ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸು ಬಳಿಕ 5 ವರ್ಷ ಪೂರೈಸಿದ ಮೊದಲ ಸಿಎಂ

Last Updated 16 ಡಿಸೆಂಬರ್ 2017, 6:19 IST
ಅಕ್ಷರ ಗಾತ್ರ

ರಾಯಚೂರು: ‘ದಿ.ದೇವರಾಜು ಅರಸು ಅವರ ಬಳಿಕ ರಾಜ್ಯದಲ್ಲಿ ಐದು ವರ್ಷ ಪೂರ್ಣಗೊಳಿಸುತ್ತಿರುವ ಮೊದಲ ಮುಖ್ಯಮಂತ್ರಿ ನಾನು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ನವ ಕರ್ನಾಟಕ ನಿರ್ಮಾಣ ಸಾಧನಾ ಸಮಾವೇಶ’ ಸಮಾರಂಭದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

‘ನನಗೆ ತೊಡರುಗಾಲು ಹಾಕಲು ಪ್ರತಿಪಕ್ಷಗಳು ಯತ್ನಿಸಿದವು. ಅವರ ಆಟ ನಡೆಯಲಿಲ್ಲ. ಬಸವಣ್ಣ, ಡಾ.ಬಿ.ಆರ್‌.ಅಂಬೇಡ್ಕರ್‌, ಕನಕದಾಸರು ಮತ್ತು ವಾಲ್ಮೀಕಿ ಆದರ್ಶಗಳನ್ನು ಅಳವಡಿಸಿಕೊಂಡು ಅಧಿಕಾರ ನಡೆಸುತ್ತಿದ್ದೇನೆ. ಅವರ ಆಶಯಗಳನ್ನು ಜಾರಿಗೊಳಿಸಬೇಕೆನ್ನುವ ಕನಸು ನನ್ನದಾಗಿದೆ. ಹೀಗಾಗಿ ವಿರೋಧ ಪಕ್ಷಗಳಿಂದ ಏನು ಮಾಡುವುದಕ್ಕೂ ಸಾಧ್ಯವಾಗಿಲ್ಲ’ ಎಂದರು.

‘ಯಡಿಯೂರಪ್ಪ ತಮಟೆ ಹೊಡೆದುಕೊಂಡು ಪರಿವರ್ತನಾ ಯಾತ್ರೆ ಹೊರಟಿದ್ದಾರೆ. ಚರ್ಚಿಸಲು ಒಂದೇ ವೇದಿಕೆಯಲ್ಲಿ ಬನ್ನಿ ಎಂದು ಸವಾಲು ಹಾಕಿದ್ದೇನೆ. ಆದರೆ ಅವರು ಬರುತ್ತಿಲ್ಲ. ಪರಿವರ್ತನಾ ಯಾತ್ರೆಗೆ ಹೋದ ಕಡೆಗಳಲ್ಲಿ ಸಿಎಂ ಹಗರಣಗಳನ್ನು ಒಂದೊಂದೆ ಬಿಡುತ್ತೀನಿ ಎಂದು ಹೇಳಿದ್ದರು. ಬುಟ್ಟಿಯಲ್ಲಿ ಹಾವು ಇಟ್ಟುಕೊಳ್ಳದೆ, ಬರೀ ಪುಂಗಿ ಊದುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

‘ರಾಜ್ಯದಲ್ಲಿ ಯಾವ ಮುಖ್ಯಮಂತ್ರಿಯೂ ಜೈಲಿಗೆ ಹೋಗಿಲ್ಲ. ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಒಬ್ಬರೆ ಜೈಲಿಗೆ ಹೋಗಿದ್ದರು. ಅವರೊಂದಿಗೆ ಜನಾರ್ಧನ ರೆಡ್ಡಿ, ಆನಂದಸಿಂಗ್‌, ಸುರೇಶಬಾಬು, ಎಚ್‌.ಹಾಲಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಕೃಷ್ಣಯ್ಯ ಶೆಟ್ಟಿ ಅವರು ಜೈಲಿಗೆ ಹೋಗಿ ಬಂದಿದ್ದಾರೆ. ಇಂಥವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇದೆಯೇ?’ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ಬಗ್ಗೆ ಮಾತನಾಡಿ ಅವರು, ‘ಪ್ರಧಾನಿ ನರೇಂದ್ರ ಅವರು ಹೇಳುತ್ತಿದ್ದ ಅಚ್ಛೆ ದಿನ್ ಅಂಬಾನಿ, ಅದಾನಿ ಹಾಗೂ ರಾಮದೇವ ಬಾಬಾಗೆ ಬಂದಿದೆ. ಸಾಮಾನ್ಯ ಜನರಿಗೆ ಬಂದಿಲ್ಲ. ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಾಗಿವೆ. ವಿದೇಶದಿಂದ ಕಪ್ಪು ಹಣ ಬರಲೇ ಇಲ್ಲ. ಪ್ರಧಾನಿ ಮೋದಿ ಅವರದ್ದು ಮನ್ ಕಿ ಬಾತ್. ನಮ್ಮದು ಕಾಮ್ ಕಿ ಬಾತ್. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲಮನ್ನಾ ಮಾಡಲು ಪ್ರಧಾನಿ ಒಪ್ಪಲಿಲ್ಲ. ಪ್ರಧಾನಿ ಬಳಿ ನಿಯೋಗದಲ್ಲಿ ಹೋಗಿದ್ದಾಗ ರಾಜ್ಯದ ಬಿಜೆಪಿ ಸಂಸದರು ಪ್ರಧಾನಿ ಮುಂದೆ ತುಟಿಪಿಟಿಕ್ ಎನ್ನಲಿಲ್ಲ’ ಎಂದು ವ್ಯಂಗ್ಯ ಮಾಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದ ರಾಯಚೂರು ಜಿಲ್ಲೆ ಹಾಗೂ ರಾಯಚೂರಿನ ಐದು ತಾಲ್ಲೂಕುಗಳ ಪ್ರಗತಿಯ ಕಿರುಹೊತ್ತಿಗೆ ‘ಸಾಧನಾ ಸಂಭ್ರಮ’ ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು.

‘ಬಿಜೆಪಿ ನುಡಿದಂತೆ ನಡೆದಿಲ್ಲ’

‘ಬಿಜೆಪಿಯವರು ನುಡಿದಂತೆ ನಡೆದಿಲ್ಲ. ಬಿಜೆಪಿ ರೈತ ವಿರೋಧಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಚುನಾವಣೆಯಲ್ಲಿ ಮನೆ ಮನೆಗೆ ಹೋಗಿ ತಿಳಿಸಬೇಕು. ಯಡಿಯೂರಪ್ಪ ಹಸಿರುಶಾಲು ಹಾಕಿಕೊಳ್ಳಲು ಲಾಯಕ್ಕಿಲ್ಲ. ನಾನು ಮೂರು ವರ್ಷ ಮೈಸೂರು ರೈತ ಸಂಘದಲ್ಲಿದ್ದವನು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

* * 

ಯಡಿಯೂರಪ್ಪ ಮಿಷನ್ 150 ಠುಸ್ ಆಗಿದ್ದು, ಈಗ ಹತಾಸೆರಾಗಿದ್ದಾರೆ. ಹೋದ ಕಡೆಗಳಲ್ಲಿ ನನಗೆ ಮತ್ತು ಸರ್ಕಾರಕ್ಕೆ ಮನಸ್ಸಿಗೆ ಬಂದಂತೆ ಬಯ್ಯುತ್ತಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT