ಸೋಮವಾರ, ಮಾರ್ಚ್ 8, 2021
25 °C

ಹೈನುಗಾರಿಕೆಯಲ್ಲಿ ನೆಮ್ಮದಿ ಅರಸುತ್ತ

ಶ.ಗ.ನಯನತಾರಾ Updated:

ಅಕ್ಷರ ಗಾತ್ರ : | |

ಹೈನುಗಾರಿಕೆಯಲ್ಲಿ ನೆಮ್ಮದಿ ಅರಸುತ್ತ

ಶನಿವಾರಸಂತೆ: ‘ಹಳ್ಳಿಯಲ್ಲಿ ನೆಲೆಸಿ ಕೃಷಿಯೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿಕೊಂಡರೆ ನೆಮ್ಮದಿಯ ಬದುಕನ್ನು ರೂಪಿಸಿಕೊಳ್ಳಬಹುದು’  ಇದು ಶನಿವಾರಸಂತೆ ಸಮೀಪದ ಗೋಪಾಲಪುರ ಗ್ರಾಮದಲ್ಲಿ ನೆಲೆಸಿರುವ ನಿವೃತ್ತ ಸೈನಿಕ ಉದಯಭಾನು ಅವರ ಅನುಭವದ ಮಾತು.

20 ವರ್ಷ ಸೈನ್ಯದಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿ ಮೂರೂವರೆ ವರ್ಷದ ಹಿಂದೆ ಹಿಂದಿರುಗಿದ ಉದಯಭಾನು ಅವರು ಜೀವನಕ್ಕಾಗಿ ಆಯ್ಕೆ ಮಾಡಿಕೊಂಡದ್ದು ಕೃಷಿ ಮತ್ತು ಹೈನುಗಾರಿಕೆ. ಬೆಂಗಳೂರಿನಲ್ಲಿ ಉದ್ಯೋಗ ಕೈಬೀಸಿ ಕರೆದರೂ, ಅದನ್ನು ನಿರಾಕರಿಸಿ ಸ್ವಗ್ರಾಮ ಗೋಪಾಲಪುರದಲ್ಲಿ ನೆಲೆಸಿದ್ದಾರೆ. ‘ಮತ್ತೊಬ್ಬರಿಗೆ ನಮಸ್ಕಾರ ಹಾಕುತ್ತ ಬದುಕುವುದಕ್ಕಿಂತ ಸ್ವಾವಲಂಭಿಯಾಗಿ, ಸ್ವತಂತ್ರವಾಗಿ ಬದುಕುವುದರಲ್ಲಿ ಅರ್ಥವಿದೆ’ ಎನ್ನುತ್ತಾರೆ ಅವರು.

ಹಿರಿಯರಿಂದ ಬಳುವಳಿಯಾಗಿ ಬಂದ ಜಮೀನಿನಲ್ಲಿ ಕಾಫಿ, ಕಾಳುಮೆಣಸು, ಶುಂಠಿ ಹಾಗೂ ಬಾಳೆ ಕೃಷಿ ಆರಂಭಿಸಿದರು. ಜತೆಯಲ್ಲೇ ಹೈನುಗಾರಿಕೆಯೂ ಆರಂಭವಾಯಿತು. ನಗರ ಜೀವನಲ್ಲಿ ಬೆಳೆದು ಬಂದಿದ್ದರೂ ಪತ್ನಿ ಪ್ರಣತಿ ಪತಿಗೆ ಸಹಕಾರ ನೀಡುತ್ತ ಕೃಷಿ ಹಾಗೂ ಪಶುಪಾಲನೆಯ ಜೀವನದಲ್ಲಿ ಸುಖ, ಸಂತೃಪ್ತಿ ಕಾಣುತ್ತಿದ್ದಾರೆ.

ಉದಯಭಾನು ಆರಂಭದಲ್ಲಿ ಕೊಂಡದ್ದು ಒಂದು ಹಸು. ಇಂದು ಅವರ ಕೊಟ್ಟಿಗೆಯಲ್ಲಿ ನಾಲ್ಕು ಹಸುಗಳು ಹಾಗೂ ನಾಲ್ಕು ಕರುಗಳಿವೆ. ಎರಡು ಜರ್ಸಿ ಹಾಗೂ ಎರಡು ಎಚ್ಎಫ್ ಹಸುಗಳಿವೆ. ಇವು ವರ್ಷಕ್ಕೊಂದರಂತೆ ಕರುಗಳನ್ನು ಹಾಕಿದ್ದು, ದಿನಕ್ಕೆ 30 ಲೀಟರ್ ಹಾಲು ಕೊಡುತ್ತಿವೆ.

ದಿನವಿಡೀ ದಂಪತಿ ಹಸು– ಕರುಗಳ ಲಾಲನೆ ಪಾಲನೆಯಲ್ಲೇ ಕಳೆಯುತ್ತಾರೆ. ಆಗಾಗ್ಗೆ ಪಶುಗಳಿಗೆ ವೈದ್ಯರಿಂದ ತಪಾಸಣೆ, ನಿತ್ಯ ಸ್ನಾನ, ಕೊಟ್ಟಿಗೆಯ ಸ್ವಚ್ಛತೆಗೆ ಒತ್ತು ನೀಡಿದ್ದಾರೆ ದಂಪತಿ.

‘ಜೋಳದ ಸಸಿ, ಸೀಮೆಹುಲ್ಲು, ಬಿಳಿಹುಲ್ಲು, ಇತರ ಸಸ್ಯಗಳನ್ನು ಆಹಾರವಾಗಿ ನೀಡಿಲಾಗುತ್ತದೆ. ಹಾಲಿನ ಆದಾಯ ಸುಖ ಸಂಸಾರಕ್ಕೆ ಆಧಾರವಾಗಿದೆ. ಮಗಳು ಲಕ್ಷ್ಮಿಯ ವಿದ್ಯಾಭ್ಯಾಸವೂ ನಿರಾತಂಕವಾಗಿ ಸಾಗಿದೆ’ ಎನ್ನುತ್ತಾರೆ ಉದಯಭಾನು–ಪ್ರಣತಿ.

‘ಇರುವ ಮನೆಮಠ, ಜಮೀನನ್ನು ಮಾರಿ ನಗರ ಜೀವನಕ್ಕೆ, ಐಷರಾಮಿ ಬದುಕಿಗೆ ಹಾತೊರೆದು ಹೋಗಿ ದುರಂತ ಅಂತ್ಯ ಕಾಣುವ ಬದಲು ಯುವಜನಾಂಗ ಹಿರಿಯರ ಆಶಯದಂತೆ ಇರುವುದರಲ್ಲೇ ತೃಪ್ತಿ ಪಟ್ಟುಕೊಂಡು ಹಳ್ಳಿಯಲ್ಲೇ ನೆಲೆಸಬೇಕು. ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಕೊಂಡರೆ ಬದುಕಿನಲ್ಲಿ ಖುಷಿ, ಸಂತೋಷ, ನೆಮ್ಮದಿ ಕಾಣಬಹುದು’ ಎನ್ನುತ್ತಾರೆ ದಂಪತಿ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.