3

ಶ್ವೇತ ಸುಂದರಿಯ ಅಂತರಂಗ

Published:
Updated:
ಶ್ವೇತ ಸುಂದರಿಯ ಅಂತರಂಗ

‘ಶ್ರೀರಸ್ತು ಶುಭಮಸ್ತು’ ಮತ್ತು ‘ರಾಧಾ ರಮಣ’ ಧಾರಾವಾಹಿಗಳ ಸೌಮ್ಯ ಸ್ವಭಾವದ ಸೊಸೆ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಮನದಲ್ಲಿ ನೆಲೆ ನಿಂತವರು ನಟಿ ಶ್ವೇತಾ ಆರ್. ಪ್ರಸಾದ್. ಶಿವಮೊಗ್ಗದಲ್ಲಿ ಹುಟ್ಟಿ ಬೆಳೆದ ಶ್ವೇತಾ ಎಂಜಿನಿಯರಿಂಗ್ ಪದವೀಧರೆ. ವಾಸ್ತುಶಿಲ್ಪಿ ಆಗಬೇಕೆಂದು ಕನಸು ಕಂಡ ಈ ಚೆಲುವೆಗೆ ಬಣ್ಣದ ಬದುಕು ಒಲಿದದ್ದು ಆಕಸ್ಮಿಕವಾಗಿ.

ಸೊಸೆ ಅಂದರೆ ಹೀಗಿರಬೇಕಪ್ಪ, ಹೆಂಡತಿಯಾಗುವವಳು ಹೀಗಿದ್ದರೆ ಚೆನ್ನ.. ಎಂದು ವೀಕ್ಷಕರು ಬಯಸುವಷ್ಟು ಚೆನ್ನಾಗಿ ನಟಿಸುವ ಶ್ವೇತಾ, ನಿಜಜೀವನದಲ್ಲಿ ಆರ್.ಜೆ. ಪ್ರದೀಪ್ ಅವರ ಮುದ್ದಿನ ಮಡದಿ. ಧಾರಾವಾಹಿಯ ಬ್ಯುಸಿ ಶೆಡ್ಯೂಲ್ ನಡುವೆ ಸಂಸಾರವನ್ನೂ ಸರಿದೂಗಿಸುತ್ತಿರುವ ಈ ಜಾಣೆ, ನಿಜಜೀವನದಲ್ಲೂ ರಾಧಾ ಮಿಸ್‌ನಷ್ಟೇ ಸರಳ. ನನ್ನ ಸ್ವಭಾವಕ್ಕೆ ತಕ್ಕ ಪಾತ್ರಗಳು ಬರುತ್ತಿವೆ. ಹಾಗಂತ ನಿಜ ಜೀವನದಲ್ಲಿ ನಾನು ಪೆದ್ದಿ ಅಲ್ಲ. ಸ್ವಲ್ಪ ಜೋರಾಗಿದ್ದೀನಿ. ಆದರೆ, ನಾನು ರಾಧಾ ಮಿಸ್‌ಗಿಂತ ಹೆಚ್ಚು ಪ್ರಾಕ್ಟಿಕಲ್ ಎನ್ನುತ್ತಾರೆ ಶ್ವೇತಾ.

ರಮಣ್ ಜೊತೆ ರೊಮ್ಯಾಂಟಿಕ್ ಸೀನ್ ಮಾಡುವಾಗ ಮುಜುಗರವಾಗೋಲ್ವಾ ಅಂತ ಪ್ರಶ್ನಿಸಿದರೆ, ಮುಜುಗರ ಆಗುವಂಥ ಸೀನ್‌ಗಳು ಇನ್ನೂ ಬಂದಿಲ್ಲ. ಅಷ್ಟಕ್ಕೂ  ನಮ್ಮದು ಒಪ್ಪಂದದ ಮದ್ವೆ. ಇನ್ನೂ ಕಣ್ಣಿನಲ್ಲೇ ಮಾತಾಡೋದು, ನಾಚ್ಕೊಳ್ಳೋದು ಅಷ್ಟರಲೇ ಇದೆ ಬಿಡಿ ಅಂತಾರೆ ಅವರು. ಹಾಗೆ ನೋಡಿದರೆ ನಿಜಜೀವನದಲ್ಲಿ ಪತಿ ಪ್ರದೀಪ್ ತುಂಬಾ ನಾಚಿಕೆ ಸ್ವಭಾವದವರು. ಅವರು ನನ್ನ ಗಂಡನಾಗುವ ಮೊದಲು ಸ್ನೇಹಿತ ಆಗಿದ್ದವರು. ನಮ್ಮ ದಾಂಪತ್ಯಕ್ಕೆ ಆರು ವರ್ಷವಾದರೆ, ಸ್ನೇಹಕ್ಕೆ ದಶಕದ ಸಂಭ್ರಮ. ಅವರ ಸಹಕಾರದಿಂದಲೇ ನಾನು ನಟನೆಯಲ್ಲಿ ಪ್ರವರ್ಧಮಾನಕ್ಕೆ ಬರಲು ಸಾಧ್ಯವಾಗಿದ್ದು ಎಂದು ಹೆಮ್ಮೆಯಿಂದ ನುಡಿಯುತ್ತಾರೆ ಅವರು.

ಸೀರಿಯಲ್‌ಗೆ ಬಂದಿರದಿದ್ದರೆ ವಾಸ್ತುಶಿಲ್ಪಿಯಾಗಿರುತ್ತಿದ್ದೆ. ಸ್ವಲ್ಪ ದಿನ ಎನ್‌ಜಿಒ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೆ. ಆದರೆ, ಈಗ  ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಬೇಸರಿಸುವ ಶ್ವೇತಾ, ಶಿವಮೊಗ್ಗವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಾರಂತೆ. ಟಿ.ವಿ.ಯಲ್ಲಿ ಬಂದರೆ ಅಮ್ಮ ದಿನಾ ನನ್ನನ್ನು ನೋಡಿದಂತಾಗುತ್ತದೆ. ಹಾಗಾಗಿ, ಧಾರಾವಾಹಿ ಒಪ್ಪಿಕೊಂಡೆ ಅಂತಾರೆ ಅವರು.

ಧಾರಾವಾಹಿಯಲ್ಲಿ ಒಂದೇ ಮನೆಯಲ್ಲಿದ್ದರೂ ನಿಮ್ಮ ವಿರುದ್ಧ ನಡೆಸುವ ಕುತಂತ್ರ ತಿಳಿಯೋದಿಲ್ವಾ ಅಂದ್ರೆ,  ರಾಧಾ ತುಂಬಾ ಒಳ್ಳೆಯವಳು. ಅವಳಿಗೆ ಕೆಟ್ಟದ್ದರ ಬಗ್ಗೆ ಯೋಚನೆಯೇ ಬರೋದಿಲ್ಲ. ದೀಪು ಕೂಡಾ ಒಳ್ಳೆಯವಳೇ. ಅವಳು ಮದ್ವೆ ಆಗಬೇಕಿದ್ದ ರಮಣ್‌ನನ್ನು ರಾಧಾ ಮದ್ವೆಯಾದ್ಲು. ಸಹಜವಾಗಿಯೇ ಅವಳಿಗೆ ರಾಧಾಳ ಬಗ್ಗೆ ಹೊಟ್ಟೆಕಿಚ್ಚು ಇದ್ದೇ ಇರುತ್ತೆ. ಹಾಗಂತ ದೀಪು, ರಾಧಾಳ ಜತೆ ಕೆಟ್ಟದ್ದಾಗಿ ವರ್ತಿಸಿಲ್ಲ. ರಮಣ್‌ಗೆ ತಂಗಿ ಆವನಿ ಸಿಕ್ಕರೆ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತೆ ಅಂತ ಪಾತ್ರದ ಬಗೆಗಿನ ತಲ್ಲೀನತೆಯನ್ನು ತೋರುತ್ತಾರೆ ಶ್ವೇತಾ.

ಪತಿ ಪ್ರದೀಪ್ ರೇಡಿಯೊದಲ್ಲಿ ಸಿಕ್ಕಾಪಟ್ಟೆ ಮಾತಾಡ್ತಾರೆ. ಆದರೆ, ಮನೆಯಲ್ಲಿ ಮಾತ್ರ ಅವರು ಮೌನಿ. ಆಗ ನಾನು ಆರ್.ಜೆ. ಆಗಿರ್ತೀನಿ. ಅವರಿಗೆ ಸಖತ್ ಕೀಟಲೆ ಮಾಡ್ತೀನಿ. ಪ್ರದೀಪ್ ನನ್ನ ಬಗ್ಗೆ ತುಂಬಾ ಪೊಸೆಸಿವ್. ಸೀರಿಯಲ್‌ನಲ್ಲಿ ನಾನು ರಮಣ್ ಜತೆ ರೊಮ್ಯಾಂಟಿಕ್ ಆಗಿ ನಟಿಸುತ್ತಿದ್ದರೆ ನೋಡಿದಂಗೆ ಮಾಡಿ, ಮೊಬೈಲ್‌ಗೆ ಮೊರೆ ಹೋಗ್ತಾರೆ. ನೋಡ್ರೀ ಅಂತ ಕಾಡಿಸಿದರೆ, ಜಗತ್ತಿನ ಪಾಲಿಗೆ ನೀನು ರಾಧೆ. ಆದರೆ,  ನನ್ನ ಪಾಲಿಗೆ ನೀನು ಶ್ವೇತಾ ಮಾತ್ರ ಅಂತಾರೆ. ಬಿಡುವಿನ ವೇಳೆಯಲ್ಲಿ ಇಬ್ಬರೂ ಚೆನ್ನಾಗಿ ಊರು ಸುತ್ತುತ್ತೀವಿ. ನನಗೆ ಸ್ಕ್ಯೂಬಾ ಡೈವಿಂಗ್, ಪ್ಯಾರಾ ಗ್ಲೈಡಿಂಗ್ ಅಂದರೆ ಸಖತ್ ಇಷ್ಟ. ನನ್ನದು ಧೈರ್ಯದ ಸ್ವಭಾವ. ಅಲ್ಪಸ್ವಲ್ಪ ಓದುವ ಹವ್ಯಾಸವಿದೆ. ಸೀರೆ ತುಂಬಾ ಇಷ್ಟ. ಹಾಗಾಗಿ, ಧಾರಾವಾಹಿಯಲ್ಲಿ ಸೀರೆಯನ್ನೇ ಉಡ್ತೀನಿ. ನಿಜಜೀವನದಲ್ಲಿ ಹೆಚ್ಚು ಮೇಕಪ್ ಮಾಡಿಕೊಳ್ಳಲ್ಲ. ಸರಳವಾಗಿರೋದೇ ನನಗಿಷ್ಟ ಎನ್ನುವ ಶ್ವೇತಾ, ಸದ್ಯಕ್ಕೆ ‘ಕಳ್ಬೆಟ್ಟದ ದರೋಡೆಕೋರರು’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry