ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಗಾಳಿಗೆ ಎದುರಾಗಿ ನಿಂತ ಬುಡ್ಡಿದೀಪ

Last Updated 15 ಡಿಸೆಂಬರ್ 2017, 11:32 IST
ಅಕ್ಷರ ಗಾತ್ರ

ಚಿತ್ರ: ಮೂಕಹಕ್ಕಿ

ನಿರ್ಮಾಪಕರು: ಚಂದ್ರಕಲಾ ಟಿ.ಆರ್.

ನಿರ್ದೇಶನ: ನೀನಾಸಂ ಮಂಜು

ತಾರಾಗಣ: ಪೂಜಾ, ಸತೀಶ್‌ಕುಮಾರ್, ಸಂಪತ್‌ಕುಮಾರ್, ವಿ. ಅನಿಲ್‌ಕುಮಾರ್, ಮಾಸ್ಟರ್‌ ನಿಶಾಂತ್‌ ರಾಥೋಡ್

ಕೋಲೆತ್ತಿನವರು, ದೊಂಬರಾಟದವರು, ಸುಡುಗಾಡು ಸಿದ್ಧರದು ಅಲೆದಾಟದ ಬದುಕು. ಅವರಿಗೆ ಭದ್ರ ನೆಲೆ ಎಂಬುದಿಲ್ಲ. ಬದುಕಿನ ಯುದ್ಧದಲ್ಲಿ ಗುದ್ದಾಡುತ್ತಾ ಈ ಸಮುದಾಯಗಳು ಬೀದಿಬದಿಯಲ್ಲಿ ನಿಂತಿವೆ. ಗ್ರಾಮೀಣ, ನಗರ ಪ್ರದೇಶದವರ ದೃಷ್ಟಿಯಲ್ಲಿ ಈ ಜನರು ಅನುಭವಿಸುತ್ತಿರುವ ತಳಮಳವನ್ನು ನಿರ್ದೇಶಕ ನೀನಾಸಂ ಮಂಜು ‘ಮೂಕಹಕ್ಕಿ’ ಚಿತ್ರದ ಮೂಲಕ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ.

ತಲೆತಲಾಂತರದಿಂದ ಕಾ‍ಪಿಟ್ಟುಕೊಂಡು ಬಂದಿರುವ ಕಲಾ‍ಪ್ರಕಾರಗಳೇ ಈ ಅಲೆಮಾರಿಗಳಿಗೆ ಜೀವನಾಧಾರ. ಗ್ರಾಮೀಣ ಜಗತ್ತಿನ ಭಾಗವಾಗಿದ್ದ ಕಲೆಗಳ ಮಹತ್ವ ಕುರಿತು ಹೇಳುತ್ತಲೇ ಅಲೆಮಾರಿಗಳ ಬದುಕು ಸಂಕಷ್ಟದ ಸುಳಿಗೆ ಸಿಲುಕಿರುವ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಆಧುನಿಕ ಸಮಾಜ ಅವರನ್ನು ಕೀಳುದೃಷ್ಟಿಯಿಂದ ನೋಡುತ್ತಿರುವ ಕುರಿತು ಹೇಳಿದ್ದಾರೆ.

ಗೋರಕ್ಷಕರ ಹೆಸರಿನಲ್ಲಿ ನಡೆಯುವ ಅವಾಂತರವೂ ಚಿತ್ರದಲ್ಲಿದೆ. ಬದುಕಲು ಅರ್ಹತೆ ಇದ್ದರೂ ಅವಕಾಶಗಳ ಹಾದಿಯೇ ಕಾಣದಿರುವ ಇಂತಹ ಸಮುದಾಯಗಳ ಬಗ್ಗೆ ಸಿನಿಮಾ ಮೂಲಕ ಹೇಳಲು ಪ್ರಯತ್ನಿಸಿರುವ ಅವರ ಪ್ರಯತ್ನ ಅಭಿನಂದನಾರ್ಹ. ಕಮರ್ಷಿಯಲ್‌ ಚಿತ್ರಗಳ ಅಬ್ಬರದ ಮುಂದೆ ಕಲಾತ್ಮಕ ಚಿತ್ರಗಳು ನಿಲ್ಲುವುದು ಸುಲಭವಲ್ಲ. ಹಾಗಾಗಿ, ಬಿರುಗಾಳಿಯ ಎದುರಿಗೆ ಬುಡ್ಡಿದೀಪ ಹಚ್ಚುವ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

ಕೋಲೆತ್ತಿನ ಸಮುದಾಯದ ಬದುಕೇ ಈ ಚಿತ್ರದ ಕಥಾವಸ್ತು. ದಶಕದ ಹಿಂದೆ ಹಳ್ಳಿಗಳಿಗೆ ಸುಗ್ಗಿ ವೇಳೆ ಕೋಲೆತ್ತಿನ ಜನರು ಬರುತ್ತಿದ್ದರು. ಹಸುಗಳು ಅವರ ಬದುಕಿಗೆ ಆಧಾರ. ನಾದಸ್ವರ ನುಡಿಸಿಕೊಂಡು ರಾಮ ಸೀತೆ ಕಲ್ಯಾಣ ಪ್ರಸಂಗ ಪ್ರಸ್ತುತಪಡಿಸಿ ಜನರನ್ನು ರಂಜಿಸುತ್ತಿದ್ದರು. ಹಳ್ಳಿಗರು ನೀಡುತ್ತಿದ್ದ ಧವಸ ಧಾನ್ಯ ಸಂಗ್ರಹಿಸಿ ಬದುಕು ಸವೆಸುತ್ತಿದ್ದರು. ಹಳ್ಳಿಗಳಲ್ಲಿ ಇಂತಹ ‍ವಾತಾವರಣ ಈಗಿಲ್ಲ.

ಮಾರ ಕೋಲೆತ್ತಿನ ಜನಾಂಗಕ್ಕೆ ಸೇರಿದವ. ಆತ ಗೌರಿ ಮತ್ತು ದುಗ್ಯನ ಅಣ್ಣ. ಗೌರಿ ಮೂಕಿ. ಕೋಲೆತ್ತು ಆಡಿಸಿಕೊಂಡೆ ಅವರು ಜೀವನ ಸಾಗಿಸುತ್ತಿರುತ್ತಾರೆ. ಗೌರಿಯನ್ನು ಮದುವೆ ಮಾಡಿಕೊಳ್ಳಲು ಕುಲಸ್ಥರು ಬರುತ್ತಾರೆ. ವಿವಾಹ ಮಾಡಿಕೊಳ್ಳಲು ಮಾರನ ಬದುಕಿಗೆ ಆಧಾರವಾಗಿದ್ದ ಎತ್ತು, ಹಸು ನೀಡುವಂತೆ ಬೇಡಿಕೆ ಇಡುತ್ತಾರೆ. ಇದಕ್ಕೆ ಅಣ್ಣ ಒಪ್ಪಿದರೂ ಗೌರಿ ಒಪ್ಪುವುದಿಲ್ಲ. ಕುಲಸ್ಥರ ವರ್ತನೆಯಿಂದ ನೊಂದ ಮಾರ ಪರ ಊರಲ್ಲಿ ಬದುಕು ಕಟ್ಟಿಕೊಳ್ಳಲು ಹೊರಡುತ್ತಾನೆ.

ತಂಗಿಗೆ ಮದುವೆ ಮಾಡಿಸುವುದು, ತಮ್ಮನಿಗೆ ಶಿಕ್ಷಣ ಕೊಡಿಸುವುದೇ ಮಾರನ ಜೀವನದ ಆಸೆ. ಅದಕ್ಕಾಗಿ ಆತನದು ಊರೂರಿಗೆ ಅಲೆದಾಟ. ಹೋಗುವ ಊರು, ನಗರ ಪ್ರದೇಶದಲ್ಲಿ ಗೌರಿ ಲೈಂಗಿಕ ಕಿರುಕುಳಕ್ಕೆ ತುತ್ತಾಗುತ್ತಾಳೆ. ಈ ನಡುವೆ ಸುಡುಗಾಡು ಸಿದ್ಧ ಜನಾಂಗದ ಸಂಜೀವನ ಪ್ರೇಮಪಾಶಕ್ಕೂ ಸಿಲುಕುತ್ತಾಳೆ. ಕೊನೆಗೆ, ತಮ್ಮನ ಶಿಕ್ಷಣಕ್ಕಾಗಿ ತನ್ನ ಶೀಲ ಕಳೆದುಕೊಳ್ಳುವ ದಾರುಣ ಸ್ಥಿತಿ ಆಕೆಗೆ ಬಂದೊದಗುತ್ತದೆ.

ಮೂಕಿಯಾಗಿ ‘ತಿಥಿ’ ಖ್ಯಾತಿಯ ಪೂಜಾ ಅವರದು ಮನೋಜ್ಞ ಅಭಿನಯ. ಸತೀಶ್‌ಕುಮಾರ್, ಸಂಪತ್‌ಕುಮಾರ್‌, ಅನಿಲ್‌ಕುಮಾರ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕದ್ರಿ ಮಣಿಕಾಂತ್‌ ಅವರು ಸಂಗೀತ ಸಂಯೋಜಿಸಿರುವ ಹಾಡುಗಳು ಮನಸ್ಸಿಗೆ ಮುದ ನೀಡುತ್ತವೆ. ಹಳ್ಳಿಯ ಪರಿಸರ ಎಚ್‌.ಕೆ. ಚಿದಾನಂದ ಅವರ ಛಾಯಾಗ್ರಹಣದಲ್ಲಿ ಸೊಗಸಾಗಿ ಸೆರೆಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT