ಶುಕ್ರವಾರ, ಫೆಬ್ರವರಿ 26, 2021
31 °C

ಭತ್ತ ನಾಟಿಗೆ ಭರದ ಸಿದ್ಧತೆ

ಟಿ.ನಾಗೇಂದ್ರ Updated:

ಅಕ್ಷರ ಗಾತ್ರ : | |

ಭತ್ತ ನಾಟಿಗೆ ಭರದ ಸಿದ್ಧತೆ

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಹಿಂಗಾರು ಹಂಗಾಮಿನ ಬೆಳೆ ಭತ್ತ ನಾಟಿಗೆ ಭರದ ಸಿದ್ಧತೆ ನಡೆದಿದೆ. ಈಗಾಗಲೇ ಗದ್ದೆಯಲ್ಲಿ ತಯಾರಿಸಿದ ಸಸಿ ಸಿದ್ಧಗೊಂಡಿವೆ. ಹಿಂಗಾರು ಹಂಗಾಮಿನ ಬೆಳೆಗೆ (ವಾರ ಬಂದಿಯಂತೆ ಹತ್ತು ದಿನ ನೀರು ಹರಿಸುವುದು 12 ದಿನ ಸ್ಥಗಿತಗೊಳಿಸುವುದು) ಸರದಿಯಲ್ಲಿ ಮಾರ್ಚ್ 28ವರೆಗೆ ನೀರು ಹರಿಸುವ ನಿರ್ಣಯವನ್ನು ಈಚೆಗೆ ಬೆಂಗಳೂರಿನಲ್ಲಿ ಸಭೆ ಸೇರಿದ್ದ ನೀರಾವರಿ ಸಲಹಾ ಸಮಿತಿ ತೀರ್ಮಾನಿಸಲಾಗಿದೆ ಎಂದು ನಿಗಮದ ಎಂಜಿನಿಯರ್‌ ತಿಳಿಸಿದರು.

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಅಧಿಕ ನೀರು ಬೇಕಾಗುವ ಭತ್ತ, ಕಬ್ಬು, ವಿಳ್ಯದ ಎಲೆ ನಿಷೇಧಿತ ಬೆಳೆಯಾಗಿವೆ. ಹತ್ತಿ, ಶೇಂಗಾ, ಮೆಕ್ಕೆಜೋಳ ಕಡಲೆ,ಗೋದಿ, ಸಜ್ಜೆ, ಸೂರ್ಯಕಾಂತಿ ಬೆಳೆಯನ್ನು ಮಾತ್ರ ಬೆಳೆಯಲು ಅವಕಾಶವಿದೆ.

‘ಆದರೆ ಕಾಲುವೆ ಮೇಲ್ಭಾಗದ ರೈತರು ಬೆಳೆ ಪದ್ಧತಿ ಉಲ್ಲಂಘಿಸುತ್ತಿರುವುದರಿಂದ ಕಾಲುವೆ ಕೆಳ ಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಇದರಿಂದ ಬೇಸಿಗೆ ಹಂಗಾಮಿನ ಬೆಳೆಗೆ ನೀರು ಪಡೆಯಲು ಹರಸಾಹಸ ಪಡುವಂತಾಗಿದೆ’ ಎನ್ನುತ್ತಾರೆ ರೈತ ಶಿವನಾಗಪ್ಪ.

‘ಅಲ್ಲದೆ, ಭತ್ತ ಬೆಳೆಗೆ ಗದ್ದೆಯಲ್ಲಿ ನಿರಂತರವಾಗಿ ನೀರು ನಿಲ್ಲಿಸಬೇಕು. ವಾರಬಂದಿ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಮೇಲ್ಭಾಗದ ರೈತರು ಮಾತ್ರ ನೀರು ಸೆಳೆದುಕೊಳ್ಳುತ್ತಾರೆ. ಅದೇ ಕಾಲುವೆ ಕೆಳಭಾಗದ ರೈತರಿಗೆ ನೀರಿನ ತೊಂದರೆಯಾಗುವುದು ಸಾಮಾನ್ಯವಾಗಿದೆ. ನೀರಿಗಾಗಿ ಭೀಮರಾಯನಗುಡಿ ಕೆಬಿಜೆಎನ್ಎಲ್ ನಿಗಮದ ಕಚೇರಿಯ ಮುಂದೆ ಪ್ರತಿಭಟನೆ, ಧರಣಿ ನಡೆಸುವುದು ಸಾಮಾನ್ಯವಾಗಿದೆ’ ಎಂದು ರೈತ ಭೀಮರಾಯ ತಿಳಿಸಿದರು.

‘ಎಲ್ಲರೂ ಕಾನೂನು ಗೌರವಿಸಿ ನಿಯಮದ ಪ್ರಕಾರ ನೀರು ಪಡೆದುಕೊಂಡರೆ ಯಾವುದೇ ಸಮಸ್ಯೆ ಉದ್ಭವಿಸದು. ಅನಗತ್ಯ ತೊಂದರೆ ನೀಡಿ ಎಲ್ಲದಕ್ಕೂ ಸರ್ಕಾರ ಹಾಗೂ ಅಧಿಕಾರಿಗಳು ಬಗೆಹರಿಸಿ ಎಂದು ಹೋರಾಟ, ಪ್ರತಿಭಟನೆ ಮಾಡುವುದು ಸರಿಯಲ್ಲ. ಇದನ್ನು ರೈತರು ಮೊದಲು ಅರಿತುಕೊಳ್ಳಬೇಕು’ ಎಂದು ಈಚೆಗೆ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ರೈತರ ಸಮಸ್ಯೆಗಳ ಕುರಿತು ನಡೆದ ಚರ್ಚೆಯಲ್ಲಿ ಜಿಲ್ಲಾಧಿಕಾರಿ ಜೆ. ಮಂಜುನಾಥ ಎಚ್ಚರಿಕೆ ನೀಡಿದ್ದರು.

ಕೃತಕ ಕೆರೆ: ‘ಕಾಲುವೆ ಮೇಲ್ಭಾಗದಲ್ಲಿ ರೈತರು ವಿತರಣಾ ಕಾಲುವೆ ಸೀಳಿ ಅಕ್ರಮವಾಗಿ ಪೈಪ್‌ಲೈನ್ ಹಾಕಿಕೊಂಡು ಕೃತಕ ಕೆರೆ ನಿರ್ಮಿಸಿ ಮುಂಜಾಗ್ರತಾ ಕ್ರಮವಾಗಿ ಕೆರೆಯಲ್ಲಿ ನೀರು ಸಂಗ್ರಹಿಸುತ್ತಿದ್ದಾರೆ. ಇದರಿಂದ ಕಾಲುವೆ ಕೆಳಭಾಗದ ರೈತರಿಗೆ ನೀರು ದೊರಕುತ್ತಿಲ್ಲ. ಇದರ ಬಗ್ಗೆ ಜಿಲ್ಲಾಧಿಕಾರಿ ಗಮನಹರಿಸಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕು’ ಎಂದು ದಲಿತ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಸ್.ಶರಣುರಡ್ಡಿ ಮನವಿ ಮಾಡಿದ್ದಾರೆ.

* * 

ಆಂಧ್ರವಲಸಿಗರು ಕಾಲುವೆ ಒಡೆದು ಅಕ್ರಮವಾಗಿ ನೀರು ಸೆಳೆದುಕೊಂಡು ಕೃತಕ ಕೆರೆಯಲ್ಲಿ ನೀರು ಸಂಗ್ರಹಿಸಿಕೊಂಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು

ಬಿ.ಎಸ್‌.ಶರಣುರಡ್ಡಿ

ರೈತ ಮುಖಂಡ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.