ಶುಕ್ರವಾರ, ಫೆಬ್ರವರಿ 26, 2021
23 °C

ಬಿಜೆಪಿ ಪರ ಅಭಿಪ್ರಾಯ ರೂಪಿಸಲು ಧರ್ಮ ಸಂಸತ್ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಪರ ಅಭಿಪ್ರಾಯ ರೂಪಿಸಲು ಧರ್ಮ ಸಂಸತ್ ಬಳಕೆ

ಮೈಸೂರು: ‘ಉಡುಪಿಯಲ್ಲಿ ನಡೆದ ಧರ್ಮ ಸಂಸತ್‌ ಕಾರ್ಯಕ್ರಮ ಬಿಜೆಪಿ ಬೆಂಬಲಿಸುವುದಾಗಿತ್ತು. ವಿಧಾನಸಭೆ ಚುನಾವಣೆಗೆ ಆ ಪಕ್ಷದ ಪರವಾಗಿ ಅಭಿಪ್ರಾಯ ರೂಪಿಸುವುದು ಕೂಡಾ ಆಗಿತ್ತು’ ಎಂದು ನಿಡುಮಾಮಿಡಿ ಸಂಸ್ಥಾನದ ವೀರಭದ್ರ ಚೆನ್ನಮಲ್ಲಸ್ವಾಮೀಜಿ ಆರೋಪಿಸಿದರು.

‘ಧರ್ಮ ಸಂಸತ್‌ ಎನ್ನುವುದೇ ಪೂರ್ವಗ್ರಹಪೀಡಿತ. ಗೋಹತ್ಯೆ ನಿಷೇಧ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಅಲ್ಪಸಂಖ್ಯಾತರಿಗೆ ಕೊಡುವ ಸೌಲಭ್ಯಗಳನ್ನು ಬಹುಸಂಖ್ಯಾತರಿಗೂ ವಿಸ್ತರಿಸಿ ಎನ್ನುವ ಕಾರ್ಯಸೂಚಿ ಹೊಂದಿತ್ತು’ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

‘ಸಮಾಜದ ಕಣ್ಣೊರೆಸಲು ಅಸ್ಪೃಶ್ಯತೆ ಹೋಗಬೇಕು ಎನ್ನುತ್ತಾರೆ. ಅಸ್ಪೃಶ್ಯರು ಮತಾಂತರವಾದರೆ ಅವರಿಗೆ ಹಿಂಬಾಲಕರು ಇರುವುದಿಲ್ಲ. ಅಸ್ಪೃಶ್ಯರು ಮತ

ಬ್ಯಾಂಕಾಗಿ ಮಾತ್ರ ಇರಬೇಕು ಎನ್ನುವುದು ಧರ್ಮ ಸಂಸತ್ ನಡೆಸಿದವರ ಉದ್ದೇಶವಾಗಿತ್ತು’ ಎಂದರು.

ರಾಜ್ಯದಲ್ಲಿ ಮೊದಲಿನಿಂದಲೂ ಹಿಂದೂ ರಾಜಕಾರಣಕ್ಕೆ ಪೋಷಕವಾಗಿ ಕೆಲಸ ಮಾಡಿದವರು ಮಾಧ್ವಮತದವರು. ಈಗಲೂ ಅವರೇ ನಾಯಕತ್ವ ವಹಿಸಿಕೊಂಡಿದ್ದಾರೆ. ಶೃಂಗೇರಿ ಶ್ರೀಗಳು, ಶ್ರೀವೈಷ್ಣವ ಪರಂಪರೆಯ ವಿಶಿಷ್ಟದ್ವೈತಿಗಳು ಯಾವ ವಿಚಾರದಲ್ಲೂ ಬಾಯಿ ಬಿಡುತ್ತಿಲ್ಲ. ಎಲ್ಲಕ್ಕೂ ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ವಿಶ್ವೇಶತೀರ್ಥ ಸ್ವಾಮೀಜಿ ಮಾತ್ರ ಪ್ರತಿಕ್ರಿಯಿಸುತ್ತಿದ್ದಾರೆ ಎಂದರು.

ಟಂಕಶಾಲೆ– ಪಾಕಶಾಲೆ: ‘ಕೋಮು ವಾದ ಪ್ರತಿಪಾದಕ ಶಕ್ತಿಗಳು ದೇಶವನ್ನು ಕೋಮುವಾದದ ಟಂಕಶಾಲೆ ಯನ್ನಾಗಿ ಮಾಡಿಕೊಳ್ಳಲು ಹೊರಟಿವೆ. ಇದಕ್ಕೆ ಪ್ರತಿರೋಧ ತೋರುವ ಉಗ್ರವಾದಿಗಳು ರಾಷ್ಟ್ರವನ್ನು ಉಗ್ರವಾದದ ಪಾಕಶಾಲೆಯನ್ನಾಗಿ ಮಾಡಲು ಹೊರಟಿದ್ದಾರೆ. ಇವರಿಬ್ಬರ ಸಂಘರ್ಷಕ್ಕೆ ಜನರು ಬಲಿಯಾಗುತ್ತದ್ದಾರೆ. ಈ ಎರಡೂ ಗುಂಪಿನವರು ಭಾರತೀಯರ ಭಾವನೆಗಳನ್ನುಕೆರಳಿಸುತ್ತಿದ್ದಾರೆ ಎಂದರು.

ಉಗ್ರವಾದ ಎಲ್ಲಿತ್ತು?: ಕೇವಲ ಕಾಶ್ಮೀರಕ್ಕೆ ಸೀಮಿತವಾಗಿತ್ತು. ಬಾಬ್ರಿ ಮಸೀದಿ ಕೆಡವದೆ ಇದ್ದರೆ ಕಾಶ್ಮೀರದಾಚೆಗೆ ಬರುತ್ತಿರಲಿಲ್ಲ. ಹಿಂದೂ ಧರ್ಮದಿಂದ ಯಾವತ್ತೂ ಜನರನ್ನು ಒಂದು ಮಾಡಲು ಸಾಧ್ಯವಿಲ್ಲ. ಹಿಂದೂ ಧರ್ಮವೇ ಅಸಮಾನತೆಯ ತತ್ವದ ಮೇಲೆ ನಿಂತಿದೆ. ಧರ್ಮದಿಂದ ಒಗ್ಗೂಡಿಸಲು

ಸಾಧ್ಯವಾಗದಿದ್ದಾಗ ಹಿಂದುತ್ವದ ರಾಜಕೀಯ ಸಿದ್ಧಾಂತದ ಮೂಲಕ ಒಂದು ಮಾಡಲು ಹೊರಟಾಗ ಇಷ್ಟೆಲ್ಲ ಅವಘಡಗಳಿಗೆ ಕಾರಣವಾಗುತ್ತಿದೆ ಎಂದರು.

**

ಕರ್ನಾಟವಕವಲ್ಲ. ಭಾರತವೇ ಕಾದ ಕಾವಲಿಯಂತಾಗುತ್ತಿದೆ. ಇದು ನಿಜವಾಗಿಯೂ ದುರದೃಷ್ಟಕರ. ಶಾಂತಿ, ಪ್ರೇಮ, ವಿಶ್ವಾಸ, ಸಾಮರಸ್ಯ, ಸೌಹಾರ್ದತೆಯಿಂದ ಬದುಕುವ ವಾತಾವರಣದಲ್ಲಿ ಬಹು ದೊಡ್ಡ ಬಿರುಕು ಕಾಣಿಸಿಕೊಳ್ಳುತ್ತಿದೆ.

–ವೀರಭದ್ರ ಚೆನ್ನಮಲ್ಲಸ್ವಾಮೀಜಿ, ನಿಡುಮಾಮಿಡಿ ಸಂಸ್ಥಾನ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.