ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಭಯಾ ನೆನಪು– ವರ್ಮಾ ವರದಿ

Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮೊನ್ನೆಯಷ್ಟೇ ನಡೆದ ಝೈರಾ ಪ್ರಕರಣ ಮನಸ್ಸನ್ನು ಕಾಡುತ್ತಿದೆ. ಝೈರಾ ಉದಯೋನ್ಮುಖ ತಾರೆ, ‘ದಂಗಲ್’ ಮತ್ತು ‘ಸೀಕ್ರೆಟ್ ಸೂಪರ್ ಸ್ಟಾರ್’ ಚಿತ್ರಗಳಲ್ಲಿ ಅಭಿನಯಿಸಿ ಪ್ರಖ್ಯಾತಳಾದ ಹದಿನೇಳರ ಈ ಬಾಲಕಿ ತನ್ನ ತಾಯಿಯ ಜೊತೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಲೈಂಗಿಕ ಕಿರುಕುಳವನ್ನು ಅನುಭವಿಸಿದ್ದಾಳೆ ಎಂದರೆ ಸಮಸ್ಯೆಯ ಭಯಂಕರ ಆಯಾಮಗಳು ಅಂದಾಜಿಗೆ ಸಿಗಬಹುದು.

ಡಿಸೆಂಬರ್ ತಿಂಗಳು ಚಳಿಯ ಜೊತೆಗೆ ಐದು ವರ್ಷಗಳ ಹಿಂದಿನ ಡಿ. 16ರ ರಾತ್ರಿಯ ನೆನಪನ್ನೂ ಹೊತ್ತುತರುತ್ತಿದೆ. ಅದು ನಿರ್ಭಯಾಳ ಪಾಲಿಗೆ ಕರಾಳ ರಾತ್ರಿ. ಆ ಸುದ್ದಿ ಸ್ಫೋಟವಾಗುತ್ತಿದ್ದಂತೆ ಇಡೀ ದೇಶದ ಅಂತಃಸಾಕ್ಷಿಯೇ ಎಚ್ಚೆತ್ತುಕೊಂಡಿತ್ತು. ಪರಿಣಾಮವಾಗಿ ಸರ್ಕಾರವು ನ್ಯಾಯಮೂರ್ತಿ ವರ್ಮಾ ನೇತೃತ್ವದ ಸಮಿತಿಯನ್ನು ರಚಿಸಿ, ಮಹಿಳೆಯರ ಮೇಲೆ ನಡೆಯುವ ಅಪರಾಧಗಳನ್ನು ತಡೆಗಟ್ಟಲು, ಅಪರಾಧ ಕಾನೂನಿಗೆ ತಿದ್ದುಪಡಿಗಳನ್ನು ಸೂಚಿಸಲು ಕೋರಿತು. ಹೊಸ ಕಾನೂನೇನೋ ಜಾರಿಗೆ ಬಂದಿದೆ. ಆದರೆ ಸಮಸ್ಯೆ ನಿಯಂತ್ರಣಕ್ಕೆ ಬಂದಿದೆಯೇ?

ಮಹಿಳೆಯರು ಹಾಗೂ ಮಕ್ಕಳ ಮೇಲಿನ ಅಪರಾಧಗಳು 2015ಕ್ಕೆ ಹೋಲಿಸಿದರೆ 2016ರಲ್ಲಿ ಅನುಕ್ರಮವಾಗಿ ಶೇ 2.9 ಹಾಗೂ ಶೇ 13.6ರಷ್ಟು ಹಾಗೂ ಅತ್ಯಾಚಾರದ ಪ್ರಕರಣಗಳು ಶೇ 12.4 ರಷ್ಟು ಹೆಚ್ಚಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ವರದಿ ಹೇಳಿದೆ.

ಹಾಗಿದ್ದರೆ ನಿರ್ಭಯಾ ಚಳವಳಿಯಿಂದ ಏನೂ ಸಕಾರಾತ್ಮಕ ಬೆಳವಣಿಗೆ ಆಗಲಿಲ್ಲವೇ? ಸಮಸ್ಯೆಗಳು ಬಗೆಹರಿದಿಲ್ಲ ನಿಜ. ಆದರೆ ಹಲವಾರು ಒಳ್ಳೆಯ ಬೆಳವಣಿಗೆಗಳಾಗಿವೆ. ಸಾಮಾನ್ಯ ಜನ ಅದರಲ್ಲೂ ಯುವಜನ ಕ್ರಿಯಾಶೀಲರಾದರು. ಹೆಚ್ಚು ಸೂಕ್ಷ್ಮತೆ ಬೆಳೆಸಿಕೊಂಡರು. ಸುದ್ದಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಈ ಕುರಿತ ಮಾಹಿತಿಗಳನ್ನು ಹೆಚ್ಚಾಗಿ ವರದಿ ಮಾಡಲಾರಂಭಿಸಿದವು. ಜೊತೆಗೆ ಬಿಗಿಯಾದ ಕಾನೂನು ರೂಪುಗೊಂಡಿತು. ವರ್ಮಾ ಸಮಿತಿಯ ಶಿಫಾರಸುಗಳಿಗೆ ಅನುಗುಣವಾಗಿ ರೂಪುಗೊಂಡ ಅಪರಾಧ ಕಾನೂನು (ತಿದ್ದುಪಡಿ) ಕಾಯ್ದೆ– 2013, ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ (ಐಪಿಸಿ), ಭಾರತೀಯ ಸಾಕ್ಷ್ಯ ಕಾಯ್ದೆ  ಹಾಗೂ ದಂಡ ಪ್ರಕ್ರಿಯಾ ಸಂಹಿತೆಗೆ (ಸಿಆರ್‌ಪಿಸಿ) ಸಂಬಂಧಿಸಿ ಹಲವಾರು ತಿದ್ದುಪಡಿಗಳನ್ನು ಮಾಡಿದೆ.

ಈ ಕಾನೂನು ರೂಪುಗೊಳ್ಳುವವರೆಗೂ ಹೆಣ್ಣುಮಕ್ಕಳನ್ನುಚುಡಾಯಿಸುವುದು, ಮೈ-ಕೈ ತಾಗಿಸುವುದು, ಲೈಂಗಿಕ ಒಳಾರ್ಥವಿರುವ ಮಾತುಗಳನ್ನಾಡುವುದು, ಅಶ್ಲೀಲ ದೃಶ್ಯಗಳನ್ನು ತೋರಿಸುವುದು... ಇತ್ಯಾದಿಗಳನ್ನು ಹಗುರವಾಗಿ ಪರಿಗಣಿಸಲಾಗುತ್ತಿತ್ತು. ಈಗ ಅವುಗಳು ಶಿಕ್ಷಾರ್ಹ ಅಪರಾಧಗಳು. ಹಾಗೆಯೇ ಮಹಿಳೆಯರನ್ನು ಹಿಂಬಾಲಿಸುವುದು (ಸಾಮಾಜಿಕ ಜಾಲತಾಣಗಳಲ್ಲೂ ಸಹ) ಹಾಗೂ ಖಾಸಗಿಯಾಗಿರುವಾಗ (ನಗ್ನ- ಅರೆನಗ್ನ ಸ್ಥಿತಿ ಇತ್ಯಾದಿಗಳಲ್ಲಿ) ಕದ್ದು ನೋಡುವುದನ್ನೂ ಸಹ ಈ ಕಾನೂನಿನಡಿಯಲ್ಲಿ ತರಲಾಗಿದೆ. ಅವೂ ಶಿಕ್ಷಾರ್ಹ ಅಪರಾಧಗಳಾಗಿವೆ. ಆ್ಯಸಿಡ್ ದಾಳಿಯನ್ನು ಈ ಕಾನೂನಿನ ವ್ಯಾಪ್ತಿಗೆ ತಂದು ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಅತ್ಯಾಚಾರ, ಸಾಮೂಹಿಕ ಅತ್ಯಾಚಾರಗಳಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ.

ವರ್ಮಾ ಸಮಿತಿ ಇನ್ನೂ ಕೆಲವು ಸುಧಾರಣೆಗಳನ್ನು ಸೂಚಿಸಿದೆ. ಚುನಾವಣಾ ಸುಧಾರಣೆಗಳ ಬಗ್ಗೆ ಪ್ರಸ್ತಾಪಿಸುತ್ತಾ ರಾಜಕೀಯದ ಅಪರಾಧೀಕರಣವನ್ನು ತಡೆಯಬೇಕು, ಅಪರಾಧದ ಹಿನ್ನೆಲೆಯಿರುವವರು ಸಾರ್ವಜನಿಕ ಹುದ್ದೆಗಳನ್ನು ಹೊಂದಿರಬಾರದು ಹಾಗೂ ಮಹಿಳೆಯರ ವಿರುದ್ಧ ಅವಹೇಳನಕರವಾಗಿ ಮಾತನಾಡುವ ಜನಪ್ರತಿನಿಧಿಗಳನ್ನು ವಜಾ ಮಾಡಲು ಹೊಸ ಕಾನೂನನ್ನು ರೂಪಿಸಬೇಕು ಎಂದಿದೆ.

ಪೊಲೀಸ್ ವ್ಯವಸ್ಥೆಯಲ್ಲಿ ಆಗಬೇಕಾದ ಸುಧಾರಣೆಗಳ ಬಗ್ಗೆ ಹೇಳುತ್ತಾ, ಕಾನೂನನ್ನು ಪಾಲಿಸಬೇಕಾದವರು ರಾಜಕೀಯ ನಾಯಕರ ಕೈಯಲ್ಲಿ ಅಸ್ತ್ರಗಳಾಗುವುದನ್ನು ತಪ್ಪಿಸಲು ಹಲವಾರು ಕ್ರಮಗಳನ್ನು ಸೂಚಿಸಿದೆ. ಪ್ರತೀ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ತನಿಖಾ ವಿಭಾಗ ಇರಬೇಕು. ಸಂತ್ರಸ್ತರಿಗೆ ಕಡ್ಡಾಯವಾಗಿ ಕಾನೂನು ನೆರವು ನೀಡಬೇಕು. ಪೊಲೀಸ್ ಠಾಣೆಯ ಪ್ರವೇಶದ್ವಾರದಲ್ಲಿ ಹಾಗೂ ಸಂದರ್ಶಕರ ಕೊಠಡಿಯಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಸಬೇಕು. ಆನ್‍ಲೈನ್‍ನಲ್ಲೂ ದೂರು ದಾಖಲಿಸಲು ಸಾಧ್ಯವಾಗಬೇಕು ಎಂದು ಶಿಫಾರಸು ಮಾಡಿದೆ.

ಮಹಿಳೆಯರಿಗೆ ಮೂಲಭೂತ ಹಕ್ಕುಗಳನ್ನು ಖಚಿತಪಡಿಸುವ ಪ್ರಾಥಮಿಕ ಜವಾಬ್ದಾರಿ ನ್ಯಾಯಾಂಗಕ್ಕೆ ಸೇರಿದ್ದು. ನ್ಯಾಯಾಂಗವು ಮಹಿಳೆಯರ ಮೇಲಿನ ದೌರ್ಜನ್ಯಗಳಂತಹ ಸೂಕ್ಷ್ಮ ಸನ್ನಿವೇಶಗಳಲ್ಲಿ ಸ್ವಯಂಪ್ರೇರಿತವಾಗಿ ವಿಷಯವನ್ನು ಕೈಗೆತ್ತಿಕೊಂಡು ಗೌರವದಿಂದ ಬದುಕುವ ಸಂವಿಧಾನದತ್ತ ಹಕ್ಕನ್ನು ಖಾತ್ರಿಪಡಿಸಬೇಕು ಎಂದೂ ಆಯೋಗ ಹೇಳಿದೆ.

ಮನೋರೋಗ ತಜ್ಞರ ಅಧ್ಯಯನದಿಂದ ಕಂಡುಬರುವ ಒಂದು ಮುಖ್ಯವಾದ ವಿಷಯವನ್ನು ವರದಿ ಪ್ರಸ್ತಾಪಿಸುತ್ತದೆ. ಅದೆಂದರೆ ಮಹಿಳೆಯರ ಕುರಿತು ಸಮಾಜದಲ್ಲಿ ಇರತಕ್ಕಂಥ ಪುರುಷಪ್ರಧಾನ ಮೌಲ್ಯಗಳನ್ನು ಬದಲಾಯಿಸಬೇಕಾಗಿದೆ ಮತ್ತು ಇದರಲ್ಲಿ ಶಿಕ್ಷಣದ ಪಾತ್ರ ಬಹಳ ಮುಖ್ಯ ಎಂಬುದು. ಹೆಣ್ಣಿನ ಶೀಲ, ಪಾವಿತ್ರ್ಯಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಗಂಡು ಮಕ್ಕಳಲ್ಲೂ, ಅದೇ ರೀತಿ ಹೆಣ್ಣು ಮಕ್ಕಳಲ್ಲೂ ಬದಲಾಯಿಸಬೇಕಾಗುತ್ತದೆ ಎಂಬುದು ಆಯೋಗದ ಪ್ರತಿಪಾದನೆ.

ಮರಣ ದಂಡನೆಯಂಥ ಕಠೋರ ಶಿಕ್ಷೆ ಹಾಗೂ ಬಾಲಾರೋಪ ವ್ಯಾಪ್ತಿಗೆ ಬರುವ ವಯಸ್ಸನ್ನು ಇಳಿಸುವುದರ ಬಗ್ಗೆ ದೇಶ ವಿದೇಶಗಳ ಗಣ್ಯರ ಅಭಿಪ್ರಾಯಗಳನ್ನು ಉಲ್ಲೇಖಿಸುವ ವರದಿ, ಇವೆರಡನ್ನೂ ಸಮರ್ಪಕ ಕಾರಣ ನೀಡಿಯೇ ವಿರೋಧಿಸುತ್ತದೆ. ಎಳೆಯರಿಗೆ ಅವರ ದೇಹದ ಬಗ್ಗೆ ಅರಿವನ್ನು ಮೂಡಿಸುವುದು ಅಗತ್ಯ. ಅಂಥ ಅರಿವು ಅವರಿಗೆ ತಮ್ಮ ಮೇಲಾಗುವ ದೌರ್ಜನ್ಯವನ್ನು ಪ್ರತಿರೋಧಿಸುವ ಶಕ್ತಿಯನ್ನು ನೀಡುತ್ತದೆ ಎಂದೂ ವರ್ಮಾ ಪ್ರತಿಪಾದಿಸುತ್ತಾರೆ.

ಅತ್ಯಾಚಾರ ಸಂತ್ರಸ್ತೆಯರ ವೈದ್ಯಕೀಯ ಪರೀಕ್ಷೆ, ನ್ಯಾಯಾಲಯದಲ್ಲಿ ನಡೆಯುವ ವಾದ-ಪ್ರತಿವಾದ ಈ ಎಲ್ಲಾ ಸಂದರ್ಭಗಳಲ್ಲಿಯೂ ಅತ್ಯಂತ ಮಾನವೀಯವಾಗಿ ನಡೆದುಕೊಳ್ಳಲು ಸೂಚನೆಗಳನ್ನು ನೀಡುವ ವರ್ಮಾ ವರದಿ ಒಂದು ಅಪರೂಪದ ದಾಖಲೆ. ಒಂದು ಬೃಹತ್ ಆಂದೋಲನದ ಫಲ.

ಕೇವಲ 29 ದಿನಗಳ ಅವಧಿಯಲ್ಲಿ 70 ಸಾವಿರಕ್ಕೂ ಹೆಚ್ಚು ಅಭಿಪ್ರಾಯ, ಸಲಹೆಗಳನ್ನು ಪರಿಶೀಲಿಸಿದ ಆಯೋಗವು ಕೆಲವು ಅಪರೂಪದ ಅಂಶಗಳನ್ನೂ ಮುನ್ನೆಲೆಗೆ ತಂದಿದೆ. ಮಹಿಳೆಯರನ್ನು ಸಶಕ್ತರನ್ನಾಗಿಸುವಲ್ಲಿ ಶಿಕ್ಷಣ, ಉದ್ಯೋಗದ ಮಹತ್ವವನ್ನೂ ಎತ್ತಿ ಹಿಡಿಯುತ್ತಾ, 1938ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ರಚಿಸಿದ್ದ ನೆಹರೂ-ನೇತಾಜಿ ಸಮಿತಿಯ ಮುಖ್ಯ ಶಿಫಾರಸುಗಳನ್ನು ಉಲ್ಲೇಖಿಸುತ್ತದೆ. ಆ ಸಮಿತಿಯು ಸಮಾನ ಕೆಲಸಕ್ಕೆ ಸಮಾನ ವೇತನ, ದುಡಿಯುವ ಮಹಿಳೆಯರಿಗೆ ಎಲ್ಲೆಡೆ ಶಿಶುಪಾಲನ ಕೇಂದ್ರಗಳನ್ನು ಖಚಿತಪಡಿಸಬೇಕು, ಸಾಮುದಾಯಿಕ ಕಿಚನ್‍ಗಳ ಮೂಲಕ ಅಡುಗೆಮನೆ ಹೊರೆಯನ್ನು ಕಡಿಮೆ ಮಾಡಬೇಕು... ಮುಂತಾದ ಕ್ರಾಂತಿಕಾರಕ ಕ್ರಮಗಳನ್ನು ಮುಂದಿಟ್ಟಿತ್ತು.

ನಮ್ಮ ದೇಶದ ದುರಂತವೆಂದರೆ ಇಂತಹ ಅನೇಕ ಆಯೋಗಗಳ ವರದಿಗಳು ಜಾರಿಗೆ ಬರುವುದು ಅಪರೂಪ. ಆದರೆ ಮಹಿಳಾ ಚಳವಳಿಗಳು ಇಂತಹ ವರದಿಗಳ ಸಮಗ್ರ ಅನುಷ್ಠಾನಕ್ಕೆ ಆಗ್ರಹಿಸಬೇಕು. ಸರ್ಕಾರಗಳ ಮೇಲೆ ಒತ್ತಡ ಹೇರಬೇಕು. ನಿರ್ಭಯಾ ಪ್ರಕರಣದ ಐದನೆಯ ವರ್ಷದ ಸಂದರ್ಭದಲ್ಲಿ ಮಹಿಳಾ ಆಂದೋಲನಗಳು ಈ ಸಮಸ್ಯೆಯ ಎಲ್ಲಾ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಆಯಾಮಗಳ ಬಗ್ಗೆ ಚರ್ಚಿಸಿ ಮುನ್ನಡೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT