ಶುಕ್ರವಾರ, ಮಾರ್ಚ್ 5, 2021
27 °C

ನಕ್ಸಲರೇನೋ ಹೋದರು... ಬವಣೆ?

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

ನಕ್ಸಲರೇನೋ ಹೋದರು... ಬವಣೆ?

ಪೊಲೀಸರ ಬೂಟಿನ ಸದ್ದುಗಳು, ಗುಡಿಸಲು, ಮನೆಯೆನ್ನದೆ ಒಳನುಗ್ಗಿ ಬೆದರಿಸುತ್ತಿದ್ದ ಖಾಕಿದಂಡಿನ ದೌರ್ಜನ್ಯ ಬಹುತೇಕ ನಿಂತು ಹೋಗಿದೆ. ಮಿಲಿಟರಿ ಡ್ರೆಸ್ ತೊಟ್ಟು, ಬಗಲಿನಲ್ಲಿ ಕೋವಿಯೇರಿಸಿ ಅಪರಾತ್ರಿಯಲ್ಲಿ ಗಿರಿಜನರ ಹಾಡಿಗಳಲ್ಲಿ ಸಭೆ ನಡೆಸಿ, ‘ನಿಮ್ಮ ಜತೆ ನಾವಿದ್ದೇವೆ’ ಎಂದು ಆದಿವಾಸಿಗಳಲ್ಲಿ ಭರವಸೆ ಹುಟ್ಟಿಸುತ್ತಿದ್ದ ನಕ್ಸಲರು ಕಾಲು ಕಿತ್ತಿದ್ದಾರೆ. ಹಸಿರು ಹೊದ್ದು ಮಲಗಿರುವ ಸಹ್ಯಾದ್ರಿ ಶ್ರೇಣಿಯ ಗಿರಿಶೃಂಗಗಳ ತಪ್ಪಲಿನಲ್ಲಿ ಅತಂತ್ರವಾಗಿಯೇ ಬದುಕು ದೂಡುತ್ತಿರುವ ಗಿರಿಜನರ ಆತಂಕ, ಆಕ್ರಂದನಗಳ ಮೊರೆತ ಗುಡ್ಡದ ಸರಕಲಿನಲ್ಲಿ ಹರಿಯುವ ನೀರಿನ ಸದ್ದಿನ ಮಧ್ಯೆ ಅಡಗಿಹೋಗಿದೆ. ಅವರಿಗೆ ಧ್ವನಿ ಕೊಡುವ ನಕ್ಸಲರು ಮರೆಯಾದ ಮೇಲೆ, ಗಿರಿಜನ ಅಳಲಿಗೆ ಕಿವಿಗೊಡುವ ಸೌಜನ್ಯವನ್ನೂ ಸರ್ಕಾರ ಕಳೆದುಕೊಂಡಿದೆ.

ಇದು, ಕಳೆದ 20 ವರ್ಷಗಳಿಂದೀಚೆಗೆ ನಕ್ಸಲ್ ಚಳವಳಿ ಹೆಸರಿನಲ್ಲಿ ರಕ್ತದ ಕೋಡಿ ಹರಿದಿದ್ದ, ಇಡೀ ರಾಜ್ಯದ ಗಮನ ಸೆಳೆದಿದ್ದ ಮಲೆನಾಡು ಸೆರಗಿನ ಇಂದಿನ ಚಿತ್ರಣ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ; ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ; ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಚಾಚಿಕೊಂಡಿದ್ದ ನಕ್ಸಲ್ ಚಳವಳಿ ಈಗ ಇತಿಹಾಸದ ಪುಟ ಸೇರಿದೆ.

ಎರಡು ದಶಕಗಳ ಸಂಘರ್ಷಮಯ, ರಕ್ತಸಿಕ್ತ ಅವಧಿಯಲ್ಲಿ ನಕ್ಸಲ್ ಚಳವಳಿಯ ನೇತಾರ ಸಾಕೇತ್ ಸೇರಿದಂತೆ 15 ನಕ್ಸಲರು, ಅವರ ಬಗ್ಗೆ ಅನುಕಂಪ ಹೊಂದಿದ್ದ ಮೂವರು ಗಿರಿಜನರು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಪದೇ ಪದೇ ಎಚ್ಚರಿಕೆ ಕೊಟ್ಟರೂ ಪೊಲೀಸರಿಗೆ ಮಾಹಿತಿ ಕೊಡುವುದನ್ನು ನಿಲ್ಲಿಸಿಲ್ಲಎಂಬ ಕಾರಣಕ್ಕೆ ಮೂವರನ್ನು ನಕ್ಸಲರು ಹತ್ಯೆ ಮಾಡಿದ್ದಾರೆ. ತೀರ್ಥಹಳ್ಳಿಯಲ್ಲಿ ವೆಂಕಟೇಶ್ ಎಂಬ ಎಎಸ್ಐ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ನಕ್ಸಲ್‌ ಚಳವಳಿಯು ಬರೀ ಮಲೆನಾಡು ಭಾಗದಲ್ಲಿ 22 ಜನರನ್ನು ಬಲಿ ಪಡೆದಿದೆ.

ನಕ್ಸಲರು-ಪೊಲೀಸರ ಗುಂಡಿನ ಚಕಮಕಿ, ಪರಸ್ಪರ ದಾಳಿಯಿಂದಾಗಿ ಗುಂಡು ಸಿಡಿದು ತಮ್ಮ ಗೂಡಿಗೆಲ್ಲಿ ಬಡಿಯುತ್ತದೋ ಎಂಬ ಆತಂಕವಷ್ಟೇ ಗಿರಿಜನರಲ್ಲಿ ಮರೆಯಾಗಿದೆ. ನಕ್ಸಲರಿಗೆ ಊಟವಿಕ್ಕಿದ ಕಾರಣಕ್ಕೆ ಪೊಲೀಸರ ಕೋರ್ಟ್ ಮಾರ್ಷಲ್ ಎದುರಿಸಿ, ದಮನಕ್ಕೆ ಈಡಾಗುತ್ತಿದ್ದ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರೆ ನಕ್ಸಲರ ದಬ್ಬಾಳಿಕೆಯಿಂದ ನಲುಗಬೇಕಿದ್ದ ಆದಿವಾಸಿಗಳೀಗ ತಮ್ಮ ಪಾಡಿಗೆ ಬದುಕು ಕಟ್ಟಿಕೊಳ್ಳಲು ಶುರುವಿಟ್ಟಿದ್ದಾರೆ. ಕ್ರಾಂತಿಯಾಗುತ್ತದೆ ಎಂಬ ಭರವಸೆಯಲ್ಲಿ ಹೋರಾಟದ ಕಣಕ್ಕೆ ಧುಮುಕಿ, ನಕ್ಸಲ್‌ ದಳಗಳಲ್ಲಿ ಕಟ್ಟಾಳುಗಳಾಗಿದ್ದ ಗಿರಿಜನ ಯುವಕ, ಯುವತಿಯರು ಮುಖ್ಯವಾಹಿನಿಗೆ ಮರಳಿದ್ದಾರೆ. ಆದಿವಾಸಿ ಸಮುದಾಯಕ್ಕೆ ಸೇರಿದ ವಿಕ್ರಂಗೌಡ, ಮುಂಡಗಾರು ಲತಾ ಇನ್ನೂ ನಕ್ಸಲ್ ಚಳವಳಿಯಲ್ಲೇ  ಸಕ್ರಿಯರಾಗಿದ್ದಾರೆ ಎಂಬ ಮಾತುಗಳೂ ಇವೆ.

ನಕ್ಸಲ್ ಚಳವಳಿ ಹರಡಿಕೊಂಡಿದ್ದ ಗುಡ್ಡಗಾಡುಗಳಲ್ಲಿ ಸಂಚರಿಸಿದರೆ ಇನ್ನೂನೆತ್ತರಿನ ವಾಸನೆ, ಗುಂಡಿನ ಹೊಗೆಯ ಕಥಾನಕಗಳು ಸಿಗುತ್ತವೆ. ಪೊಲೀಸರ ದೌರ್ಜನ್ಯದ ಕಥನಗಳು ಪುಟಗಟ್ಟಲೆ ಬರೆಯುವಷ್ಟು ಸಿಗುತ್ತವೆ. ನಕ್ಸಲರಿಂದ ಯಾವತ್ತೂ ತೊಂದರೆಯಾಗಿಲ್ಲ. ಆದರೆ, ಅಂದು, ‘ಭೂಮಿ ಬಿಟ್ಟು ಕದಲುವುದಿಲ್ಲ’ ಎಂದು ಘೋಷಣೆ ಮೊಳಗಿಸಿ ಹೋರಾಟದ ಮುಂಚೂಣಿಯಲ್ಲಿದ್ದ ಅನೇಕ ಆದಿವಾಸಿ ನಾಯಕರು ಈಗ ಸರ್ಕಾರದ ಪರಿಹಾರ ಪಡೆದು ದೂರದ ಶೃಂಗೇರಿ, ನರಸಿಂಹರಾಜಪುರ, ಕೊಪ್ಪ, ತೀರ್ಥಹಳ್ಳಿಗಳಲ್ಲಿ ನೆಲೆಸಿದ್ದಾರೆ. ಅವರಿಗೆ ಒಳ್ಳೆಯಪರಿಹಾರವೂ ಸಿಕ್ಕಿದೆ. ಆದರೆ, ನಮಗೆ ಪರಿಹಾರವೂ ಇಲ್ಲ, ಪರಿಹಾರ ಪಡೆಯಲು ಭೂಮಿಯೂ ಇಲ್ಲ. ಈಗ ನಕ್ಸಲರೂ ಇಲ್ಲ. ಪೊಲೀಸರೂ ಇಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ಬಂದು ಕದ ಬಡಿಯುತ್ತಾರೆ. ಅವರು ಕೂಡ ಬಲವಂತವಾಗಿ ‘ಭೂಮಿ ತೆರವು ಮಾಡಿ’ ಎಂದು ಹೇಳುತ್ತಿಲ್ಲ. ಆದರೆ, ‘ಸ್ವಯಂ ಪ್ರೇರಣೆಯಿಂದ ಹೊರಹೋದರೆ ಪರಿಹಾರ ಸಿಗುತ್ತದೆ’ ಎಂದು ಆಮಿಷ ತೋರುತ್ತಿದ್ದಾರೆ. ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ನಕ್ಸಲ್ ಹೋರಾಟ ಇಲ್ಲಿಗೆ ಕಾಲಿಟ್ಟಿತು. ಆದರೆ, ಇಂದಿಗೂ ಅದೇ ತೂಗುಕತ್ತಿ ತಲೆ ಮೇಲೆ ತೂಗಾಡುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಗಿರಿಜನರು.

20 ವರ್ಷದ ಹಿಂದೆ ಗಿರಿಜನ ಹಾಡಿಗಳಿಗೆ ಹೋದರೆ ಮಹಿಳೆಯರಿರಲಿ ಪುರುಷರೂ ಮನೆಯಿಂದ ಹೊರಬಂದು ಮಾತನಾಡುತ್ತಿರಲಿಲ್ಲ. ಹೊರಜಗತ್ತಿ

ನವರನ್ನು ಕಂಡರೆ ಕ್ರೂರ ಪ್ರಾಣಿಗಳನ್ನು ಕಂಡಂತೆ ಅಂಜುತ್ತಿದ್ದರು. ನಕ್ಸಲರು, ಪೊಲೀಸರು, ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ಪದೇ ಪದೇ ಇಲ್ಲಿಗೆ ಭೇಟಿ ನೀಡಲು ಶುರು ಮಾಡಿದ ಮೇಲೆ, ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ನಡೆದ ಹೋರಾಟದಲ್ಲಿ ತೊಡಗಿ ‘ಶೃಂಗೇರಿ’ಯಂತಹ ಪೇಟೆಯನ್ನು ಕಂಡ ಮೇಲೆ ಇಲ್ಲಿನ ಜನರ ನಡಾವಳಿ ಬದಲಾಗಿದೆ. ಹೊಟ್ಟೆಪಾಡಿಗಾಗಿ ಅಡಿಕೆ ಫಸಲು ಚೇಣಿಗೆ ವಹಿಸಿಕೊಳ್ಳುವುದು, ಗಾರೆ ಕೆಲಸಕ್ಕೆ ಹೋಗುವುದನ್ನು ರೂಢಿಸಿಕೊಂಡಿದ್ದಾರೆ. ಶಾಲೆ ಮೆಟ್ಟಿಲು ಹತ್ತದ ಯುವತಿಯರ ಕೈಯಲ್ಲಿ ಸ್ಮಾರ್ಟ್ ಫೋನ್‌ ಬಂದಿದೆ. ಬೈಕ್‌ಗಳಂತೂ ಬಹುತೇಕರ ಮನೆ ಬಾಗಿಲಿನಲ್ಲಿ ನಿಂತಿವೆ.

ಕಾಡಿನ ಹಾದಿಯಲ್ಲಿ: ಬೆಳಿಗ್ಗೆ 9 ಗಂಟೆ ಸುಮಾರಿಗೆ ಹಳೆಯದೊಂದು ದ್ವಿಚಕ್ರವಾಹನದಲ್ಲಿ ಶೃಂಗೇರಿಯಿಂದ ಹೊರಟು ಜಯಪುರ ಮಾರ್ಗದಲ್ಲಿರುವ ಗಡಿಕಲ್ಲು, ಮಂಜಿನಬೆಟ್ಟ ಮೂಲಕ ಎಡಗುಂದ ತಲುಪಿದಾಗ ಸೂರ್ಯ ರಣರಣ ಸುಡುತ್ತಿದ್ದ. ಮುಗಿಲೆತ್ತರವಿದ್ದ ಗುಡ್ಡವನ್ನು ಹಳೆಯ ಗಾಡಿ ಹತ್ತುತ್ತಿರಲಿಲ್ಲ. ಅಷ್ಟರಲ್ಲಿ ಅಲ್ಲಿಗೆ ಬೈಕ್‌ನಲ್ಲಿ ಬಂದ ಗಿರಿಜನರೊಬ್ಬರು, ‘ನಿಮ್ಮ ಗಾಡಿ ಗುಡ್ಡ ಹತ್ತುವುದಿಲ್ಲ, ನನ್ನ ಹಿಂದೆ ಕುಳಿತುಕೊಳ್ಳಿ ಗುಡ್ಡ ದಾಟಿಸುವೆ’ ಎಂದು ಹೇಳಿ, ನನ್ನನ್ನು ಹಿಂಬದಿ ಕೂರಿಸಿಕೊಂಡರು. ನನ್ನ ಜತೆಗಿದ್ದವರು ಫಸ್ಟ್ ಗೇರ್‌ನಲ್ಲಿ ಹೋದರೂ ಹಿಂದಕ್ಕೆ ಹೋಗುತ್ತಿದ್ದ ಹಳೆಯ ಗಾಡಿಯಲ್ಲಿ ನಮ್ಮನ್ನು ಹಿಂಬಾಲಿಸಿದರು. ಅಲ್ಲಿಂದ ಶುರುವಾಯಿತು ನಮ್ಮ ಕಾಡಹಾದಿಯ ಪಯಣ.

ಮುಂಡೋಡಿಗೆ ಹೋಗಿ ಗಿರಿಜನರ ಮನೆ ಮುಂದೆ ನಿಂತಾಗ ‘ಎಂತ ಬಂದಿದ್ದು, ದೂರ ಆಯ್ತು ನಿಮ್ದು’ ಎಂದು ತಿಮ್ಮೇಗೌಡ (ಹೆಸರು ಬದಲಾಯಿಸಲಾಗಿದೆ) ಪ್ರಶ್ನಿಸಿದರು. ಜತೆಗಿದ್ದವರು ಪರಿಚಯ ಹೇಳಿದ ಮೇಲೆ, ‘ಹೋ... ಬನ್ನಿ ಕುತ್ಕಳಿ’ ಎಂದರು. ಎಲೆ ಅಡಿಕೆ ಕೊಟ್ಟು ಮಾತಿಗೆ ತೆರೆದುಕೊಂಡ ಅವರು, ‘ನಮ್ಮ ಕತೆ ಹೇಳುವುದಕ್ಕೆ ಏನಿದೆ? ನಮ್ಮ ಕಷ್ಟ ಆವಾಗ್ಲೂ ಇದ್ದದ್ದೇ, ಈಗಲೂ ಇದ್ದದ್ದೇ. ನಕ್ಸಲರು ಬರ್ತಾ ಇದ್ದರು. ಯಾವಾಗ್ಲೂ ಅವರು ತೊಂದರೆ ಕೊಟ್ಟಿದ್ದಿಲ್ಲ. ಅವರೇ ಅಕ್ಕಿ, ಬೇಳೆ ತರ್ತಾ ಇದ್ದರು. ಒಲೆ ಹಚ್ಚಿಕೊಳ್ಳೋಕೆ ಜಾಗ ಕೊಡಿ ಎಂದು ಹೇಳಿ ಅವರೇ ಬೇಯಿಸಿಕೊಂಡು ತಿನ್ನುತ್ತಿದ್ದರು. ಅವರು ಬಂದು ಹೋದ ಮೇಲೆ ಗುಂಪು ಕಟ್ಟಿಕೊಂಡು ಪೊಲೀಸರು ಬರ್ತಾ ಇದ್ದರು. ಬೂಟು ಹಾಕಿಕೊಂಡು ಅಡುಗೆ ಮನೆ, ದೇವರ ಮನೆ ಎನ್ನದೇ ನುಗ್ಗಿ, ಅಟ್ಟ, ಕೊಟ್ಟಿಗೆಗೆ ಹೋಗಿ ಹುಡುಕಾಡ್ತಾ ಇದ್ದರು. ‘ಯಾರೂ ಇಲ್ಲ’ ಎಂದರೂ ಇಡೀ ಮನೆ ತಡಕಾಡಿ, ಗದ್ದಲ ಎಬ್ಬಿಸಿ ಬಿಡುತ್ತಿದ್ದರು. ಹೆಂಗಸರು ಮಕ್ಕಳನ್ನು ಹೆದರಿಸುತ್ತಿದ್ದರು. ನಕ್ಸಲರು ಬಂದಾಗ ಮಾಹಿತಿ ಕೊಡದೇ ಇದ್ದರೆ ಕೋವಿಯಿಂದ ಸುಟ್ಟು ಬಿಡುತ್ತೇವೆ’ ಎಂದು ಬೆದರಿಸುತ್ತಿದ್ದರು.

‘ಹಾಗಂತ ನಾವೇನೂ ನಕ್ಸಲರಲ್ಲ, ಅವರ ಬೆಂಬಲಕ್ಕೂ ನಿಂತಿರಲಿಲ್ಲ. ರಾಷ್ಟ್ರೀಯ ಉದ್ಯಾನ ಘೋಷಣೆಯಾಗಿ ನಮ್ಮನ್ನೆಲ್ಲ ಒಕ್ಕಲೆಬ್ಬಿಸುವ ಭೀತಿಯಲ್ಲಿದ್ದಾಗ ಹೋರಾಟ ಕಟ್ಟೋಣ ಎಂದು ಹೇಳಿ ಅವರು ಬರುತ್ತಿದ್ದರು. ಅವರು ಹಾಡು ಹೇಳಿ, ಭಾಷಣ ಮಾಡಿ ನಮ್ಮನ್ನು ಹುರಿದುಂಬಿಸುತ್ತಿದ್ದರು. ಹೋರಾಟವನ್ನೂ ಮಾಡಿ ಲಾಠಿ ಏಟು ತಿಂದೆವು, ಜೈಲಿಗೂ ಹೋಗಿ ಬಂದದ್ದಾಯ್ತು. ನಕ್ಸಲರಲ್ಲಿ ಕೆಲವರು ಪೊಲೀಸರ ಗುಂಡಿಗೆ ಬಲಿಯಾದರು, ಕೆಲವರು ಶರಣಾಗತರಾದರು. ಈಗ ನಕ್ಸಲರು ಇಲ್ಲ. ಪೊಲೀಸರು ಆಗೊಮ್ಮೆ ಈಗೊಮ್ಮೆ ಬಂದು ‘ಹೇಗಿದ್ದೀರಿ ಗೌಡ್ರೆ’ ಎಂದು ಸೌಜನ್ಯದಿಂದಲೇ ವಿಚಾರಿಸುತ್ತಾರೆ. ಈಗ ಕಾಟ ಕೊಡುವುದಿಲ್ಲ’ ಎಂದು ಒಂದೇ ಉಸಿರಿಗೆ ಎಲ್ಲವನ್ನೂ ಹೇಳಿ ಮಾತು ನಿಲ್ಲಿಸಿದರು.

‘ನಕ್ಸಲರು ಇದ್ದಾಗ ಅರಣ್ಯ ಇಲಾಖೆಯವರು ಈ ಕಡೆ ಮುಖ ಹಾಕುತ್ತಿರಲಿಲ್ಲ. ಈಗ ರಾತ್ರಿ ಎಲ್ಲ ರೌಂಡ್ ಹೊಡೀತಾರೆ. ಕತ್ತಿ ಹಿಡಿಗೆ, ಕೊಡಲಿ ಕಾವಿಗೆ ಮರದ ತುಂಡು ತಂದರೆ ಕೇಸ್ ಹಾಕ್ತೀವಿ ಎನ್ನುತ್ತಾರೆ. ಮುರುಗನ ಹುಳಿ, ವಾಟೆ ಹುಳಿ ಸಂಗ್ರಹಿಸಿದರೆ, ಜೇನು ಕಿತ್ತರೆ ಕೇಸು ಹಾಕುವುದಾಗಿ ಹೆದರಿಸುತ್ತಾರೆ. ‘ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಇದ್ದೀರಿ, ಸ್ವ ಇಚ್ಛೆಯಿಂದ ಹೊರಗೆ ಹೋದರೆ ಪರಿಹಾರ ಸಿಗುತ್ತದೆ ನೋಡಿ’ ಎಂದು ಸಲಹೆ ನೀಡುತ್ತಾರೆ. ನಮ್ಮ ಹೆಸರಿನಲ್ಲಿ ಜಮೀನಿಲ್ಲ. ಕಾಡಂಚಿನಲ್ಲಿ ಒಂದಿಷ್ಟು ಅಡಿಕೆ, ಕಾಫಿ ಬೆಳೆದಿದ್ದೇವೆ. ದಾಖಲೆ ಇಲ್ಲದೆ ಇದ್ದರೆ ಪರಿಹಾರ ಸಿಗುವುದಿಲ್ಲ. ಮೂಲಸೌಕರ್ಯ ಇಲ್ಲದೆ ಇರಲೂ ಸಾಧ್ಯವಿಲ್ಲ’ ಎಂದು ತಮ್ಮ ಪರಿಸ್ಥಿತಿ ವಿವರಿಸಿದರು ಗಿರಿಜನ ಯುವಕ ಸುರೇಶಗೌಡ್ಲು.

‘ನಕ್ಸಲರು ಇದ್ದಾಗ ಪೊಲೀಸರ ಕೂಂಬಿಂಗ್ ಉದ್ದೇಶಕ್ಕೆ ಮಣ್ಣಿನ ರಸ್ತೆ, ಕೆಲವು ಕಡೆ ಸೇತುವೆ ಮಾಡಿದ್ದರು. ಈಗ ರಸ್ತೆಗೆ ಮಣ್ಣು ಹಾಕುವವರೂ ಇಲ್ಲ. ನೆಮ್ಮಾರಿನಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಲು 12 ಕಿ.ಮೀ, ತಹಶೀಲ್ದಾರ್ ಕಚೇರಿಗೆ ಹೋಗಲು 22 ಕಿ.ಮೀ. ಆಗುತ್ತದೆ. ಬಸ್ಸು ಹಿಡಿಯಬೇಕೆಂದರೆ ಕನಿಷ್ಠ 10 ಕಿ.ಮೀ. ನಡೆಯಬೇಕು. ಇಲ್ಲ ಬೈಕ್ ಇಟ್ಟುಕೊಳ್ಳಬೇಕು. ಇಂದಿಗೂ ಪರಿಸ್ಥಿತಿ ಬದಲಾಗಲಿಲ್ಲ’ ಎಂದು ನಿಟ್ಟುಸಿರಿಟ್ಟರು ಮತ್ತೊಬ್ಬ ಯುವಕ ರಮೇಶ.

ನಕ್ಸಲ್ ಚಳವಳಿಯಲ್ಲಿ ಸಕ್ರಿಯವಾಗಿದ್ದ ಹೊರ್ಲೆ ಸರೋಜ ಈಗ ಮುಖ್ಯ ವಾಹಿನಿಗೆ ಬಂದಿದ್ದಾರೆ. ಅವರ ತಾಯಿ ಮನೆ ಎಡಗುಂದದಿಂದ ನಾಲ್ಕು ಕಿ.ಮೀ.

ದೂರದಲ್ಲಿ ಬೆಟ್ಟದ ತಪ್ಪಲಿನಲ್ಲಿದೆ. ದ್ವಿಚಕ್ರ ವಾಹನವನ್ನು ಸರ್ಕಸ್‌ನಲ್ಲಿ ಓಡಿಸುವಂತೆ ಚಲಾಯಿಸಿಕೊಂಡು ಹೊರ್ಲೆಗೆ ಹೋದಾಗ, ಸರೋಜ ಅವರ ಅಣ್ಣ ಸತೀಶ ಅಡಿಕೆ ಗೊನೆ ತುಂಬಿದ್ದ ಬುಟ್ಟಿ ಹೊತ್ತುಕೊಂಡು ಮನೆಗೆ ಹೋಗುತ್ತಿದ್ದರು.

‘ಏಕೆ ನಿಮ್ಮ ತಂಗಿ ನಕ್ಸಲೈಟ್ ಆಗಿದ್ದು’ ಎಂದಿದ್ದಕ್ಕೆ, ‘ಇಲ್ಲಿ ಕೆಲಸ ಇಲ್ಲ, ಒಕ್ಕಲೆಬ್ಬಿಸ್ತಾ ಇದ್ದಾರೆ, ಇದರ ವಿರುದ್ಧ ಹೋರಾಟ ಮಾಡ್ತೀನಿ ಎಂದು ಹೇಳುತ್ತಿದ್ದ ಸರೋಜ ಆಮೇಲೆ ಮನೆ ಕಡೆ ಬರೋದೆ ಬಿಟ್ಟಳು. ಅವಳು ನಕ್ಸಲ್ ಪ್ಯಾಕೇಜ್ ತೆಗೆದುಕೊಂಡು ಮುಖ್ಯವಾಹಿನಿಗೆ ಬರುವವರೆಗೂ ಆಕೆ ನಕ್ಸಲ್ ಚಳವಳಿಗೆ ಸೇರಿದ್ದಾಳೆ ಎಂಬುದು ಗೊತ್ತಿರಲಿಲ್ಲ. ಹಾಗಂತ ಎಂತ ಬದಲಾವಣೆಯೂ ಆಗಿಲ್ಲ’ ಎಂದು ಸತೀಶ್ ಪ್ರತಿಕ್ರಿಯಿಸಿದರು. ‘ನಕ್ಸಲರು ಓಡಾಡುತ್ತಿದ್ದಾಗ ಮುಂಡೋಡಿ, ಕಡಗುಂಡಿ, ದರ್ಕಾಸು, ಹೊರ್ಲೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕಂಬ ಹಾಕಿ, ತಂತಿ ಎಳೆದಿದ್ದರು. ಕರೆಂಟ್ ಬರಲೇ ಇಲ್ಲ. ಈಗ ತಂತಿ ತುಕ್ಕುಹಿಡಿದು ಬಿದ್ದು ಹೋಗಿದೆ, ಕಂಬ ಮುರಿದುಹೋಗಿವೆ’ ಎಂದು ಹೇಳಿದರು ಅವರು. ಮುರಿದುಬಿದ್ದಿರುವ ಕಂಬಗಳನ್ನು ಸಂಕಕ್ಕೆ (ನೀರು ದಾಟಲು ಮಾಡಿರುವ ಕಿರುಸೇತುವೆ) ಹಾಗೂ ತಂತಿಯನ್ನು ಸಂಕದ ಬದಿಯ ಆಸರೆಗಾಗಿ ಹಗ್ಗದ ಬದಲಿಗೆ ಬಳಸಿರುವುದು ಈ ಎಲ್ಲ ಪ್ರದೇಶಗಳಲ್ಲೂ ಸಾಮಾನ್ಯವಾಗಿತ್ತು.

ಎಡಗುಂದದಲ್ಲಿ ಸಿಕ್ಕಿದ ದ್ಯಾವೇಗೌಡ ಅವರನ್ನು ಮಾತಿಗೆ ಎಳೆದಾಗ, ‘ನಕ್ಸಲ್ ಪ್ಯಾಕೇಜ್ ಹೆಸರಿನಲ್ಲಿ ಈ ಹಳ್ಳಿಗಳಿಗೆ ಹಣ ಮಂಜೂರಾಗಿತ್ತು. ಆದರೆ, ಇಲ್ಲಿ ಖರ್ಚು ಮಾಡಬೇಕಾದ ಹಣವನ್ನು ಒಕ್ಕಲಿಗರು, ಬ್ರಾಹ್ಮಣ ಜಮೀನ್ದಾರರು ಇರುವ ಮಲ್ನಾಡ್, ವಳಲೆ ಮಾವಿನಕಾಡಿಗೆ ನೀಡಲಾಗಿದೆ. ಅಲ್ಲೆಲ್ಲ ರಸ್ತೆಗಳು ಮೂಲಸೌಕರ್ಯ ಚೆನ್ನಾಗಿವೆ. ಎಲ್ಲಿಗೋ ಸೇರಬೇಕಾದ ಹಣವನ್ನು ಇನ್ನೆಲ್ಲಿಗೋ ಕೊಟ್ಟಿದ್ದಾರೆ. ಯಾರನ್ನು ಕೇಳುವುದು’ ಎಂದು ಪ್ರಶ್ನಿಸಿದರು.

ಅಲ್ಲಿಂದ ಮೆಣಸಿನಹಾಡ್ಯ ಕಡೆಗೆ ಸಾಗಿತು ನಮ್ಮ ಪಯಣ. ಸಾಕೇತ್ ರಾಜನ್ ಹತ್ಯೆಯಾದ ಪ್ರದೇಶದಲ್ಲಿ ಸುತ್ತಾಡಿದಾಗ ಹೆಸರು ಹೇಳಲು ಇಚ್ಛಿಸದ

ಯುವಕರು, ‘ನಕ್ಸಲರು ಬಂದಿದ್ದರಿಂದಾಗಿ ನಮ್ಮ ಊರಿಗೆ ಕೆಟ್ಟ ಹೆಸರು ಬಂತು. ಆದರೆ, ಇಲ್ಲಿ ಎನ್‌ಕೌಂಟರ್ ಆದಮೇಲೆ ಅನೇಕ ಅಭಿವೃದ್ಧಿ ಕೆಲಸಗಳು

ಆಗಿವೆ’ ಎಂದು ಹೇಳಿದರು.

ನಕ್ಸಲರಿಗೆ ಆಶ್ರಯ ಕೊಟ್ಟಿದ್ದಾರೆ ಎಂದು ಆರೋಪಿಸಿ ಅಮ್ಮಡ್ಲುವಿನ ರಾಮೇಗೌಡರ ಮನೆಯ ಮೇಲೆ ದಾಳಿ ಮಾಡಿದ್ದ ಪೊಲೀಸರು ರಾಮೇಗೌಡ್ಲು, ಕಾವೇರಮ್ಮ, ಪರಮೇಶ್ವರ್, ಸುಂದರೇಶ ಹಾಗೂ ನಕ್ಸಲ್ ಚಳವಳಿಯಲ್ಲಿದ್ದ ಗೌತಮ್ ಸೇರಿ ಐವರನ್ನು ಹತ್ಯೆ ಮಾಡಿದ್ದರು. ಈ ಮನೆಯನ್ನು ಹುಡುಕ ಹೊರಟರೆ ಅದು ಪಾಳು ಬಿದ್ದು, ಗಿಡಗಂಟೆ ಬೆಳೆದು ನಿಂತಿದ್ದವು. ಕೂಗಳತೆ ದೂರದಲ್ಲಿರುವ ಮನೆಗಳ ಜನರು ಮಾತನಾಡಲು ಹಿಂದೇಟು ಹಾಕಿದರು.

ಎರಡನೇ ದಿನದ ನಮ್ಮ ಯಾತ್ರೆ ಹಾಗಲಗಂಚಿಗೆ ಮುಖ ಮಾಡಿತು. ಅಲ್ಲಿ ಮಾತಿಗೆ ಸಿಕ್ಕಿದ ಗುರುಮೂರ್ತಿ ಹಾಗಲಗಂಚಿ, ‘ಬೆಂಗಳೂರಿನಲ್ಲಿದ್ದ ನಾನು ಕೃಷಿ ಮಾಡಬೇಕು ಎಂಬ ಹಂಬಲಕ್ಕೆ ಬಿದ್ದು, ಉಳಿಸಿದ್ದ ಕಾಸು ಜೋಡಿಸಿ ಜಮೀನು ಖರೀದಿಸಿದೆ. ಇಲ್ಲಿ ಜಮೀನು ಮಾಡಿ ಹೊಟ್ಟೆ ಬಟ್ಟೆಗೆ ಹೊಂದಿಸಿಕೊಳ್ಳು

ವಷ್ಟರಲ್ಲಿ ರಾಷ್ಟ್ರೀಯ ಉದ್ಯಾನ ಯೋಜನೆ ಘೋಷಣೆಯಾಯಿತು. ಆದಿವಾಸಿ ಗಿರಿಜನ ಹಿತರಕ್ಷಣಾ ಸಮಿತಿ ಕಟ್ಟಿಕೊಂಡು ಗಿರಿಜನರ ಜತೆಗೆ ಹೋರಾಟಕ್ಕೆ ನಿಂತೆವು. ಅದು ಯಾವಾಗ ಅಲ್ಲಿಗೆ ನಕ್ಸಲರು ನುಸುಳಿದರೋ ನಮಗೆ ಗೊತ್ತೇ ಆಗಲಿಲ್ಲ’ ಎಂದು ಹೇಳಿದರು.

‘ರಾಷ್ಟ್ರೀಯ ಉದ್ಯಾನ ಘೋಷಣೆಯಾಗದೇ ಇದ್ದರೆ ನಕ್ಸಲರು ಇಲ್ಲಿಗೆ ಬರುತ್ತಲೇ ಇರಲಿಲ್ಲ. ಯಾವುದೇ ಹೋರಾಟದಲ್ಲಿ ಭಾಗಿಯಾಗದೇ ಇದ್ದರೂ ಬೆದರಿಸುವ ಉದ್ದೇಶಕ್ಕಾಗಿ ನನ್ನ ತಮ್ಮ ರವಿಯನ್ನು ಎರಡು ಬಾರಿ ಪೊಲೀಸರು ಜೈಲಿಗೆ ಕಳುಹಿಸಿದರು. ನಮಗೆಲ್ಲ ನಕ್ಸಲೈಟ್ ಎಂದು ಹಣೆಪಟ್ಟಿ ಕಟ್ಟಿದರು. ಹಾಗಲಗಂಚಿಯಲ್ಲಿ 2–3 ಮನೆಗಳಿದ್ದವು. ಈಗ ಮನೆಗಳ ಸಂಖ್ಯೆ ಹೆಚ್ಚಾಗಿದೆ. ನಮ್ಮಲ್ಲಿ ರಾಜಕೀಯ ಪ್ರಜ್ಞೆ, ಹೋರಾಟದ ಮನೋಭಾವ ಮೂಡಿದ್ದರಿಂದಾಗಿ ಸರ್ಕಾರ ರಸ್ತೆ ಮಾಡಿಕೊಟ್ಟಿದೆ. ಕರೆಂಟ್ ಬಂದಿದೆ. ಆದರೆ, ಮೊದಲಿನಿಂದ ಅಸ್ತಿತ್ವದಲ್ಲಿರುವ ಪಕ್ಕದ ಹುಲ್ತಾಳಿಗೆ ಇನ್ನೂ ಕರೆಂಟ್ ಬಂದಿಲ್ಲ. ಇದು ನಕ್ಸಲೈಟ್ ಬಂದ ಕಾರಣಕ್ಕೆ ಆಗಿದ್ದೋ ಅಲ್ಲವೋ ಗೊತ್ತಿಲ್ಲ’ ಎಂದು ಪ್ರತಿಪಾದಿಸಿದರು ಗುರುಮೂರ್ತಿ.

ಅವರ ಮನೆಯಿಂದ ಹೊರಟು ಕುಂಚೇಬೈಲು, ತೆಕ್ಕೂರು ಮಾರ್ಗವಾಗಿ ಸೀದಾ ಹೋಗಿದ್ದು ನಕ್ಸಲ್ ಚಳವಳಿಯ ಈಗಿನ ನಾಯಕ ಎಂದು ಪೊಲೀಸರು ಬಿಂಬಿಸುತ್ತಿರುವ ಬಿ.ಜಿ. ಕೃಷ್ಣಮೂರ್ತಿ ಮನೆಗೆ. ಮೇಲ್ ನೆಮ್ಮಾರಿನಿಂದ ಮೂರು ಕಿ.ಮೀ. ದೂರದಲ್ಲಿರುವ ಕಾನು ಎಂಬ ಹಳ್ಳಿಯಲ್ಲಿ ಕೃಷ್ಣಮೂರ್ತಿ ತಂದೆ ಗೋಪಾಲಯ್ಯ ಮತ್ತು ತಾಯಿ ಸುಶೀಲಮ್ಮ ಮಾತ್ರ ಇದ್ದಾರೆ. 80 ವರ್ಷದ ಗೋಪಾಲಯ್ಯ ಅವರಿಗೆ ಈಗ ಗಂಟಲು ಕ್ಯಾನ್ಸರ್ ಕಾಣಿಸಿಕೊಂಡಿದೆ. ತಾಯಿ ಹಣ್ಣಾಗಿದ್ದಾರೆ. ‘ಏನನ್ನಿಸುತ್ತೆ ನಿಮ್ಮ ಮಗನ ಬಗ್ಗೆ’ ಎಂದು ಕೇಳಿದ್ದಕ್ಕೆ, ಸ್ವರ ಹೊರಡದ ಗಂಟಲಿನಲ್ಲೇ ಉತ್ತರಿಸಿದ ಅವರು ‘ಲಾ ಮಾಡುವುದಾಗಿ ಶಿವಮೊಗ್ಗಕ್ಕೆ ಹೋದ ಅವನು ಮತ್ತೆ ಮನೆಯ ಮುಖ ನೋಡಿಲ್ಲ. ಆತನ ದಾರಿ ಕಾದು ಕಾದು ಸಾಕಾಗಿದೆ. ಏನೋ ಬದಲಾವಣೆ ಮಾಡುತ್ತಾನಂತೆ. ಅದೇನು ಬದಲಾವಣೆಯಾಗುತ್ತದೋ ಗೊತ್ತಿಲ್ಲ. ನಮ್ಮನ್ನು ಕೇಳಿ ಅವನು ಮಾಡಿಲ್ಲ. ನಮ್ಮ ಹಣೆಬರಹ’ ಎಂದು ನೋವು ತುಂಬಿಕೊಂಡರು.

ಅಷ್ಟರಲ್ಲಿ ಬೆಲ್ಲದ ಕಾಫಿ ಹಿಡಿದು ಬಂದ ಸುಶೀಲಮ್ಮ, ‘ಬೆಂಗಳೂರಿನವರು ಅಂತೀರಿ, ನಿಮಗೆಲ್ಲಾದರೂ ಆತ ಸಿಕ್ಕಿದರೆ ಅಮ್ಮ ಕಾಯುತ್ತಿದ್ದಾಳೆ, ಮನೆಗೆ ಹೋಗು ಎಂದು ಆತನಿಗೆ ಬುದ್ಧಿ ಹೇಳಿ, ಆಯ್ತಾ’ ಎಂದು ಹೇಳುತ್ತಲೇ ಕಣ್ಣಂಚಿನಲ್ಲಿ ನೀರು ತುಂಬಿಕೊಂಡರು.

ಅಲ್ಲಿಂದ ಎಸ್.ಕೆ. ಬಾರ್ಡರ್ ಕಡೆಗೆ ಹೊರಟೆವು. ನಕ್ಸಲರು ಒಡೆದು ಹಾಕಿದ್ದ ತನಿಕೋಡು ಫಾರೆಸ್ಟ್ ಚೆಕ್‌ಪೋಸ್ಟ್ ಈಗ ಹೊಸ ಬಣ್ಣದಲ್ಲಿ ಮಿನುಗುತ್ತಿತ್ತು. ಅಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಮ್ಮನ್ನು ಅಡ್ಡಗಟ್ಟಿದರು. ಕೆರೆಕಟ್ಟೆಯ ಇಮಾಂಸಾಬರ ಮನೆಗೆ ಹೋಗಬೇಕು ಎಂದು ಹೇಳಿ ಒಳಪ್ರವೇಶಿಸಿದೆವು. (ರಾಷ್ಟ್ರೀಯ ಉದ್ಯಾನದ ಒಳಗೆ ಇರುವ ಈ ಪ್ರದೇಶದಲ್ಲಿ ಎರಡು ಚೆಕ್‌ಪೋಸ್ಟ್‌ಗಳಿದ್ದು ಒಂದೂವರೆ ಗಂಟೆಯ ಒಳಗೆ ಒಂದೆಡೆ ಪ್ರವೇಶಿಸಿ, ಮತ್ತೊಂದೆಡೆ ಹೊರಗೆ ಹೋಗಬೇಕು. ಇಲ್ಲದಿದ್ದರೆ ದಂಡ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ).

ಅಲ್ಲಿಂದ ಸೀದಾ ನಕ್ಸಲರು ಓಡಾಡುತ್ತಿದ್ದ ಶೀರ್ಲು, ತಳ್ಸಾರಿಗೆ ನಮ್ಮ ಯಾನ ಸಾಗಿತು. ಶೀರ್ಲುವಿನಲ್ಲಿ ಎದುರಾದ ಶಿವಕುಮಾರ್, ‘ಡಿಗ್ರಿ ಮಾಡಿದ್ದರೂ ಕೆಲಸ ಸಿಕ್ಕಿಲ್ಲ. ಇರುವ ಜಮೀನಿಗೆ ದಾಖಲೆ ಇಲ್ಲ. ಅರಣ್ಯ ಹಕ್ಕು ಕಾಯ್ದೆಯಡಿ ಮಂಜೂರು ಮಾಡಿ ಎಂದರೆ ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಎನ್ನುತ್ತಿದ್ದಾರೆ. ಅರಣ್ಯ ವ್ಯಾಪ್ತಿಯಲ್ಲಿರುವುದರಿಂದ ಬಗರ್‌ಹುಕುಂ ಅಡಿ ಜಮೀನು ಮಂಜೂರು ಮಾಡಲು ಬರುವುದಿಲ್ಲ ಎನ್ನುತ್ತಿದ್ದಾರೆ. ಸ್ವಯಂ ಪ್ರೇರಣೆಯಿಂದ ಹೊರಗೆ ಹೋಗುತ್ತೇವೆ ಎಂದು ಅರ್ಜಿ ಕೊಟ್ಟರೆ ಪರಿಹಾರ ಕೊಡುವುದಾಗಿ ಅರಣ್ಯ ಇಲಾಖೆಯವರು ಹೇಳುತ್ತಾರೆ. ದಾಖಲೆಯೇ ಇಲ್ಲದೆ ಇರುವುದರಿಂದ ಪರಿಹಾರ ₹2 ಲಕ್ಷದಿಂದ ₹3 ಲಕ್ಷ ಸಿಗಬಹುದು. ನಕ್ಸಲರು ಇದ್ದಾಗ ಅರಣ್ಯ ಇಲಾಖೆಯವರು ಬರುತ್ತಿರಲಿಲ್ಲ. ಆದರೆ ಈಗ ಒಬ್ಬೊಬ್ಬರನ್ನೇ ಒಕ್ಕಲೆಬ್ಬಿಸಲಾಗುತ್ತಿದೆ. ಮುಂದೇನು ಮಾಡುವುದು ಗೊತ್ತಾಗುತ್ತಿಲ್ಲ’ ಎಂದರು. ಗುರ್ಗಿ, ತಳ್ಸಾರು, ಗುಲಗುಂಜಿಮನೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಯಿತು.

ಕೆರೆಕಟ್ಟೆಯಲ್ಲಿ ಸಿಕ್ಕಿದ ಗಿರಿಜನ ಯುವಕರನ್ನು ಮಾತನಾಡಿಸಿದಾಗ, ‘ಸುತ್ತಲೂ ಕೋಟೆ ಕಟ್ಟುತ್ತಾ ಬರುತ್ತಿದ್ದಾರೆ. ನಾವು ಹೊರಗೆ ಹೋಗುವುದನ್ನು ಅನಿವಾರ್ಯವಾಗಿಸುತ್ತಿದ್ದಾರೆ. ಆದರೆ, ಹೊರಗೆ ಹೋಗಿ ಬದುಕು ಮಾಡುವುದು ನಮಗೆ ಗೊತ್ತಿಲ್ಲ. ಒತ್ತುವರಿ ಜಮೀನಿನಲ್ಲಿ ಹೇಗೋ ಜೀವನ ಸಾಗಿಸುತ್ತಿದ್ದೇವೆ. ಈಗ ಅಂಗಡಿ ತೆರವು ಮಾಡಿಸುತ್ತಿದ್ದಾರೆ, ಬಸ್ ಓಡಾಟ ನಿರ್ಬಂಧಿಸುವ ಸಾಧ್ಯತೆಯೂ ಇದೆ. ಹೀಗೇ ಆದಲ್ಲಿ ಮೂಲಸೌಕರ್ಯ ಇಲ್ಲದೇ ಪರಿತಪಿಸಬೇಕಾಗುತ್ತದೆ. ನಕ್ಸಲರು ಇದ್ದಾಗ ಇಂತಹ ಸಮಸ್ಯೆ ಎದುರಾಗಿರಲಿಲ್ಲ’ ಎಂದು ತಮ್ಮ ಅಳಲು ತೋಡಿಕೊಂಡರು.

ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ ಒಕ್ಕೂಟದ ಅಧ್ಯಕ್ಷರಾಗಿದ್ದ ಕಲ್ಕುಳಿ ವಿಠಲ್ ಹೆಗ್ಡೆ, ‘ನಕ್ಸಲರು ಬಂದಿದ್ದರಿಂದಾಗಿ ಗಿರಿಜನರು ಸಮಸ್ಯೆ ಅನುಭವಿಸಿದರು. ನಮ್ಮ ಹೋರಾಟಕ್ಕೂ ಹಿನ್ನಡೆಯಾಯಿತು. ಆದಿವಾಸಿಗಳನ್ನೆಲ್ಲ ನಕ್ಸಲೈಟರು ಎಂದು ಬಿಂಬಿಸಲಾಯಿತು. ಆದಿವಾಸಿಗಳ ಜತೆ ಸರ್ಕಾರ ಎಂದೂ ಮಾತುಕತೆಯಾಡಲೇ ಇಲ್ಲ. ನಕ್ಸಲ್ ಪ್ಯಾಕೇಜ್ ಘೋಷಿಸಿತೇ ವಿನಾ ಆದಿವಾಸಿಗಳಿಗೆ ಪ್ಯಾಕೇಜ್ ಘೋಷಿಸಲೇ ಇಲ್ಲ. ಆದಿವಾಸಿಗಳ ಪ್ರಜಾತಾಂತ್ರಿಕ ಹೋರಾಟವನ್ನು ಸರ್ಕಾರ ದಮನ ಮಾಡಿತು. ಈಗ ನಕ್ಸಲರು ಇಲ್ಲ. ಗಿರಿಜನರ ಮೂಗು ಒತ್ತಿ ಹಿಡಿದು ಒಕ್ಕಲೆಬ್ಬಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ನಕ್ಸಲರು ಇದ್ದಾರೆ ಎಂದು ಪೊಲೀಸರು ಸುಳ್ಳು ಹೇಳುತ್ತಿದ್ದಾರೆ. ಇಲ್ಲವೆಂದರೆ ನಕ್ಸಲ್ ನಿಗ್ರಹದಳ ವಾಪಸ್ ಹೋಗಬೇಕಾಗುತ್ತದೆ. ಅವರಿಗೆ ನೀಡುತ್ತಿರುವ ಎರಡು ಪಟ್ಟು ಸಂಬಳ ನಿಂತು ಹೋಗುತ್ತದೆ. ಅದಕ್ಕಾಗಿ ನಕ್ಸಲರ ಹೆಸರು ಬಳಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

‘ನಕ್ಸಲ್‌ ಓಡಾಟ ಇದೆ ಎಂದು ಹೇಳಲಾದ ಪ್ರದೇಶಗಳಲ್ಲಿ ಕೂಂಬಿಂಗ್‌ ಆಪರೇಷನ್ ನಿರಂತರವಾಗಿ ನಡೆಯುತ್ತಿದೆ. ‘ಅಲ್ಲಿ ನೋಡಿದ್ದೇವೆ, ಇಲ್ಲಿ ನೋಡಿದ್ದೇವೆ’ ಎಂದು ಕೆಲವರು ಹೇಳುತ್ತಿದ್ದಾರೆ. ನಕ್ಸಲರು ಇದ್ದಾರೆ ಎಂಬ ಖಚಿತ ಮಾಹಿತಿ ನಮಗೆ ಸಿಕ್ಕಿಲ್ಲ’ ಎಂದು ನಕ್ಸಲ್ ನಿಗ್ರಹ ದಳದ (ಎಎನ್ಎಫ್‌) ಎಸ್‌ಪಿ ಕೆ.ಟಿ. ಬಾಲಕೃಷ್ಣ ಹೇಳಿದರು.

ಹೆಚ್ಚಿನ ಸಂಬಳ ಪಡೆಯಲು ನಕ್ಸಲರು ಇದ್ದಾರೆ ಎಂದು ಎಎನ್ಎಫ್‌ ಸುಳ್ಳು ಹೇಳುತ್ತಿದೆ ಎಂಬ ಟೀಕೆ ಇದೆಯಲ್ಲ ಎಂಬ ಪ್ರಶ್ನೆಗೆ, ‘ಯಾರೊಬ್ಬರೂ ಮನೆ ಮಠ ಬಿಟ್ಟು ಕಾಡಿನಲ್ಲಿ ಇರಲು ಇಷ್ಟಪಡುವುದಿಲ್ಲ. ಅದು ದುರುದ್ದೇಶದ ಆಪಾದನೆ, ಅಪ್ಪಟ ಸುಳ್ಳಿನಿಂದ ಕೂಡಿದ ಟೀಕೆ’ ಎಂದವರು ಪ್ರತಿಕ್ರಿಯಿಸಿದರು.

ಮುಂಡೋಡಿ ಗ್ರಾಮದಲ್ಲಿ ಪಾಳುಬಿದ್ದಿರುವ ಕಿರು ಜಲವಿದ್ಯುತ್‌ ಉತ್ಪಾದನಾ ಘಟಕ

ವಿದ್ಯುತ್‌ ಉತ್ಪಾದನೆ ಘಟಕ ಸ್ಥಗಿತ

ನಕ್ಸಲ್‌ ಚಳವಳಿ ಜೋರಾಗಿದ್ದಾಗ ಗಿರಿಜನ ಹಾಡಿಗಳಿಗೆ ವಿದ್ಯುತ್ ಪೂರೈಸಲು ತಲಾ ₹ 9 ಲಕ್ಷ ಖರ್ಚು ಮಾಡಿ ಮುಂಡೋಡಿ, ದರ್ಕಾಸು, ಅಮ್ಮಡ್ಲು, ಕಡಗುಂಡಿ, ಹೊರ್ಲೆ, ಎಡಗುಂದದಲ್ಲಿ ಕಿರು ಜಲವಿದ್ಯುತ್‌ ಉತ್ಪಾದನಾ ಘಟಕ ಆರಂಭಿಸಲಾಗಿತ್ತು. ಘಟಕದಲ್ಲಿ ಉತ್ಪಾದನೆಯಾಗುತ್ತಿದ್ದ ತಲಾ  5 ಕಿಲೊವಾಟ್ ವಿದ್ಯುತ್‌ನಿಂದ ಎಲ್ಲರ ಮನೆಯಲ್ಲೂ ಬೆಳಕಿತ್ತು. ನಕ್ಸಲರು ಕಾಡು ತೊರೆದ ಮೇಲೆ ಈ ಘಟಕಗಳಲ್ಲಿದ್ದ ಮೋಟಾರ್‌ಗಳನ್ನು ಅದನ್ನು ಸ್ಥಾಪಿಸಿದವರು ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ಈಗ ವಿದ್ಯುತ್ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.