ಬುಧವಾರ, ಫೆಬ್ರವರಿ 24, 2021
23 °C

ಅದಿರು ಉತ್ಪಾದನೆ ಮಿತಿ ಹೆಚ್ಚಿಸಿದ ಸುಪ್ರೀಂಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅದಿರು ಉತ್ಪಾದನೆ ಮಿತಿ ಹೆಚ್ಚಿಸಿದ ಸುಪ್ರೀಂಕೋರ್ಟ್‌

ನವದೆಹಲಿ: ರಾಜ್ಯದ ಗಣಿಗಳಿಂದ ಅದಿರು ಉತ್ಪಾದನೆಯ ಪ್ರಮಾಣದ ಮಿತಿಯನ್ನು ವಾರ್ಷಿಕ 3 ಕೋಟಿ ಟನ್‌ನಿಂದ 3.50 ಕೋಟಿ ಟನ್‌ಗೆ ಹೆಚ್ಚಿಸಿ ಸುಪ್ರೀಂ ಕೋರ್ಟ್ ಗುರುವಾರ ಆದೇಶ ನೀಡಿದೆ.

ಬಳ್ಳಾರಿ ಜಿಲ್ಲೆಯಲ್ಲಿರುವ ‘ಎ’ ಮತ್ತು ‘ಬಿ’ ಕೆಟಗರಿ ಗಣಿಗಳಿಂದ ಅದಿರು ಉತ್ಪಾದಿಸುವ ಮಿತಿಯನ್ನು ವಾರ್ಷಿಕ 2.50 ಕೋಟಿ ಟನ್‌ನಿಂದ 2.80 ಕೋಟಿ ಟನ್‌ಗೆ ಹಾಗೂ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ ‘ಎ’ ಮತ್ತು ‘ಬಿ’ ಕೆಟಗರಿ ಗಣಿಗಳಿಗೆ ವಿಧಿಸಲಾಗಿದ್ದ 50 ಲಕ್ಷ ಟನ್‌ ವಾರ್ಷಿಕ ಮಿತಿಯನ್ನು 70 ಲಕ್ಷ ಟನ್‌ಗೆ ಹೆಚ್ಚಿಸಿ ನ್ಯಾಯಮೂರ್ತಿ ರಂಜನ್‌ ಗೋಗೊಯ್‌ ನೇತೃತ್ವದ ತ್ರಿಸದಸ್ಯ ಪೀಠವು ಆದೇಶಿಸಿತು.

ಅದಿರು ಉತ್ಪಾದನೆಯ ಮಿತಿಯನ್ನು ಹೆಚ್ಚಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶಿತ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸು ಮಾಡಿತ್ತು. ರಾಜ್ಯ ಸರ್ಕಾರವೂ ಮಿತಿ ಹೆಚ್ಚಳಕ್ಕೆ ಕೋರಿತ್ತು. ಆದರೆ, ಧಾರವಾಡದ ಸಮಾಜ ಪರಿವರ್ತನ ಸಮುದಾಯ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು.

ಅದಿರು ಉತ್ಪಾದನೆಯ ವಾರ್ಷಿಕ ಮಿತಿಯನ್ನು 4 ಕೋಟಿ ಟನ್‌ಗೆ ಹೆಚ್ಚಿಸಬೇಕಲ್ಲದೆ, ಕ್ರಮೇಣ ಅದನ್ನು 5 ಕೋಟಿ ಟನ್‌ಗೆ ನಿಗದಿಗೊಳಿಸಬೇಕು ಎಂಬ ರಾಜ್ಯ ಉಕ್ಕು ಉತ್ಪಾದಕರ ಸಂಘ ಹಾಗೂ ಫೆಡರೇಷನ್‌ ಆಫ್‌ ಇಂಡಿಯನ್‌ ಮಿನರಲ್ಸ್‌ (ಫೆಮಿ)ನ ಭಾರಿ ಪ್ರಮಾಣದ ಕೋರಿಕೆಗೆ ಸಿಇಸಿ ಮಾಜಿ ಸದಸ್ಯ ಕಾರ್ಯದರ್ಶಿ ಎಂ.ಕೆ. ಜೀವ್ರಾಜ್ಕ ವಿರೋಧ ವ್ಯಕ್ತಪಡಿಸಿದ್ದರು. ಮಿತಿಯ ಹೆಚ್ಚಳದ ಕುರಿತು ತಜ್ಞರ ಅಭಿಪ್ರಾಯವೇ ಮುಖ್ಯ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.

ಆದರೆ, ಜೀವ್ರಾಜ್ಕ ಅವರ ವಾದ ತಳ್ಳಿಹಾಕಿದ ನ್ಯಾಯಪೀಠವು, 2011ರಲ್ಲಿ ಮಿತಿ ನಿಗದಿಗೊಳಿಸಿದಾಗ ನಿರ್ದಿಷ್ಟ ಗಣಿಗಳಿಂದ ಅದಿರು ಉತ್ಪಾದಿಸುವುದರ ಮೇಲೆ ಯಾವುದೇ ರೀತಿಯ ನಿಯಂತ್ರಣವೇ ಇರಲಿಲ್ಲ. ಆದರೆ, ಸದ್ಯದ ಸ್ಥಿತಿ ಭಿನ್ನವಾಗಿದ್ದು, ಅದಿರು ನಿಕ್ಷೇಪವೂ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಎಂದು ಅಭಿಪ್ರಾಯಪಟ್ಟಿತು.

ಅಕ್ರಮ ಗಣಿಗಾರಿಕೆ ಮತ್ತು ಗಣಿ ಒತ್ತುವರಿಯಿಂದಾಗಿ ಅರಣ್ಯ ಭೂಮಿ ಹಾಗು ಪರಿಸರದ ಮೇಲೆ ಉಂಟಾಗಿದ್ದ ದುಷ್‍ಪರಿಣಾಮದ ಕುರಿತೂ ನ್ಯಾಯಾಲಯ ಗಮನ ಹರಿಸಿದೆ. ಅಂತೆಯೇ, ವೈಜ್ಞಾನಿಕ ಅಧ್ಯಯನದ ಮೂಲಕ ತಜ್ಞರು ನೀಡಿದ ಸಲಹೆಯ ಮೇರೆಗೆ ಗಣಿ ಪ್ರದೇಶಗಳ ಪುನರ್ವಸತಿ ಮತ್ತು ಪುನರುಜ್ಜೀವನ (ಆರ್‌ ಅಂಡ್‌ ಆರ್‌) ಯೋಜನೆಗೆ ಸೂಚಿಸಲಾಗಿದೆ. ವಾರ್ಷಿಕ ಉತ್ಪಾದನೆಯ ಮಿತಿಯ ಹೆಚ್ಚಳಕ್ಕೆ ಅವಕಾಶ ನೀಡಬಹುದಾಗಿದೆ ಎಂದು ಪೀಠ ತಿಳಿಸಿತು.

‘ಸಿ’ ಕೆಟಗರಿ ಗಣಿಗಳಲ್ಲಿ ಅದಿರು ಉತ್ಪಾದಿಸುವುದಕ್ಕೆ ಸಂಬಂಧಿಸಿದಂತೆ ಈ ಹಂತದಲ್ಲಿ ಪ್ರತ್ಯೇಕವಾಗಿ ಮಿತಿ ಹೇರುವ ಅಗತ್ಯವಿಲ್ಲ. ಈ ಕುರಿತು ಕ್ರಮೇಣ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ನ್ಯಾಯಮೂರ್ತಿಗಳಾದ ಅಭಯ್‌ ಮನೋಹರ್ ಸಪ್ರೆ ಹಾಗೂ ನವೀನ್‌ ಸಿನ್ಹಾರ ಒಳಗೊಂಡ ಪೀಠ ಹೇಳಿತು.

ರಾಜ್ಯದಲ್ಲಿನ ‘ಸಿ’ ಕೆಟಗರಿಯ 14 ಗಣಿಗಳ ಪೈಕಿ 7 ಗಣಿಗಳ ಹರಾಜು ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಪೂರ್ಣಗೊಳಿಸಿದ್ದು, ಜೆಎಸ್‌ಡಬ್ಲ್ಯೂ ಸ್ಟೀಲ್ಸ್‌ ಕಂಪೆನಿ 5 ಗಣಿಗಳ ಗುತ್ತಿಗೆ ಪಡೆದಿದೆ. ಮುಂದಿನ 18ರಿಂದ 21 ತಿಂಗಳುಗಳ ನಂತರವೇ ಆ ಗಣಿಗಳಲ್ಲಿ ಅದಿರು ಉತ್ಪಾದನೆ ಆರಂಭ ಆಗುವ ಸಾಧ್ಯತೆ ಇರುವುದರಿಂದ ಮಿತಿ ಹೇರಿಕೆ ಕುರಿತು ಈಗಲೇ ನಿರ್ಧಾರ ಕೈಗೊಳ್ಳಬೇಕಿಲ್ಲ ಎಂದು ಪೀಠ ಹೇಳಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.