7

ದುಬೈನಲ್ಲಿ ‘ಸೋಫಿಯಾ’ ಹವಾ

Published:
Updated:
ದುಬೈನಲ್ಲಿ ‘ಸೋಫಿಯಾ’ ಹವಾ

ಕರಾವಳಿಯಲ್ಲಿ ತೆರೆಕಂಡ ‘ಸೋಫಿಯಾ’ ಸಿನಿಮಾ 50 ದಿನಗಳ ಕಾಲ ಹೌಸ್‌ಫುಲ್‌ ಪ್ರದರ್ಶನ ಕಂಡು ಕೊಂಕಣಿ ಹಾಗೂ ತುಳು ಸಿನಿರಸಿಕರನ್ನು ರಂಜಿಸಿತ್ತು. ಕೌಟುಂಬಿಕ ಕಥೆಗೆ ರಂಜನೆ ಹಾಗೂ ಸಸ್ಪೆನ್ಸ್‌ನ ಪಾಕ ಬೆರೆಸಿ ಹದವಾಗಿ ರೂಪಿಸಿದ್ದ ಈ ಸಿನಿಮಾವನ್ನು ವೀಕ್ಷಿಸಿದ ಪ್ರೇಕ್ಷಕರು ಹಾಗೂ ವಿಮರ್ಶಕರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಈ ಸಿನಿಮಾವನ್ನು ನಿರ್ಮಿಸಿದ್ದು ಒಬ್ಬ ಕೊಂಕಣಿ ಹೆಣ್ಣು ಮಗಳು ಎಂಬ ವಿಚಾರ ಹೆಚ್ಚು ಸದ್ದು ಮಾಡಿತ್ತು. ನಟಿ ಎಸ್ತರ್‌ ಅವರ ತಾಯಿ ಜಾನೆಟ್‌ ನರೋನ್ಹಾ ಈ ಸಿನಿಮಾದ ನಿರ್ಮಾಪಕರು. ಸೋಫಿಯಾ ಚಿತ್ರಕ್ಕೆ ಮ್ಯಾಕ್ಸಿಂ ಪಿರೇರಾ ಆ್ಯಕ್ಷನ್‌ ಕಟ್‌ ಹೇಳಿದ್ದರು. ಜಾನೆಟ್‌ ನರೋನ್ಹಾ ಪ್ರೊಡಕ್ಷನ್‌ನಲ್ಲಿ ಮೂಡಿಬಂದಿದ್ದ ‘ಸೋಫಿಯಾ’ ಸಿನಿಮಾ ಈಗ ದುಬೈನಲ್ಲಿ ತೆರೆ ಕಾಣಲು ಸಜ್ಜಾಗಿದೆ. ಈ ಕುರಿತು ಚಿತ್ರದ ನಾಯಕನಟಿ ಎಸ್ತರ್‌ ನರೋನ್ಹಾ ಮಾತನಾಡಿದ್ದಾರೆ.

‘‘ಸೋಫಿಯಾ’ ಸಿನಿಮಾ 2018ರ ಜನವರಿ 19ರಂದು ದುಬೈ ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಲಿದೆ. ಇದರ ಪೂರ್ವಭಾವಿಯಾಗಿ ‘ಸೋಫಿಯಾ’ ಚಿತ್ರದ ಟಿಕೆಟ್‌ ರಿಲೀಸ್‌ ಕಾರ್ಯಕ್ರಮ ಡಿ.15ರಂದು ಅಲ್ಲಿನ ಕರಾಮ ರೆಸಾರ್ಟ್‌ನಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಟಿಕೆಟ್‌ ಬಿಡುಗಡೆ ಜತೆಗೆ, ಚಿತ್ರದ ಪೋಸ್ಟರ್‌ ರಿಲೀಸ್‌ ಕೂಡ ಆಗಲಿದೆ. ‘ಸೋಫಿಯಾ’ ಸಿನಿಮಾ ಈಗಾಗಲೇ ಇಸ್ರೇಲ್‌ ಹಾಗೂ ಯುಕೆಯಲ್ಲಿ ತೆರೆಕಂಡಿತ್ತು. ಅಲ್ಲಿ ಸಿನಿಮಾ ವೀಕ್ಷಿಸಿದ ಕೊಂಕಣಿ ಸಮುದಾಯದವರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿತ್ತು. ಕೊಂಕಣಿ ಜನರ ಪ್ರೀತಿ ಹಾಗೂ ಪ್ರೋತ್ಸಾಹದಿಂದಲೇ ನಾವು ಈಗ ದುಬೈನಲ್ಲಿ ಚಿತ್ರವನ್ನು ತೆರೆಕಾಣಿಸುವ ಯೋಜನೆ ಹಾಕಿಕೊಂಡಿದ್ದೇವೆ. ಮೊದಲಿಗೆ, ಅಂದರೆ ಜ.19ರಂದು ದುಬೈನಲ್ಲಿ ‘ಸೋಫಿಯಾ’ ತೆರೆಕಾಣಿಸಿ ಆನಂತರ ಬ್ಯಾಕ್‌ ಟು ಬ್ಯಾಕ್‌ ಆಗಿ ಗಲ್ಫ್‌ನ ವಿವಿಧ ದೇಶಗಳಲ್ಲಿ ಚಿತ್ರ ಪ್ರದರ್ಶಿಸುವ ಯೋಜನೆ ಇದೆ’ ಎನ್ನುತ್ತಾರೆ ಪಂಚಭಾಷಾ ತಾರೆ, ಕೊಂಕಣಿ ಚೆಲುವೆ ಎಸ್ತರ್‌ ನರೋನ್ಹಾ.

ಕರಾವಳಿಯಲ್ಲಿ ಯಶಸ್ವಿ 50 ದಿನಗಳನ್ನು ಪೂರೈಸಿದ ‘ಸೋಫಿಯಾ’ ಸಿನಿಮಾ ಆನಂತರ ಗೋವಾ, ಕೇರಳ ಹಾಗೂ ಮುಂಬೈನಲ್ಲೂ ಉತ್ತಮ ಪ್ರದರ್ಶನ ದಾಖಲಿಸಿತ್ತು. ಸೋಫಿಯಾ ಚಿತ್ರ ಮುಂಬೈ ಥಿಯೇಟರ್‌ಗಳಲ್ಲಿ ಈಗಲೂ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಎಸ್ತರ್‌.

‘ಕೊಂಕಣಿ ಸಮುದಾಯದ ಜನರು ವಿಶ್ವದೆಲ್ಲೆಡೆ ಇದ್ದಾರೆ. ಅವರೆಲ್ಲರೂ ‘ಸೋಫಿಯಾ’ ಸಿನಿಮಾ ನೋಡಬೇಕು ಎಂಬುದು ನನ್ನ ಆಸೆ. ಅನೇಕ ಕೊಂಕಣಿಗರು ಇನ್ನೂ ನಮ್ಮ ಸಿನಿಮಾ ನೋಡಿಲ್ಲ. ಚಿತ್ರ ವೀಕ್ಷಿಸದ ಜನರಿಂದ ನಮ್ಮ ದೇಶದಲ್ಲೂ ಸಿನಿಮಾ ಪ್ರದರ್ಶಿಸಿ ಎಂಬ ಕೋರಿಕೆಗಳು ಬರುತ್ತಲೇ ಇವೆ. ಹಾಗಾಗಿ, ಕೊಂಕಣಿಗರು ಇರುವ ಎಲ್ಲ ದೇಶಗಳಲ್ಲಿ ಸೋಫಿಯಾ ಸಿನಿಮಾ ತೆರೆಕಾಣಿಸುವ ಯೋಜನೆ ಹಾಕಿಕೊಂಡಿದ್ದೇವೆ. ಅಲ್ಲೀವರೆಗೂ ಜಾನೆಟ್‌ ಪ್ರೊಡಕ್ಷನ್‌ನಿಂದ ಮತ್ತೊಂದು ಪ್ರಾಜೆಕ್ಟ್‌ ಕೈಗೆತ್ತಿಕೊಳ್ಳಬಾರದು ಎಂದು ನಿರ್ಧರಿಸಿದ್ದೇವೆ’ ಎನ್ನುತ್ತಾರೆ ‘ನುಗ್ಗೆಕಾಯಿ’ ಚಿತ್ರದ ತಾರೆ ಎಸ್ತರ್‌.

ಈಚೆಗೆ ಚಂದನವನದಲ್ಲಿ ತೆರೆಕಂಡ ‘ನುಗ್ಗೆಕಾಯಿ’ ಸಿನಿಮಾದಲ್ಲಿ ನಟಿಸಿದ್ದ ಎಸ್ತರ್‌ ಈಗ ಮತ್ತೊಂದು ಕನ್ನಡ ಸಿನಿಮಾ ‘ಡಿಎನ್‌ಎ’ ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಹಾಗೆಯೇ, ತೆಲುಗಿನ ‘ನಯನಂ’ ಹಾಗೂ ತುಳುವಿನ ‘ಜುಗಾರಿ’ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂರು ಸಿನಿಮಾಗಳೂ 2018ಕ್ಕೆ ತೆರೆಕಾಣಲಿವೆಯಂತೆ.

‘ಬಹು ನಿರೀಕ್ಷೆಯ ಡಿಎನ್‌ಎ ಸಿನಿಮಾದ ಚಿತ್ರೀಕರಣ ಇನ್ನು 10 ದಿನಗಳಲ್ಲಿ ಮುಗಿಯಲಿದೆ. ತೆಲುಗಿನ ‘ನಯನಂ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಅದರ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಪ್ರಗತಿಯಲ್ಲಿದೆ. ಹಾಗೆಯೇ, ತುಳು ಭಾಷೆಯಲ್ಲಿ ಮೂಡಿಬರುತ್ತಿರುವ ‘ಜುಗಾರಿ’ ಚಿತ್ರ ಕೂಡ ಶೀಘ್ರದಲ್ಲೇ ಚಿತ್ರೀಕರಣ ಪೂರೈಸಲಿದೆ’ ಎನ್ನುವ ಎಸ್ತರ್‌ ಈಗ ‘ಸೋಫಿಯಾ’ ಚಿತ್ರವನ್ನು ವಿವಿಧ ದೇಶಗಳಲ್ಲಿ ತೆರೆಕಾಣಿಸುವ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry