ಶಿಷ್ಟಾಚಾರ ಉಲ್ಲಂಘಿಸುವ ಶಾಸಕ: ಆರೋಪ

7

ಶಿಷ್ಟಾಚಾರ ಉಲ್ಲಂಘಿಸುವ ಶಾಸಕ: ಆರೋಪ

Published:
Updated:

ದೊಡ್ಡಬಳ್ಳಾಪುರ: ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಕಾರ್ಯಕ್ರಮಗಳಿಗೆ ನಗರಸಭೆ ಸದಸ್ಯರನ್ನು ಆಹ್ವಾನಿಸದೆ ನಿರ್ಲಕ್ಷ್ಯ ಮಾಡುವ ಮೂಲಕ ಶಿಷ್ಟಾಚಾರ ಉಲ್ಲಂಘಿಸುತ್ತಿರುವ ಶಾಸಕ ಟಿ.ವೆಂಕಟರಮಣಯ್ಯ ಅವರ ಕ್ರಮವನ್ನು ಖಂಡಿಸಿ ಗುರುವಾರ ನಗರಸಭೆ ಪ್ರಭಾರ ಪೌರಾಯುಕ್ತ ಶೇಕ್‌ ಫಿರೋಜ್‌ ಅವರ ಕಚೇರಿಯಲ್ಲಿ ಧರಣಿ ನಡೆಸಿದರು.

ಸದಸ್ಯರು ಮಾತನಾಡಿ, ನಗರಸಭೆಯ ವಾರ್ಡ್‌ಗಳಲ್ಲಿ ಇತ್ತೀಚೆಗೆ ಯಾವುದೇ ಕಾಮಗಾರಿ ಉದ್ಘಾಟಿಸುವ ಸಂದರ್ಭದಲ್ಲಿ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗುತ್ತಿದೆ. ಆದರೆ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರು ಸೇರಿದಂತೆ ಪಕ್ಷದ ಕಾರ್ಯಕರ್ತರನ್ನು ಮಾತ್ರ ಆಹ್ವಾನಿಸುವ ಮೂಲಕ ಕಾಂಗ್ರೆಸ್‌ ಸಭೆಗಳನ್ನಾಗಿ ನಡೆಸಲಾಗುತ್ತಿದೆ ಎಂದರು.

ಶಾಸಕರ ಜೊತೆಗೆ ನಗರಸಭೆ ಅಧಿಕಾರಿಗಳು ಶಾಮೀಲಾಗಿ ಶಾಸಕರು ಹೇಳಿದಂತೆ ಕೇಳುತ್ತಿದ್ದಾರೆ. ಅಧಿಕಾರಿಗಳು ಸದಾ ಶಿಷ್ಟಾಚಾರ ಪಾಲನೆಯಲ್ಲಿ ಮುಂದೆ ಇರಬೇಕು. ಸದ್ಯದಲ್ಲೇ ರಾಜ್ಯ ವಿಧಾನ ಸಭಾ ಚುನಾವಣೆ ನಡೆಯುವುದರಿಂದ ಇದೇ ರೀತಿ ಶಿಷ್ಟಾಚಾರ ಉಲ್ಲಂಘಿಸುತ್ತ ಕಾರ್ಯಕ್ರಮಗಳನ್ನು ನಡೆಸಲು ಮುಂದಾದರೆ ಸಂಘರ್ಷಣೆಗಳಿಗೆ ದಾರಿಮಾಡಿಕೊಡಲಿದೆ. ಅಧಿಕಾರಿಗಳು ಎಚ್ಚರ ವಹಿಸಿ ಶಿಷ್ಟಾಚಾರ ಪಾಲನೆಗೆ ಮುಂದಾಗಬೇಕು ಎಂದು ಹೇಳಿದರು.

ನಗರಸಭೆ ಸದಸ್ಯ ಎಚ್‌.ಎಸ್‌.ಶಿವಶಂಕರ್‌ ಮಾತನಾಡಿ, ನಗರದ 10ನೇ ವಾರ್ಡ್‌ನ ವೀರಭದ್ರನಪಾಳ್ಯದಲ್ಲಿನ ಸಾರ್ವಜನಿಕ ಶೌಚಾಲಯಕ್ಕೆ ಕೇಂದ್ರ ಸರ್ಕಾರದ 14ನೇ ಹಣಕಾಸು ಯೋಜನೆಯ ಸ್ವಚ್ಛ ಭಾರತ್‌ ಮಿಷನ್‌ ಅಡಿಯಲ್ಲಿ ₹ 11.55 ಲಕ್ಷ ಮಂಜೂರಾಗಿದೆ. ಆದರೆ ಈ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಸಹ ಆಹ್ವಾನಿಸದೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲು ಮುಂದಾಗಿರುವುದು ಖಂಡನೀಯ. ಇದೇ ರೀತಿಯ ಧೋರಣೆಯನ್ನು ಶಾಸಕರು ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಶೀಲರಾಘವ, ಸದಸ್ಯರಾದ ಭಾಗ್ಯಚೌಡರಾಜ್‌, ಕೆ.ಎಚ್‌.ವೆಂಕಟರಾಜ್‌, ಪ್ರಕಾಶ್‌, ಕೆ.ಬಿ.ಮುದ್ದಪ್ಪ, ಡಿ.ಎಂ.ಚಂದ್ರಶೇಖರ್‌, ಎಂ.ಮಲ್ಲೇಶ್‌, ಸುಶೀಲಮ್ಮಮೋಹನ್‌ಕುಮಾರ್‌, ಎನ್‌.ಕೆ.ರಮೇಶ್‌ ಹಾಜರಿದ್ದರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry