7

ಎರಡನೇ ಬೆಳೆಗೆ ನೀರು; ತೆಲಂಗಾಣಕ್ಕೆ ನಿಯೋಗ

Published:
Updated:
ಎರಡನೇ ಬೆಳೆಗೆ ನೀರು; ತೆಲಂಗಾಣಕ್ಕೆ ನಿಯೋಗ

ಕನಕಗಿರಿ/ ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಹಾಯಿಸುವ ಸಂಬಂಧ ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರರಾವ್‌ ಅವರ ಜತೆ ಮಾತುಕತೆ ನಡೆಸಲಾಗುವುದು. ಮಾತ್ರವಲ್ಲ ರಾಜ್ಯದಿಂದ ಒಂದು ನಿಯೋಗವನ್ನೂ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಕನಕಗಿರಿಯಲ್ಲಿ ಗುರುವಾರ ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎರಡನೇ ಬೆಳೆಗೆ ನೀರು ಹಾಯಿಸಲು ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಅದಕ್ಕಾಗಿ ತೆಲಂಗಾಣದ ಪಾಲನ್ನು ಈ ಬಾರಿ ರಾಜ್ಯದ ರೈತರು ಬಳಸಲು ಅನುವು ಮಾಡುವಂತೆ ಅಲ್ಲಿನ ಸರ್ಕಾರವನ್ನು ಕೋರಲಾಗುವುದು ಎಂದರು.

ಕನಕಗಿರಿ, ಆನೆಗೊಂದಿ ಉತ್ಸವವನ್ನು ಮಾಡಲು ಅನುದಾನ ಮಂಜೂರು ಮಾಡಲಾಗುವುದು. ಕ್ಷೇತ್ರದ ಇತರ ಬೇಡಿಕೆಗಳನ್ನು ಕೂಡಾ ಈಡೇರಿಸುವುದಾಗಿ ಅವರು ವಾಗ್ದಾನ ನೀಡಿದರು.

ನಾವು ನುಡಿದಂತೆ ನಡೆದಿದ್ದೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿರ ಲಿಲ್ಲ. ಆದರೆ, ಬರಗಾಲದ ಪರಿಸ್ಥಿತಿ ನೋಡಿ ಸಹಕಾರ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಿದ್ದೇವೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಯಿಂದಾಗಿ ಮುಳುಗಡೆಯಾಗುವ ಪ್ರದೇಶಗಳ ಪುನರ್ವಸತಿಗೆ ₹ 51 ಸಾವಿರ ಕೋಟಿ ಬೇಕಾಗುತ್ತದೆ. ನಮ್ಮ ಸರ್ಕಾರ ನೀರಾವರಿಗೆ ಒತ್ತುಕೊಟ್ಟಿದೆ. ಸರ್ಕಾರದ 5 ವರ್ಷಗಳ ಅವಧಿಯಲ್ಲಿ ನೀರಾವರಿಗೆ ₹ 50 ಸಾವಿರ ಕೋಟಿ ಖರ್ಚು ಮಾಡುತ್ತೇವೆ ಎಂದರು.

ಕನಕಗಿರಿ ಕ್ಷೇತ್ರದಲ್ಲಿ ₹ 400 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಡೆದಿದೆ. 8 ಕೆರೆಗಳಿಗೆ ನೀರು ತುಂಬುವ ಯೋಜನೆಯನ್ನು ಪ್ರಾಯೋಗಿಕವಾಗಿ ಇಲ್ಲಿ ಆರಂಭಿಸಲಾಗಿತ್ತು. ಅದು ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಜ್ಯದ ಬೇರೆ ಭಾಗಗಳಲ್ಲೂ ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.

ಮಾತಿನುದ್ದಕ್ಕೂ ತಮ್ಮ ಎಂದಿನ ಶೈಲಿಯಲ್ಲಿ ಬಿಜೆಪಿಯನ್ನು ತಿವಿದ ಅವರು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಅಂಥವರು ಅಧಿಕಾರಕ್ಕೆ ಬರಬಾರದು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಇಬ್ಬರೂ ಜೈಲಿಗೆ ಹೋಗಿ ಬಂದವರು ಇದು ಸರಿಯಾದ ಜೋಡಿ. ಸೇರಿಗೆ ಸವ್ವಾ ಸೇರು ಎಂದು ಲೇವಡಿ ಮಾಡಿದರು.

ತಂಗಡಗಿಗೆ ಸಾಂತ್ವನ!

ಶಾಸಕ ಶಿವರಾಜ ತಂಗಡಗಿ ಅವರನ್ನು ಸಚಿವ ಸ್ಥಾನ ಬದಲಿಸಲು ಯಾವುದೇ ಗಂಭೀರ ಕಾರಣ ಇಲ್ಲ. ಅವರೇನೂ ತಪ್ಪು ಮಾಡಿಲ್ಲ. ಅಥವಾ ದೋಷಾರೋಪ ಇಲ್ಲ. ಹೊಸಬರಿಗೆ ಅವಕಾಶ ಕೊಡುವ ದೃಷ್ಟಿಯಿಂದ ಅವರಿಗೆ ಹೇಳಿಯೇ ಸಚಿವ ಸ್ಥಾನದಿಂದ ತೆಗೆದಿದ್ದೇವೆ. ಶಾಸಕರಾಗಿದ್ದೂ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿಸಿದ್ದಾರೆ ಎಂದು ಶ್ಲಾಘಿಸಿದರು.

ಐದೂ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ

ಕುಷ್ಟಗಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಅಮರೇಗೌಡ ಬಯ್ಯಾಪುರ ಅವರನ್ನು ಕುಷ್ಟಗಿ ಕ್ಷೇತ್ರದ ಅಭ್ಯರ್ಥಿ ಎಂದು ಸಿದ್ದರಾಮಯ್ಯ ಘೋಷಿಸಿದರು. ಕನಕಗಿರಿಯಲ್ಲಿ ನಡೆದ ಸಾಧನಾ ಸಂಭ್ರಮದಲ್ಲಿ ಶಿವರಾಜ್‌ ತಂಗಡಗಿ ಅವರನ್ನು ಮತ್ತೆ ಗೆಲ್ಲಿಸಬೇಕು. ಶಾಸಕ ಇಕ್ಬಾಲ್‌ ಅನ್ಸಾರಿ ಅವರು ಈಗಾಗಲೇ ಕಾಂಗ್ರೆಸ್‌ ಸೇರಿದ್ದಾರೆ. ತಾಂತ್ರಿಕವಾಗಿ ಸೇರ್ಪಡೆ ಆಗುವುದು ಮಾತ್ರ ಬಾಕಿಯಿದೆ. ಅನ್ಸಾರಿ ಅವರನ್ನು ಮತ್ತೆ ಗೆಲ್ಲಿಸಬೇಕು ಎಂದು ಕೋರಿದರು.

ಕೊಪ್ಪಳದಲ್ಲಿ ಹಾಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಯಲಬುರ್ಗಾದಲ್ಲಿ ಸಚಿವ ಬಸವರಾಜ ರಾಯರಡ್ಡಿ ಅವರು ಮತ್ತೆ ಸ್ಪರ್ಧಿಸುವುದು ಈಗಾಗಲೇ ಖಚಿತವಾಗಿದೆ. ಹೀಗೆ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

* * 

ಮೋದಿ, ಅಮಿತ್‌ಷಾ ಯಾರೇ ಬಂದರೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಅಸಾಧ್ಯ.

ಸಿದ್ದರಾಮಯ್ಯ,ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry