ಶನಿವಾರ, ಮಾರ್ಚ್ 6, 2021
25 °C

ಹೊಸ ವರ್ಷಾಚರಣೆಗೆ ಸನ್ನಿ ಲಿಯೋನ್ ಬಂದರೆ ಸಾಮೂಹಿಕ ಆತ್ಮಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ ಕರವೇ ಯುವ ಸೇನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ವರ್ಷಾಚರಣೆಗೆ ಸನ್ನಿ ಲಿಯೋನ್ ಬಂದರೆ ಸಾಮೂಹಿಕ ಆತ್ಮಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ ಕರವೇ ಯುವ ಸೇನೆ

ಬೆಂಗಳೂರು: ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಭಾಗವಹಿಸುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಯುವಸೇನೆ ಪ್ರತಿಭಟನೆ ತೀವ್ರಗೊಳಿಸಿದೆ.

ಶುಕ್ರವಾರ ಬೆಂಗಳೂರಿನ ಮಾನ್ಯತಾ ಟೆಕ್‍ಪಾರ್ಕ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕರವೇ ಯುವಸೇನೆಯ ಕಾರ್ಯಕರ್ತರು ಡಿಸೆಂಬರ್ 31ರಂದು ನಡೆಯಲಿರುವ ಸನ್ನಿ ನೈಟ್ ಕಾರ್ಯಕ್ರಮವನ್ನು ರದ್ದು ಪಡಿಸಬೇಕು. ಇಲ್ಲವಾದಲ್ಲಿ ತಾವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ.

ಈ ಕಾರ್ಯಕ್ರಮದಿಂದಾಗಿ ನಮ್ಮ ನೆಲದ ಸಂಸ್ಕೃತಿ ಹಾಳಾಗುತ್ತಿದೆ ಎಂದು ಪ್ರತಿಭಟನಾಕಾರರು ವಾದಿಸುತ್ತಿದ್ದಾರೆ. ಸನ್ನಿ ಲಿಯೋನ್‍ಗೆ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ಆಕೆಯ ಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ್ದಾರೆ. 

ಸನ್ನಿ ಲಿಯೋನ್ ತುಂಡು ಬಟ್ಟೆ ತೊಡುವುದರ ಬಗ್ಗೆ ನಮ್ಮ ವಿರೋಧವಿದೆ.ಈ ಕಾರ್ಯಕ್ರಮಕ್ಕೆ ಸನ್ನಿ ಸೀರೆ ಉಟ್ಟು ಕೊಂಡು ಬಂದರೆ ನಾವೂ ಕಾರ್ಯಕ್ರಮ ನೋಡಲು ಹೋಗುತ್ತೇವೆ. ಸನ್ನಿಯ ಭೂತಕಾಲ ಚೆನ್ನಾಗಿಲ್ಲ. ಅಂಥಾ ವ್ಯಕ್ತಿಗಳನ್ನು ನಾವು ಪ್ರೋತ್ಸಾಹಿಸಬಾರದು. ಈ ಕಾರ್ಯಕ್ರಮ ನಡೆಸಿದರೆ ನಾವು ಡಿಸೆಂಬರ್ 31ರಂದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲೂ ಹಿಂಜರಿಯುವುದಿಲ್ಲ ಎಂದು ಕರವೇ ಯುವಸೇನೆಯ ರಾಜ್ಯಾಧ್ಯಕ್ಷ ಹರೀಶ್ ಹೇಳಿದ್ದಾರೆ.

ಸನ್ನಿ ಲಿಯೋನ್ ಈ ಹಿಂದೆ ಕನ್ನಡ ಚಿತ್ರದ ಹಾಡೊಂದರಲ್ಲಿ ಕುಣಿದಿದ್ದರು. ನಾನೂ ಒಬ್ಬ ಕನ್ನಡಿಗನಾಗಿ ಬೆಂಗಳೂರಿನ ಸಂಸ್ಕೃತಿಗೆ ಒಪ್ಪುವಂತ ಕಾರ್ಯಕ್ರಮವನ್ನೇ ಆಯೋಜಿಸಿದ್ದೇವೆ. ಆಕೆಗೆ ಹಲವಾರು ಕಾರ್ಯಕ್ರಮಗಳ ಆಫರ್ ಬಂದಿದ್ದರೂ ಬೆಂಗಳೂರು ಮತ್ತು ಹೈದರಾಬಾದ್  ಇಷ್ಟವಾದ ಕಾರಣ ಆಕೆ ನಮ್ಮ ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ. ಪ್ರತಿಭಟನೆಕಾರರು ಏನನ್ನು ನಿರೀಕ್ಷಿಸುತ್ತಿದ್ದಾರೆ ಮತ್ತು  ಏನು ಬಯಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಕುಟುಂಬ ಸಮೇತರಾಗಿ ಬಂದು ನೋಡಬಹುದಾದ ಕಾರ್ಯಕ್ರಮ ಇದು. ಇಲ್ಲಿ ಸಂಸ್ಕೃತಿಗೆ ಧಕ್ಕೆಯಾಗುವುದಿಲ್ಲ ಎಂದು ಕಾರ್ಯಕ್ರಮದ ಆಯೋಜಕರು ಹೇಳಿರುವುದಾಗಿ ಇಂಡಿಯಾ ಟುಡೇ ಪತ್ರಿಕೆ ವರದಿ ಮಾಡಿದೆ.

ಸನ್ನಿ ನೈಟ್‍ಗೆ ಅನುಮತಿ ರದ್ದು?

ಸನ್ನಿ ನೈಟ್ ಕಾರ್ಯಕ್ರಮಕ್ಕೆ ಕನ್ನಡಪರ ಸಂಘಟನೆಯಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದ ಅನುಮತಿಯನ್ನು ರದ್ದು ಮಾಡುವಂತೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದು ಬಲ್ಲಮೂಲಗಳು ವರದಿ  ಮಾಡಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.