ಗುರುವಾರ , ಫೆಬ್ರವರಿ 25, 2021
23 °C

ವಿಶೇಷ ಅಂಚೆ ಲಕೋಟೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶೇಷ ಅಂಚೆ ಲಕೋಟೆ ಬಿಡುಗಡೆ

ಬೆಂಗಳೂರು: ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ಶತಮಾನೋತ್ಸವದ ಅಂಗವಾಗಿ ಅಂಚೆ ಇಲಾಖೆಯು ಹೊರ ತಂದಿರುವ ವಿಶೇಷ ಅಂಚೆ ಲಕೋಟೆಯನ್ನು ಗುರುವಾರ ನಗರದಲ್ಲಿ ಬಿಡುಗಡೆ ಮಾಡಲಾಯಿತು.

ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್‌.ಆರ್‌.ಶೆಟ್ಟಿ ಅವರು ಬಿಡುಗಡೆ ಮಾಡಿದ ಈ ಲಕೋಟೆಯಲ್ಲಿ ಕಾಲೇಜಿನ ಹೊರ, ಒಳ ಕಟ್ಟಡಗಳ ಹಾಗೂ ವಿಶ್ವೇಶ್ವರಯ್ಯ ಅವರ ಭಾವಚಿತ್ರಗಳಿವೆ. ‘100 ವರ್ಷಗಳ ಶ್ರೇಷ್ಠತೆ’ ಎಂಬ ಘೋಷವಾಕ್ಯ ಇದರಲ್ಲಿದೆ. ಲಕೋಟೆಯ ಹಿಂಭಾಗದಲ್ಲಿ ಕಾಲೇಜಿನ ಇತಿಹಾಸದ ಬಗ್ಗೆ ಸಂಕ್ಷಿಪ್ತ ಮಾಹಿತಿಯೂ ಇದೆ.

ಈ ಲಕೋಟೆಯ 2,000 ಪ್ರತಿಗಳನ್ನು ಮುದ್ರಿಸಲಾಗಿದೆ. 1,000 ಪ್ರತಿಗಳನ್ನು ಯುವಿಸಿಇಗೆ ಹಸ್ತಾಂತರಿಸಲಾಗಿದೆ. 900 ಪ್ರತಿಗಳು ಮಾರಾಟಕ್ಕೆ ಹಾಗೂ 100 ಪ್ರತಿಗಳನ್ನು ಸಂಗ್ರಹಕ್ಕೆಂದು ಮೀಸಲಿಡಲಾಗಿದೆ. ಪ್ರತಿ ಲಕೋಟೆಯ ಬೆಲೆ ₹ 20. ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ (ಜಿಪಿಒ) ಲಕೋಟೆಗಳು ಮಾರಾಟಕ್ಕೆ ಲಭ್ಯ ಇವೆ.

‘ಡೀಮ್ಡ್ ವಿವಿ ಸ್ಥಾನಮಾನ ನೀಡಿ’: ‘ಯುವಿಸಿಇ ನೂರು ವರ್ಷಗಳ ಶ್ರೇಷ್ಠತೆಯನ್ನು ಹೊಂದಿದೆ. ಹೀಗಾಗಿ, ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ಅಥವಾ ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾನಮಾನ ನೀಡಬೇಕು’ ಎಂದು ಎನ್‌.ಆರ್‌.ಶೆಟ್ಟಿ ಒತ್ತಾಯಿಸಿದರು.

‘ಯುವಿಸಿಇಯು ರೂರ್ಕಿ, ಪುಣೆ ಎಂಜಿನಿಯರಿಂಗ್‌ ಕಾಲೇಜುಗಳ ಸಮಕಾಲೀನ ಸ್ಥಾನ ಪಡೆದಿದೆ. ಹೀಗಾಗಿ, ಕಾಲೇಜನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬಾರದು’ ಎಂದು ಹೇಳಿದರು.

‘ಸ್ವಾಯತ್ತ ಅಥವಾ ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾನಮಾನ ಪಡೆಯಲು ಯುವಿಸಿಇಗೆ ಎಲ್ಲ ರೀತಿಯ ಅರ್ಹತೆ ಇದೆ. ಕಾಲೇಜಿನ ಅಭಿವೃದ್ಧಿಗಾಗಿ ₹25 ಕೋಟಿ ನೀಡಲಾಗಿದೆ. ಅದರ ಜತೆಗೆ ಇನ್ನೂ ₹100 ಕೋಟಿಯನ್ನು ಸರ್ಕಾರ ನೀಡಬೇಕು. ಕಾಲೇಜಿಗೆ ಸೇರಿದ 15 ಎಕರೆ ಜಮೀನಿನಲ್ಲಿ ಬಹುಮಹಡಿ

ಕಟ್ಟಡ ನಿರ್ಮಿಸಿ ಅಭಿವೃದ್ಧಿ ಪಡಿಸಬೇಕು’ ಎಂದು ಸಲಹೆ ನೀಡಿದರು.

ವಿಶೇಷ ಸನ್ನಿವೇಶಗಳು ಹಾಗೂ ಸಂದರ್ಭಗಳ ಸ್ಮರಣಾರ್ಥವಾಗಿ ವಿಶೇಷ ಅಂಚೆ ಲಕೋಟೆಗಳನ್ನು ಬೇಡಿಕೆ ಆಧಾರದ ಮೇಲೆ ಮುದ್ರಿಸಲಾಗುತ್ತದೆ. ಆ ಬಗ್ಗೆ ಬಹುತೇಕ ಸಂಘ–ಸಂಸ್ಥೆಗಳಿಗೆ ಮಾಹಿತಿ ಇಲ್ಲ. ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ಮೂಲಕ ಅರಿವು ಮೂಡಿಸುತ್ತೇವೆ ಎಂದು ಕರ್ನಾಟಕ ವೃತ್ತದ ಚೀಫ್ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಾ.ಚಾರ್ಲ್ಸ್‌ ಲೋಬೊ ಹೇಳಿದರು.

ಯುವಿಸಿಇಯ ಲಕೋಟೆಯನ್ನು ಪ್ರತಿ ಅಂಚೆ ಪ್ರದರ್ಶನದಲ್ಲೂ ಇಡಲಾಗುತ್ತದೆ. ಈ ಮೂಲಕ ಪದೇ ಪದೇ ನೆನಪು ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.