ ಆಶ್ರಮ, ಅಂತಾರಾಷ್ಟ್ರೀಯ ಗುಣಮಟ್ಟದ ಶಾಲೆ-ಕಾಲೇಜು, ಮುಂದಿನ ದಿನಗಳಲ್ಲಿ ತಲೆಯೆತ್ತಲಿರುವ ಪ್ರತಿಷ್ಠಿತ ಶಾಪಿಂಗ್ ಮಾಲ್‌ಗಳಿಗೂ ಇಲ್ಲಿಂದ ಪ್ರಯಾಣ ಸುಲಭ. ಈ ಎಲ್ಲಾ ಅಂಶಗಳು ಕೆಂಗೇರಿ ಮುಖ್ಯರಸ್ತೆಯಲ್ಲಿ ಬೇಡಿಕೆ ಹೆಚ್ಚಲು ಕಾರಣಗಳಾಗಿವೆ.

***

ಮೆಟ್ರೊ ಶೀಘ್ರ

ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ ಮಾರ್ಗದಲ್ಲಿ ನಿಲ್ದಾಣಗಳ ಕಾಮಗಾರಿ ಸಾಗಿದೆ. ಮೆಟ್ರೊ ಆರಂಭವಾದ ನಂತರ ಮೈಸೂರು ರಸ್ತೆಯ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗಲಿದೆ. ಸಾರ್ವಜನಿಕರು ಗರಿಷ್ಠ 25 ನಿಮಿಷಗಳಲ್ಲಿ ಮೆಜಸ್ಟಿಕ್‍ನಿಂದ ಕೆಂಗೇರಿ ತಲುಪುವುದು ಸಾಧ್ಯವಾಗಲಿದೆ. ಇದರಿಂದ ಕೆಂಗೇರಿ ಸುತ್ತಮುತ್ತಲ ಪ್ರದೇಶಗಳು ಸಹಜವಾಗಿ ಅಭಿವೃದ್ಧಿ ಹೊಂದುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT