ಗುರುವಾರ , ಫೆಬ್ರವರಿ 25, 2021
24 °C

ವಿಶ್ವದಾದ್ಯಂತ ಡಿಜಿಟಲ್‌ ಕರೆನ್ಸಿ ಸದ್ದುಗದ್ದಲ

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ವಿಶ್ವದಾದ್ಯಂತ ಡಿಜಿಟಲ್‌ ಕರೆನ್ಸಿ ಸದ್ದುಗದ್ದಲ

ಬೆಂಗಳೂರು ಸೇರಿದಂತೆ ವಿಶ್ವದ ಮಹಾನಗರಗಳಲ್ಲಿ ಬಿಟ್‌ಕಾಯಿನ್‌ಗಳು (bitcoin) ಅಂತರ್ಜಾಲದಲ್ಲಿ ಇದ್ದುಕೊಂಡೇ ಭಾರಿ ಸದ್ದು ಮಾಡುತ್ತಿವೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಈಚೆಗೆ ದೇಶದ 6 ನಗರಗಳಲ್ಲಿನ 9 ಬಿಟ್‌ಕಾಯಿನ್‌ ಷೇರು ವಿನಿಮಯ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಕಾನೂನಿನ ಮಾನ್ಯತೆ ಇಲ್ಲದ ಡಿಜಿಟಲ್‌ ಕರೆನ್ಸಿ ವಹಿವಾಟಿನ ವಿರುದ್ಧ ನಡೆದ ಮೊದಲ ಕಾರ್ಯಾಚರಣೆ ಇದಾಗಿದೆ.

ಇವುಗಳ ವಹಿವಾಟಿಗೆ ಕಡಿವಾಣ ವಿಧಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲಾಗಿದೆ. ಈ ಬಗ್ಗೆ ವಿವರಣೆ ನೀಡಲು ಕೇಂದ್ರ ಸರ್ಕಾರ ಮತ್ತು ಆರ್‌ಬಿಐಗೆ ಕೋರ್ಟ್‌ ಸೂಚನೆ ನೀಡಿದೆ. ಷೇರು ನಿಯಂತ್ರಣ ಮಂಡಳಿ ಮತ್ತು ಆರ್‌ಬಿಐ ಈ ನಿಟ್ಟಿನಲ್ಲಿ ನಿಯಮಗಳನ್ನು ರೂಪಿಸಲು ಮುಂದಾಗಿವೆ.

ಹೇಗಿದೆ ವಹಿವಾಟು?

ವಿಶ್ವದ ಇತರೆಡೆಗಳಲ್ಲಿನ ಷೇರುಪೇಟೆಗಳಲ್ಲಿ ಇತ್ತೀಚೆಗೆ ಬಿರುಸಿನ ವಹಿವಾಟು ನಡೆಯುತ್ತಿದೆ. ಡಿಜಿಟಲ್‌ ಕರೆನ್ಸಿ ವಾಲೆಟ್‌ ಒದಗಿಸುವ ಅತಿದೊಡ್ಡ ಸಂಸ್ಥೆಯಾಗಿರುವ ಕಾಯಿನ್‌ಬೇಸ್‌ನಲ್ಲಿ (Coinbase) ಅತಿಯಾದ ಚಟುವಟಿಕೆಯಿಂದಾಗಿ ಅಂತರ್ಜಾಲ ತಾಣ ಸ್ಥಗಿತಗೊಂಡಿತ್ತು. ಒಂದು ಕೋಟಿಗೂ ಹೆಚ್ಚು ಗ್ರಾಹಕರು ತಮ್ಮ ಖಾತೆಯ ಮಾಹಿತಿ ಸಿಗದೆ ತೊಂದರೆಗೆ ಒಳಗಾಗಿದ್ದರು. ವಿಶ್ವದ ಅತಿದೊಡ್ಡ ಬಿಟ್‌ಕಾಯಿನ್‌ ಷೇರುಪೇಟೆಯಾಗಿರುವ ಬಿಟ್‌ಫಿನೆಕ್ಸ್‌ (Bitfinex) ಕೂಡ ಒತ್ತಡ ನಿರ್ವಹಿಸಲಿಕ್ಕಾಗದೆ ವಹಿವಾಟು ಸ್ಥಗಿತಗೊಳಿಸಿತ್ತು. ಒಂದು ವಾರದ ಹಿಂದೆ ಐದು ಲಕ್ಷಕ್ಕೂ ಹೆಚ್ಚು ಹೊಸ ಬಳಕೆದಾರರು ಬಿಟ್‌ಕಾಯಿನ್‌ ವಾಲೆಟ್‌ ಖಾತೆ ಆರಂಭಿಸಿದ್ದಾರೆ. ಇವೆಲ್ಲವೂ ಈ ಕರೆನ್ಸಿ ಸೃಷ್ಟಿಸಿರುವ ಧಾವಂತ ಮತ್ತು ಅವಾಂತರಕ್ಕೆ ತಾಜಾ ನಿದರ್ಶನಗಳಾಗಿವೆ.

2009ರಲ್ಲಿಯೇ ಚಲಾವಣೆಗೆ ಬಂದಿರುವ ಈ ಡಿಜಿಟಲ್ ರೂಪದ ಪರ್ಯಾಯ ಕರೆನ್ಸಿಗೆ ಇದುವರೆಗೂ ವಿಶ್ವದ ಯಾವುದೇ  ಸರ್ಕಾರ ಮಾನ್ಯತೆ ನೀಡಿಲ್ಲ. ಆದಾಗ್ಯೂ ಇದರ ವಹಿವಾಟು ಅವ್ಯಾಹತವಾಗಿ ನಡೆದಿದೆ. ಹೂಡಿಕೆದಾರರು, ವರ್ತಕರು ಮತ್ತು ಅಕ್ರಮ ವಹಿವಾಟು ನಡೆಸುವವರಲ್ಲಿ ಇದರ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಯುರೋಪಿನ ಕೆಲ ದೇಶಗಳಲ್ಲಿ ಬಿಟ್‌ಕಾಯಿನ್‌ ಎಟಿಎಂಗಳೂ ಇವೆ.

ಏನಿದು ಬಿಟ್ ಕಾಯಿನ್?

ಇದೊಂದು ವಿಶ್ವದ ಮೊದಲ, ಯಾರ ಅಂಕೆಗೂ ಸಿಗದ ವಿಕೇಂದ್ರೀಕೃತ ಖಾಸಗಿ ಡಿಜಿಟಲ್‌ ಕರೆನ್ಸಿ. ಇದಕ್ಕೆ ಭೌತಿಕ ಮುಖಬೆಲೆ ಇಲ್ಲ. ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿ ಇರುವ ಕರೆನ್ಸಿಗಳಿಗೆ (ಡಾಲರ್, ಪೌಂಡ್, ರೂಪಾಯಿ) ಪರ್ಯಾ­ಯವಾಗಿ ಡಿಜಿಟಲ್ ರೂಪದಲ್ಲಿ ಇರುವ ಮತ್ತು ಇಂಟರ್‌ನೆಟ್‌ನಲ್ಲಿ ಮಾತ್ರ ವಹಿವಾಟು ನಡೆಸಬಹುದಾದ ಕರೆನ್ಸಿ­ಗಳಿಗೆ ‘ಬಿಟ್ ಕಾಯಿನ್’ ಎನ್ನುತ್ತಾರೆ. ಬೇರೆ, ಬೇರೆ ಹೆಸರಿನಲ್ಲಿ ಇಂತಹ ಕರೆನ್ಸಿಗಳು ಬಳಕೆಗೆ ಬಂದಿದ್ದರೂ, ಹೂಡಿಕೆದಾರರಲ್ಲಿ ಬಿಟ್‌ಕಾಯಿನ್‌ ಹೆಚ್ಚು ಜನಪ್ರಿಯವಾಗಿದೆ.

ನಮ್ಮ ಕಿಸೆ, ಪರ್ಸ್‌ನಲ್ಲಿ ಇರುವ ನಾಣ್ಯ ಅಥವಾ ನೋಟುಗಳಂತೆ ಈ ಕರೆನ್ಸಿಗೆ ಭೌತಿಕ ಸ್ವರೂಪ ಇಲ್ಲ. ಇದು ಅಂತರ್ಜಾಲದಲ್ಲಿಮಾತ್ರ ಅಸ್ತಿತ್ವದಲ್ಲಿ ಇರುತ್ತದೆ. ನಮ್ಮ ಆರ್‌ಬಿಐನಂತಹ ಇತರ ಕೇಂದ್ರೀಯ ಬ್ಯಾಂಕ್‌ ಮತ್ತು ಸರ್ಕಾರಗಳು ಇವುಗಳನ್ನು ಮುದ್ರಿಸುವುದಿಲ್ಲ. ಅಂದರೆ, ಇವು ಚಲಾವಣೆಯಲ್ಲಿ ಇರುವ ಮಾನ್ಯತೆ ಪಡೆದ ಕರೆನ್ಸಿ ಆಗಿರುವುದಿಲ್ಲ. ಹೂಡಿಕೆದಾರರ ಖರೀದಿ ಮತ್ತು ಮಾರಾಟ ಆಧರಿಸಿ ಇವುಗಳ ಬೆಲೆ ನಿಗದಿಯಾಗುತ್ತದೆ. ತೆರಿಗೆ ಪಾವತಿಸಲು, ಸಾಲ ಮರುಪಾವತಿಸಲೂ ಇವುಗಳನ್ನು ಬಳಸುವಂತಿಲ್ಲ. ಯುರೋಪಿನ ಕೆಲ ದೇಶಗಳಲ್ಲಿ ಬಿಟ್‌ಕಾಯಿನ್‌ ಎಟಿಎಂಗಳಿವೆ. ಈ ಎಟಿಎಂಗಳು ವರ್ಚುವಲ್‌ ಟೋಕನ್ಸ್‌ ನೀಡುತ್ತವೆ.

ಬಳಕೆ ಹೇಗೆ?

ಮೊಬೈಲ್ ಫೋನ್‌ಗಳನ್ನೇ ಬಿಟ್‌ಕಾಯಿನ್‌ ಡೆಬಿಟ್‌ ಕಾರ್ಡ್‌ನಂತೆ ಬಳಸಲೂ ಅವಕಾಶ ಇದೆ. ಇದಕ್ಕೆ ಯಾರ ಸಮ್ಮತಿಯೂ ಬೇಕಾಗಿಲ್ಲ. ಗಡಿಯಾಚೆಗಿನ ವಹಿವಾಟನ್ನೂ ಇವುಗಳ ಮೂಲಕ ಸುಲಭವಾಗಿ ನಿರ್ವಹಿಸಬಹುದು.

ಬಿಟ್‌ ಕಾಯಿನ್‌ ಚಿಲ್ಲರೆ ಇದೆಯೇ?

ನಮ್ಮ ಪೈಸೆಗಳಂತೆ ಬಿಟ್‌ಕಾಯಿನ್‌ಗಳ ಚಿಲ್ಲರೆಯನ್ನು ಸತೋಷಿ (satoshi) ಎಂದು ಪರಿಗಣಿಸಲಾಗುತ್ತಿದೆ. ಬಿಟ್‌ ಕಾಯಿನ್ ಜನಕ ಸತೋಷಿ ನಕಮೊಟೊನ (Satoshi Nakamoto) ನೆನಪಿಗಾಗಿ ಈ ಹೆಸರು ಇಡಲಾಗಿದೆ. ಇದು ಈ ಕರೆನ್ಸಿಯ ಅತ್ಯಂತ ಸಣ್ಣ ಭಾಗ. 100 ಪೈಸೆ ಸೇರಿ ₹ 1 ಆಗುವಂತೆ, 10 ಕೋಟಿ ಸತೋಷಿ ಸೇರಿದರೆ (0.00000001) ಒಂದು ಬಿಟ್‌ ಕಾಯಿನ್‌ ಆಗಲಿದೆ. ಅಮೆರಿಕದ ಒಂದು ಸೆಂಟ್‌ ಅಂದಾಜು 171 ಸತೋಷಿಗೆ ಸಮನಾಗಿದೆ.

ಮೊನ್ನೆ (ಡಿ. 11) ಷಿಕಾಗೊದ ಸಿಬಿಒಇ ಗ್ಲೋಬಲ್‌ ಮಾರ್ಕೆಟ್ಸ್ ಇಂಕ್‌,  ಬಿಟ್‌ಕಾಯಿನ್‌ ವಾಯಿದಾ ವಹಿವಾಟು ಆರಂಭಿಸುತ್ತಿದ್ದಂತೆ ಇದರ ಬೆಲೆ ಶೇ 17ರಷ್ಟು ಹೆಚ್ಚಾಯಿತು. 1 ಬಿಟ್‌ಕಾಯಿನ್‌ಗೆ 18 ಸಾವಿರ ಡಾಲರ್‌ವರೆಗೆ ( ₹ 11.70 ಲಕ್ಷ)  ಏರಿಕೆಯಾಗಿತ್ತು. ಇದೊಂದು ಅಚ್ಚರಿ ಮತ್ತು ಆತಂಕಕಾರಿ ಸಂಗತಿಯಾಗಿದೆ.

ವಾಯಿದಾ ವಹಿವಾಟಿನಲ್ಲಿ ಹೂಡಿಕೆದಾರರು ಇದರ ಬೆಲೆ ಏರಿಳಿತ ಬಗ್ಗೆ ಬಾಜಿ ಕಟ್ಟಬಹುದು.  ಈ ಪೇರುಪೇಟೆಯಲ್ಲಿ ವಹಿವಾಟಿಗೆ ಚಾಲನೆ ನೀಡಿರುವುದು ಈ ಕರೆನ್ಸಿಗೆ ಕಾನೂನಿನ ಮಾನ್ಯತೆ ನೀಡುವ ನಿಟ್ಟಿನಲ್ಲಿನ ಇನ್ನೊಂದು ಹೆಜ್ಜೆಯಾಗಿದೆ. ಸಿಬಿಒಇದ ಪ್ರತಿಸ್ಪರ್ಧಿ ಸಿಎಂಇ ಗ್ರೂಪ್‌ ಕೂಡ ಇದೇ ಬಗೆಯ ವಹಿವಾಟಿಗೆ ಚಾಲನೆ ನೀಡಿದೆ.

ಇವುಗಳ ಸೃಷ್ಟಿ ಹೇಗೆ?

ಅದೊಂದು ತುಂಬ ಸಂಕೀರ್ಣ ಸ್ವರೂಪದ ಪ್ರಕ್ರಿಯೆ. ಗಣಿತ ಸೂತ್ರ ಮತ್ತು ತಂತ್ರಜ್ಞಾನದ ನೆರವಿನಿಂದ ಇವುಗಳನ್ನು ಸೃಷ್ಟಿಸಲಾ

ಗುವುದು. ಗಣಿತದ ಸಮಸ್ಯೆಗಳನ್ನು ಪರಿಹರಿಸುವ ಸಾಫ್ಟ್‌ವೇರ್‌ ನೆರವು ಪಡೆಯಲಾಗುತ್ತದೆ. ಇದಕ್ಕೆ ಮೈನಿಂಗ್‌ (mining) ಎನ್ನುತ್ತಾರೆ. ಕಂಪ್ಯೂಟರ್‌ ಜಾಲದ ಮೂಲಕ ಅವುಗಳ ವಹಿವಾಟನ್ನು ನಿರ್ವಹಿಸಲಾಗುತ್ತಿದೆ. ಸದ್ಯಕ್ಕೆ 1.65 ಕೋಟಿ ಬಿಟ್‌ಕಾಯಿನ್‌ಗಳು ಚಲಾವಣೆಯಲ್ಲಿ ಇವೆ.

ಖರೀದಿ ಎಲ್ಲಿ?

ಇವುಗಳ ವಹಿವಾಟಿನ ಉದ್ದೇಶಕ್ಕೆಂದೇ ಅಸ್ತಿತ್ವಕ್ಕೆ ಬಂದಿರುವ ವಿನಿಮಯ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿ ಖರೀದಿಸಬಹುದು.

ಮಿತಿ ಇರುವುದು ನಿಜವೇ?

ಹೌದು. ಇಂತಹ ಕರೆನ್ಸಿಗಳ ವಹಿವಾಟಿನ ನಿಯಮಗಳ ಅನುಸಾರ 2.10 ಕೋಟಿ ಬಿಟ್‌ಕಾಯಿನ್‌ಗಳನ್ನು ಮಾತ್ರ ಸೃಷ್ಟಿಸಲು ಅವಕಾಶ ಇದೆ. ಈ ಗುರಿ ಸಮೀಪಿಸುತ್ತಿದೆ. ನಿಗದಿತ ಮಿತಿ ತಲುಪಿದ ನಂತರ ಇವುಗಳ ಮೌಲ್ಯ ಏನಾಗಲಿದೆ ಎನ್ನುವುದು ಸ್ಪಷ್ಟಗೊಂಡಿಲ್ಲ.

ಎಲ್ಲೆಲ್ಲಿ ಚಲಾವಣೆ ಇದೆ?

ಮಾನ್ಯತೆ ಪಡೆದ ಕೆಲ ಸಂಸ್ಥೆಗಳು ತಮ್ಮ ವಹಿವಾಟಿನಲ್ಲಿ ಬಿಟ್‌ ಕಾಯಿನ್‌ ಸ್ವೀಕರಿಸಲು ಆರಂಭಿಸಿವೆ. ಸರಕು ಮತ್ತು ಸೇವೆಗಳ ಖರೀದಿಗೂ  ಬಳಸಬಹುದು. ಮೈಕ್ರೊಸಾಫ್ಟ್ ಮತ್ತು ಪ್ರವಾಸಿ ಸಂಸ್ಥೆ ಎಕ್ಸ್‌ಪೇಡಿಯಾನಂತಹ ಬಹುರಾಷ್ಟ್ರೀಯ ಸಂಸ್ಥೆಗಳು, ಒಂದೆರಡು ರೆಸ್ಟೊರಂಟ್ಸ್‌, ಲಂಡನ್ನಿನ ಕಲಾ ಗ್ಯಾಲರಿಯಲ್ಲಿ ಇವುಗಳ ಬಳಕೆ ನಿಧಾನವಾಗಿ ಜಾರಿಗೆ ಬರುತ್ತಿದೆ. ಬಿಟ್‌ ಕಾಯಿನ್ ಹೊಂದಿರುವವರಲ್ಲಿ ಬಹುಸಂಖ್ಯಾತರು ಸರಕುಗಳ ಖರೀದಿಗೆ ಇವುಗಳನ್ನು ಬಳಸುತ್ತಿಲ್ಲ. ಹೂಡಿಕೆ ಉದ್ದೇಶಕ್ಕೆ ಮಾತ್ರ ಇವುಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

ಬೆಲೆ ಎಷ್ಟು?

2009ರಲ್ಲಿ ಅಸ್ತಿತ್ವಕ್ಕೆ ಬಂದಾಗ ಇದರ ಬೆಲೆ ಮೊದಲು ತುಂಬ ಅಗ್ಗವಾಗಿತ್ತು. 2011ರಲ್ಲಿ 2 ಡಾಲರ್‌ಗೆ ಒಂದು ಬಿಟ್‌ಕಾಯಿನ್‌ ದೊರೆಯುತ್ತಿತ್ತು. ಈಗ ಇದು 18 ಸಾವಿರ ಡಾಲರ್‌ವರೆಗೂ ಏರಿಕೆಯಾಗಿತ್ತು.

ದುರ್ಬಳಕೆ ಹೇಗೆ?

ಹೂಡಿಕೆದಾರರು ಹೆಚ್ಚು ಲಾಭ ಗಳಿಸಲು ಇವುಗಳ ಖರೀದಿಗೆ ಮುಗಿ ಬಿದ್ದಿದ್ದಾರೆ. ಅಕ್ರಮ ಹಣ ವರ್ಗಾವಣೆ ಮತ್ತು ಕಳ್ಳಸಾಗಾಣಿಕೆಯಲ್ಲಿಯೂ ಇವುಗಳನ್ನು ಬಳಸಲಾಗುತ್ತಿದೆ. ಇಲ್ಲಿ ವಹಿವಾಟು ನಡೆಸುವವರು ಅನಾಮಧೇಯರಾಗಿಯೇ ಉಳಿಯುವುದರಿಂದ ಬಳಕೆದಾರರನ್ನು ಗುರುತಿಸಲು ಸಾಧ್ಯವಾಗಲಾರದು.

ಅಪಾಯಗಳೇನು?

ಇವುಗಳಿಗೆ ಸದ್ಯಕ್ಕೆ ಕಾನೂನಿನ ಮಾನ್ಯತೆ ಇಲ್ಲ. ಅಂತರ್ಜಾಲಕ್ಕೆ ಕನ್ನ ಹಾಕುವವರು (hackers) ಈ ಕರೆನ್ಸಿಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುವ ಅಪಾಯ ಇರುತ್ತದೆ.  2014ರಲ್ಲಿ ಮೌಂಟ್‌ ಗಾಕ್ಸ್‌ ವಿನಿಮಯ ಕೇಂದ್ರದಲ್ಲಿನ 6.50 ಲಕ್ಷ ಬಿಟ್‌ಕಾಯಿನ್‌ಗಳನ್ನು ಹ್ಯಾಕರ್ಸ್‌ ಕದ್ದಿದ್ದರು. 24 ಸಾವಿರ ಗ್ರಾಹಕರು ಲಕ್ಷಾಂತರ ಡಾಲರ್‌ ಕಳೆದುಕೊಂಡಿದ್ದರು.

ಈಗ ವಿಶ್ವದ ಅತಿದೊಡ್ಡ ಪದಾರ್ಥ ವಿನಿಮಯ ಕೇಂದ್ರವು ಬಿಟ್‌ಕಾಯಿನ್‌ ವಾಯಿದಾ ವಹಿವಾಟು ಆರಂಭಿಸಿರುವುದು ಹೂಡಿಕೆದಾರರಲ್ಲಿ ಹೊಸ ಆತಂಕ ಮೂಡಿಸಿದೆ.

ಇದೊಂದು ಸಂಪೂರ್ಣ ಸಟ್ಟಾ ವ್ಯಾಪಾರವಾಗಿರುವುದರಿಂದ ಬಿಟ್‌ಕಾಯಿನ್‌ ಬೆಲೆ ಅತಿ ಎನ್ನುವಷ್ಟು ಭಾರಿ ಏರಿಳಿತ ಕಾಣಲಿದೆ. ಒಂದು ವೇಳೆ ಬೆಲೆಯಲ್ಲಿ ತೀವ್ರ ಕುಸಿತ ಉಂಟಾದರೆ ಹೂಡಿಕೆದಾರರ ಸಂಪತ್ತು  ಅಪಾರ ಪ್ರಮಾಣದಲ್ಲಿ ಕರಗಿ ಹೋಗಲಿದೆ. ಇದರ ಜತೆಗೆ  ಹ್ಯಾಕ್‌ ಮಾಡುವ, ಕದಿಯುವ ಅಪಾಯವೂ ಇರಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.