ಮಂಗಳವಾರ, ಮಾರ್ಚ್ 9, 2021
23 °C

ಶಾಲಾ ಬಾಲಕಿ ಮೇಲೆ ಚಾಕುವಿನಿಂದ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಲಾ ಬಾಲಕಿ ಮೇಲೆ ಚಾಕುವಿನಿಂದ ಹಲ್ಲೆ

ಹೊನ್ನಾವರ: ತಾಲ್ಲೂಕಿನ ಶಾಲಾ ಬಾಲಕಿಯೊಬ್ಬಳ ಮೇಲೆ ಗುರುವಾರ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳುವ

ಪ್ರಯತ್ನದಲ್ಲಿ ಬಾಲಕಿಯ ಎರಡೂ ಕೈಗಳಿಗೆ ಗಾಯವಾಗಿದ್ದು, ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ತಾಲ್ಲೂಕಿನ ಮಾಗೋಡು ಗ್ರಾಮದ ಕಾವ್ಯಾ ಶೇಖರ ನಾಯ್ಕ ಗಾಯಗೊಂಡ ವಿದ್ಯಾರ್ಥಿನಿ. ಘಟನೆಯಿಂದ ತಾಲ್ಲೂಕಿನಾದ್ಯಂತ ಮತ್ತೆ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ವರ್ತಕರು ಅಂಗಡಿ–ಮುಂಗಟ್ಟುಗಳನ್ನು ಬಂದ್‌ ಮಾಡಿದರು. ಮಾಗೋಡಿನಲ್ಲಿ ಪಂಚಾಯ್ತಿ ಸದಸ್ಯರೊಬ್ಬರ ತೋಟಕ್ಕೆ ದುಷ್ಕರ್ಮಿಗಳು ನುಗ್ಗಿ ಹಾನಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕಾವ್ಯಾ, ಮಾಗೋಡು ಗ್ರಾಮದ ಸಂಶಿಯ ಶಾರಾದಾಂಬಾ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ. ಈಕೆ ಕೊಡ್ಲಗದ್ದೆಯಲ್ಲಿರುವ ತನ್ನ ಮನೆಯಿಂದ ಸುಮಾರು 7ಕಿ.ಮೀ. ದೂರವಿರುವ ತನ್ನ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಳು. ಮಾರ್ಗಮಧ್ಯದಲ್ಲಿ ಹೊಸಗದ್ದೆಯ ಮಾಳಗುಂಡಿ ಕ್ರಾಸ್‌ನಲ್ಲಿ ಬೆಳಿಗ್ಗೆ 8 ಗಂಟೆಗೆ ಆಗಂತುಕರಿಬ್ಬರು ಆಕೆಯ ಮೇಲೆ ದಾಳಿ ನಡೆಸಿದ್ದಾರೆ.

ಪೊದೆಯಲ್ಲಿ ಅಡಗಿದ್ದರು: ‘ಪೊದೆಯೊಂದರ ಹಿಂದೆ ಅಡಗಿದ್ದ ಇಬ್ಬರು ಬಂದು ನನ್ನ ಬಾಯಿ ಕಟ್ಟಿದರು. ದಪ್ಪಗಿದ್ದ ಒಬ್ಬನ ಮುಖದಲ್ಲಿ ಮೀಸೆ ಹಾಗೂ ಗಡ್ಡವಿತ್ತು. ಇನ್ನೊಬ್ಬ ಸ್ವಲ್ಪ ಸಣ್ಣಗಿದ್ದ. ಅವರ ಕೈಯಲ್ಲಿ ಚಾಕುವಿನಂತಹ ಹರಿತ ವಸ್ತುವೊಂದಿತ್ತು. ನಾನು ಬಿಡಿಸಿಕೊಳ್ಳಲು ಯತ್ನಿಸಿದಾಗ ಆ ವಸ್ತುವಿನಿಂದ ನನ್ನ ಎರಡೂ ಕೈಗಳಿಗೆ ಗಾಯವಾಯಿತು. ಎಡಗೈಗೆ ಹೆಚ್ಚು ಗಾಯವಾಗಿದೆ. ಆ ಸಮಯದಲ್ಲಿ ಬೈಕ್‌ ಹಾರ್ನ್ ಕೇಳಿಸಿದಾಗ ಈ ವ್ಯಕ್ತಿಗಳು ತಮ್ಮ ಬೈಕ್‌ ಏರಿ ಅಲ್ಲಿಂದ ಪರಾರಿಯಾದರು. ನಾನು ಅಲ್ಲಿಂದ ಮತ್ತೆ ಸುಮಾರು ಮೂರು ಕಿ.ಮೀ. ದೂರ ನಡೆದು ಹೋಗಿ ಮಾಗೋಡಿನ ಅಂಗಡಿಕಾರರೊಬ್ಬರಿಗೆ ವಿಷಯ ತಿಳಿಸಿದೆ’ ಎಂದು ಬಾಲಕಿ ಕಾವ್ಯಾ ನಡೆದ ಘಟನೆ ವಿವರಿಸಿದಳು.

ತಮ್ಮ ಮಗಳ ಮೇಲೆ ನಡೆದ ಹಲ್ಲೆಯಿಂದ ತೀವ್ರ ಭಯಭೀತರಾಗಿದ್ದ ಕಾವ್ಯಾಳ ತಾಯಿ ಮಹಾಲಕ್ಷಿ ಹಾಗೂ ತಂದೆ ಚಂದ್ರಶೇಖರ ನಾಯ್ಕ, ‘ಮಗಳು ದಿನಾಲು 7 ಕಿ.ಮೀ. ನಡೆದು ಒಬ್ಬಳೇ ಶಾಲೆಗೆ ಹೋಗುತ್ತಾಳೆ. ವಿಶೇಷ ವಾಹನದ ವ್ಯವಸ್ಥೆ ಮಾಡಿದರೆ ತುಂಬಾ ವೆಚ್ಚ ತಗಲುತ್ತದೆ. ಘಟನೆಯಿಂದ ಹೆದರಿರುವ ಮಗಳು ಶಾಲೆಗೇ ಹೋಗುವುದಿಲ್ಲವೆಂದು ಹೇಳುತ್ತಿದ್ದಾಳೆ’ ಎಂದು ದುಃಖಿತರಾದರು.

ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿದ್ದಂತೆಯೇ ಪಟ್ಟಣ ಹಾಗೂ ತಾಲ್ಲೂಕಿನ ಇತರೆಡೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆ ಹಾಗೂ ಇತರೆಡೆಗಳಲ್ಲಿ ಜನರು ಗುಂಪಾಗಿ ಸೇರಿದರು.

ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಹಾಗೂ ಎಸ್ಪಿ ವಿನಾಯಕ ಪಾಟೀಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಾಲ್ಲೂಕಿನಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ನಿಷೇಧಾಜ್ಞೆ ಜಾರಿ

ಮುನ್ನೆಚ್ಚರಿಕೆ ಕ್ರಮವಾಗಿ, ತಾಲ್ಲೂಕಿನಾದ್ಯಂತ ಶುಕ್ರವಾರ ಬೆಳಿಗ್ಗೆ 11ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು ಈ ಬಗ್ಗೆ ಧ್ವನಿವರ್ಧಕದ ಮೂಲಕ ಪ್ರಚಾರ ಕೂಡ ಮಾಡಲಾಯಿತು.

‘ಐದಕ್ಕಿಂತ ಹೆಚ್ಚು ಜನರು ಒಂದೆಡೆ ಗುಂಪುಗೂಡುವಂತಿಲ್ಲ. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು’ ಎಂದು ಉಪವಿಭಾಗಾಧಿಕಾರಿ ಎಂ.ಎನ್‌.ಮಂಜುನಾಥ ಮನವಿ ಮಾಡಿದರು.

ಆರೋಪಿಗಳ ಪತ್ತೆಗೆ ಶೋಧ: ‘ಮಾಗೋಡಿನಲ್ಲಿ ನಡೆದಿರುವ ಘಟನೆಯ ಕುರಿತು ಪೊಲೀಸರು ಕೂಲಂಕಷ ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆ ಕಾರ್ಯ ನಡೆದಿದೆ. ಆರೋಪಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಸಂತ್ರಸ್ತ ಬಾಲಕಿಗೆ ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪಟ್ಟಣದಲ್ಲಿ ಗುಂಪೊಂದು ಬಲವಂತವಾಗಿ ಅಂಗಡಿ ಮುಚ್ಚಿಸಿ ಬಂದ್ ವಾತಾವರಣ ಸೃಷ್ಟಿಸುತ್ತಿದ್ದು, ಈ ಬಗ್ಗೆ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್‌ ತಿಳಿಸಿದರು.

ವದಂತಿ ಸೃಷ್ಟಿ: ಜಿಲ್ಲೆಯಲ್ಲಿ 106 ಕ್ರಿಮಿನಲ್‌ ಪ್ರಕರಣ ದಾಖಲು

ಕಾರವಾರ: ‘ಹೊನ್ನಾವರದ ಪರೇಶ ಮೇಸ್ತ ಸಾವಿನ ಕುರಿತಾಗಿ ವಾಟ್ಸ್‌ಆ್ಯಪ್, ಫೇಸ್‌ಬುಕ್ ಮತ್ತು ಆನ್‌ಲೈನ್ ಸುದ್ದಿ ತಾಣಗಳ ಮೂಲಕ ವದಂತಿಗಳನ್ನು ಹರಡುವವರ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಇದುವರೆಗೂ ಒಟ್ಟು 106 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ವಿ.ಪಾಟೀಲ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.