ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ

Last Updated 15 ಡಿಸೆಂಬರ್ 2017, 6:09 IST
ಅಕ್ಷರ ಗಾತ್ರ

ಮಾನ್ವಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನ ಗಳಿಸಿದೆ. ಇಂತಹ ಸರ್ಕಾರವನ್ನು ತೊಲಗಿಸಿದರೆ ಮಾತ್ರ ರಾಜ್ಯಕ್ಕೆ ಅಚ್ಚೇ ದಿನ್‌ ಬರಲು ಸಾಧ್ಯ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು.

ಪಟ್ಟಣದ ಟಿಎಪಿಸಿಎಂಎಸ್‌ ಆವರಣದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ‘ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ’ಯ ಅಂಗವಾಗಿ ಗುರುವಾರ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವಾಗಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. ಗುಜರಾತ್‌, ಹಿಮಾಚಲ ಪ್ರದೇಶದ ಚುನಾವಣೆ ಫಲಿತಾಂಶ ಬಂದ ನಂತರ ರಾಜ್ಯದಿಂದಲೂ ಕಾಂಗ್ರೆಸ್‌ ಪಕ್ಷವನ್ನು ತೊಲಗಿಸುವ ದಿನಗಳು ಆರಂಭವಾಗಲಿವೆ’ ಎಂದರು.

‘ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕೃಷ್ಣಾ ಕೊಳ್ಳದ ಯೋಜನೆಗಳಿಗೆ ₹10ಸಾವಿರ ಕೋಟಿ ಖರ್ಚು ಮಾಡುವುದಾಗಿ ಭರವಸೆ ನೀಡಿ ಈಗ ಕೇವಲ ₹ 6ಸಾವಿರ ಕೋಟಿ ಖರ್ಚು ಮಾಡಲಾಗಿದೆ. ‘ಬಸವನ ಹಾದಿಯಲ್ಲಿ ನಮ್ಮ ನಡಿಗೆ’ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಸವಣ್ಣನವರ ಹೆಸರು ಹೇಳುವ ನೈತಿಕತೆ ಇಲ್ಲ’ ಎಂದು ಟೀಕಿಸಿದರು.

‘ಕೇಂದ್ರ ಸರ್ಕಾರದ ನೆರವಿನಲ್ಲಿ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯ ಹೆಸರನ್ನು ಮುಖ್ಯಮಂತ್ರಿ ದುರ್ಬಳಕೆ ಮಾಡಿಕೊಂಡಿದ್ದಾರೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭಾವಚಿತ್ರ ಅಳವಡಿಸಲು ಕಾರ್ಯಕರ್ತರು ಮುಂದಾಗಬೇಕು’ ಎಂದು ಕರೆ ನೀಡಿದರು.

ವಿಧಾನ ಪರಿಷತ್‌ ವಿರೊಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ₹40ಕೋಟಿ ನೀಡುವ ಮೂಲಕ ಬಿ.ಎಸ್‌.ಯಡಿಯೂರಪ್ಪ ಹಿಂದುಳಿದ ವರ್ಗಗಳ ಬಗ್ಗೆ ತಮ್ಮ ನಿಜವಾದ ಕಾಳಜಿ ತೋರಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಶೈವ ಲಿಂಗಾಯತ ಸಮಾಜವನ್ನು ಒಡೆದಿದ್ದಾರೆ. ಜಾತಿ ಜಾತಿಗಳು ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಆ ವರ್ಗಗಳಿಗೆ ಸೇರಿದ ಅನುದಾನ ಲೂಟಿ ಮಾಡುವ ಮೂಲಕ ಸಿದ್ದರಾಮಯ್ಯ ಜನರಿಗೆ ಮೋಸ ಮಾಡುತ್ತಿದ್ದಾರೆ. ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಜತೆಗೆ ಸೇರಿ ಹಿಂದುಳಿದ, ದಲಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಹಾಗೂ ಹಾಸಿಗೆ ಕೊಡುವ ನೆಪದಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ’ ಎಂದು ದೂರಿದರು.

ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ‘ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಎಂಬುದನ್ನು ಮರೆತಿದ್ದಾರೆ. ಈ ಸರ್ಕಾರಕ್ಕೆ ದಲಿತರ ಬಗ್ಗೆ ಕಾಳಜಿ ಇಲ್ಲ. ಪ್ರಸಕ್ತ ವರ್ಷ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ₹19ಸಾವಿರ ಕೋಟಿ ಅನುದಾನದಲ್ಲಿ ಕೇವಲ ₹5ಸಾವಿರ ಕೋಟಿ ಖರ್ಚು ಮಾಡಲಾಗಿದೆ’ ಎಂದರು.

ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ‘ತಮ್ಮದು ಸಮಾಜವಾದಿ ಹಿನ್ನೆಲೆ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಲಕ್ಷಾಂತರ ರೂಪಾಯಿ ದುಬಾರಿ ಬೆಲೆಯ ವಾಚು, ಕನ್ನಡಕ, ಚಪ್ಪಲಿ ಧರಿಸುತ್ತಾರೆ’ ಎಂದು ವಂಗ್ಯವಾಡಿದರು.

ಕೇಂದ್ರದ ಮಾಜಿ ಸಚಿವೆ ಪುರಂದೇಶ್ವರಿ ಮತ್ತು ಮಾಜಿ ಸಚಿವ ಕೆ.ಶಿವನಗೌಡ ನಾಯಕ ಮಾತನಾಡಿ, ‘ಮುಂಬರುವ ಚುನಾವಣೆಯಲ್ಲಿ ಮಾನ್ವಿಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಯಡಿಯೂರಪ್ಪ ಅವರ ಕೈ ಬಲಪಡಿಸಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ, ಶಿಸ್ತು ಸಮಿತಿ ಅಧ್ಯಕ್ಷ ಎನ್‌.ಶಂಕರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಜೆ.ಶರಣಪ್ಪಗೌಡ ಸಿರವಾರ, ಮಾಜಿ ಸಚಿವ ರಾಜೂಗೌಡ, ವಿಧಾನ ಪರಿಷತ್‌ ಸದಸ್ಯ ಅಶ್ವತ್ಥ ನಾರಾಯಣ, ಮಾಜಿ ಸಂಸದ ವಿರೂಪಾಕ್ಷಪ್ಪ, ಶಾಸಕ ತಿಪ್ಪರಾಜು, ಮಾಜಿ ಶಾಸಕರಾದ ಗಂಗಾಧರ ನಾಯಕ ಹಾಗೂ ಬಸನಗೌಡ ಬ್ಯಾಗವಾಟ, ಮುಖಂಡರಾದ ಗಿರೆಯ್ಯ ಪಾಟೀಲ, ಕೊಟ್ರೇಶಪ್ಪ ಕೋರಿ, ಬಿ.ಮಾನಪ್ಪ ನಾಯಕ, ಎ.ಬಾಲಸ್ವಾಮಿ ಕೊಡ್ಲಿ, ಜಿ.ಪಂ ಮಾಜಿ ಅಧ್ಯಕ್ಷ ದೊಡ್ಡಬಸಪ್ಪಗೌಡ ಭೋಗಾವತಿ, ಟಿಎಪಿಸಿಎಂಎಸ್‌ ಅಧ್ಯಕ್ಷ ಎಸ್‌.ತಿಮ್ಮಾರಡ್ಡಿ, ವೈ.ಶರಣಪ್ಪ ನಾಯಕ, ಮ್ಯಾಕಲ್‌ ಅಯ್ಯಪ್ಪ ನಾಯಕ, ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪಗೌಡ ನಕ್ಕುಂದಿ ಇದ್ದರು.

* * 

ಸುಳ್ಳಿಗೆ ನೋಬೆಲ್‌ ಪ್ರಶಸ್ತಿ ಕೊಡುವುದಾದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೊದಲು ಸಿಗುತ್ತದೆ.
ಕೆ.ಎಸ್‌.ಈಶ್ವರಪ್ಪ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT