ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಳನಾಯಕಿ ನಾನಲ್ಲ...

Last Updated 20 ಡಿಸೆಂಬರ್ 2017, 14:31 IST
ಅಕ್ಷರ ಗಾತ್ರ

ಒಬ್ಬ ಕಲಾವಿದೆಯಾಗಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬೇಕಾಗುತ್ತದೆ ಎಂಬ ಅರಿವು ನನಗಿದೆ. ಆದರೂ, ‘ವಿಲನ್’ ಆಗುವುದಂದ್ರೆ ನನಗೆ ಅದೇನೊ ಕಳವಳ. ಹಗೆತನ, ದ್ವೇಷ, ಪ್ರತೀಕಾರ, ಸೇಡು, ನಮ್ಮವರ ಮೇಲೇ ನಾವು ಕ್ರೌರ್ಯ ಎಸಗುವುದು ಇದೆಲ್ಲ ನನ್ನ ಸ್ವಭಾವಕ್ಕೆ ವಿರುದ್ಧವಾದುದು. ಇಂಥ ಪಾತ್ರಗಳನ್ನು ನಿಭಾಯಿಸುವುದು ಕಷ್ಟ ಅನಿಸುತ್ತೆ.

ಒಂದು ಪಾತ್ರ ಒಪ್ಪಿಕೊಂಡ ಮೇಲೆ ನಾವೇ ಪಾತ್ರವಾಗಬೇಕಾಗುತ್ತದೆ. ಆ ಪಾತ್ರ ನಮ್ಮ ಸ್ವಭಾವಕ್ಕೆ ವಿರುದ್ಧವಾಗಿದ್ದಾಗ ಕಷ್ಟ ಆಗುತ್ತೆ. ‘ಅಗ್ನಿಸಾಕ್ಷಿ’ ಧಾರಾವಾಹಿಯನ್ನು ಕೈ ಬಿಡಲು ಇದೂ ಒಂದು ಕಾರಣ. ಆದರೆ, ಇದೊಂದೇ ಕಾರಣ ಅಂತೇನೂ ಅಲ್ಲ. ‘ತನು’ ಪಾತ್ರದ ಸ್ವಭಾವ ಇದ್ದಕ್ಕಿದ್ದಂತೆ ನೆಗೆಟಿವ್‌ ಶೇಡ್‌ ಪಡೆಯಿತು. ಅದು ಜನರಿಗೂ ಇಷ್ಟವಾಗಲಿಲ್ಲ. ಫೇಸ್‌ಬುಕ್‌ನಲ್ಲಿ ಸಾಕಷ್ಟು ಜನ ಅದನ್ನು ಹೇಳಿಕೊಂಡರು. ನಾಲ್ಕು ವರ್ಷಗಳಿಂದ ಸಾಧುಪ್ರಾಣಿಯಂತಿದ್ದ ‘ತನು’ ಇದ್ದಕ್ಕಿದ್ದಂತ ವ್ಯಗ್ರವಾಗಿದ್ದು ಜನಕ್ಕೆ ಇಷ್ಟವಾಗಲಿಲ್ಲ. ನನಗೂ ಆ ಪಾತ್ರಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಯಿತು.

ಇನ್ನು ಪತ್ತೆದಾರಿ ಪ್ರತಿಭಾದಿಂದ ಆಚೆ ಬರಲು ಬೇರೆ ಕಾರಣವಿದೆ. ಎರಡೂ ಧಾರಾವಾಹಿಗಳ ಸಮಯ ಒಂದೇ ಆಯಿತು. ಒಬ್ಬರು ಒಂದೇ ವೇಳೆಗೆ ಎರಡು ವಾಹಿನಿಗಳಲ್ಲಿ ಕಾಣಿಸಿಕೊಳ್ಳುವುದು ಒಳ್ಳೆಯದಲ್ಲ. ಒಟ್ಟಿಗೆ ಎರಡು ದೋಣಿಗಳಲ್ಲಿ ಕಾಲಿಡುವುದು ಕಲಾವಿದರಿಗೂ ಶ್ರೇಯಸ್ಸಲ್ಲ. ಹೀಗಾಗಿ ‘ಪತ್ತೆದಾರಿ ಪ್ರತಿಭಾ’ದಿಂದಲೂ ಆಚೆ ಬರಬೇಕಾಯಿತು.

ಕಾಲೆಳೆಯುವವರಿಗೆ ಕೆಲಸವೇ ಉತ್ತರ

ನಾನಾಗ ಪಿಯುಸಿ ಓದುತ್ತಿದ್ದೆ. ಮಾಸ್ಟರ್ ಆನಂದ್ ನಿರ್ದೇಶನದ ಪಡುವಾರಳ್ಳಿ ಪಡ್ಡೆಗಳು ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತು. ಅಲ್ಲಿಂದ ಮತ್ತೆ ಅವಕಾಶಕ್ಕಾಗಿ ಹುಡುಕುವ ಪ್ರಮೇಯವೇ ಬರಲಿಲ್ಲ. ‘ಗುರುರಾಘವೇಂದ್ರ ವೈಭವ’ ಧಾರಾವಾಹಿ ಒಂದು ರೀತಿಯ ಹೊಸ ಅನುಭವವನ್ನೇ ಕಟ್ಟಿಕೊಟ್ಟಿತು. ಅದು ತುಂಬಾ ಗಂಭೀರವಾದ ಪಾತ್ರ. ಹಳಗನ್ನಡ ಭಾಷೆಯ ಉಚ್ಚಾರ ಸವಾಲೆನಿಸಿತು. ಆದರೆ, ನಿರ್ದೇಶಕರು ಭಾಷೆಯ ಸ್ಪಷ್ಟ ಉಚ್ಚಾರಣೆ ಬಗ್ಗೆ ಪಾಠ ಮಾಡಿದರು. ಅಲ್ಲಿಂದ ಕಾರ್ತಿಕ ದೀಪ, ದೀಪವು ನಿನ್ನದೇ, ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿದೆ.

ಈ ನಡುವೆ ಎರಡು ತೆಲುಗು ಧಾರಾವಾಹಿಗಳಲ್ಲೂ ಕೆಲಸ ಮಾಡಿದೆ. ಭಾಷೆ ಸರಿ ಇಲ್ಲ, ಅಭಿನಯ ಬರಲ್ಲ ಅಂತ ಕಾಲೆಳೆದವರಿಗೆ ನನ್ನ ಕೆಲಸಗಳೇ ಉತ್ತರ.

‘ಇವರಿಗೆ ಇದು ಬರಲ್ಲ. ಇವರಿಂದ ಇದು ಆಗಲ್ಲ’ ಅಂತ ಯಾರ ಬಗ್ಗೆ ಯಾರೂ ಸರ್ಟಿಫಿಕೇಟ್ ಕೊಡಬಾರದು. ಪ್ರಯತ್ನ ಹಾಗೂ ಪರಿಶ್ರಮ ಇದ್ದರೆ ಯಾರು ಏನು ಬೇಕಾದರೂ ಮಾಡಬಹುದು. ಅದಕ್ಕೆ ನಾನೇ ಉದಾಹರಣೆ.

ಮೊದಲೆಲ್ಲ ಇಂಥ ಮಾತುಗಳಿಗೆ ಕುಸಿದು ಹೋಗುತ್ತಿದ್ದೆ. ಆಗ ಅಮ್ಮನೇ ಧೈರ್ಯ ಹೇಳ್ತಿದ್ರು– ‘ಇಂಥ ಟೀಕೆಗಳಿಗೆಲ್ಲ ನಿನ್ನ ಕೆಲಸಗಳೇ ಉತ್ತರವಾಗಬೇಕು’ ಅಂತ.

‘ಕಾವೇರಿ’ ನನ್ನ ಕನಸು

ಇಂಥದ್ದೊಂದು ಪಾತ್ರ ಮಾಡಬೇಕು ಅನ್ನೋದು ಬಹುದಿನದ ಕನಸಾಗಿತ್ತು. ಕುತೂಹಲಭರಿತ ಕಥೆ, ಪ್ರತಿಯೊಂದು ಹಂತದಲ್ಲೂ ಹೊಸ ತಿರುವು ಹೊತ್ತು ಸಾಗುತ್ತಿರುವ ಕಾವೇರಿಯ ಭಾಗವಾಗಲು ಹೆಮ್ಮೆ ಎನಿಸುತ್ತದೆ. ‘ಕಾವೇರಿ’ಯಾಗಲು ನನ್ನ ಶಕ್ತಿ–ಸಾಮರ್ಥ್ಯವನ್ನೆಲ್ಲ ಬಸಿಯುತ್ತಿದ್ದೇನೆ.

ಅಮ್ಮನ ಕನಸೇ ಈ ಶೋಭಾ ಶೆಟ್ಟಿ

ಜೀವನವೇ ಹೀಗೆ ಅನಿಸುತ್ತೆ. ನಮ್ಮ ಜೀವನದಲ್ಲಿ ಏನು ಬೇಕು ಅಂತ ನಾವು ಕೇಳುವ ಮೊದಲೇ ದೇವರು ನಮಗಾಗಿ ಏನೋ ಎತ್ತಿಟ್ಟಿರುತ್ತಾನೆ. ನಾನು ನಟಿಯಾಗುವೆ ಎನ್ನುವ ಸಣ್ಣ ಸುಳಿವೂ ಇರಲಿಲ್ಲ. ಎಂಜಿನಿಯರ್‌ ಆಗಬೇಕಿತ್ತು. ಆಕಸ್ಮಿಕವಾಗಿ ಬಂದ ಅವಕಾಶ ನನ್ನನ್ನು ಇಂದು ಇಲ್ಲಿ ತಂದು ನಿಲ್ಲಿಸಿದೆ. ಆದರೆ, ಅಮ್ಮನಿಗೆ ನಾನು ನಟಿಯಾಗಬೇಕು ಎನ್ನುವ ಅದಮ್ಯ ಹಂಬಲವಿತ್ತು. ಅಮ್ಮನ ಕನಸೇ ಇಂದಿನ ಶೋಭಾ ಶೆಟ್ಟಿ.

‘ಅಂಜನಿಪುತ್ರ’ನ ತಂಗಿ

ಅದು ನನ್ನ ಬದುಕಿನ ಮತ್ತೊಂದು ಮಹತ್ವದ ಕ್ಷಣ. ಹರ್ಷ ಮಾಸ್ಟರ್ ಕರೆ ಬಂದಾಗ ನನ್ನೇ ನಾ ನಂಬಲಿಲ್ಲ. ‘ಪವರ್‌ ಸ್ಟಾರ್‌’ ಪುನೀತ್‌ರಾಜ್‌ಕುಮಾರ್‌ ನಟಿಸಿರುವ ‘ಅಂಜನಿಪುತ್ರ’ ಚಿತ್ರದಲ್ಲಿ ತಂಗಿಯ ಪಾತ್ರಕ್ಕಾಗಿ ಹುಡುಕಾಟದಲ್ಲಿದ್ದ ಅವರು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನನ್ನ ಪಾತ್ರ ನೋಡಿ ನನಗೆ ಕರೆ ಮಾಡಿದ್ದರು.

ಮೊದಲ ದಿನ ಧೈರ್ಯದಿಂದಲೇ ಶೂಟಿಂಗ್‌ಗೆ ಹೋದೆ. ಆದ್ರೆ ಪುನೀತ್ ಎದುರು ಮೊದಲ ಡೈಲಾಗ್ ಹೇಳಬೇಕಿತ್ತು. ಕ್ಷಣ ಬೆವೆತು ಹೋದೆ. ಆದರೆ, ಪುನೀತ್ ಬಂದು ಹಗ್ ಮಾಡಿದರು. ‘ನಾನೂ ಕೂಡ ತುಂಬಾ ಚಿಕ್ಕೋನು, ಎಲ್ರೂ ಪ್ರತಿದಿನ ಕಲಿಯೋದಿರುತ್ತೆ, ಹೆದರಬೇಡ’ ಅಂದ್ರು. ಆ ಒಂದು ಮಾತು ನನ್ನಲ್ಲಿನ ಭಯವನ್ನು ಹೊಡೆದೋಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT