ಮಂಗಳವಾರ, ಮಾರ್ಚ್ 2, 2021
29 °C

ಕಪ್ಪು–ಬಿಳುಪು ನಡುವಿನ ಕಥೆ

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

ಕಪ್ಪು–ಬಿಳುಪು ನಡುವಿನ ಕಥೆ

‘ನೋಟ್ ಬ್ಯಾನ್’... ಈ ಶಬ್ದ ಕಿವಿಗೆ ಬಿದ್ದಾಕ್ಷಣ ಪ್ರಧಾನಿ ನರೇಂದ್ರ ಮೋದಿ ಮತ್ತು ಕಪ್ಪುಹಣದ ಚಿತ್ರಣವೇ ಕಣ್ಮುಂದೆ ಬರುತ್ತದೆ. ಗರಿಷ್ಠ ಮೊತ್ತದ ನೋಟು ರದ್ದತಿಯಿಂದ ಉಂಟಾದ ಸಾಧಕ–ಬಾಧಕಗಳ ಬಗ್ಗೆ ಅನೇಕ ಚರ್ಚೆಗಳು, ವಾದಗಳು ನಡೆದಿವೆ. ಇದರ ನಡುವೆಯೇ ನೋಟು ಅಮಾನ್ಯೀಕರಣಗೊಂಡು ವರ್ಷವೂ ಕಳೆದಿದೆ. ಇಂಥದೊಂದ್ದು ವಿಷಯವನ್ನಿಟ್ಟುಕೊಂಡು ಯುವ ನಿರ್ದೇಶಕ ಬಿ.ಆರ್. ರಾಜಶೇಖರ್ ‘ಬ್ಲ್ಯಾಕ್ ಅಂಡ್ ವೈಟ್’ ಹೆಸರಿನ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾರೆ.

ಗಂಭೀರ ವಿಷಯವೊಂದನ್ನು ಕಿರುಚಿತ್ರ ಮಾಧ್ಯಮಕ್ಕೆ ಯಶಸ್ವಿಯಾಗಿ ಒಗ್ಗಿಸಿಕೊಂಡಿರುವ ರಾಜಶೇಖರ್ ನಿರ್ದೇಶನ ಎಲ್ಲೂ ಬೋರ್ ಅನಿಸುವುದಿಲ್ಲ. ಕಿರುಚಿತ್ರದ ಪ್ರತಿ ಫ್ರೇಮಿನಲ್ಲೂ ಜೀವಂತಿಕೆ ಎದ್ದುಕಾಣುತ್ತದೆ. ಕ್ಯಾಮೆರಾ ಕೌಶಲವೂ ಇಣುಕುತ್ತದೆ.

ನೋಟಿನ ವಿಷಯವನ್ನಿಟ್ಟುಕೊಂಡೇ ನಿರ್ದೇಶಕರು ಜಾಣ್ಮೆಯಿಂದ ಎರಡು ಘಟನೆಗಳನ್ನು ಹೆಣೆದಿದ್ದಾರೆ. ಆ ಎರಡು ಘಟನೆಗಳ ಮೂಲಕವೇ ವಾಸ್ತವಕ್ಕೆ ಕನ್ನಡಿ ಹಿಡಿದಿದ್ದಾರೆ. ‘ನೋಟ್ ಬ್ಯಾನ್ ಅಗತ್ಯವಿದೆಯೇ, ಇಲ್ಲವೇ ಎಂಬುದನ್ನು ಜನರ ತೀರ್ಮಾನವಾಗಬೇಕೇ ಹೊರತು ನನ್ನ ತೀರ್ಮಾನವಲ್ಲ’ ಎಂಬುದು ನಿರ್ದೇಶಕರ ಮಾತು.

ಬೀದಿಬದಿಯ ವ್ಯಾಪಾರಿ ಮತ್ತು ಆತನ ಮೂಕಿ ಮಗಳ ದಿನಚರಿಯಿಂದ ಆರಂಭವಾಗುವ ಚಿತ್ರ ತಂದೆ–ಮಗಳ ಬಾಂಧವ್ಯವನ್ನು ಭಾವುಕವಾಗಿ ಕಟ್ಟಿಕೊಡುತ್ತದೆ. ಮಾತು ಬಾರದ ಮಗಳ ಭಾವನೆಗಳನ್ನು ತನ್ನದೇ ಪರಿಭಾಷೆಯಲ್ಲಿ ಅರ್ಥ ಮಾಡಿಕೊಳ್ಳುವ ತಂದೆಗೆ ಹೇಗಾದರೂ ಮಗಳು ಮಾತನಾಡುವಂತಾದರೆ ಸಾಕು ಅನ್ನುವ ಆಸೆ.

ಆ ಆಸೆಯನ್ನು ಎದೆಯೊಳಗೆ ಜೀವಂತವಾಗಿಟ್ಟುಕೊಂಡೇ ಮಗಳನ್ನು ಶಾಲೆಗೆ ಓದಲು ಕಳಿಸುವ ಅಪ್ಪ, ಮಗಳ ಚಿಕಿತ್ಸೆಯತ್ತಲೂ ಗಮನಹರಿಸುತ್ತಾನೆ. ಇದಕ್ಕಾಗಿ ವೈದ್ಯರನ್ನು ಭೇಟಿಯಾಗುತ್ತಾನೆ. ಆ ಭೇಟಿಯಿಂದ ವಾಪಸ್ ಬರುವ ಹೊತ್ತಿಗೆ ಮಗಳು ತಪ್ಪಿಸಿಕೊಳ್ಳುತ್ತಾಳೆ. ದುಡ್ಡು ಎಂದರೆ ಕಣ್ಣರಳಿಸುವ ಮಗಳಿಗಾಗಿ ನೋಟಿನ ಮೇಲೆಯೇ ತನ್ನ ಮೊಬೈಲ್ ನಂಬರ್‌ ಅನ್ನು ಬರೆದುಕೊಟ್ಟಿರುತ್ತಾನೆ ಅಪ್ಪ.

ಅಚಾನಕ್ ಆಗಿ ತಪ್ಪಿಸಿಕೊಂಡ ಮೂಕಿ ಮಗಳ ನೆರವಿಗೆ ನೋಟು ಇನ್ನೇನು ಸಹಾಯಕ್ಕೆ ಬಂತೆನ್ನುವಷ್ಟರಲ್ಲಿ ನೋಟನ್ನು ಕಳ್ಳನೊಬ್ಬ ಕದ್ದೊಯ್ಯುತ್ತಾನೆ. ಹತಾಶೆಯಿಂದ ಅತ್ತುಅತ್ತು ಬೀದಿ ಬದಿಯಲ್ಲಿ ಮಲಗುವ ಆ ಪುಟಾಣಿಗೆ ಮತ್ತೆ ಅದೇ ನೋಟು ವಾಪಸ್ ಸಿಗುತ್ತದೆ.

ಕಿರುಚಿತ್ರದ ಎರಡನೇ ಘಟನೆಯಲ್ಲಿ, ಕಪ್ಪು ಹಣವನ್ನು ಕ್ರೋಢಿಕರಿಸಿ ಬದುಕುವ ತಂದೆಯೊಬ್ಬನಿಗೆ ಮಗಳು, ‘ಅಪ್ಪ, ದೇಶಕ್ಕಾಗಿ ನೀನೇನು ಮಾಡಿದ್ದೀಯಾ?’ ಎಂದು ಎಸೆಯುವ ಪ್ರಶ್ನೆಯೊಂದು ಸವಾಲಾಗಿ ಕಾಡುತ್ತದೆ. ಆ ಸವಾಲಿನಿಂದಾಗಿಯೇ ತಂದೆಯ ಮನ ಪರಿವರ್ತನೆಯಾಗುವ ದೃಶ್ಯ ಈ ಕಿರುಚಿತ್ರದಲ್ಲಿದೆ. ಆದರೆ, ಆ ತಂದೆ ತನ್ನ ಕಪ್ಪು ಹಣವನ್ನು ಮಧ್ಯರಾತ್ರಿ ಭಿಕ್ಷುಕರಿಗೆ ಹಂಚುವುದರಿಂದ ಪ್ರಯೋಜವಾದರೂ ಏನು ಎಂಬುದನ್ನು ನಿರ್ದೇಶಕರು ಒಮ್ಮುಖವಾಗಿ ಮಾತ್ರ ಯೋಚಿಸುತ್ತಾರೆ. ಇದು ಕಿರುಚಿತ್ರದ ಮಿತಿಯೂ ಆಗಿದೆ.

‘ದೇಶದ ಅಭಿವೃದ್ಧಿ ಕರೆನ್ಸಿ ಮೇಲೆ ನಿಂತಿಲ್ಲ. ಕಾಮನ್‌ಮನ್‌ ನಿರ್ಧಾರದ ಮೇಲೆ ನಿಂತಿದೆ’ ಎನ್ನುವ ಸಂದೇಶವೂ ಈ ಕಿರುಚಿತ್ರದಲ್ಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.