ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳ ಮೇಲಿನ ಪ್ರಕರಣ ವಿಚಾರಣೆ ತ್ವರಿತವಾಗಿ ಮುಗಿಯಲಿ

Last Updated 15 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಸಂಸದರು ಮತ್ತು ಶಾಸಕರ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳ ವಿಚಾರಣೆಗಾಗಿ ಒಟ್ಟು 12 ವಿಶೇಷ ನ್ಯಾಯಾಲಯಗಳು ಸ್ಥಾಪನೆಯಾಗಲಿವೆ. ಈ ಬಗ್ಗೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವಕ್ಕೆ ಅನುಮೋದನೆ ನೀಡಿದ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಪೀಠವು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ನಿರ್ದಿಷ್ಟ ಹೊಣೆ ವಹಿಸಿದೆ. ತಮ್ಮ ತಮ್ಮ ಹೈಕೋರ್ಟ್ ಜತೆ ಸಮಾಲೋಚಿಸಿ ಅಗತ್ಯಕ್ಕೆ ಅನುಗುಣವಾಗಿ ಈ ನ್ಯಾಯಾಲಯಗಳನ್ನು ಸ್ಥಾಪಿಸುವ ಜವಾಬ್ದಾರಿ ಆಯಾ ರಾಜ್ಯ ಸರ್ಕಾರಗಳದ್ದು. ಅವಕ್ಕೆ ಬೇಕಾದ ₹ 7.8 ಕೋಟಿ ಅನುದಾನ ಒದಗಿಸುವುದು ಕೇಂದ್ರ ಸರ್ಕಾರದ ಕೆಲಸ. ವಿಶೇಷ ನ್ಯಾಯಾಲಯಗಳು ಮುಂದಿನ ಮಾರ್ಚ್‌ 1ರ ಒಳಗೆ ಸ್ಥಾಪನೆಯಾಗಬೇಕು. ಅವುಗಳ ಅವಧಿ ಒಂದು ವರ್ಷ ಮಾತ್ರ ಇರುವುದರಿಂದ, ತಮಗೆ ಒಪ್ಪಿಸಿದ ಕೆಲಸವನ್ನು ಅವು ಅಷ್ಟರಲ್ಲಿಯೇ ಪೂರ್ಣಗೊಳಿಸಬೇಕು. ಏಕೆಂದರೆ, ಜನಪ್ರತಿನಿಧಿಗಳ ಮೇಲಿನ ಕ್ರಿಮಿನಲ್‌ ಮೊಕದ್ದಮೆಗಳ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ 2013ರಲ್ಲಿಯೇ ಕೆಲವೊಂದು ಸೂಚನೆಗಳನ್ನು ಕೊಟ್ಟಿತ್ತು. ಅಧೀನ ನ್ಯಾಯಾಲಯಗಳು ಆರೋಪವನ್ನು ಪರಿಗಣನೆಗೆ ತೆಗೆದುಕೊಂಡು ದೋಷಾರೋಪ ಹೊರಿಸಿದ ಒಂದು ವರ್ಷದ ಒಳಗೆ ವಿಚಾರಣೆ ಮುಗಿಸಬೇಕು; ಅದಕ್ಕಾಗಿ ಅಗತ್ಯ ಬಿದ್ದರೆ ನಿತ್ಯವೂ ಕಲಾಪ ನಡೆಸಬೇಕು ಎಂದು ಅದು ಹೇಳಿತ್ತು. ‘ಶಾಸನಸಭೆಗಳಿಗೆ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳಿಗೆ ಶಾಸನ ಮಾಡುವ ದೊಡ್ಡ ಹೊಣೆಗಾರಿಕೆ ಇದೆ. ಆದರೆ ಅಪರಾಧಿ ಹಿನ್ನೆಲೆ ಉಳ್ಳವರು ಹೀಗೆ ಕಾನೂನು ರೂಪಿಸುವ ಕಾರ್ಯದಲ್ಲಿ ತೊಡಗುವುದು ಮಹಾ ಅಪಚಾರ’ ಎನ್ನುವ ಸಾರ್ವಜನಿಕ ಅಭಿಪ್ರಾಯಕ್ಕೆ ಈ ಮೂಲಕ ಕೋರ್ಟ್ ಸಹಮತ ವ್ಯಕ್ತಪಡಿಸಿತ್ತು. ಇಷ್ಟೆಲ್ಲ ಆದರೂ ಪ್ರಕರಣಗಳ ವಿಚಾರಣೆ ನಿಗದಿತ ಗಡುವಿನಲ್ಲಿ ಮುಗಿಯುತ್ತಿಲ್ಲ. ಹಳೆಯ ಪ್ರಕರಣಗಳ ವಿಷಯ ಒಂದು ಕಡೆ ಇರಲಿ; 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಆರಿಸಿಬಂದ ಸಂಸದರು ಮತ್ತು ಶಾಸಕರ ವಿರುದ್ಧ ದಾಖಲಾಗಿರುವ 1581 ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯೇ ಇನ್ನೂ ಬಾಕಿ ಇದೆ. ಇವರಲ್ಲಿ ಎಲ್ಲರೂ ತಪ್ಪಿತಸ್ಥರಲ್ಲದೇ
ಇರಬಹುದು. ಆರೋಪ ಸಾಬೀತಾಗದೇ ಹೋದರೆ, ಅಂತಹ ಜನಪ್ರತಿನಿಧಿ ಅಧಿಕಾರದಲ್ಲಿ ಮುಂದುವರಿಯಲು ಯಾರ ಅಭ್ಯಂತರವೂ ಇಲ್ಲ. ಆದರೆ ತೀರ್ಪು ಬರುವವರೆಗೂ ‘ಕಳಂಕಿತ’ ಎಂಬ ಹಣೆಪಟ್ಟಿ ಹೊತ್ತೇ ಇರಬೇಕಾಗುತ್ತದೆ. ಅವರದೇ ಹಿತದೃಷ್ಟಿಯಿಂದಲಾದರೂ ಬೇಗ ತೀರ್ಮಾನ ಆಗುವುದು ನ್ಯಾಯೋಚಿತ. ಅದೇ ರೀತಿ, ಅಪರಾಧ ಸಾಬೀತಾದ ವ್ಯಕ್ತಿ ಜನಪ್ರತಿನಿಧಿಯಾಗಿ ಮುಂದುವರಿಯಲು ಒಂದು ಕ್ಷಣವೂ ಅರ್ಹನಲ್ಲ. ಆದರೆ ಹಿಂದೆಲ್ಲ, ಅಂಥವರ ಅಧಿಕಾರಾವಧಿ ಮುಗಿದ ನಂತರ ತೀರ್ಪು ಹೊರಬಿದ್ದ ಅನೇಕ ನಿದರ್ಶನಗಳಿವೆ. ಅದರಿಂದ ಏನು ಪ್ರಯೋಜನ? ಸಂವಿಧಾನದ ಮತ್ತು ಜನಾಭಿಪ್ರಾಯದ ಮೂಲ ಆಶಯವೇ ನಿರರ್ಥಕಗೊಳ್ಳುತ್ತದೆ.

ವಿಚಾರಣಾ ನ್ಯಾಯಾಲಯಗಳ ಮೇಲೆ ಕೆಲಸದ ಒತ್ತಡ ಹೆಚ್ಚಿದೆ ಎನ್ನುವುದೇನೋ ನಿಜ. ಆದರೆ ಜನಪ್ರತಿನಿಧಿಗಳ ವಿರುದ್ಧದ ಅಪರಾಧ ಪ್ರಕರಣಗಳು ಇತ್ಯರ್ಥವಾಗದೆ ದೀರ್ಘ ಕಾಲ ಮುಂದುವರಿಯುವುದು ಕೂಡ ಸರಿಯಲ್ಲ. ಅದಕ್ಕೊಂದು ದಾರಿ ಹುಡುಕಲೇಬೇಕಾಗಿತ್ತು. ‘ಭ್ರಷ್ಟಾಚಾರ, ಪರಿಶಿಷ್ಟರ ಮೇಲಿನ ದೌರ್ಜನ್ಯ, ಮಕ್ಕಳ ಮೇಲಿನ ದೌರ್ಜನ್ಯ, ಭಯೋತ್ಪಾದನೆಯಂತಹ ಪ್ರಕರಣಗಳ ವಿಚಾರಣೆಗೆ ಈಗಾಗಲೇ ವಿಶೇಷ ನ್ಯಾಯಾಲಯಗಳು ಇವೆ. ಅದೇ ರೀತಿ ಶಾಸನಸಭೆಗಳ ಚುನಾಯಿತ ಪ್ರತಿನಿಧಿಗಳ ಮೇಲಿನ ಕ್ರಿಮಿನಲ್‌ ಸ್ವರೂಪದ ಆರೋಪಗಳ ವಿಚಾರಣೆಗೆ ವಿಶೇಷ ಕೋರ್ಟ್ ರಚಿಸುವುದು ಕೂಡ ಅತ್ಯವಶ್ಯ. ಸಾರ್ವಜನಿಕ ಬದುಕಿನಲ್ಲಿ ಇರುವ ವ್ಯಕ್ತಿಗಳ ಬಗ್ಗೆ ಗೌರವ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ಬಗ್ಗೆ ಜನಸಾಮಾನ್ಯರಿಗೆ ನಂಬಿಕೆ ಉಳಿಯಬೇಕಾದರೆ ಇಡೀ ವ್ಯವಸ್ಥೆ ಸ್ವಚ್ಛ, ಶುದ್ಧವಾಗಿರಬೇಕು. ಅಪರಾಧ ಎಸಗಿದರೆ ಆಗುವ ಶಿಕ್ಷೆಯ ಭಯ ಜನಪ್ರತಿನಿಧಿಗಳಲ್ಲೂ ಬರಬೇಕು. ಆದ್ದರಿಂದ ವಿಶೇಷ ನ್ಯಾಯಾಲಯಗಳ ಸ್ಥಾಪನೆ, ದೇಶದೊಳಗಿನ ರಾಜಕೀಯ ಶುದ್ಧೀಕರಣದ ಹಾದಿಯಲ್ಲಿ ಒಂದು ದೊಡ್ಡ ಹೆಜ್ಜೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT