ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂಕಹಕ್ಕಿ’ ಮೌನ ರಾಗ

Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮೌನದಲ್ಲಿ ಒಂದು ಅರ್ಥ, ಶಕ್ತಿಯಿದೆ. ಮೌನ ಮತ್ತು ಮಾತು ಬೇರೆ ಬೇರೆಯಲ್ಲ. ಮಾತಿನ ಬಳಿಕ ಮೌನ ಇರಲೇಬೇಕು. ಭಾವದ ತೀವ್ರತೆ ವ್ಯಕ್ತಪಡಿಸಲು ಮೌನವೇ ಸಾಧನ. ಅಲ್ಲಿ ಮಾತು ಗೌಣ ಎಂಬುದು ನಿರ್ದೇಶಕ ನೀನಾಸಂ ಮಂಜು ಅವರ ನಂಬಿಕೆ.

ರಂಗಭೂಮಿ ಹಿನ್ನೆಲೆ ಹೊಂದಿರುವ ಅವರು ಮೊದಲು ನಿರ್ದೇಶಿಸಿದ್ದು ‘ನೀರಿನ ನಿಲ್ದಾಣ’ ನಾಟಕ. ಇದು ಮೂಕಾಭಿನಯದ ನಾಟಕ. ನಲವತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿರುವ ಅನುಭವ ಅವರಿಗಿದೆ.‌ ಈಗ ಅಲೆಮಾರಿ ಸಮುದಾಯವೊಂದರ ತೊಳಲಾಟದ ಬಗ್ಗೆ ಕನ್ನಡದ ಪ್ರೇಕ್ಷಕರಿಗೆ ‘ಮೂಕಹಕ್ಕಿ’ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ. ಈ ಕುರಿತು ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

* ‘ಮೂಕಹಕ್ಕಿ’ ಚಿತ್ರದ ವಿಶೇಷತೆ ಏನು?
ಸಮಾಜದಲ್ಲಿ ಹಲವು ಜನರಿಗೆ ಬದುಕಲು ಅರ್ಹತೆ ಇದೆ.‌ ಆದರೆ, ಅವರಿಗೆ ಬದುಕಲು ಆಗುತ್ತಿಲ್ಲ. ಇವರಲ್ಲಿ ತಳಸಮುದಾಯ, ಮೇಲ್ವರ್ಗ ಎಂಬ ಭೇದವಿಲ್ಲ. ಅವರೆಲ್ಲರೂ ವ್ಯವಸ್ಥೆಯಿಂದ ಬಹುದೂರ. ನಾನು ಬೆಳೆದ ಪರಿಸರದಲ್ಲಿ ಇದರ ಅನುಭವ ನನಗಾಗಿದೆ. ಇಂದಿಗೂ ನಗರ, ಪಟ್ಟಣ ಪ್ರದೇಶ ನೋಡದ ಹಳ್ಳಿಗರಿದ್ದಾರೆ. ಕೆಲವು ವರ್ಷಗಳ ಹಿಂದೆ ಕೋಲೆತ್ತಿನವರು ಮತ್ತು ದೊಂಬರಾಟದವರು ಊರುಗಳಿಗೆ ಬರುತ್ತಿದ್ದರು. ಕೋಲೆತ್ತಿನವರಿಂದ ರಾಮ–ಸೀತಾ ಕಲ್ಯಾಣ ಪ್ರದರ್ಶನ ಇರುತ್ತಿತ್ತು. ಇದು ಗ್ರಾಮೀಣರ ಮನರಂಜನೆಯ ಭಾಗವೂ ಆಗಿತ್ತು. ಪ್ರಸ್ತುತ ಈ ಕಲಾಪ್ರಕಾರ ಅವನತಿಯ ಹಾದಿ ಹಿಡಿದಿದೆ. ಈ ಜನಾಂಗದವರು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಅವರ ಬದುಕಿನ ಚಿತ್ರಣವೇ ಈ ಚಿತ್ರದ ಕಥಾವಸ್ತು.

* ಈ ಕಥೆ ಹುಟ್ಟಿದ ಬಗೆ ಹೇಗೆ?
ಲಂಬಾಣಿ ಸಮುದಾಯದ ಸಂಸ್ಕೃತಿ ಬಿಂಬಿಸುವ ಚಿತ್ರ ನಿರ್ದೇಶನಕ್ಕೆ ಮೊದಲು ಯೋಚಿಸಿದ್ದೆ. ಕೋಲೆತ್ತಿನವರ ಮೂಲ ಆಂಧ್ರಪ್ರದೇಶ. ಅವರ ವೇಷಭೂಷಣ ಭಿನ್ನವಾದುದು. ಹಳ್ಳಿಗಳಲ್ಲಿ ಅವರಿಗೆ ನೆಲೆಯಿಲ್ಲ. ಅವರನ್ನು ನೋಡುವ ದೃಷ್ಟಿಯೂ ಬದಲಾಗಿದೆ. ಇದರಿಂದ ಅವರು ತಮ್ಮತನವನ್ನೇ ಬಿಟ್ಟಿದ್ದಾರೆ. ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದಾರೆ. ಹಸುಗಳೇ ಅವರ ಜೀವನಾಧಾರ. ಈಗ ಅವರಿಗೆ ಬದುಕೆಂಬುದೇ ಇಲ್ಲ. ವಿಶಿಷ್ಟವಾದ ಅವರ ಸಂಸ್ಕೃತಿ ಮರೆಯಾಗುತ್ತಿದೆ. ಹಾಗಾಗಿ, ಆ ಸಮುದಾಯದ ಬಗ್ಗೆ ಚಿತ್ರ ಮಾಡಬೇಕೆಂಬ ಆಸೆ ಮೂಡಿತು. ಸುಡುಗಾಡು ಸಿದ್ಧರ ಬಗ್ಗೆಯೂ ಚಿತ್ರದಲ್ಲಿ ಹೇಳಿದ್ದೇವೆ.

* ಚಿತ್ರದಲ್ಲಿ ‘ತಿಥಿ’ ಸಿನಿಮಾ ಖ್ಯಾತಿಯ ಪೂಜಾ ಅವರ ಪಾತ್ರವೇನು?
ಚಿತ್ರದಲ್ಲಿ ಆಕೆಯದು ಗೌರಿ ಎಂಬ ಹೆಸರಿನ ಪಾತ್ರ. ಚಿತ್ರದುದ್ದಕ್ಕೂ ಮೂಕಿ. ಆಕೆ ಕೋಲೆತ್ತಿನ ಸಮುದಾಯದ ಪ್ರತಿನಿಧಿ. ಆಕೆಯಲ್ಲಿ ಭಾರತಾಂಬೆಯನ್ನು ನೋಡುವ ಪ್ರಯತ್ನ ಮಾಡಿದ್ದೇವೆ. ಸಮಾಜದಲ್ಲಿ ಮೇಲು–ಕೀಳು, ರಾಜಕೀಯ ವ್ಯವಸ್ಥೆಯ ದೊಂಬರಾಟವನ್ನು ಆಕೆಯ ಮೂಲಕ ಕಟ್ಟಿಕೊಟ್ಟಿದ್ದೇನೆ. ಪೂಜಾ ಅವರ ಪಾತ್ರ ಜನರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸವಿದೆ. 

* ಚಿತ್ರದ ಮೂಲಕ ಸಮಾಜಕ್ಕೆ ಸಂದೇಶ ಏನು?
ಪ್ರಸ್ತುತ ಶಿಕ್ಷಣ ವ್ಯಾಪಾರೀಕರಣಗೊಂಡಿದೆ. ಇದಕ್ಕಿಂತ ಅಪಾಯ ಬೇರೊಂದಿಲ್ಲ. ಅಸಹಾಯಕರಿಗೆ ಶಿಕ್ಷಣ ಗಗನ ಕುಸುಮ. ಅಲೆಮಾರಿ ಸಮುದಾಯದವರು ನಮ್ಮ ಸಂಸ್ಕೃತಿಯ ಭಾಗ. ಆಧುನಿಕತೆಯ ಬಿರುಗಾಳಿಗೆ ಈ ನೆಲದ ಸಂಸ್ಕೃತಿ ನಶಿಸಿಹೋಗುತ್ತಿದೆ. ಅವರ ಬದುಕು ಒಂದೆಡೆ ನೆಲೆಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ಚಿತ್ರದಲ್ಲಿ ಅರ್ಥವತ್ತಾಗಿ ಚಿತ್ರಿಸಿದ್ದೇವೆ.

* ಚಿತ್ರದಲ್ಲಿನ ಸಂಗೀತದ ಬಗ್ಗೆ ಹೇಳಿ.
ಸಂಗೀತವೇ ಈ ಚಿತ್ರದ ಜೀವಾಳ. ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್‌ ಗ್ರಾಮೀಣರ ನಾಡಿಮಿಡಿತ ಅರಿತು ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಎಂಟು ಹಾಡುಗಳಿವೆ. ಈಗಾಗಲೇ, ಹಾಡುಗಳು ಜನರ ಮನ ಸೆಳೆದಿವೆ. ಮಗುವನ್ನು ಮಲಗಿಸಲು ಲಾಲಿಹಾಡನ್ನು ಹಾಡುವುದು ವಾಡಿಕೆ. ಆದರೆ, ಚಿತ್ರದಲ್ಲಿ ತಂಗಿ ಮತ್ತು ತಮ್ಮನನ್ನು ಮಲಗಿಸಲು ಅಣ್ಣನ ಮೂಲಕ ಈ ಹಾಡು ಬಳಸಿದ್ದೇವೆ. ಇದೊಂದು ಭಿನ್ನವಾದ ಪ್ರಯತ್ನ.

* ಸಿನಿಮಾದ ಚಿತ್ರೀಕರಣದ ಅನುಭವ ಹೇಗಿತ್ತು?
ಇದೊಂದು ನೈಜವಾದ ಕಮರ್ಷಿಯಲ್‌ ಚಿತ್ರ. ಕಲಾತ್ಮಕ ಚಿತ್ರ ಎಂದು ಪ್ರೇಕ್ಷಕರು ಭಾವಿಸಬೇಕಿಲ್ಲ. ಚಿತ್ರ ನೋಡಿದ ಒಬ್ಬೊಬ್ಬರಿಗೂ ಒಂದು ರೀತಿಯಲ್ಲಿ ‘ಮೂಕಹಕ್ಕಿ’ ಕಾಣಲಿದೆ. ಇದೇ ಈ ಚಿತ್ರದ ವಿಶೇಷ. ಕಲಾವಿದರಿಗೆ ಡೋಲು ಬಾರಿಸುವುದು ಮತ್ತು ನಾದಸ್ವರ ನುಡಿಯುವ ಬಗ್ಗೆ ಸಾಕಷ್ಟು ತರಬೇತಿ ನೀಡಿದ ಬಳಿಕ ಚಿತ್ರೀಕರಣ ಮಾಡಿದೆವು. ಎತ್ತಿನೊಂದಿಗೆ ಹೊಂದಾಣಿಕೆ ತುಸು ಕಷ್ಟ. ಇದಕ್ಕಾಗಿ ತಿಂಗಳುಗಟ್ಟಲೇ ಶ್ರಮವಹಿಸಿದ್ದು ಉಂಟು. ಎಲ್ಲ ಅಡೆತಡೆ ದಾಟಿ ಜನರ ಮುಂದೆ ಬರುತ್ತಿರುವುದು ಖುಷಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT