5

ಬಹು ಸಾಂಸ್ಕೃತಿಕತೆ ಮತ್ತು ಹಿಂದೂ ರಾಷ್ಟ್ರೀಯವಾದ

ಪೃಥ್ವಿ ದತ್ತ ಚಂದ್ರ ಶೋಭಿ
Published:
Updated:
ಬಹು ಸಾಂಸ್ಕೃತಿಕತೆ ಮತ್ತು ಹಿಂದೂ ರಾಷ್ಟ್ರೀಯವಾದ

ಡಿಸೆಂಬರ್ 6ಕ್ಕೆ ಅಯೋಧ್ಯೆಯ ಬಾಬರಿ ಮಸೀದಿಯ ಕಟ್ಟಡವನ್ನು ಹಿಂದೂ ಕರಸೇವಕರು ನೆಲಸಮ ಮಾಡಿ 25 ವರ್ಷಗಳಾದವು. ಈ ಘಟನೆ ಮತ್ತು ಅದರ ಹಿಂದಿನ ರಾಜಕಾರಣ ಭಾರತದ ಸಾರ್ವಜನಿಕ ಜೀವನವನ್ನು ಸಂಪೂರ್ಣವಾಗಿ ಬದಲಿಸಿತು ಎನ್ನುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.

ಈ ವಿದ್ಯಮಾನದ ಐತಿಹಾಸಿಕ ಮತ್ತು ಮಾನಸಿಕ (ಸೈಕಲಾಜಿಕಲ್) ಪ್ರಭಾವಗಳನ್ನು ನಾವು ಇಂದಿಗೂ ಅನುಭವಿಸುತ್ತಿದ್ದೇವೆ. 25 ವರ್ಷಗಳ ನಂತರವೂ ಅಂದಿನ ಹಸಿಗಾಯಗಳು ಮಾಯದೆ ಉಳಿದಿವೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣವು ಇತ್ಯರ್ಥವಾಗಿಲ್ಲ. ಕಡೆಯ ಸುತ್ತಿನ ವಿಚಾರಣೆಯನ್ನು ನ್ಯಾಯಾಲಯವು ಫೆಬ್ರುವರಿಯಿಂದ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.

ಬಾಬರಿ ಮಸೀದಿಯನ್ನು ಒಡೆದ ಬಗ್ಗೆ ಅಥವಾ ಅದೇ ಸ್ಥಳದಲ್ಲಿ ರಾಮಮಂದಿರವನ್ನು ಕಟ್ಟುವ ಕುರಿತಾಗ ನಮ್ಮ ವೈಯಕ್ತಿಕ ಅಭಿಪ್ರಾಯಗಳು ಏನೇ ಇರಲಿ, ಈ ಘಟನೆಯ ಮೂಲಕ ಎರಡು ಮುಖ್ಯ ಸಂದೇಶಗಳನ್ನು ಭಾರತದ ರಾಜಕೀಯ ವ್ಯವಸ್ಥೆ ಮತ್ತು ನಾಗರಿಕ ಸಮಾಜಗಳು ಸ್ವೀಕರಿಸಿದವು ಎನ್ನುವುದು ಸ್ಪಷ್ಟ.

ಇವುಗಳಲ್ಲಿ ಮೊದಲನೆಯದು, ಕಾನೂನಿನ ಪಾರಮಾಧಿಕಾರ, ಸಾಂವಿಧಾನಿಕ ಮೌಲ್ಯಗಳಿಗಿಂತ ಸಮುದಾಯದ ಭಾವನೆಗಳು (ಅವುಗಳು ಎಷ್ಟೇ ಅಸ್ಪಷ್ಟವಾಗಿರಲಿ, ಮಸುಕಾಗಿರಲಿ) ಹೆಚ್ಚು ಮುಖ್ಯವಾದವುಗಳು. ಈ ಅಂಶವನ್ನು, ರಾಜಕೀಯಶಾಸ್ತ್ರಜ್ಞ ಪ್ರತಾಪ್‌ಭಾನು ಮೆಹ್ತಾ ಹೇಳುವಂತೆ, ‘ನಾವು ನಮ್ಮ ರಾಜಕೀಯ ಸಾಮಾನ್ಯ ತಿಳಿವಳಿಕೆಯ (ಕಾಮನ್ ಸೆನ್ಸ್) ಭಾಗವಾಗಿ ಅಂಗೀಕರಿಸಿದ್ದೇವೆ. ಅದರಿಂದಲೇ ಇಂದಿಗೂ ಸಹ ‘ಪದ್ಮಾವತಿ’ ಸಿನಿ

ಮಾದ ಸಂದರ್ಭದಲ್ಲಿ ನೋಡಿದಂತೆ ಕೊಲೆ -ಹಲ್ಲೆಗಳ ಬೆದರಿಕೆಯನ್ನು ರಾಷ್ಟ್ರೀಯ ವಾಹಿನಿಗಳಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಯಾರ ಮೇಲಾದರೂ ಮಾಡುವುದನ್ನು ನೋಡುತ್ತಿದ್ದೇವೆ. ಬೆದರಿಕೆಯ ಗುರಿ ಒಬ್ಬ ಬಡರೈತನೋ ಅಥವಾ ಕುಶಲಕರ್ಮಿಯೂ ಆಗಬಹುದು ಅಥವಾ ಬಾಲಿವುಡ್‌ನ ಅತ್ಯಂತ ಜನಪ್ರಿಯ ನಾಯಕನಟಿಯೂ ಆಗಬಹುದು. ರಜಪೂತರ ಮರ್ಯಾದೆಗೆ ಕುಂದುಬರುತ್ತದೆಯೆಂದರೆ ಕರ್ಣಿಸೇನಾದ ನಾಯಕರು ಬೆದರಿಕೆ ಹಾಕಬಹುದು, ಹಲ್ಲೆ ಮಾಡಬಹುದು. ಇದಾವುದಕ್ಕೂ ಕಾನೂನಿನ ಅಡೆತಡೆಗಳಿಲ್ಲ.

ಇಂತಹ ವಿದ್ಯಮಾನ ದೂರದ ರಾಜಸ್ಥಾನದಲ್ಲಿ ಅಥವಾ ಉತ್ತರಪ್ರದೇಶದಲ್ಲಿ ನಡೆಯುತ್ತದೆ ಎಂದು ನಾವು ಉಪೇಕ್ಷಿಸುವಂತಿಲ್ಲ. ನಮ್ಮ ನಡುವೆಯೂ ಆಕ್ರಾಮಕವಾದ ರೀತಿಯಲ್ಲಿ ಸಾರ್ವಜನಿಕ ಬದುಕಿನಲ್ಲಿ ವರ್ತಿಸಬೇಕು ಎನ್ನುವ ಮಾತುಗಳು ಬಹಿರಂಗವಾಗಿ ಪದೇಪದೇ ಕೇಳಿಬರುತ್ತಿವೆ. ತಮ್ಮ ಆದ್ಯತೆಯ ಕಾರ್ಯಕ್ರಮಗಳು ತಾವು ನಿರೀಕ್ಷಿಸುವ ರೀತಿಯಲ್ಲಿಯೇ ನಡೆಯಬೇಕು ಎಂದು ಆಗ್ರಹಿಸುವ ಪ್ರವೃತ್ತಿ ಹೆಚ್ಚಾಗಿದೆ. ತಮಗೆ ಇಷ್ಟವಾಗದ ವಿದ್ಯಮಾನಗಳನ್ನು ತಡೆಯಲು ಹಿಂಸೆಯನ್ನು ಬಳಸುವುದು, ಗುಂಪಿನ ಬಲವನ್ನು ನಿಯೋಜಿಸುವುದು ತಪ್ಪಲ್ಲ ಎನ್ನುವಂತೆ ಆಗುತ್ತಿದೆ. ರಾಜಕೀಯ ಚರ್ಚೆಗಳ ಭಾಷೆ ಸಭ್ಯತೆಯ ಎಲ್ಲೆಯನ್ನೂ ಪರಸ್ಪರರನ್ನು ವಿಮರ್ಶಿಸಬೇಕೆಂಬ ಆಕಾಂಕ್ಷೆಯನ್ನೂ ಕಳೆದುಕೊಂಡಿದೆ. ಬದಲಿಗೆ ತಮ್ಮ ಎದುರಾಳಿಗಳನ್ನು ರಾಕ್ಷಸೀಕರಿಸುವ ಅಭ್ಯಾಸ ಸರ್ವೇ ಸಾಮಾನ್ಯವಾಗುತ್ತಿದೆ.

ನಾನು ವಾಸಿಸುವ ಮೈಸೂರಿನಂತಹ ಸಭ್ಯ ನಗರಿಯಲ್ಲಿಯೇ ಕಳೆದ ಎಂಟು-ಹತ್ತು ದಿನಗಳಲ್ಲಿ ಇಂತಹ ಮಾತುಗಳು ಕೇಳಿಬಂದಿವೆ ಮತ್ತು ಘಟನೆಗಳು ನಡೆದಿವೆ. ವಿಷಾದದ ಸಂಗತಿಯೆಂದರೆ ಈ ಬೆಳವಣಿಗೆಗಳಿಂದ ಯಾವ ರಾಜಕೀಯ ಪಕ್ಷವೂ ಹೊರತಾಗಿಲ್ಲ. ಎಲ್ಲ ವಿಚಾರಧಾರೆಗಳ, ಎಲ್ಲ ಸೈದ್ಧಾಂತಿಕ ಹಿನ್ನೆಲೆಗಳ ಪಕ್ಷಗಳೂ ಭಾರತದ ಬೇರೆಬೇರೆ ಭಾಗಗಳಲ್ಲಿ ತಮಗೆ ಅವಕಾಶ ದೊರಕಿದಾಗಲೆಲ್ಲ ರಾಜಕೀಯ ಸಭ್ಯತೆಯ, ಕಾನೂನಿನ ಗಡಿಗಳನ್ನು ಮೀರುವ ಕೆಲಸಗಳನ್ನು ಮಾಡುತ್ತಲೆ ಬಂದಿವೆ. ಅದಕ್ಕಾಗಿಯೇ ಇಂತಹ ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಚಟುವಟಿಕೆಗಳನ್ನು ಹಾಗೂ ಸಭ್ಯ ನಾಗರಿಕ ನಡವಳಿಕೆಯ ಆಚೆಗಿನ ವರ್ತನೆಗಳನ್ನು ನಾವು ನಮ್ಮ ಸಾರ್ವಜನಿಕ ನಡಾವಳಿಗಳಲ್ಲಿ ಸಹಿಸಿಕೊಂಡಿದ್ದೇವೆ, ಒಪ್ಪಿಕೊಂಡಿದ್ದೇವೆ. ಇವು ಯಾವುವೂ ನಮಗೆ ಮುಜುಗರವನ್ನು ಉಂಟುಮಾಡುತ್ತಿಲ್ಲ ಎನ್ನುವ ಕಾರಣದಿಂದಲೇ ನಮ್ಮ ಸಾಮಾನ್ಯ ತಿಳಿವಳಿಕೆಯ ಅಂಗವಾಗಿಬಿಟ್ಟಿವೆ. ನಮ್ಮ ನಡವಳಿಕೆ ಹೀಗೆಯೇ ಇರಬೇಕು ಎನ್ನುವತ್ತ ನಾವು ಭರದಿಂದ ಸಾಗುತ್ತಿದ್ದೇವೆ.

ನಮ್ಮ ನಾಗರಿಕ ಸಮಾಜವು ಹೀಗಿರಬಾರದಿತ್ತು ಎನ್ನುವಾಗ ನಾನು ಕೇವಲ ನಮ್ಮ ಸಾಂವಿಧಾನಿಕ ಮೌಲ್ಯಗಳನ್ನು, ಕಾನೂನಿನ ಪಾರಮಾಧಿಕಾರವನ್ನು ಮಾತ್ರ ಎತ್ತಿಹಿಡಿಯಲು ಬಯಸುತ್ತಿಲ್ಲ. ಅವುಗಳ ಜೊತೆಗೆ ನಾವು ಇಲ್ಲಿ ಗುರುತಿಸಲೇಬೇಕಾಗಿರುವ ಮತ್ತೊಂದು ಅಂಶವಿದೆ. ಭಾರತೀಯ ನಾಗರಿಕತೆಯ ಅತ್ಯಂತ ಮುಖ್ಯ ಸಾಧನೆಗಳಲ್ಲಿ ಒಂದು ಎಂದರೆ ಐತಿಹಾಸಿಕವಾಗಿ ನಾವು ಪೋಷಿಸಿಕೊಂಡುಬಂದಿರುವ ಬಹುಸಾಂಸ್ಕೃತಿಕತೆ ಅಥವಾ ಪ್ಲೂರಲಿಸಂ. ಈ ವಿದ್ಯಮಾನದ ಮುಖ್ಯಗುಣವೆಂದರೆ ಭಾರತದಲ್ಲಿನ ವಿಭಿನ್ನ ಸಮುದಾಯಗಳ ನಡುವೆ ಇರುವ ನಂಬಿಕೆ, ಆಚರಣೆ ಮತ್ತು ದರ್ಶನಗಳಲ್ಲಿ ಇರುವ ಭಿನ್ನತೆಗಳನ್ನು ಪರಸ್ಪರರು ಒಪ್ಪುತ್ತಲೇ ಸಹಬಾಳ್ವೆಯನ್ನು ಮಾಡುವುದು. ಗಮನಿಸಿ, ನಾನು ಭಿನ್ನತೆಯನ್ನು ಪರಸ್ಪರರು ಸಹಿಸಿಕೊಳ್ಳುತ್ತಿದ್ದರು ಎನ್ನುತ್ತಿಲ್ಲ. ಹಾಗೆ ಮಾಡಿದ್ದರೆ ಅದು ಕೇವಲ ಸಹಿಷ್ಣುತೆಯಾಗುತ್ತಿತ್ತು. ಆದರೆ ಇಲ್ಲಿ ಭಿನ್ನತೆಗಳನ್ನು ಒಪ್ಪಿಕೊಳ್ಳುವ ಮತ್ತಷ್ಟು ಮೌಲಿಕವಾದ ಗುಣವೊಂದಿದೆ.

ಐತಿಹಾಸಿಕವಾಗಿ ನಮ್ಮ ಪ್ರತಿದಿನದ ಬದುಕಿನಲ್ಲಿ ಸಹಬಾಳ್ವೆಯ ತಳಹದಿಯಾಗಿದ್ದುದು ಈ ಬಹುಸಾಂಸ್ಕೃತಿಕತೆ. ಆಧುನಿಕಪೂರ್ವ ಭಾರತದಲ್ಲಿದ್ದ ಅಸಮಾನತೆ, ರಾಜಪ್ರಭುತ್ವ ಇತ್ಯಾದಿಗಳ ನಡುವೆಯೂ ಬಹುಸಾಂಸ್ಕೃತಿಕತೆ ನಾವು ಬೆಳಸಿಕೊಂಡಿದ್ದ ದೊಡ್ಡಗುಣವಾಗಿತ್ತು. ಇದು ನಮ್ಮ ದೌರ್ಬಲ್ಯವಾಗಿರಲಿಲ್ಲ ಬದಲಿಗೆ ಶಕ್ತಿಯಾಗಿತ್ತು. ನಮ್ಮ ಸಭ್ಯತೆಗೆ, ನಾಗರಿಕ ನಡವಳಿಕೆಗೆ ಆಧಾರವಾಗಿ ನಾವು ಕಟ್ಟಿಕೊಂಡಿರುವ ಆಧುನಿಕ ಸಂವಿಧಾನದ ಜೊತೆಗೆ ಪ್ರತಿದಿನದ ಬದುಕಿನಿಂದ ಐತಿಹಾಸಿಕವಾಗಿ ಪಡೆದಿರುವ ಬಹುಸಾಂಸ್ಕೃತಿಕತೆಯ ಮತ್ತೊಂದು ದೊಡ್ಡ ಬಳುವಳಿಯೂ ಇದೆ. ಇಂದು ಈ ಗುಣವನ್ನು ಸಂಪೂರ್ಣವಾಗಿ ಕಳೆದು ಕೊಳ್ಳುವ ಅಪಾಯವನ್ನು ನಾವು ಎದುರಿಸುತ್ತಿದ್ದೇವೆ.

ಡಿಸೆಂಬರ್ 6, 1992ರ ಎರಡನೆಯ ಸಂದೇಶವೆಂದರೆ ಹಿಂದೂ ಧರ್ಮವು ಇಪ್ಪತ್ತೊಂದನೆಯ ಶತಮಾನದಲ್ಲಿ ತನ್ನನ್ನು ಹೇಗೆ ಮತ್ತೆ ಕಟ್ಟಿಕೊಳ್ಳಲು ಬಯಸುತ್ತದೆ ಎನ್ನುವುದು. ಹಿಂದೂ ಧರ್ಮದ ಆಧ್ಯಾತ್ಮಿಕ ಗುರಿಗಳು, ನೈತಿಕ ಪಥಗಳು, ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳು ಏನೇ ಇರಲಿ. ಹಿಂದೂ ಸಮುದಾಯ ಮೂಲಭೂತವಾಗಿ ತನ್ನನ್ನು ಒಂದು ರಾಜಕೀಯ ಸಮುದಾಯವಾಗಿ ಕಟ್ಟಿಕೊಳ್ಳಲು ಬಯಸುತ್ತದೆ ಎನ್ನುವುದು ಸ್ಪಷ್ಟವಾಗಿದೆ. ಇಂತಹ ಬಯಕೆಯಿರುವುದು ತಪ್ಪೇನಲ್ಲ ಎನ್ನುವವರ ಸಂಖ್ಯೆಯೂ ಕಡಿಮೆಯೇನಲ್ಲ. ಅದಕ್ಕಾಗಿಯೇ ಹಿಂದೂ ರಾಷ್ಟ್ರೀಯವಾದವೊಂದನ್ನು ರೂಪಿಸುತ್ತ, ಅದರ ಮೂಲಕ ಭಾರತದ ರಾಷ್ಟ್ರೀಯತೆಯನ್ನು ಮರುವ್ಯಾಖ್ಯಾನ ಮಾಡುವ ಗಂಭೀರ ಪ್ರಯತ್ನಗಳು ನಡೆದಿವೆ. ಈ ನಡೆಯ ಸರಿತಪ್ಪುಗಳನ್ನು ಗುರುತಿಸುವುದು ದೊಡ್ಡ ವಿಚಾರವೇನಲ್ಲ.

ಹಿಂದೂ ರಾಷ್ಟ್ರೀಯತೆಯನ್ನು ಪಶ್ಚಿಮದ ಸೆಕ್ಯುಲರಿಸಂನ ಆಧಾರದ ಮೇಲೆ ಅಥವಾ ಭಾರತದ ಸಂವಿಧಾನದ ಮೌಲ್ಯಗಳ ಆಧಾರದ ಮೇಲೆ ವಿಮರ್ಶಿಸುವುದನ್ನು ನಾವು ಸಾಮಾನ್ಯವಾಗಿ ನೋಡಿದ್ದೇವೆ. ಆದರೆ ನಮ್ಮ ಮುಂದೆ ಅನಾವರಣಗೊಂಡಿರುವ ಹಿಂದೂ ರಾಷ್ಟ್ರೀಯತೆ, ಭಾರತೀಯ ನಾಗರಿಕತೆಯ ಮೂಲ ಆಶಯಗಳನ್ನು ಎಷ್ಟರ ಮಟ್ಟಿಗೆ ತನ್ನೊಳಗೆ ಅಳವಡಿಸಿಕೊಂಡಿದೆ ಎಂದು ಕೇಳವುದು ಬಹುಶಃ ಹೆಚ್ಚು ಫಲದಾಯಕವಾದ, ಪರಿಣಾಮಕಾರಿಯಾದ ಪ್ರಶ್ನೆಯೆಂದು ನನಗೆ ಅನ್ನಿಸುತ್ತದೆ.

ಪ್ರತಾಪ್‍ಭಾನು ಮೆಹ್ತಾ ಹೇಳುತ್ತಾರೆ: ‘ಹಿಂದೂ ಧರ್ಮದ ಅತ್ಯುನ್ನತ ದಾರ್ಶನಿಕ ಆಶಯಗಳು ಪ್ರಪಂಚದ ಸಮಗ್ರತೆ ಮತ್ತು ಆನಂದದಾಯಕ ಆತ್ಮಸಾಕ್ಷಾತ್ಕಾರಗಳಿಂದ ತಮ್ಮ ಪಥವನ್ನು ಕಂಡುಕೊಳ್ಳುವ ಬದಲು, ಅದರ ಆಶಯಗಳು ಶಕ್ತಿ-ಅಧಿಕಾರಗಳನ್ನು ಹೇಗಾದರೂ ಪಡೆಯಬೇಕು ಎನ್ನುವ ನೆಲೆಗೆ ಬಂದು ತಲುಪಿವೆ’. ಹೀಗೆ ಅಧಿಕಾರದ ರಾಜಕಾರಣದಲ್ಲಿ ಮಗ್ನರಾಗಿ ನಾವು ಕಳೆದುಕೊಳ್ಳುವುದಾದರೂ ಏನನ್ನು? ಬಹಳ ಮುಖ್ಯವಾಗಿ ನಾವು ಕಳೆದುಕೊಳ್ಳುವುದು ನಾನು ಮೇಲೆ ಗುರುತಿಸಿದ ಬಹುಸಾಂಸ್ಕೃತಿಕತೆಯನ್ನು. ವಿಪರ್ಯಾಸವೆಂದರೆ ಕಳೆದ ಸಹಸ್ರಮಾನದಲ್ಲಿ ಈ ಗುಣವನ್ನು ಉಳಿಸಿ, ಪೋಷಿಸಿಕೊಂಡು ಬಂದದ್ದು ಇಂದು ನಾವು ಜನಪ್ರಿಯ (ಪಾಪ್ಯುಲರ್) ಹಿಂದೂ ಧರ್ಮದೊಳಗೆ ಗುರುತಿಸುವ ಭಕ್ತಿ ಸಂಪ್ರದಾಯಗಳು. ಉದಾಹರಣೆಗೆ ರಾಮನನ್ನೇ ಉತ್ತರದ ಹಿಂದಿಯಿಂದ ದಕ್ಷಿಣದ ತಮಿಳಿನವರೆಗೆ, ಪೂರ್ವದ ಅಸ್ಸಾಮಿಯಿಂದ ಪಶ್ಚಿಮದ ಗುಜರಾತಿ ಮತ್ತು ಮರಾಠಿಗಳ ತನಕ ಭಕ್ತಿಯ ಕೇಂದ್ರವಾಗಿರಿಸಿಕೊಂಡು ಹಾಡಿದ್ದು, ಆರಾಧಿಸಿದ್ದು ಎಲ್ಲ ವರ್ಗಗಳ ಸಾಮಾನ್ಯ ಜನರು. ತಮ್ಮ ನೆಲೆಯಲ್ಲಿಯೇ, ತಮ್ಮ ನೆಲದಲ್ಲಿಯೇ, ತಮ್ಮ ದೇಹದಲ್ಲಿಯೇ ದೈವವನ್ನು ಕಾಣುವ ಬಹುದೊಡ್ಡ ಶಕ್ತಿಯೂ ಈ ಎಲ್ಲ ಸಂಪ್ರದಾಯಗಳಿಗೆ ಇತ್ತು. ಎರಡನೆಯ ಸಹಸ್ರಮಾನದ ವೇದಾಂತದ ಪರಂಪರೆಗಳು ಹಿಂದೂ ಧರ್ಮದ ಮೇಲೆ ಎಷ್ಟೇ ಪರಿಣಾಮವನ್ನು ಬೀರಿದ್ದರೂ ಅವುಗಳು ಜನಪದರ ಭಕ್ತಿ ಮತ್ತು ಅಧ್ಯಾತ್ಮ ಪರಂಪರೆಗಳಿಗೆ ಸರಿಸಾಟಿಯಾಗಿರಲಿಲ್ಲ. ಆದರೆ ಶಕ್ತಿ ರಾಜಕಾರಣದ ಹಂಬಲಗಳ ಎದುರು ಈ ಪರಂಪರೆಗಳು ತಮ್ಮ ನೆಲೆಯನ್ನು, ನೈತಿಕ ಪ್ರಭಾವವನ್ನೂ ಕಳೆದುಕೊಳ್ಳುತ್ತಿವೆ.

ಕಳೆದ ಮೂರು ದಶಕಗಳಿಂದ ಅಯೋಧ್ಯೆ ಒಂದು ಬ್ಯಾರಿಕೇಡ್‌ಗಳ ನಗರಿಯಾಗಿದೆ. ಫೈಜಾಬಾದಿನಿಂದ ಹೊರಟರೆ ಪೂರ್ವತುದಿಯಲ್ಲಿರುವ ಕರಸೇವಕನಗರದವರೆಗೆ ಎಲ್ಲಿ ನೋಡಿದರೂ ಚೆಕ್‌ಪೋಸ್ಟ್‌ಗಳು, ಬ್ಯಾರಿಕೇಡ್‍ಗಳು. ಇಂದು ರಾಮನ ಪಾಲಿಗೂ ಇಂತಹುದೇ ಆದ ತಡೆಗಟ್ಟುಗಳ ಇರುವಿಕೆ. ವಿವಾದಿತ ರಾಮಜನ್ಮಭೂಮಿಯಲ್ಲಿಯೇ ಇಂತಹ ತಡೆಗಟ್ಟುಗಳ ಇರುವಿಕೆ ಅತ್ಯಂತ ತೀವ್ರವಾಗಿ ಅನುಭವಾಗುತ್ತದೆ. ಅದರಲ್ಲೂ ಈಗ ಅಸ್ತಿತ್ವದಲ್ಲಿರುವ ಸಣ್ಣ ಗುಡಿಯ ಬಳಿ ಈ ಮಾತು ವಿಶೇಷವಾಗಿ ಅನ್ವಯಿಸುತ್ತದೆ.

ಅಯೋಧ್ಯೆಯ ಮುಖ್ಯರಸ್ತೆಯಿಂದ ಈ ಸ್ಥಳಕ್ಕೆ ಪ್ರವೇಶವಿಲ್ಲ. ಈಗ ಬಳಕೆಯಾಗುತ್ತಿರುವ ಸಾರ್ವಜನಿಕ ಪ್ರವೇಶದ್ವಾರಕ್ಕೆ ಹಲವಾರು ಸಣ್ಣರಸ್ತೆಗಳು, ಮನೆಗಳ ಮೂಲಕ ತೆರಳಬೇಕು. ದ್ವಾರದ ಬಳಿಯಿರುವ ಪೋಲಿಸರು ಯಾತ್ರಿಯನ್ನು ರಾಮಲಲ್ಲಾನ ದರ್ಶನ ಪಡೆಯುವಂತೆ ಪ್ರೋತ್ಸಾಹಿಸು

ತ್ತಾರೆ. ಯಾತ್ರಿಯು ತನ್ನ ಸಾಮಾನುಗಳನ್ನು ದ್ವಾರದಲ್ಲಿಯೇ ಬಿಡಬೇಕು. ಮೂರು ಬಾರಿ ಪೋಲಿಸರಿಂದ ಪರೀಕ್ಷೆಗೊಳಗಾಗಬೇಕು. ನಂತರ ತಡೆಗಟ್ಟುಗಳಿಂದಲೇ ರಚಿತವಾಗಿರುವ ಕಿರಿದಾದ ಕಾಲುದಾರಿಯಲ್ಲಿ ನಡೆದು ರಾಮ, ಸೀತೆ, ಲಕ್ಷ್ಮಣರ ವಿಗ್ರಹಗಳ ದರ್ಶನ ಪಡೆಯಬೇಕು. ಆ ಕ್ಷಣದಲ್ಲಿ ಎಲ್ಲೆಂದರೆ ಅಲ್ಲಿ, ತನ್ನೊಳಗೆ ಸಹ ರಾಮನನ್ನು ಕಾಣಬಲ್ಲ ಯಾತ್ರಿಗೆ ಏನನ್ನಿಸುತ್ತದೆ ಎನ್ನುವ ಪ್ರಶ್ನೆ ನಮ್ಮೊಳಗೆ ಉಳಿಯುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry