7

ಸ್ಥಿರವಿಲ್ಲದ ಮನಸ್ಸು; ಥೈರಾಯಿಡ್ ಕಾರಣವೇ?

Published:
Updated:
ಸ್ಥಿರವಿಲ್ಲದ ಮನಸ್ಸು; ಥೈರಾಯಿಡ್ ಕಾರಣವೇ?

1. ನನಗೆ 21 ವರ್ಷ. 3ನೇ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದೇನೆ. ನನಗೆ ಇತ್ತೀಚೆಗೆ ಸರಿಯಾಗಿ ಓದಲು ಆಗುತ್ತಿಲ್ಲ. ಓದಲು ತುಂಬ ಪ್ರಯ್ನತಿಸಿದರು ಏನಾದರೂ ಅಡ್ಡಿ ಬರುತ್ತಲೇ ಇದೆ. ಎಂಜಿನಿಯರಿಂಗ್ ಮುಗಿಸಲೇ ಬೇಕು ಎಂಬ ಆಸೆ ಇದೆ. ಒಂದು ವರ್ಷದಿಂದ ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಔಷಧವನ್ನು ತೆಗೆದುಕೊಳ್ಳುತ್ತಿದ್ದೇನೆ. ಇತ್ತೀಚೆಗೆ ತುಂಬಾ ದಪ್ಪ ಆಗಿದ್ದೇನೆ. ಥೈರಾಯಿಡ್‌ನಿಂದ ಹೊರ ಬರಲು ಸಾಧ್ಯವಿಲ್ಲವೇ? ಎಷ್ಟೇ ಧೈರ್ಯ ಮಾಡಿಕೊಂಡರೂ ಓದಲು ಆಗುತ್ತಿಲ್ಲ. ನನ್ನ ಥೈರಾಯಿಡ್ ನಾರ್ಮಲ್ ಆಗಬೇಕು. ಎಂಜಿನಿಯರಿಂಗ್ ಮುಗಿಸಬೇಕು. ದಾರಿ ತಿಳಿಸಿ.

–ಹೆಸರು, ಊರು ಬೇಡ

ಉತ್ತಮ ಆಹಾರಸೇವನೆ ಹಾಗೂ ವ್ಯಾಯಾಮ ನೀವು ಆರೋಗ್ಯಕರವಾಗಿ ಜೀವನವನ್ನು ಸಾಗಿಸಲು ನೆರವಾಗುತ್ತದೆ. ಜೊತೆಗೆ ನಿಮಗಿರುವ ಥೈರಾಯಿಡ್‌ ಸಮಸ್ಯೆಯನ್ನು ನಿಭಾಯಿಸಲು ಇದು ಸಹಾಯ ಮಾಡುತ್ತದೆ. ಹೈಪೊ ಥೈರಾಯಿಡ್ ನಿಮ್ಮನ್ನು ಭಾದಿಸುತ್ತಿದ್ದರೆ ನಿಮಗೆ ದಣಿವು ಹಾಗೂ ಜಡತ್ವದ ಅನುಭವವಾಗುತ್ತದೆ. ಅಲ್ಲದೇ ನೀವು ಸರಿಯಾದ ಡೋಸೆಜ್ ಔಷಧವನ್ನು ತೆಗೆದುಕೊಳ್ಳುತ್ತಿದ್ದರೂ ಯಾವ ವಿಷಯದ ಮೇಲೂ ಗಮನ ಹರಿಸಲು ಕಷ್ಟವಾಗುತ್ತದೆ. ಹಾಗಾಗಿ ಮೊದಲು ನಿಮಗೆ ಥೈರಾಯಿಡ್ ಇದೆ ಎನ್ನುವುದನ್ನು ನೀವು ಒಪ್ಪಿಕೊಳ್ಳಿ. ಇತ್ತೀಚೆಗೆ ಇದು ಯುವಜನರಲ್ಲೂ ಸಾಮಾನ್ಯ ಕಾಯಿಲೆ ಎಂಬಂತಾಗಿದೆ. ಜೀವನಶೈಲಿಯ ಸಮಸ್ಯೆಯೂ ಇದಕ್ಕೆ ಕಾರಣವಿರಬಹುದು. ತೂಕ ಹೆಚ್ಚಳ ಹೈಪೊ ಥೈರಾಯಿಡ್‌ನ ಸಾಮಾನ್ಯ ಲಕ್ಷಣ. ಆಗಾಗಿ ಉತ್ತಮವಾದ ಆಹಾರ ಸೇವನೆಯೂ ತೂಕ ನಿರ್ವಹಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಥೈರಾಯಿಡ್‌ಗೆ ಸೀಮಿತವಾದ ಡಯೆಟ್ ಇಲ್ಲ; ಹಾಗಾಗಿ  ನಿಮ್ಮ ಊಟದ ಜೊತೆ ತರಕಾರಿ, ಹಣ್ಣುಗಳು, ಧಾನ್ಯಗಳು, ಪ್ರೊಟಿನ್ ಮತ್ತು ಆರೋಗ್ಯಕರ ಕೊಬ್ಬಿನಂಶ ಇರುವ ಆಹಾರಗಳು ಇರುವಂತೆ ನೋಡಿಕೊಳ್ಳಿ. ನಿಮ್ಮ ಶಕ್ತಿಯ ಮಟ್ಟವನ್ನು ಸ್ಥಿರವಾಗಿಟ್ಟಕೊಳ್ಳಲು ಆಗಾಗ ಸ್ವಲ್ಪ ಸ್ಪಲ್ಪ ಊಟ ಸೇವಿಸುತ್ತಿರಿ.

ಅದರ ಜೊತೆಗೆ ವ್ಯಾಮಾಮ, ಯೋಗ ಮತ್ತು ಉತ್ತಮ ನಿದ್ದೆಯೂ ಅಷ್ಟೇ ಮುಖ್ಯ. ವ್ಯಾಯಾಮದಿಂದ ಶಕ್ತಿಯು ಹೆಚ್ಚುತ್ತದೆ. ಒತ್ತಡ ನಿವಾರಿಸುವ ಜೊತೆಗೆ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಯೋಗದಿಂದ ಮಾತ್ರ ನಿಮ್ಮ ಥೈರಾಯಿಡ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಹಾಗಾಗಿ ಒಬ್ಬ ಒಳ್ಳೆಯ ಯೋಗಗುರುವನ್ನು ನೋಡಿ ಮತ್ತು ಕೆಲವು ಆಸನಗಳನ್ನು ಅಭ್ಯಾಸ ಮಾಡಿ. ಇದರಿಂದ ನಿಮ್ಮ ಗಮನ ಹೆಚ್ಚುತ್ತದೆ, ಅಲ್ಲದೇ ಓದಿನ ಮೇಲೆ ಗಮನ ಹರಿಸಲು ಸಹಾಯವಾಗುತ್ತದೆ. ಸಾಮಾಜಕ್ಕೆ ನಿಮ್ಮನ್ನು ತೆರೆದುಕೊಳ್ಳಿ, ಸಂತಸದಿಂದಿರಿ. ನಿಮ್ಮ ಓದಿನ ಕ್ರಮವನ್ನು ಅನುಭವಿಸಿ ಖುಷಿಪಡಿ. ಖಂಡಿತ ನೀವು ಎಂಜಿನಿಯರಿಂಗ್ ಮುಗಿಸುತ್ತೀರಿ ಮತ್ತು ಒಳ್ಳೆಯ ಕೆಲಸವನ್ನೂ ಸಂಪಾದಿಸಿಕೊಳ್ಳುತ್ತೀರಿ.

2. ನಾನು ಉಪನ್ಯಾಸಕಿ. ನನಗೆ ಬಾಲ್ಯವಿವಾಹವಾಗಿತ್ತು. ನಾನು ಓದುವ ಆಸೆಯಿಂದ ಗಂಡನ ಮನೆಗೆ ಹೋಗಿಲ್ಲ. ಈಗ ನನಗೆ 39 ವರ್ಷ. ಮದುವೆ ಆಗೋಣ ಎಂದರೆ ವಯಸ್ಸಿನ ಸಮಸ್ಯೆ. ಏನು ಮಾಡಬೇಕು ತಿಳಿಯುತ್ತಿಲ್ಲ. ಮನಸ್ಸಿಗೆ ನೆಮ್ಮದಿ ಇಲ್ಲ.

–ಎಲ್ಲಮ್ಮ, ಕುಷ್ಠಗಿ

ಈಗಲೂ ನೀವು ಮದುವೆಯ ಬಗ್ಗೆ ಯೋಚಿಸಬಹುದು. ವಯಸ್ಸು ಒಂದು ಸಮಸ್ಯೆ ಅಲ್ಲ. ನಿಮ್ಮ ಪ್ರೊಪೈಲ್ ಅನ್ನು ಉತ್ತಮ, ನಂಬಿಕೆಗೆ ಅರ್ಹವಾದ ಮ್ಯಾಟ್ರಿಮೊನಿಯಲ್ಲಿ ನೊಂದಾಯಿಸಿ. ನಿಮ್ಮ ಮನಸ್ಸಿಗೆ ಸರಿ ಹೊಂದುವ ಹುಡುಗ ಸಿಗಬಹುದು. ಅವರಲ್ಲಿ ನೀವು ಒಬ್ಬ ಉತ್ತಮ ಸಂಗಾತಿಯನ್ನು ಕಾಣಬಹುದು. ನಿಮಗೆ ಅಂತಹ ವ್ಯಕ್ತಿ ಸಿಗಲಿಲ್ಲವೆಂದಾದಲ್ಲಿ, ಆಗ ಜೀವನ ಹೇಗಿದೆಯೋ ಹಾಗೆ ಸ್ವೀಕರಿಸಿ ಮತ್ತು ಸಂತೋಷದಿಂದ ಬದುಕಿ. ಕೆಲವು ಸಾಮಾಜಿಕ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಕಷ್ಟದಲ್ಲಿರುವವರಿಗೆ ನಿಮ್ಮಿಂದ ಸಾಧ್ಯವಾಗುವ ಸಹಾಯ ಮಾಡಿ. ಮದುವೆಯೇ ಎಲ್ಲವೂ ಅಲ್ಲ. ಜೀವನದಲ್ಲಿ ಅದಕ್ಕೂ ಮೀರಿದ್ದು ಅನೇಕವಿವೆ.

3. ನಾನು ನನ್ನ ಅಣ್ಣನ ಸ್ನೇಹಿತ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ. ನಮ್ಮ ಪ್ರೀತಿಯ ವಿಷಯ ಅಣ್ಣನಿಗೆ ತಿಳಿದು ನಮ್ಮನ್ನು ದೂರ ಮಾಡಿದ. ಮೊದಲು ಮನೆಯಲ್ಲಿ ನಮ್ಮ ಪ್ರೀತಿಯನ್ನು ಒಪ್ಪಿರಲಿಲ್ಲ. ಈಗ ಒಪ್ಪಿದ್ದಾರೆ. ನಾವು ಈಗ ಮತ್ತೆ ಸಂಪರ್ಕದಲ್ಲಿದ್ದೇವೆ. ನನ್ನ ಹುಡುಗ ನನ್ನ ಮೇಲೆ ಪ್ರಾಣವನ್ನೇ ಇಟ್ಟಿದ್ದಾನೆ. ಆದರೆ ಅವನು ಒಮ್ಮೆ ಇದ್ದ ಹಾಗೆ ಇನ್ನೊಮ್ಮೆ ಇರುವುದಿಲ್ಲ. ಒಮ್ಮೆ ‘ನೀನಿಲ್ಲದೇ ನಾನು ಬದುಕುವುದಿಲ್ಲ’ ಎನ್ನುತ್ತಾನೆ; ಇನ್ನೊಮ್ಮೆ ‘ಬೇರೆ ಮದುವೆ ಆಗು ಚೆನ್ನಾಗಿ ಇರುತ್ತೀಯಾ’ ಎನ್ನುತ್ತಾನೆ. ನನ್ನ ಜೊತೆ ಇದ್ದರೆ ನಿನ್ನ ಜೀವನ ಚೆನ್ನಾಗಿ ಇರುವುದಿಲ್ಲ ಎನ್ನುತ್ತಾನೆ. ನಾನು ಯಾವುದನ್ನು ನಂಬಲಿ. ಅವನಿಲ್ಲದೇ ನಾನು ಬದುಕುವುದಿಲ್ಲ, ಅವನ ಮನಸ್ಸಿನಲ್ಲಿ ಬೇರೆ ಏನೋ ಸಮಸ್ಯೆ ಇದೆ. ಆದರೆ ಅದನ್ನು ಹೇಳಿಕೊಳ್ಳುತ್ತಿಲ್ಲ. ಆದರೆ ಅದನ್ನು ನನಗೆ ತಿಳಿದುಕೊಳ್ಳಲು ಆಗುತ್ತಿಲ್ಲ. ‌

–ಹೆಸರು, ಊರು ಬೇಡ

ಎರಡು ಮನೆಯವರು ನಿಮ್ಮ ಪ್ರೀತಿಯನ್ನು ಒಪ್ಪಿ, ನೀವು ಪ್ರೀತಿಸಿದ ಹುಡುಗ ನಿಮಗೆ ಸರಿಹೊಂದುತ್ತಾನೆ ಎಂದು ಎನ್ನಿಸಿದರೆ, ನೀವು ಈ ಬಗ್ಗೆ ಹೆಚ್ಚಿಗೆ ಯೋಚಿಸುವ ಅಗತ್ಯವಿಲ್ಲ. ಮತ್ತು ನೀವು ಅವರೊಂದಿಗೆ ಬದುಕಬೇಕು ಎಂಬ ನಿರ್ಧಾರವನ್ನು ಮಾಡಿದ್ದೀರಿ. ನಿಮ್ಮ ಹುಡುಗ ದ್ವಂದ ಮನಃಸ್ಥಿತಿಯಲ್ಲಿದ್ದಾರೆ. ನಿಮ್ಮ ಅಣ್ಣ ನಿಮ್ಮ ಪ್ರೀತಿಗೆ ಸಹಾಯ ಮಾಡುತ್ತಿಲ್ಲ. ನಿಮ್ಮ ಹುಡುಗ ಹಾಗೂ ನಿಮ್ಮ ಅಣ್ಣನ ಸ್ನೇಹ ಎಲ್ಲಿ ಕಳೆದುಹೋಗುತ್ತದೋ ಎಂಬ ಚಿಂತೆಯೂ ಅವರನ್ನು ಕಾಡುತ್ತಿರಬಹುದು. ಹಾಗಾಗಿ ಅವರು ನಂಬಿಕೆ ಕಳೆದುಕೊಂಡಿರಬಹುದು. ನೀವು ಹಾಗೂ ನಿಮ್ಮ ಅಣ್ಣ  – ಇಬ್ಬರೂ ಕೆಲವು ಸ್ವಷ್ಟತೆಯೊಂದಿಗೆ ನಿಮ್ಮ ಹುಡುಗನೊಂದಿಗೆ ಮಾತನಾಡಿ. ಅವರನ್ನು ಗೊಂದಲದಿಂದ ದೂರ ಮಾಡಿ. ಇದು ಸಮಯದ ವಿಷಯ. ಸಮಯ ಸರಿದಂತೆ ಎಲ್ಲವೂ ಸರಿಯಾಗುತ್ತದೆ. ಮದುವೆಗೆ ಮೊದಲು ನೀವಿಬ್ಬರೂ ಮನೆಯವರ ಸಹಾಯವಿಲ್ಲದೇ ಹಣದ ವಿಷಯದಲ್ಲಿ ಸ್ವತಂತ್ರರಾಗಿರುವಂತೆ ನೋಡಿಕೊಳ್ಳಿ.

4. ನನ್ನ ಮಗಳಿಗೆ 7ವರ್ಷ. ಈಗ 2ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಚೆನ್ನಾಗಿ ಓದುತ್ತಾಳೆ. ಆದರೆ ಅಷ್ಟೇ ಬೇಗ ಮರೆತು ಬಿಡುತ್ತಾಳೆ. ತುಂಬಾ ಯೋಚನೆ ಮಾಡುತ್ತಾಳೆ. ಇದಕ್ಕೆ ಪರಿಹಾರ ತಿಳಿಸಿ.

–ಉಷಾ, ಊರು ಬೇಡ

ಅವಳಿಗೆ ಇನ್ನೂ ಕೇವಲ 7 ವರ್ಷ ವಯಸ್ಸು. ಇದು ಆಟ ಆಡುವ ಮತ್ತು ಸುತ್ತಲೂ ಓಡಾಡುವ ವಯಸ್ಸು. ಅವಳು ಓದು ಹಾಗೂ ಶಾಲೆಯ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದರೆ ಇಂದಿನ ಮಕ್ಕಳಿಗೆ ಈ ರೀತಿ ಸ್ವಾತಂತ್ರ್ಯವಾಗಿರಲು ಸಾಧ್ಯವಿಲ್ಲ. ನಮ್ಮೆಲ್ಲರ ಗಮನಕ್ಕೆ ಬಂದಂತೆ ಈ ಮಾರ್ಡನ್ ಜನರೇಷನ್‌ನ ಶಿಕ್ಷಣ ಪದ್ಧತಿ ಸಂಕೀರ್ಣವಾಗಿದೆ. ತುಂಬಾ ಪುಸ್ತಕಗಳನ್ನು ಓದಬೇಕು, ಪ್ರತಿದಿನ ಹೋಂವರ್ಕ್ ಮಾಡಬೇಕು. ಪ್ರತಿ ತಿಂಗಳು ಕಿರುಪರೀಕ್ಷೆಗಳು, ಪ್ರಾಜೆಕ್ಟ್‌ಗಳು, ಪಠ್ಯೇತರ ಚಟುವಟಿಕೆ ಸೇರಿದಂತೆ ಹಲವು ಹೊರೆಗಳೂ ಮಕ್ಕಳ ಮೇಲಿರುತ್ತವೆ. ಮಕ್ಕಳು ಹೊರಲಾರದ ಪುಸ್ತಕ ಹಾಗೂ ಬ್ಯಾಗ್‌ ಅನ್ನು ಎಳೆದುಕೊಂಡು ಹೋಗುವುದನ್ನು ನಾವು ನೋಡಿರುತ್ತೇವೆ. 7 ವರ್ಷದ ಮಗು ಓದಿನ ಒತ್ತಡ ತಾಳಲಾರದೆ ನೋವು ಅನುಭವಿಸುವುದನ್ನು ಕಲ್ಪಿಸಿಕೊಳ್ಳಿ.

ಮನೆಯಲ್ಲಿ ಅವಳಿಗೆ ಟೈಮ್ ಟೇಬಲ್ ಮಾಡಿ. ಅದರಲ್ಲಿ ಅವಳ ಆಟದ ಸಮಯವನ್ನು ಸೇರಿಸಿ. ಅವಳನ್ನು ಮನೆಯ ಹೊರಗೆ ಆಟವಾಡಲು ಕಳುಹಿಸಿ. ಸ್ನೇಹಿತರ ಜೊತೆ ಬೆರೆಯಲು ತಿಳಿಸಿ. ಇದರಿಂದ ಅವಳ ಮನಸ್ಸು ಶಾಂತವಾಗಿ, ಚೈತನ್ಯ ಮೂಡಲು ಸಾಧ್ಯ. ಆಮೇಲೆ ಅವಳ ಓದಿನ ವಿಷಯಕ್ಕೆ ಬನ್ನಿ. ಅವಳು ಓದುವ ಸಮಯದಲ್ಲಿ ಆಟದ ಮೈದಾನ, ಟಿವಿ ಯಾವುದು ಅವಳ ಓದಿಗೆ ಅಡ್ಡಿಪಡಿಸದಿರುವ ಜಾಗದಲ್ಲಿ ಅವಳನ್ನು ಕೂರಿಸಿ.

ಆರಂಭದಲ್ಲಿ ನೀವು ಅವಳ ಜೊತೆ ಕುಳಿತುಕೊಳ್ಳಿ. ಅವಳು ಓದಿ ಮುಗಿಸಿದ ಮೇಲೆ ಪುನರಾವರ್ತನೆ ಮಾಡಿಸಿ. ಇದು ಅವಳ ನೆನಪಿನ ಶಕ್ತಿಯ ಮೇಲೂ ಕೆಲಸ ಮಾಡುತ್ತದೆ. ಆಗ ಅವಳು ಸರಿಹೊಂದುತ್ತಾಳೆ. ಅವಳಿಗೆ ವಯಸ್ಸಾದಂತೆ ಅವಳ ನೆನಪಿನ ಶಕ್ತಿ ಹೆಚ್ಚುತ್ತದೆ. ಆಗ ಅವಳು ಖಂಡಿತ ಪರೀಕ್ಷೆಗಳನ್ನು ಚೆನ್ನಾಗಿ ಮಾಡುತ್ತಾಳೆ.

***

ಏನಾದ್ರೂ ಕೇಳ್ಬೋದು

ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತು ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಆಪ್ತ ಸಮಾಲೋಚಕಿ ಸುನೀತಾ ರಾವ್ ಉತ್ತರಿಸಲಿದ್ದಾರೆ. ನಿಮ್ಮ ಪ್ರಶ್ನೆಗಳನ್ನು ಇಮೇಲ್ ಹಾಗೂ ವಾಟ್ಸ್ಯಾಪ್‌ ಮೂಲಕವು ಕಳುಹಿಸಬಹುದು. ಇಮೇಲ್ ವಿಳಾಸ; bhoomika@prajavani.co.in ವಾಟ್ಸ್ಯಾಪ್ ಸಂಖ್ಯೆ: 9482006746

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry