ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಕ್ಸಿಮಾಂಡರ್‌

Last Updated 15 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಥೇಲಿಸ್‌ ಆನಂತರ ಗ್ರೀಕ್‌ ತತ್ತ್ವಜ್ಞರಲ್ಲಿ ಕಾಣುವ ಪ್ರಮುಖ ಹೆಸರೆಂದರೆ ಅನಾಕ್ಸಿಮಾಂಡರ್‌.

ಅನಾಕ್ಸಿಮಾಂಡರ್‌ ಹುಟ್ಟಿದ್ದು ಕ್ರಿ. ಪೂ. 611ರಲ್ಲಿ, ಮೈಲಿಟಸ್‌ನಲ್ಲಿ; ತೀರಿಕೊಂಡದ್ದು 546ರಲ್ಲಿ. ಇವನು ಥೇಲಿಸ್‌ನ ಶಿಷ್ಯ ಎಂಬ ನಂಬಿಕೆಯಿದೆ. ಆದರೆ ಅವನು ಗುರುವಿನ ನಿಲುವುಗಳನ್ನೇ ಪ್ರಶ್ನಿಸಿದವ; ತಪ್ಪು ಎಂದು ಸಾರಿದವ!

ಪ್ರಕೃತಿಯ ವಿವರಗಳನ್ನು ‘ವಿಜ್ಞಾನ’ದ ನೆಲೆಯಲ್ಲಿ ಆಲೋಚಿಸಿದ ಮೊದಲಿಗರಲ್ಲಿ ಅನಾಕ್ಸಿಮಾಂಡರ್‌ ಒಬ್ಬ. ಖಗೋಳಶಾಸ್ತ್ರ, ಭೂಗೋಳ, ವಿಶ್ವಶಾಸ್ತ್ರಗಳ ಬಗ್ಗೆ ಅವನಿಗೆ ಆಸಕ್ತಿ ಇದ್ದಿತೆಂದು ತಿಳಿದು ಬರುತ್ತದೆ. ಭೂಮಿ ಮತ್ತು ಆಕಾಶದ ನಕ್ಷೆಗಳನ್ನು ರಚಿಸಿದ್ದನಂತೆ. ಪ್ರಕೃತಿಯನ್ನು ಕುರಿತು ಅವನು ಗ್ರಂಥವೊಂದನ್ನು ಬರೆದಿದ್ದ ಎಂದು ತಿಳಿದುಬರುತ್ತದೆ; ಆದರೆ ಅದು ದೊರೆತಿರುವುದು ಅಲ್ಪ ಭಾಗವಷ್ಟೆ.

ಸೃಷ್ಟಿಗೆ ಮೂಲ ನೀರು – ಎಂಬ ಸಿದ್ಧಾಂತವನ್ನು ಮಂಡಿಸಿದವನು ಥೇಲಿಸ್‌. ಆದರೆ ಅದನ್ನು ಅನಾಕ್ಸಿಮಾಂಡರ್‌ ಒಪ್ಪಲಿಲ್ಲ. Apeiron (ಅಪಿಯರಾನ್‌) - ಎಂದರೆ ಅನಂತವೂ ಅಗ್ರಾಹ್ಯವೂ ಅಪ್ರಮೇಯವೂ ಆದ ವಸ್ತುವೊಂದು ಸೃಷ್ಟಿಗೆ ಮೂಲ ಎನ್ನುವುದು ಅವನ ಸಿದ್ಧಾಂತ. ‘ಗ್ರೀಕರ ತತ್ವಶಾಸ್ತ್ರಸಾರಸಂಗ್ರಹ’ ಎಂಬ ಕೃತಿಯ ಲೇಖಕರಾದ ಕೆ. ಆರ್. ಶ್ರೀನಿವಾಸಯ್ಯಂಗಾರ್‌ ಅವರು ಅನಾಕ್ಸಿಮಾಂಡರ್‌ ಪ್ರತಿಪಾದಿಸಿರುವ ಸೃಷ್ಟಿಸಿದ್ಧಾಂತವನ್ನು ಹೀಗೆ ಸಂಗ್ರಹಿಸಿದ್ದಾರೆ:

‘ಈ ಅದ್ಭುತವಾದ, ಅಪ್ರಮೇಯವಾದ, ಅವ್ಯಕ್ತವಾದ, ಮೂಲವಸ್ತುರಾಶಿಯಿಂದ, ಅದರಲ್ಲಿ ಸ್ವಾಭಾವಿಕವಾಗಿ ಅಡಗಿರುವ ಶಾಶ್ವತವಾದ ಚಲನಶಕ್ತಿಯ ಮೂಲಕ ವಿಧವಿಧವಾದ ಪದಾರ್ಥಗಳು ಹೊರಪಡುತ್ತವೆ. ಪ್ರಥಮದಲ್ಲಿ ಶಾಖವುಳ್ಳ, ತದನಂತರ ಶೀತವುಳ್ಳ ಪದಾರ್ಥಗಳು – ಶೀತವನ್ನು ಶಾಖ ಮಂಡಲಾಕಾರದ ಜ್ವಾಲೆಯಂತೆ ಆವರಿಸಿಕೊಂಡು – ಹೊರಪಡುತ್ತವೆ. ಜ್ವಾಲೆಯ ಶಾಖ ಶೀತವನ್ನು ಜಲಾಣುವಾಗಿ ರೂಪಾಂತರಿಸಿ ಆನಂತರ ಅದಕ್ಕೆ ವಾಯುರೂಪವನ್ನು ಕೊಡುತ್ತದೆ. ಈ ವಾತಾವರಣ ವಿಕಸಿತವಾಗಿ ಆವರಿಸಿಕೊಂಡಿದ್ದ ಜ್ವಾಲಾಮಂಡಲವನ್ನು ಚಕ್ರಾಕಾರವಾದ ವರ್ತುಲಗಳನ್ನಾಗಿ ಪರಿಣಾಮಗೊಳಿಸುತ್ತದೆ. ಈ ವರ್ತುಲಗಳಿಗೆ ಕೊಳಲಿಗಿರುವ ರಂಧ್ರಗಳಂತೆ ದೊಡ್ಡ ದೊಡ್ಡ ಸಂದುಗಳಿರುವುದರಿಂದ ಇವುಗಳ ಮುಖಾಂತರ ಅಗ್ನಿ ಹೊರಪಟ್ಟು, ನಮಗೆ ಕಾಣಿಸುವ ಗಗನಮಂಡಲದ ಗೋಳಗಳಾಗುತ್ತವೆ. ಸುತ್ತಲೂ ಆವರಿಸಿಕೊಂಡಿರುವ ವಾತ ಈ ಗೋಳವನ್ನು ಭೂಮಿಯ ಸುತ್ತಲೂ ತಿರುಗುವಂತೆ ಮಾಡುತ್ತದೆ. ಗಗನಮಂಡಲದಲ್ಲಿ ಸೂರ್ಯಗ್ರಹವೇ ಅತ್ಯಂತ ದೂರದಲ್ಲಿರುವುದು, ಅದಕ್ಕೆ ಎರಡನೆಯದು ಚಂದ್ರ, ಆನಂತರ ನಕ್ಷತ್ರಗಳೂ ಇತರ ಗ್ರಹಗಳೂ ಬರುತ್ತವೆ. ಇವುಗಳ ಮಧ್ಯೆ ಭೂಮಿ ತನ್ನಲ್ಲಿದ್ದ ತೇವವೆಲ್ಲಾ ಒಣಗಲು, ವೃತ್ತಸ್ತಂಭಾಕಾರವಾದ ಗೋಳದಂತೆ ನಿಂತಿದೆ. ಆ ಮೊದಲಿದ್ದ ನೀರು ಕಳೆದುಳಿದ ಭಾಗವೇ ಈಗಿರುವ ಸಮುದ್ರಗಳು.’

ಈ ವಿವರಗಳಿಗೂ ಈಗಿನ ಸಿದ್ಧಾಂತಗಳಿಗೂ ಹೊಂದಾಣಿಕೆ ಆಗದಿರಬಹುದು. ಆದರೆ ಮಾನವನ ಅರಿವಿನ ವಿಕಾಸದ ಹಾದಿ ತಿಳಿಯಲು ಇವು ಸಹಾಯಕವಾಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

–ಸುಜನ್‌

***

ನಿಮ್ಮ ಅನಿಸಿಕೆಗಳನ್ನು ನಮಗೆ ಕಳುಹಿಸಿ. ವಿಳಾಸ: ಸಂಪಾದಕರು, ಪ್ರಜಾವಾಣಿ, ಅರಿವು ವಿಭಾಗ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560001 email: arivu@prajavani.co.in.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT