ಶನಿವಾರ, ಮಾರ್ಚ್ 6, 2021
28 °C

ಸಮೀಕ್ಷೆ ಬಳಿಕ ಅಭ್ಯರ್ಥಿಗಳಿಗೆ ಟಿಕೆಟ್‌: ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮೀಕ್ಷೆ ಬಳಿಕ ಅಭ್ಯರ್ಥಿಗಳಿಗೆ ಟಿಕೆಟ್‌: ಬಿಎಸ್‌ವೈ

ರಾಯಚೂರು: ‘ರಾಜ್ಯದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಈಗಾಗಲೇ ಸಮೀಕ್ಷೆ ಮಾಡಿದ್ದು, ಬಿಜೆಪಿಗೆ ಸ್ಪಷ್ಟ ಬಹುಮತ ಬರುವುದು ನಿಶ್ಚಿತ. ಇನ್ನೂ ಎರಡು ಸಲ ಸಮೀಕ್ಷೆ ನಡೆಸಿ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಯಾರಿಗೆ ಟಿಕೆಟ್‌ ಕೊಡಬೇಕು ಎಂಬುದನ್ನು ತೀರ್ಮಾನಿಸಲಾಗುವುದು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ನವ ಕರ್ನಾಟಕ ಪರಿವರ್ತನಾ ಯಾತ್ರೆ ಸಮಾರಂಭಕ್ಕೆ ತೆರಳುವ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘2018ರ ಜನವರಿ ಬಳಿಕ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳಿಂದ ಅನೇಕ ಶಾಸಕರು ಬಿಜೆಪಿ ಸೇರಲಿದ್ದಾರೆ. ಟಿಕೆಟ್‌ ಕೊಡುತ್ತೇವೆ ಎಂದು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಕಾರ್ಯಕರ್ತರ ಸಲಹೆಗಳನ್ನಾಧರಿಸಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರೊಂದಿಗೆ ಚರ್ಚಿಸಿದ ಬಳಿಕವೇ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗುವುದು.

ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯ ಅನೇಕ ಹಾಲಿ ಶಾಸಕರಿಗೆ, ಸಚಿವರಿಗೆ ಟಿಕೆಟ್‌ ಕೊಟ್ಟಿಲ್ಲ. ಅದೇ ರೀತಿ ಕರ್ನಾಟಕದಲ್ಲೂ ಗೆಲ್ಲುವವರಿಗೆ ಟಿಕೆಟ್‌ ಕೊಡುತ್ತೇವೆ. ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿರುವುದು ಒಳ್ಳೆಯ ಬೆಳವಣಿಗೆ’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿದ್ದಾರೆ. ನಾಲ್ಕೂವರೆ ವರ್ಷ ಅಸತ್ಯದ ನಡಿಗೆ ಮಾಡಿ, ಈಗ ಸತ್ಯದ ನಡಿಗೆ ಎಂದು ಹೇಳುತ್ತಿರುವುದು ದೆವ್ವದ ಬಾಯಲ್ಲಿ ಭಗದ್ಗೀತೆ ಕೇಳಿದಂತೆ ಆಗುತ್ತಿದೆ’ ಎಂದು ಟೀಕಿಸಿದರು.

ಶಾಸಕರಾದ ತಿಪ್ಪರಾಜು ಹವಾಲ್ದಾರ್, ಶಿವನಗೌಡ ನಾಯಕ, ಸಿ.ಟಿ. ರವಿ, ಗೋವಿಂದ ಕಾರಜೋಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ, ಶರಣಪ್ಪಗೌಡ, ಎ.ಪಾಪಾರೆಡ್ಡಿ, ಎನ್‌.ಶಂಕ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಅವರು ಇದ್ದರು.

ಬಿಜೆಪಿ ಪ್ರಣಾಳಿಕೆ

ಜನವರಿ 26 ರಂದು ಹುಬಳ್ಳಿಯಲ್ಲಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದ್ದು, ಅಲ್ಲಿ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತೇವೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದಲೂ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಅವುಗಳನ್ನೆಲ್ಲ ಕ್ರೋಢೀಕರಿಸಿ ಪ್ರಣಾಳಿಕೆ ಸಿದ್ಧಪಡಿಸಲಾಗುವುದು ಎಂದು ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.