ಶನಿವಾರ, ಮಾರ್ಚ್ 6, 2021
18 °C

ಕೆಥೆಡ್ರಲ್‌ ಶಾಲೆಯಲ್ಲಿ ‘ಮಕ್ಕಳ ಲೋಕ’

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

ಕೆಥೆಡ್ರಲ್‌ ಶಾಲೆಯಲ್ಲಿ ‘ಮಕ್ಕಳ ಲೋಕ’

ಬಾಗಿಲು ತಳ್ಳಿಕೊಂಡು ಒಳಹೊಕ್ಕರೆ ಅಲ್ಲಿ ಮಕ್ಕಳ ಲೋಕವೇ ಎದುರಾಯಿತು. ಪುಟ್ಟ ಮಕ್ಕಳಿಂದ ಹಿಡಿದು ಪಿಯುವರೆಗಿನ ಮಕ್ಕಳು ಅಲ್ಲಿದ್ದರು. ಸ್ವಲ್ಪ ದೂರ ಕಣ್ಣು ಹಾಯಿಸಿದರೆ ಮಿಕ್ಕಿಮೌಸ್‌ಗಳು! ಅರೇ, ಈ ಬಿಸಿಲ‌ಲ್ಲಿ ಅವು ಇಲ್ಲಿ ಏನು ಮಾಡಿತ್ತಿವೆ ಎಂದು ಸ್ವಲ್ಪ ಹತ್ತಿರ ಹೋಗಿ ಗಮನಿಸಿದರೆ, ಮಕ್ಕಳ ತಲೆಯ ಮೇಲೆ ಮಿಕ್ಕಿಮೌಸ್‌ ಕಿವಿಗಳು ರಾಜಾಜಿಸುತ್ತಿದ್ದವು. ಮುಖದ ಮೇಲೆ ಕ್ರಿಸ್‌ಮಸ್‌ ಟ್ರೀ, ಚಿಟ್ಟೆ, ಬೆಕ್ಕು...

ಈ ಮಕ್ಕಳ ಲೋಕ ಸೃಷ್ಟಿಯಾಗಿರುವುದು ರಿಚ್‌ಮಂಡ್‌ ರಸ್ತೆಯಲ್ಲಿರುವ ಕೆಥೆಡ್ರಲ್‌ ಶಾಲೆಯಲ್ಲಿ.

ಸದಾ ಓದು, ಪುಸ್ತಕ, ಅಂಕ, ರ‍್ಯಾಂಕ್‌ ಅಂತಲೇ ಗಡಿಬಿಡಿಯಲ್ಲಿ ಮುಳುಗುವ ಮಕ್ಕಳಿಗೆ ಉಲ್ಲಾಸದ ವಾತಾವರಣ ನಿರ್ಮಿಸುವ ಉದ್ದೇಶದಿಂದ ಕೆಥಡ್ರಲ್‌ ಶಾಲೆಯು ಮೂರು ದಿನಗಳ ಕಾಲ (ಡಿ.15, 16, 17) ‘ಕೆಥೆಡ್ರಲ್ಸ್‌ ವಿಂಟರ್‌ ಫಿಸ್ಟಾ’ ಕಾರ್ಯಕ್ರಮವನ್ನು ಆಯೋಜಿಸಿದೆ. ಇದು ಬೆಳಿಗ್ಗೆ 10 ರಿಂದ ಸಂಜೆ 7ರ ವರೆಗೆ ಈ ಕಾರ್ಯಕ್ರಮ ನಡೆಯಲಿದೆ.

‘ಶಾಲೆಯು ಪ್ರತಿವರ್ಷ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿತ್ತು. ಆದರೆ, ಈ ಪದ್ಧತಿ 2008ರಲ್ಲಿ ನಿಂತಿತು. ಆದರೆ, ಮತ್ತೆ ಈಗ ಇದನ್ನು ಪ್ರಾರಂಭಿಸಿದೆ. ಈ ಹಬ್ಬಕ್ಕಾಗಿ ಮಕ್ಕಳು 15 ದಿನದಿಂದ ತಯಾರಿ ನಡೆಸಿದ್ದಾರೆ. ಅವರ ತಯಾರಿಯನ್ನು ನೀವೇ ನೋಡುತ್ತಿದ್ದೀರಲ್ಲ’ ಎಂದು ಹೇಳಿದರು ಪಿಯು ಉಪನ್ಯಾಸಕಿ ಉಷಾ.

ಇದನ್ನು ಮಕ್ಕಳೇ ಆಯೋಜಿಸಿರುವ ಜಾತ್ರೆ ಎಂದರೂ ತಪ್ಪಾಗಲ್ಲ. ಹೈದರಾಬಾದ್‌ ಸ್ಟಾಲ್ಸ್‌, ಲೆಟ್ಸ್‌ ಸ್ಫೈಸ್‌ ಇಟ್‌ ಅಪ್‌, ಚಿಲ್ಡ್ರನ್‌ ಕ್ರೀಂ ಅಂಡ್‌ ಕೇಕ್‌, ಖಾನ್‌ ಪಾನ್‌ ಹೌಸ್‌.... ಹೀಗೆ ನಾನಾ ಹೆಸರಿನ ಅಂಗಡಿಗಳು ಕಾಣಸಿಗುತ್ತವೆ. ಬಹುತೇಕ ಅಂಗಡಿಗಳಿಗೆ ಮಕ್ಕಳೇ ಮಾಲೀಕರು. ಇಲ್ಲಿ ಅವರೇ ಮಾಡಿದ ಕಿವಿಯೋಲೆ, ಬಳೆಗಳು, ಉಣ್ಣೆಯ ಕ್ಯಾಪ್‌ಗಳು, ಚಕ್ಕುಲಿ, ಟೊಮೊಟೊ ಸೂಪು... ಇನ್ನೂ ಏನೆಲ್ಲಾ ಸಿಗುತ್ತವೆ. ಆಯಾ ತರಗತಿಯ ಶಿಕ್ಷಕರು ಮಾರ್ಗದರ್ಶನ ನೀಡುತ್ತಾರೆ. ಕೆಲ ಪೋಷಕರು ಹಾಗೂ ವ್ಯಾಪಾರಿಗಳೂ ಇಲ್ಲಿ ಮಳಿಗೆ ಇಟ್ಟಿದ್ದಾರೆ.

ಪ್ರತಿ ಅಂಗಡಿಯ ಮುಂದೆ ನಿಂತು ಒಮ್ಮೆ ಅವಲೋಕಿಸಿ ನನಗೆ ಇದು ಬೇಕು ಎಂದು ಕೇಳುತ್ತಿದ್ದ ಪುಟ್ಟ ಹುಡುಗನನ್ನು ಮಾತನಾಡಿಸಿದರೆ, ನಾಚಿಕೊಳ್ಳುತ್ತಲೇ ಹೀಗೆ ಉತ್ತರಿಸಿದ, ‘ನಾನು ನೂರು ರೂಪಾಯಿ ಕೊಟ್ಟು ಕ್ಯಾಮೆರ ತಗೊಂಡೆ. ಆಮೇಲೆ, ನನಗೆ ಹಣ್ಣುಗಳು ಇಷ್ಟ. ಅದಕ್ಕೇ ಆ ಅಂಗಡಿನಲ್ಲಿ ಹಣ್ಣು ಕೊಂಡು ತಿಂದೆ’ ಎಂದು ಓಡಿ ಹೋದ.

ಮೂರೂ ದಿನಗಳೂ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಡಿಜೆ ಸಂಗೀತ, ಜಾನಪದ ನೃತ್ಯ, ಭರತನಾಟ್ಯ, ಫ್ಯಾಷನ್‌ ಶೋ ಇತ್ಯಾದಿ ಸಂಭ್ರಮಗಳು ಚಿಣ್ಣರ ಮನಕ್ಕೆ ಖುಷಿಕೊಡಲಿವೆ. ಶನಿವಾರ ಸಂಜೆ 5ರ ನಂತರ ಸುದೀಪ್ ಮಕ್ಕಳೊಂದಿಗೆ ಬೆರೆಯಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.