ಶನಿವಾರ, ಫೆಬ್ರವರಿ 27, 2021
27 °C

ಕೋರಂ ಕೊರತೆ: ಜಿ.ಪಂ ಸಾಮಾನ್ಯ ಸಭೆ ಮುಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋರಂ ಕೊರತೆ: ಜಿ.ಪಂ ಸಾಮಾನ್ಯ ಸಭೆ ಮುಂದಕ್ಕೆ

ಚಿತ್ರದುರ್ಗ: ಗುರುವಾರ ನಿಗದಿಯಾಗಿದ್ದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯನ್ನು ಆಡಳಿತ ಪಕ್ಷ ಕಾಂಗ್ರೆಸ್‌ನ ಬಹುತೇಕ ಸದಸ್ಯರ ಗೈರು ಹಾಜರಿಯ ಪರಿಣಾಮ ಕೋರಂ ಕೊರತೆಯಿಂದಾಗಿ ಡಿ.21ಕ್ಕೆ ಮುಂದೂಡಲಾಯಿತು.

ಕಾಂಗ್ರೆಸ್ ಪಕ್ಷದಿಂದ ಸೌಭಾಗ್ಯ ಬಸವರಾಜನ್ ಅವರನ್ನು ಉಚ್ಚಾಟಿಸಿದ ನಂತರ ಮೊದಲ ಬಾರಿಗೆ ಸಾಮಾನ್ಯ ಸಭೆ ಕರೆಯಲಾಗಿತ್ತು. ಕಾಂಗ್ರೆಸ್‌ನ ಬಹುತೇಕ ಸದಸ್ಯರು ಸಭೆಗೆ ಗೈರಾಗುವ ಮೂಲಕ ಪರೋಕ್ಷವಾಗಿ ‘ಅಸಹಕಾರದ ಪ್ರತಿಭಟನೆ’ ದಾಖಲಿಸಿದರು.

ಬೆಳಿಗ್ಗೆ 11ಕ್ಕೆ ಸಭೆ ನಿಗದಿಯಾಗಿತ್ತು. ನಿಗದಿತ ಸಮಯಕ್ಕೂ ಮುನ್ನವೇ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮತ್ತು ಉಪಾಧ್ಯಕ್ಷೆ ಸುಶೀಲಮ್ಮ ಸಭಾಂಗಣದ ವೇದಿಕೆಯಲ್ಲಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್. ರವೀಂದ್ರ, ಸಿಪಿಒ ಓಂಕಾರಪ್ಪ, ಉಪ ಕಾರ್ಯದರ್ಶಿ ಬಸವರಾಜು ಸೇರಿದಂತೆ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಆದರೆ, ಸ್ಥಾಯಿ ಸಮಿತಿ ಅಧ್ಯಕ್ಷರು ಸೇರಿದಂತೆ ಕಾಂಗ್ರೆಸ್‌ನ ಬಹುತೇಕ ಸದಸ್ಯರ ಆಸನಗಳು ಖಾಲಿಯಿದ್ದವು. ಐವರು ಆಡಳಿತ ಪಕ್ಷದ ಸದಸ್ಯರು, ಹತ್ತು ವಿರೋಧ ಪಕ್ಷದ ಸದಸ್ಯರು ಸೇರಿ 15 ಮಂದಿ ಸಭೆಯಲ್ಲಿ ಹಾಜರಿದ್ದರು.

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ನಿಯಮಾನುಸಾರ ಸಭೆ ಆರಂಭವಾಗಿ 30 ನಿಮಿಷವಾದರೂ ಸದಸ್ಯರ ಕೋರಂ ಇಲ್ಲದ ಕಾರಣ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ ಎಂದು ಸೌಭಾಗ್ಯ ಬಸವರಾಜನ್ ಪ್ರಕಟಿಸಿದರು.‌

ಮುಂದಿನ ಸಭೆಗೆ ಎಲ್ಲ ಸದಸ್ಯರು ಹಾಜರಾಗಿ ಜಿಲ್ಲೆಯಲ್ಲಿನ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಕುರಿತು ಚರ್ಚಿಸುವ ವಿಶ್ವಾಸವಿದೆ ಎಂದು ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.

ಸದ್ಯಕ್ಕೆ ಅಭಿವೃದ್ಧಿ ಚಟುವಟಿಕೆಗೆ ತೊಡಕಿಲ್ಲ: ಆರು ಶಾಸಕರು, ಒಬ್ಬ ಸಂಸದರು, ಜಿಲ್ಲೆಯ ವಿವಿಧ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು, ಒಬ್ಬರು ವಿಧಾನ ಪರಿಷತ್ ಸದಸ್ಯರು ಸೇರಿ ಜಿಲ್ಲಾ ಪಂಚಾಯ್ತಿ ಸದಸ್ಯ ಬಲ 51. ಸಭೆ ನಡೆಸಲು ಪಂಚಾಯತ್‌ರಾಜ್ ನಿಯಮದ ಪ್ರಕಾರ 26 ಮಂದಿ ಹಾಜರಿದ್ದು ಸಹಿ ಹಾಕಬೇಕು. ಆದರೆ ಇಂದಿನ ಸಭೆಯಲ್ಲಿ 11 ಸದಸ್ಯರ ಕೊರತೆ ಇದ್ದುದರಿಂದ ಅನಿವಾರ್ಯವಾಗಿ ಅಧ್ಯಕ್ಷರು ಸಭೆಯನ್ನು ಮುಂದೂಡಿದ್ದಾರೆ ಎಂದು ಮುಖ್ಯ ಯೋಜನಾಧಿಕಾರಿ ಓಂಕಾರಪ್ಪ ಸುದ್ದಿಗಾರರಿಗೆ ತಿಳಿಸಿದರು.

ಮುಂದಿನ ಸಭೆಯಲ್ಲಿ ಒಬ್ಬ ಸದಸ್ಯರು ಬಾರದಿದ್ದರೂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಅವಕಾಶವಿದೆ. ಆದರೆ ಹಾಜರಾದ ಸದಸ್ಯರು ಕೋರಂ ಕುರಿತು ಪ್ರಶ್ನಿಸಿದರೆ ಮತ್ತೆ ಸಭೆ ಮುಂದೂಡಬಹುದು. ಪಂಚಾಯತ್‌ರಾಜ್ ಕಾಯಿದೆ ಪ್ರಕಾರ ಈ ರೀತಿ ಎಷ್ಟು ಸಾರಿ ಬೇಕಾದರೂ ಸಭೆ ಮುಂದಕ್ಕೆ ಹಾಕಬಹುದು ಎಂದು ನಿಯಮಾವಳಿ ಕುರಿತು ವಿವರಣೆ ನೀಡಿದರು.

ಪಂಚಾಯತ್‌ರಾಜ್ ಕಾಯ್ದೆ ಪ್ರಕಾರ ಸತತ ಮೂರು ಸಾಮಾನ್ಯ ಸಭೆಗೆ ಗೈರು ಹಾಜರಾದವರನ್ನು ಸದಸ್ಯತ್ವದಿಂದ ರದ್ದುಪಡಿಸುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡುವ ಅಧಿಕಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಇದೆ. ವರ್ಷಕ್ಕೆ 6 ಸಾಮಾನ್ಯ ಸಭೆಗಳು ನಡೆಯಬೇಕು. ಜಿಲ್ಲಾ ಪಂಚಾಯ್ತಿ ಈ ಅವಧಿಯಲ್ಲಿ ಇಲ್ಲಿವರೆಗೆ 3 ಸಾಮಾನ್ಯ ಸಭೆ, ಒಂದು ವಿಶೇಷ ಸಭೆ ನಡೆದಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಎಲ್ಲಾ ಕ್ರಿಯಾಯೋಜನೆ ಪೂರ್ಣಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿವೆ. ಹಾಗಾಗಿ 2018ರ ಮಾರ್ಚ್ ನಂತರದ ಕ್ರಿಯಾಯೋಜನೆ ತಯಾರಿಸಲು ಸಾಮಾನ್ಯ ಸಭೆಯ ಅನುಮೋದನೆ ಅವಶ್ಯಕತೆ ಇದೆ. ಒಂದೊಮ್ಮೆ ಆ ವೇಳೆಯಲ್ಲೂ ಸಭೆ ನಡೆಯದಿದ್ದರೆ ಸರ್ಕಾರಕ್ಕೆ ಪತ್ರ ಬರೆದು, ಅನುಮತಿ

ಪಡೆದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶದ ಅನುಸಾರ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಬಹುದು. ಸದ್ಯಕ್ಕೆ ಸಭೆ ನಡೆಯದಿದ್ದರೂ ಅಭಿವೃದ್ಧಿಗೆ ತೊಡಕಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

51 ಸದಸ್ಯ ಬಲ, 26 ಕಡ್ಡಾಯ

ಜಿಲ್ಲಾ ಪಂಚಾಯ್ತಿ ಸದಸ್ಯ ಬಲ ಒಟ್ಟು 51. ಇದರಲ್ಲಿ 37 ಜಿಲ್ಲಾ ಪಂಚಾಯ್ತಿ ಸದಸ್ಯರು, 6 ಶಾಸಕರು, 1 ಸಂಸದ, 6 ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು, ಒಬ್ಬ ವಿಧಾನ ಪರಿಷತ್ ಸದಸ್ಯರು ಸೇರಿದ್ದಾರೆ. ಕರ್ನಾಟಕ ಪಂಚಾಯತ್ ರಾಜ್ ನಿಯಮಾವಳಿ ಪ್ರಕಾರ ಸಭೆ ನಡೆಸಲು ಕೋರಂಗಾಗಿ 26 ಸದಸ್ಯರು ಹಾಜರಿರಬೇಕು.

ಹಾಜರಾಗಿದ್ದ ಸದಸ್ಯರು

ಅಧ್ಯಕ್ಷೆ ಸೌಭಾಗ್ಯ, ಉಪಾಧ್ಯಕ್ಷೆ ಸುಶೀಲಮ್ಮ, ನರಸಿಂಹರಾಜು, ಮಂಡ್ರಿಗಿ ನಾಗರಾಜ್, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಪಕ್ಷೇತರ ಸದಸ್ಯ ಒ.ಮಂಜುನಾಥ್, ಚಿತ್ರದುರ್ಗ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವೇಣುಗೋಪಾಲ್ .ಬಿಜೆಪಿ ಪಕ್ಷದ ಸದಸ್ಯರಾದ ಸುಮಾ ಲಿಂಗರಾಜ್, ಎಂ.ಬಿ.ತಿಪ್ಪೇಸ್ವಾಮಿ, ಡಿ.ವಿ.ಶರಣಪ್ಪ, ಚೇತನಾ ಪ್ರಸಾದ್, ರಾಜೇಶ್ವರಿ, ಡಾ.ಇಂದಿರಾ ರೆಡ್ಡಿ, ಕೆ.ಸಿ.ಮಹೇಶ್ವರಪ್ಪ, ಜೆಡಿಎಸ್ ಸದಸ್ಯೆ ತ್ರಿವೇಣಿ ಶಿವಪ್ರಸಾದ್ ಗೌಡ, ಪಕ್ಷೇತರ ಸದಸ್ಯೆ ಕೆ.ಎಸ್.ಜಯಪ್ರತಿಭಾ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.