7

ಕಡಲ ಮಕ್ಕಳ ಬಾಳ ಹಾಡು ಪಡ್ಡಾಯಿ

Published:
Updated:
ಕಡಲ ಮಕ್ಕಳ ಬಾಳ ಹಾಡು ಪಡ್ಡಾಯಿ

* ಶೇಕ್ಸ್‌ಪಿಯರ್‌ನ ‘ಮ್ಯಾಕ್‌ ಬೆತ್‌’ ನಾಟಕವನ್ನು ಸಿನಿಮಾ ಮಾಡಬಹುದು ಎಂದು ನಿಮಗೆ ಯಾಕನಿಸಿತು?

ನಾನು ಇಂಗ್ಲಿಷ್‌ ಸಾಹಿತ್ಯ ವಿದ್ಯಾರ್ಥಿ. ‘ಮ್ಯಾಕ್‌ ಬೆತ್‌’ ಅನ್ನು ಪಠ್ಯವಾಗಿಯೂ ಓದಿದವನು. ಆಗಿನಿಂದಲೂ ಆ ನಾಟಕ ನನ್ನ ಮೇಲೆ ತುಂಬ ಪ್ರಭಾವ ಬೀರಿತ್ತು. ಆದರೆ ಆ ಕ್ಲಾಸಿಕ್‌ ನಾಟಕವನ್ನು ಸಮಕಾಲೀನ ಸಿನಿಮಾ ಮಾಡುವುದು ಹೇಗೆ ಎಂಬ ಯೋಚನೆ ನನ್ನನ್ನು ಕಾಡುತ್ತಿತ್ತು.

ಕೆಲದಿನಗಳ ಹಿಂದೆ ನೀನಾಸಮ್‌ ರಂಗಶಿಕ್ಷಣ ಕೇಂದ್ರದ ವೆಂಕಟರಮಣ ಐತಾಳ ಮೇಸ್ಟ್ರು ‘ಶಾಸ್ತ್ರೀಯ’, ‘ಸಮಕಾಲೀನ’ ಎಂಬೆಲ್ಲ ಪರಿಕಲ್ಪನೆಗಳ ಬಗ್ಗೆ ಮಾತಾಡಿದ್ದು ಕೇಳಿದೆ. ಅವರು ಹೇಳುವಂತೆ, ಒಬ್ಬ ಮನುಷ್ಯನ ಕಥೆಯನ್ನು ಹೇಳುತ್ತಲೇ ಇಡೀ ಸಮಾಜದ ಭಾವನೆಯ ಪ್ರತಿನಿಧಿಯಾಗುವಂಥದ್ದೇ ಕ್ಲಾಸಿಕ್‌. ಈ ವ್ಯಾಖ್ಯಾನ ಬಹಳ ಕಾಡಿತ್ತು ನನಗೆ. ಮ್ಯಾಕ್‌ ಬೆತ್‌ ಕೂಡ ಅಂಥದ್ದೇ ನಾಟಕ.

‘ಪಡ್ಡಾಯಿ’ ಇದು ‘ಪೀರಿಯಡ್‌ ಡ್ರಾಮಾ’ ಅಲ್ಲ. ಮ್ಯಾಕ್‌ ಬೆತ್‌ ನಾಟಕವನ್ನಿಟ್ಟುಕೊಂಡು ಈವತ್ತಿನ ಕಾಲಕ್ಕೆ ಹೊಂದುವಂತೆ ಮರುರಚಿಸಿದ್ದೇವೆ.

ಸಾಂಪ್ರದಾಯಿಕ ಮೀನುಗಾರರಿಗೆ ಮಳೆಗಾಲದಲ್ಲಿ ರಜೆ. ಅದು ಮೀನುಗಳು ಸಂತಾನೋತ್ಪತ್ತಿ ಮಾಡುವ ಸಮಯ.  ಮರದ ಬೋಟುಗಳಲ್ಲಿ ಆ ಸಮಯದಲ್ಲಿ ಮೀನು ಹಿಡಿಯುವುದೂ ಕಷ್ಟ. ಇಂಥದ್ದೊಂದು ಸಾಂಪ್ರದಾಯಿಕ ನಿಯಮಾವಳಿಗೆ ಅನುಗುಣವಾಗಿಯೇ ಮೀನುಗಾರಿಕೆ ಇತ್ತು. ಆದರೆ ಇಂದು ಸ್ಟೀಲ್‌ ಬೋಟ್‌ಗಳು ಬಂದು ಯಾವಾಗ ಬೇಕಾದರೂ ಮೀನು ಹಿಡಿಯಬಹುದು ಎಂಬಂತಾಗಿದೆ. ಇದರಿಂದ ಮರದ ಬೋಟ್‌ನ ಮೀನುಗಾರರ ಬದುಕು ಸಂಕಷ್ಟದಲ್ಲಿದೆ. ಇಂದು ಮಲ್ಪೆಯಲ್ಲಿ ಹಿಡಿಯುತ್ತಿರುವ ಮೀನುಗಳಲ್ಲಿ ಶೇ. 20 ಮಾತ್ರ ಆಹಾರಕ್ಕೆ ಬಳಕೆಯಾಗುತ್ತಿದೆ. ಉಳಿದವೆಲ್ಲ ಅನುಷಂಗಿಕ ಉ‍ಪಯೋಗಗಳಿಗೆ ಬಳಕೆಯಾಗುತ್ತಿದೆ.

ಈ ಎಲ್ಲವೂ ಯಾಕೆ ನಡೆಯುತ್ತಿದೆ ಎಂದು ಹುಡುಕಹೊರಟರೆ ಅದಕ್ಕೆ ಮನುಷ್ಯನ ದುರಾಸೆ ಮತ್ತು ಪ್ರಕೃತಿಯ ಬಗೆಗಿನ ಕೃತಘ್ನತೆಗಳೇ ಕಾರಣ. ಶೇಕ್ಸ್‌ಪಿಯರ್‌ನ ‘ಮ್ಯಾಕ್‌ ಬೆತ್‌’ ಕೂಡ ದುರಾಸೆ ಮತ್ತು ಮನುಷ್ಯನ ಕೆಟ್ಟ ಹಂಬಲಗಳಿಂದ ಆಗುವ ಅನಾಹುತಗಳ ಕುರಿತಾಗಿಯೇ ಹೇಳುತ್ತದೆ. ಇದನ್ನೇ ಇಟ್ಟುಕೊಂಡು ಒಂದು ಸಿನಿಮಾ ಮಾಡಬಹುದು ಎಂದು ನನಗೆ ಅನಿಸಿತು.

* ‘ಪಡ್ಡಾಯಿ’ ಸಿನಿಮಾ ಮಾಡಲು ತುಳು ಭಾಷೆಯನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ?

ಈ ಸಿನಿಮಾ ಚಿತ್ರಕಥೆ ಬರೆದಿದ್ದು ಮೂರು ವರ್ಷಗಳ ಹಿಂದೆಯೇ. ಮೊದಲು ಈ ಕಥೆಯನ್ನು ಯೋಚಿಸಿದಾಗಲೇ ತುಳು ಭಾಷೆಯಲ್ಲಿಯೇ ಈ ಸಿನಿಮಾ ಮಾಡಬೇಕು ಅಂದುಕೊಂಡಿದ್ದೆ. ಇದು ಸ್ವಲ್ಪ ಜಾಸ್ತಿ ಬಜೆಟ್‌ ಬೇಡುವ ಸಿನಿಮಾ. ಆದರೆ ಆಗ ತುಳು ಭಾಷೆಯಲ್ಲಿ ಈ ಸಿನಿಮಾಗೆ ಬೇಕಾದಷ್ಟು ಬಜೆಟ್‌ ಸಿಗುತ್ತದಾ, ಅಷ್ಟು ಸಣ್ಣ ಮಾರುಕಟ್ಟೆಯಲ್ಲಿ ಹಾಕಿದ ಬಂಡವಾಳ ವಾಪಸ್‌ ಬರಬಹುದಾ ಎಂಬೆಲ್ಲ ಆತಂಕ ಇದ್ದವು. ಚಿತ್ರಕಥೆ ಮಾಡಿ ಮುಗಿಸಿದ್ದೆ. ಆದರೆ ಈಗ ಬಂಡವಾಳ ಹೊಂದಿಕೆ ಸಾಧ್ಯವಾಗಿದೆ.

ಈ ಕಥೆ ತುಳುನಾಡಿನಲ್ಲಿಯೇ ನಡೆಯುವಂಥದ್ದು. ಅಲ್ಲಿ ಕನ್ನಡ ಮಾತಾಡ್ತಾರೆ, ಆದರೆ ಅವರೆಲ್ಲರ ನಿತ್ಯದ ಭಾಷೆ ತುಳು. ಅದನ್ನು ಕನ್ನಡದಲ್ಲಿ ಮಾಡಿದರೆ ಅಸಹಜವಾಗಿರುತ್ತದೆ ಅನಿಸಿತು ನನಗೆ. ಅಲ್ಲಿನ ಭಾಷೆಯೂ ಆ ಕಥೆಯ ಭಾಗವಾಗಿರುವುದರಿಂದ ತುಳುವಿನಲ್ಲಿಯೇ ಮಾಡಲು ನಿರ್ಧರಿಸಿದೆ.

* ನಾಟಕವನ್ನು ಸಮಕಾಲೀನ ಸಿನಿಮಾ ಮಾಡುವಲ್ಲಿ ಎದುರಿಸಿದ ಸವಾಲುಗಳೇನು?

ನಾಟಕಕ್ಕೆ ಅದರದ್ದೇ ಆದ ಬಹಳ ಗಟ್ಟಿ ವ್ಯಾಕರಣ ಇದೆ. ಅದರಲ್ಲಿ ಅಮೂರ್ತ ಇಮೇಜ್‌ಗಳೇ ಹೆಚ್ಚಾಗಿರುತ್ತವೆ. ಆದರೆ ಸಿನಿಮಾ ಮಾಡುವಾಗ ನಮಗೆ ಬಹಳ ಮೂರ್ತವಾದ ಇಮೇಜ್‌ಗಳು ಬೇಕಾಗುತ್ತವೆ. ಇಂಥ ಇಮೇಜ್‌ಗಳನ್ನು ಹುಡುಕಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು.

ಉದಾಹರಣೆಗೆ ‘ಮ್ಯಾಕ್‌ ಬೆತ್‌’ನಲ್ಲಿ ಡಂಕನ್‌ನನ್ನು ಮ್ಯಾಕ್‌ಬೆತ್‌ ಕೊಲೆ ಮಾಡುವ ಮೊದಲು ಸುದೀರ್ಘ ಸ್ವಗತ ಬರುತ್ತದೆ. ‘ನನಗೆ ಅನ್ನ ಕೊಟ್ಟವರನ್ನು ಕೊಲ್ಲುವುದು ಸರಿಯಾ? ನನ್ನ ಮನೆಗೆ ಅತಿಥಿಯಾಗಿ ಬಂದವನನ್ನು ಕೊಲ್ಲುವುದು ಸರಿಯಾ? ನನ್ನ ಮೇಲೆ ನಂಬಿಕೆ ಇಟ್ಟವರನ್ನು ಕೊಲ್ಲುವುದು ಸರಿಯಾ?’ ಹೀಗೆ ಪ್ರಶ್ನೆ ಮಾಡಿಕೊಳ್ಳುತ್ತಾ ಹೋಗುತ್ತಾನೆ. ಅದನ್ನು ಸಿನಿಮಾದಲ್ಲಿ ಹಾಗೇ ಹಾಕಿದರೆ ತುಂಬ ವಾಚ್ಯವಾಗುತ್ತದೆ. ಆದ್ದರಿಂದ ಅದಕ್ಕೆ ಪರ್ಯಾಯವಾಗಿ ಆ ಸಂದರ್ಭದಲ್ಲಿ ಎಲ್ಲಿಯೂ ಸಂಭಾಷಣೆಯೇ ಇಲ್ಲದೆ ಇಮೇಜ್‌ಗಳಲ್ಲಿಯೇ ಎಲ್ಲವನ್ನೂ ಕಟ್ಟುತ್ತಾ ಹೋಗಿದ್ದೇವೆ. ಇವೆಲ್ಲವೂ ವಾಸ್ತವದ ಚೌಕಟ್ಟಿನಲ್ಲಿಯೇ ಇರಬೇಕು. ಇಷ್ಟೆಲ್ಲ ಸವಾಲುಗಳಿದ್ದೂ ಇದು ನನ್ನ ಮಟ್ಟಿಗೆ ಒಂದು ಒಳ್ಳೆಯ ಅನುಭವ.

* ಈ ಸಿನಿಮಾಕ್ಕೆ ಹೇಗೆ ಸಿದ್ಧತೆ ಮಾಡಿಕೊಂಡಿದ್ದೀರಿ?

ತುಳುವಿನಲ್ಲಿಯೂ ‘ಮೊಗವೀರರ’ ತುಳು ಸ್ವಲ್ಪ ಭಿನ್ನ. ಇವರು ಸಮುದ್ರದಲ್ಲಿ ಗದ್ದಲದ ನಡುವೆಯೇ ಮಾತಾಡುವುದರಿಂದ ಅವರ ಭಾಷೆ ಕೊಂಚ ಗಡುಸು ಕೂಡ. ಚಿತ್ರದಲ್ಲಿ ತುಳು ಬರುವ ಕಲಾವಿದರನ್ನೇ ಬಳಸಿಕೊಂಡಿದ್ದೇವೆ. ಜತೆಗೆ ಎಲ್ಲರೂ ಮೊಗವೀರ ಮೀನುಗಾರರ ಜತೆಗೇ ಒಂದು ವಾರ ಇದ್ದು ಅವರ ಉಚ್ಛಾರಣೆಯನ್ನು ಅಭ್ಯಸಿಸಿದ್ದರು. ಕಥೆಯ ನಾಯಕಿ ಬಿಂದು ರಕ್ಷಿದಿ ಒಂದು ವಾರ ಮೀನು ಮಾರುವ ಹೆಂಗಸರೊಟ್ಟಿಗೆ ಮಲ್ಪೆಯಲ್ಲಿ ಕೂತು ಮೀನು ಮಾರುತ್ತಿದ್ದರು. ಆದ್ದರಿಂದ ಮೀನು ಮಾರುಕಟ್ಟೆಯಲ್ಲಿ ಎಲ್ಲರ ಪರಿಚಯವೂ ಆಗಿತ್ತು. ಇದರಿಂದ ಚಿತ್ರೀಕರಣವೂ ಸುಲಭವಾಯ್ತು. ಈ ಚಿತ್ರದಲ್ಲಿರುವ ಹೆಚ್ಚಿನವರು ರಂಗಭೂಮಿ ಕಲಾವಿದರು ಮತ್ತು ಮೊದಲ ಬಾರಿಗೆ ಕ್ಯಾಮೆರಾ ಎದುರಿಸುತ್ತಿರುವವರು.

*ಸಿನಿಮಾ ಬಿಡುಗಡೆಯನ್ನು ಯಾವಾಗ ಮಾಡಲು ಸಿದ್ಧತೆ ಮಾಡಿಕೊಂಡಿದ್ದೀರಿ?

ಒಂದು ತಿಂಗಳ ಹಿಂದೆಯೇ ಸೆನ್ಸಾರ್‌ಗೆ ಅರ್ಜಿ ಹಾಕಿದ್ದೇವೆ. ಆದರೆ, ಇನ್ನೂ ಸಿನಿಮಾ ನೋಡಿಲ್ಲ. ಬಹುಶಃ ಅವರು ತುಂಬ ಬ್ಯುಸಿ ಇದ್ದಿರಬೇಕು. ಸೆನ್ಸಾರ್‌ ಆದ ಮೇಲೆ ಕೆಲವು ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅವುಗಳ ದಿನಾಂಕ ನೋಡಿಕೊಂಡು ನಂತರ ಬಿಡುಗಡೆ ಮಾಡುವ ಆಲೋಚನೆ ಇದೆ.

* ತುಳು ಚಿತ್ರರಂಗದ ಸದ್ಯದ ಸ್ಥಿತಿ ಹೇಗಿದೆ?

ನಾನು ತುಳು ಚಿತ್ರರಂಗಕ್ಕೆ ಹೊಸಬನೇ ಆಗಿರುವುದರಿಂದ ಆ ಚಿತ್ರರಂಗದ ಬಗ್ಗೆ ಅಧಿಕೃತವಾಗಿ ಮಾತಾಡುವುದು ಕಷ್ಟ. ಆದರೆ ನಾನು ಕಂಡಿರುವಂತೆ ಅಲ್ಲಿ ಸಿನಿಮಾಗಳು ನಾಟಕದ ವಿಸ್ತೃತ ರೂಪವಾಗಿಯೇ ಇವೆ. ಹಾಗೆಯೇ ಕನ್ನಡ ಸಿನಿಮಾಗಳನ್ನು ಆದರ್ಶ ಎಂದು ಇಟ್ಟುಕೊಳ್ಳುತ್ತಿದ್ದಾರೆ. ಕನ್ನಡದ ನಟರು, ತಂತ್ರಜ್ಞರನ್ನು ಬಳಸಿಕೊಳ್ಳುವುದು ಪ್ರತಿಷ್ಠೆ ಎಂಬಂತೆ ಬಿಂಬಿತವಾಗುತ್ತಿದೆ. ಎಲ್ಲ ಚಿತ್ರರಂಗಗಳೂ ಪ್ರಾರಂಭಿಕ ಹಂತದಲ್ಲಿ ಹೀಗೆಯೇ ಇದ್ದವು. ಈ ಎಲ್ಲದರ ನಡುವೆಯೇ ಸಿನಿಮಾ ಮಾಡುವ ಉತ್ಸಾಹ ಮತ್ತು ಅಷ್ಟೇ ಪ್ರತಿಭಾವಂತರೂ ಇದ್ದಾರೆ. ಅವರಿಗೆ ಸರಿಯಾಗಿ ಮಾರ್ಗದರ್ಶನ ಬೇಕಾಗಿದೆ ಅಷ್ಟೆ.

***

‘ಪಡ್ಡಾಯಿ’ ಎಂದರೆ ಪಶ್ಚಿಮ ಎಂದು ಅರ್ಥ. ಆದರೆ ಮೊಗವೀರರು ಕಡಲನ್ನು ಪಡ್ದಾಯಿ ಎಂದೇ ಕರೆಯುತ್ತಾರೆ. ಹಾಗೆಯೇ ಪಶ್ಚಿಮದ ಪ್ರಭಾವದಿಂದ ಉಂಟಾದ ತಲ್ಲಣಗಳ ಕುರಿತೂ ಸಿನಿಮಾ ಹೇಳುವುದರಿಂದ ಇದನ್ನು ‘ವೆಸ್ಟರ್ನ್‌’ ಎಂಬ ಅರ್ಥದಲ್ಲಿಯೂ ಓದಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry