ಶನಿವಾರ, ಫೆಬ್ರವರಿ 27, 2021
27 °C

‘ನರೇಗಾ’ ಶೇ 80 ಜಿಲ್ಲಾ ಪ್ರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನರೇಗಾ’ ಶೇ 80 ಜಿಲ್ಲಾ ಪ್ರಗತಿ

ದೇವನಹಳ್ಳಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಗ್ರಾಮಾಂತರ ಜಿಲ್ಲೆ ಶೇ 80 ರಷ್ಟು ಪ್ರಗತಿ ಸಾಧಿಸಿದೆ ಎಂದ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಕಾಂತರಾಜ್ ತಿಳಿಸಿದರು. ಕನ್ನಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪಲಿಂಗನಪುರ ಗ್ರಾಮದಲ್ಲಿ ಗುರುವಾರ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.

ಕನ್ನಮಂಗಲ ಗ್ರಾಮ ಪಂಚಾಯಿತಿ ಈಗಾಗಲೇ ಕೇಂದ್ರ ಗ್ರಾಮೀಣ ಮತ್ತು ಪಂಚಾಯತ್ ಇಲಾಖೆ ವತಿಯಿಂದ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಗಮನ ಸೆಳೆದಿದೆ. ಇಡೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂಪ್ಯೂಟರ್‌ ಅಳವಡಿಸಿ ಆಡಳಿತ ಸರಳಗೊಳಿಸಲು ಪಂಚಾಯತ್ ರಾಜ್ ಇಲಾಖೆ ಚಿಂತನೆ ನಡೆಸುತ್ತಿದೆ ಎಂದರು.

ಜಿಲ್ಲೆಯಲ್ಲಿ ಈ ವರ್ಷದ ನರೇಗಾ ಯೋಜನೆ ವೆಚ್ಚದ ಗುರಿ ₹43 ಕೋಟಿ ಪೈಕಿ ₹34 ಕೋಟಿ ಖರ್ಚಾಗಿದೆ. ರಾಜ್ಯದಲ್ಲಿ ಗ್ರಾಮಾಂತರ ಜಿಲ್ಲೆ ನರೇಗಾ ಯೋಜನೆ ವೆಚ್ಚದಲ್ಲಿ ಮೂರನೇ ಸ್ಥಾನದಲ್ಲಿದೆ. ಒಬ್ಬರಿಗೆ ನೂರರಿಂದ ನೂರೈವತ್ತು ಮಾನವ ದಿನಗಳನ್ನಾಗಿ ಸೃಷ್ಟಿಸಲಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಿ ಮಂಜುನಾಥ್ ಮಾತನಾಡಿ, ಕನ್ನಮಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ವರ್ಷದಲ್ಲಿ 7,670 ಮಾನವ ದಿನಗಳ ಬಳಕೆಯಾಗಿದೆ. ಶೇ 102ರಷ್ಟು ಸಾಧಿಸಲಾಗಿದೆ. ಏಪ್ರಿಲ್‌ನಿಂದ ಈವರೆಗೆ ₹ 21 ಲಕ್ಷ ವೆಚ್ಚ ಮಾಡಲಾಗಿದೆ. ರಸ್ತೆ, ಶೌಚಾಲಯ, ಸ್ಮಶಾನ ದುರಸ್ತಿ, ನರೇಗಾ ಯೋಜನೆಯಲ್ಲಿ ನಿರ್ಮಿಸಿಕೊಳ್ಳಲು ಅವಕಾಶ ಇದೆ ಎಂದರು.

ಸ್ಥಳೀಯ ಪಂಚಾಯಿತಿ ಸದಸ್ಯ ಕೆ.ಸಿ ನರೇಂದ್ರಬಾಬು ಮಾತನಾಡಿ, ಕೆಂಪಲಿಂಗನಪುರ ಗ್ರಾಮದಿಂದ ಬೊಮ್ಮವಾರ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿ ₹ 5 ಲಕ್ಷ, ಕಲ್ಲಿನ ಚರಂಡಿ ನಿರ್ಮಾಣಕ್ಕೆ ₹ 5 ಲಕ್ಷ, ಸ್ಮಶಾನ ಅಭಿವೃದ್ಧಿಗೆ ₹ 2 ಲಕ್ಷ, ವಿವಿಧ ಕಾಮಗಾರಿಗೆ ಒಟ್ಟು ₹ 36 ಲಕ್ಷ ವೆಚ್ಚ ಮಾಡಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ ಮಂಜುನಾಥ್ ಮಾತನಾಡಿ, ಗ್ರಾಮ ಪಂಚಾಯಿತಿಗಳು ಹುದ್ದೆಗೆ ಮತ್ತು ಅಧಿಕಾರಿಕ್ಕಾಗಿ ಸೀಮಿತವಾಗಬಾರದು. ಸ್ಥಳೀಯ ಸಂಪನ್ಮೂಲದ ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಬಳಸಿ ಸೌಲಭ್ಯ ನೀಡಲು ಮುಂದಾಗಬೇಕು. ಈ ಪಂಚಾಯಿತಿಯನ್ನು ಮಾದರಿಯನ್ನಾಗಿ ಮಾಡಬೇಕು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ನರಸಿಂಹಮೂರ್ತಿ, ಸದಸ್ಯರಾದ ಸೋಮಶೇಖರ್, ಚನ್ನಕೇಶವ, ಲಕ್ಷ್ಮಿಕಾಂತ್, ಇಂದ್ರಾಣಿ, ಮಾಲತಿ, ಜಯಂತಿ, ರೂಪ, ನಾರಾಯಣಸ್ವಾಮಿ, ನಿವಿತಾ, ವೇಣುಗೋಪಾಲ್, ಆಶಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸಮೂರ್ತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಇದ್ದರು.

ವಿವಿಧ ಕಾಮಗಾರಿ ಪೂರ್ಣ

ಪಂಚಾಯಿತಿಯಲ್ಲಿರುವ ಪ್ರತಿಯೊಂದು ಮನೆಗಳಿಗೆ ಕುಡಿಯುವ ನೀರಿಗಾಗಿ ವೈಯಕ್ತಿಕ ಕೊಳಾಯಿ, ಅಯ್ದ ಗ್ರಾಮಗಳಲ್ಲಿ ಸೌರ ವಿದ್ಯುತ್‌ ಘಟಕ ಸ್ಥಾಪನೆ, ರಾಸುಗಳಿಗೆ ಕುಡಿಯುವ ನೀರಿನ ಸಂಪು, ಅತ್ಯಾಧುನಿಕ ರಸ್ತೆ ನಿರ್ಮಾಣ, ಅತ್ಯಾಧುನಿಕ ಬೀದಿ ದೀಪಗಳ ವ್ಯವಸ್ಥೆ, ಹೆಚ್ಚುಜನ ಸಂಖ್ಯೆ ಇರುವ ಗ್ರಾಮಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಕ್ರೀಡಾ ಅಸಕ್ತರಿಗೆ ಆಟದ ಮೈದಾನ, ರೈತರಿಗೆ ಅಗತ್ಯವಿರುವ ಒಕ್ಕಣೆ ಕಣಗಳು, ಸ್ಮಶಾನ ಅಭಿವೃದ್ಧಿ, ಅನೇಕ ಮೂಲ ಸೌಲಭ್ಯಗಳ ಕಾಮಗಾರಿ ಕೆಲವು ಪೂರ್ಣಗೊಂಡಿವೆ. ಕೆಲವೊಂದು ನಿರ್ಮಾಣ ಹಂತದಲ್ಲಿದ್ದು, ಇನ್ನೂ ಕೆಲವು ನೂತನವಾಗಿ ಕ್ರಿಯಾ ಯೋಜನೆಯಾಗಿವೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.