ಗುರುವಾರ , ಫೆಬ್ರವರಿ 25, 2021
30 °C

ಎಲೆಕ್ಟ್ರಾನಿಕ್‌ ಸಾಧನಗಳ ಮೇಲಿನ ಆಮದು ಸುಂಕ ಹೆಚ್ಚಳ: ಆ್ಯಪಲ್‌ಗೆ ಆತಂಕ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಎಲೆಕ್ಟ್ರಾನಿಕ್‌ ಸಾಧನಗಳ ಮೇಲಿನ ಆಮದು ಸುಂಕ ಹೆಚ್ಚಳ: ಆ್ಯಪಲ್‌ಗೆ ಆತಂಕ

ನವದೆಹಲಿ: ‘ಮೊಬೈಲ್‌, ಟಿವಿ ಸೇರಿದಂತೆ ಹಲವು ಬಗೆಯ ಎಲೆಕ್ಟ್ರಾನಿಕ್‌ ಸಾಧನಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದರಿಂದ ಸಾಗರೋತ್ತರ ಆಮದು ವ್ಯವಹಾರವನ್ನು ನಿಗ್ರಹಿಸಿ, ದೇಶೀಯ ಉದ್ಯಮವನ್ನು ಸದೃಢಗೊಳಿಸಲು ಸಾಧ್ಯವಾಗುತ್ತದೆ’ ಎಂದು ಕೇಂದ್ರ ಸರ್ಕಾರದ ಪ್ರಕಟಣೆಯೊಂದು ತಿಳಿಸಿದೆ.

ಆ್ಯಪಲ್‌ ಐಫೋನ್‌ ಸೇರಿದಂತೆ ಮೊಬೈಲ್‌ ಮೇಲಿನ ಆಮದು ತೆರಿಗೆ ಶೇ. 10 ರಿಂದ ಶೇ. 15ಕ್ಕೆ ಹೆಚ್ಚಳವಾಗಲಿದೆ. ದುಬಾರಿ ಫೋನ್‌ಗಳನ್ನು ಪರಿಚಯಿಸಿರುವ ಹಾಗೂ ಆಮದಿನ ಮೇಲೆ ಅತಿಯಾಗಿ ಅವಲಂಬನೆಯಾಗಿರುವ ಆ್ಯಪಲ್‌ಗೆ ಇದರಿಂದ ಭಾರಿ ಹೊರೆಯಾಗುವ ಸಾಧ್ಯತೆಯಿದೆ.

ದೇಶಿಯ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಹತ್ವದ ಮೇಕ್‌ ಇನ್‌ ಇಂಡಿಯಾ ಯೋಜನೆಗೆ ಚಾಲನೆ ನೀಡಿದ್ದರು. ಈ ಯೋಜನೆಯ ನಂತರ ದೇಶದ ಎಲೆಕ್ಟ್ರಾನಿಕ್‌ ಸಾಧನಗಳ ಉತ್ಪಾದನಾ ವಲಯ ಉತ್ತಮ ಸಾಧನೆ ತೋರಿತ್ತು.

2017ರಲ್ಲಿ ಸ್ಥಳೀಯವಾಗಿ ತಯಾರಿಸಲಾದ 10ರಲ್ಲಿ ಎಂಟು ಮೊಬೈಲ್‌ಗಳು ಮಾರಾಟವಾಗಿವೆ ಎಂಬುದು ಕೌಂಟರ್‌ಪಾರ್ಟ್‌ ಸಂಶೋಧನೆಯ ಅಂಕಿಅಂಶಗಳಿಂದ ತಿಳಿದುಬಂದಿದೆ.

ಕೌಂಟರ್‌ಪಾರ್ಟ್‌ನ ಸಹಾಯಕ ನಿರ್ದೇಶಕ ತರುಣ್‌ ಪಾಠಕ್‌, ‘ಆಮದಿನ ಮೇಲೆ ಅತಿಯಾಗಿ ಅವಲಂಬನೆಯಾಗಿರುವ ಕಂಪೆನಿಗಳಿಗೆ ಸರ್ಕಾರದ ನಿರ್ಧಾರದಿಂದ ಹೆಚ್ಚಿನ ಪರಿಣಾಮ ಉಂಟಾಗಲಿದೆ. ಆ್ಯಪಲ್‌ ಕಂಪೆನಿಯು ಶೇ. 88ರಷ್ಟು ಸಾಧನಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಆದಾಯ ಸರಿದೂಗಿಸಲು ಬೆಲೆ ಹೆಚ್ಚಿಸಿಕೊಳ್ಳಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ಸದ್ಯ ದೇಶದಲ್ಲಿ ಸ್ಯಾಮ್ಸಂಗ್‌ ಕಂಪೆನಿಯ ಮೊಬೈಲ್‌ಗಳು ಹೆಚ್ಚಿನ ಪ್ರಮಾಣದಲ್ಲಿ ತಯಾರಾಗುತ್ತಿವೆ.

ಆ್ಯಪಲ್‌ ಕಂಪೆನಿಯ ಐಫೋನ್‌ ಎಸ್‌ಇ ಮಾದರಿ ಮಾತ್ರವೇ ಭಾರತದಲ್ಲಿ ತಯಾರಾಗುತ್ತಿದ್ದು, ಇದು ತನ್ನ ಉಳಿದ ಮಾದರಿಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಹಾಗಾಗಿ ಭಾರತದಲ್ಲಿ ತನ್ನ ಉದ್ಯಮವನ್ನು ವಿಸ್ತರಿಸಲು ತೆರಿಗೆ ಪರಿಹಾರವನ್ನು ನೀಡಬೇಕೆಂದು ಆ್ಯಪಲ್‌ ಮನವಿ ಮಾಡಿದೆ. ಆದರೆ ಸರ್ಕಾರದ ಅಧಿಕಾರಿಗಳು ವಿನಾಯಿತಿ ನೀಡುವುದು ಅಸಾಧ್ಯವೆಂದು ಹೇಳಿದ್ದಾರೆ.

ಭಾರತೀಯ ಸೆಲ್ಯುಲಾರ್‌ ಅಸೋಸಿಯೇಷನ್‌ ಅಧ್ಯಕ್ಷ ಪಂಕಜ್‌ ಮಹಿಂದ್ರೋ ಅವರು, ‘ಆಮದು ತೆರಿಗೆ ಹೆಚ್ಚಳದಿಂದ ದೇಶೀಯ ಉತ್ಪಾದನೆಯ ಪ್ರಮಾಣ ಹೆಚ್ಚಳವಾಗಲಿದೆ’ ಎಂದು ಹೇಳಿಕೊಂಡಿದ್ದಾರೆ.

ಮೊಬೈಲ್‌ಗಳಲ್ಲದೆ ವಿಡಿಯೊ ಕ್ಯಾಮರಾಗಳ ಮೇಲಿನ ತೆರಿಗೆಯನ್ನು ಶೇ. 10ರಿಂದ ಶೇ. 15ಕ್ಕೆ, ಟಿವಿ ಸಾಧನಗಳ ಮೇಲಿನ ತೆರಿಗೆಯನ್ನು ಶೇ. 10ರಿಂದ ಶೇ. 20ಕ್ಕೆ ಹೆಚ್ಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.