7

67 ಜನ ಹೊಸೆದ ಲೆಹೆಂಗಾ

Published:
Updated:
67 ಜನ ಹೊಸೆದ ಲೆಹೆಂಗಾ

ಸಿನಿಮಾ ಅಭಿಮಾನಿಗಳು ಹಾಗೂ ಕ್ರಿಕೆಟ್‌ ಪ್ರಿಯರಲ್ಲಿ ವಿರಾಟ್‌ ಕೊಹ್ಲಿ–ಅನುಷ್ಕಾ ಶರ್ಮಾ ಅದ್ದೂರಿ ಮದುವೆಯದ್ದೇ ಸುದ್ದಿ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಮದುವೆಯದ್ದೇ ಗುಂಗು. ಇಬ್ಬರ ಚೆಂದದ ನಗುವಿನ ಚಿತ್ರ, ಮದುವೆಯ ವಿಡಿಯೊಗಳು ಅಭಿಮಾನಿಗಳ ಕಣ್ಣು ತಣಿಸುತ್ತಿವೆ. ನವ ದಂಪತಿಯ ಉಡುಗೆ ತೊಡುಗೆ ಕೂಡಾ ಅಷ್ಟೇ ಸುದ್ದಿಯಾಗಿದೆ.

ಮದುವೆ ಸುದ್ದಿಯನ್ನು ಹೇಳದೆ ವರ್ಷಗಟ್ಟಲೆ ಸತಾಯಿಸಿದ್ದ ಜೋಡಿ ಕೊನೆಗೂ ರಹಸ್ಯವಾಗಿಯೇ ಮದುವೆಯಾಗಿಬಿಟ್ಟರು. ಆದರೆ ವಿರಾಟ್‌ ಹಾಗೂ ಅನುಷ್ಕಾ ಅನೇಕ ತಿಂಗಳುಗಳಿಂದ ಮದುವೆ ತಯಾರಿಯಲ್ಲಿ ತೊಡಗಿದ್ದರು ಎಂಬುದು ಈಗ ಬಹಿರಂಗವಾಗಿದೆ. ಅಂದಹಾಗೆ ನಿಶ್ಚಿತಾರ್ಥದಿಂದ ಹಿಡಿದು, ಮೆಹೆಂದಿ ಶಾಸ್ತ್ರ, ಮದುವೆ, ಆರತಕ್ಷತೆ... ಹೀಗೆ ಎಲ್ಲ ಸಂದರ್ಭಗಳಿಗಾಗಿ ಇವರಿಬ್ಬರ ಉಡುಗೆಗಳನ್ನು ವಿನ್ಯಾಸಗೊಳಿಸಿದ್ದು ವಿಖ್ಯಾತ ವಿನ್ಯಾಸಕ ಸವ್ಯಸಾಚಿ.

ಮದುವೆ ಸಂದರ್ಭದಲ್ಲಿ ಅನುಷ್ಕಾ ತೊಟ್ಟಿದ್ದ ತಿಳಿ ಗುಲಾಬಿ, ತಿಳಿ ಹಸಿರು ಬಣ್ಣದ ಲೆಹೆಂಗಾ ಭರ್ಜರಿ ವಿನ್ಯಾಸಗಳಿಂದ ಆಕರ್ಷಣೆಯ ಕೇಂದ್ರವಾಗಿತ್ತು. ವಿರಾಟ್‌ಗಂತೂ ಮನದನ್ನೆಯ ಮೇಲಿಂದ ದೃಷ್ಟಿ ಸರಿಸಲೂ ಆಗುತ್ತಿರಲಿಲ್ಲವೆನ್ನಿ.

ಅನುಷ್ಕಾ ಧರಿಸಿದ್ದ ಲೆಹೆಂಗಾ ವಿನ್ಯಾಸಗೊಳಿಸುವುದಕ್ಕೆ 32 ದಿನ ಬೇಕಾಯಿತು. 67 ಕುಶಲಕರ್ಮಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದು ಸವ್ಯಸಾಚಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ‘ವಿರುಷ್ಕಾ’ ಜೋಡಿ ಮದುವೆಗೆ ಎಷ್ಟು ಜೋರಾಗಿ ತಯಾರಿ ನಡೆಸಿತ್ತು ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ಅದಿರಲಿ, ಸವ್ಯಸಾಚಿ ನೀಡಿರುವ ಇನ್ನಷ್ಟು ವಿವರಗಳನ್ನು ನೋಡಿ...

'ಅನುಷ್ಕಾ ಹಾಗೂ ವಿರಾಟ್‌ ಮದುವೆ ಇಟಲಿಯ ಫ್ಲೋರೆನ್ಸ್‌ನಲ್ಲಿ ನಡೆಯುತ್ತದೆ ಎಂದು ಗೊತ್ತಾದ ತಕ್ಷಣ, ದಿರಿಸಿನ ಬಣ್ಣ ತಿಳಿಯಾಗಿಯೇ ಇರಲಿ ಎಂದು ನಿರ್ಧರಿಸಲಾಯಿತು. ಅಲ್ಲಿಯ ಸುಂದರ ವಾತಾವರಣಕ್ಕೆ ವಸ್ತ್ರ ವಿನ್ಯಾಸದ ಚೆಲುವೂ ಹೊಂದಿಕೊಳ್ಳುವಂತಿರಬೇಕು ಎನ್ನುವ ಕಾರಣಕ್ಕೆ ತೆಳು ಗುಲಾಬಿ, ಹಸಿರು ಬಣ್ಣದ ವಿನ್ಯಾಸಕ್ಕೆ ಆದ್ಯತೆ ನೀಡಿದೆವು. ಹೂ ಮತ್ತು ಬಳ್ಳಿಗಳ ವಿನ್ಯಾಸವನ್ನು ಕಸೂತಿಯಲ್ಲಿ ಮೂಡಿಸಿದ್ದೇವೆ. ನೀಡಲ್‌ ಕ್ರಾಫ್ಟ್‌ ಮೂಲಕ ಹಕ್ಕಿಗಳು ಹಾಗೂ ಚಿಟ್ಟೆಗಳ ವಿನ್ಯಾಸ ಒಟ್ಟು ಉಡುಗೆಗೆ ಸಮೃದ್ಧ ನೋಟವನ್ನು ನೀಡಿದೆ. ಸೂಕ್ಷ್ಮ ಕುಸುರಿಗಳನ್ನು ನಮ್ಮ ನಿರೀಕ್ಷೆಯಂತ ಮೂಡಿಸಲು 67 ಕುಶಲಕರ್ಮಿಗಳು ಈ ಲೆಹೆಂಗಾ ವಿನ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಲೆಹೆಂಗಾ ತಯಾರಾಗಲು 32 ದಿನ ಬೇಕಾಯಿತು' ಎಂದು ಸವ್ಯಸಾಚಿ ವಿವರಿಸಿದ್ದಾರೆ.

ಮದುವೆ ಶಾಸ್ತ್ರಕ್ಕೆಂದೇ ಅನುಷ್ಕಾಗೆ ಜಡುವಾ ಆಭರಣವನ್ನೂ ವಿನ್ಯಾಸಗೊಳಿಸಲಾಗಿತ್ತು. ವಿರಾಟ್‌ ಕೊಹ್ಲಿ ದಿರಿಸು ಕೂಡ ಕುಸುರಿ ವಿನ್ಯಾಸದಿಂದ ಶ್ರೀಮಂತಗೊಂಡಿತ್ತು. ನಿಶ್ಚಿತಾರ್ಥಕ್ಕೆ ಅನುಷ್ಕಾ ಗಾಢ ಕೆಂಪು ಬಣ್ಣದ ವೆಲ್ವೆಟ್‌ ಸೀರೆ ಉಟ್ಟಿದ್ದರು. ಸವ್ಯಸಾಚಿ ಅವರ ಗುಲ್ಕಂದ್‌ ಸಂಗ್ರಹದಿಂದ ಈ ಸೀರೆಯನ್ನು ಆಯ್ಕೆ ಮಾಡಲಾಗಿತ್ತು. ಮಿನಿಯೇಚರ್‌ ಪರ್ಲ್‌, ಜರ್ದೋಸಿ ಹಾಗೂ ಮರೋರಿಯ ಕೈಕುಸುರಿ ಮಾಡಲಾಗಿತ್ತು.

ಮೆಹೆಂದಿ ಶಾಸ್ತ್ರಕ್ಕೆ ಹಳದಿ ಬಣ್ಣದ ಲೆಹೆಂಗಾ ತೊಟ್ಟಿದ್ದರು ಅನುಷ್ಕಾ. ವಿಭಿನ್ನ ಕಲೆ ಹಾಗೂ ತಂತ್ರಗಾರಿಕೆಯನ್ನು ಬಳಸಿಕೊಂಡು ವಿನ್ಯಾಸಗೊಳಿಸಲಾಗಿದ್ದ ಈ ದಿರಿಸಿಗೆ ಸಾಂಪ್ರದಾಯಿಕ ಚೆಲುವಿನೊಂದಿಗೆ ಆಧುನಿಕ ಮೆರುಗೂ ಇತ್ತು.

ಜವಾಬ್ದಾರಿ ಲಖನೌ ಹುಡುಗಿ ಮೇಲಿತ್ತು

ಇಟಲಿಯಲ್ಲಿ ದಿಢೀರನೆ, ಅದೂ ಇಷ್ಟು ಅಚ್ಚುಕಟ್ಟಾಗಿ ವಿರುಷ್ಕಾ ಮದುವೆಯಾದರಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದವರಿದ್ದಾರೆ. ಈ ಮದುವೆ ತಯಾರಿಯ ಜವಾಬ್ದಾರಿಯನ್ನು ನಿರ್ವಹಿಸಿದ್ದು ಲಖನೌ ಹುಡುಗಿ ದೇವಿಕಾ ನರೇನ್‌. ‘ಕಳೆದ ಒಂದು ತಿಂಗಳಿಂದಲೇ ಮದುವೆ ತಯಾರಿ ಮಾಡುತ್ತಿದ್ದೆವು. ಆದರೆ ಅದನ್ನು ನಾವು ಬಹಿರಂಗ ಮಾಡುವಂತಿರಲಿಲ್ಲ’ ಎಂದು ‘ದೇವಿಕಾ ವೆಡ್ಡಿಂಗ್‌ ಪ್ಲಾನಿಂಗ್‌ ಕಂಪೆನಿ’ ತನ್ನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ. ಅಂದಹಾಗೆ ಮದುವೆಯ ಚಿತ್ರಗಳನ್ನು ದೇವಿಕಾ ಅವರ ಪತಿಯೇ ಕ್ಲಿಕ್ಕಿಸಿದ್ದಾರೆ. ಈ ಚಿತ್ರಗಳನ್ನು ಸಾಮಾಜಿಕ ಕಾರ್ಯಕ್ಕಾಗಿ ಬಳಸಿಕೊಳ್ಳುವ ಉದ್ದೇಶಧಿಂದ ಚಾರಿಟಿ ಸಂಸ್ಥೆಯೊಂದಕ್ಕೆ ನೀಡಲಿದ್ದಾರಂತೆ ವಿರಾಟ್‌ ದಂಪತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry