ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆಗೂಡು ಕಳ್ಳರ ವಿರುದ್ಧ ಕ್ರಮ

Last Updated 16 ಡಿಸೆಂಬರ್ 2017, 6:25 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಗೂಡು ಕಳ್ಳತನ ಮತ್ತು ನಕಲಿ ರೀಲರ್‌ಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳ ಲಾಗುವುದು ಎಂದು ರೇಷ್ಮೆ ಇಲಾಖೆ ನಿರ್ದೇಶಕ ಕೆ.ಎಸ್‌. ಮಂಜುನಾಥ್‌ ಭರವಸೆ ನೀಡಿದರು. ರೇಷ್ಮೆಗೂಡು ಮಾರುಕಟ್ಟೆಗೆ ಶುಕ್ರವಾರ ಭೇಟಿ ನೀಡಿ ಇಲ್ಲಿನ ವ್ಯವಸ್ಥೆ ಪರಿಶೀಲಿಸಿದ ಅವರು ಅಧಿಕಾರಿಗಳು ಹಾಗೂ ರೀಲರ್‌ಗಳ ಜೊತೆ ಸಭೆ ನಡೆಸಿದರು.

ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯ ಆಗುತ್ತಿರುವುದು ಗಮನಕ್ಕೆ ಬಂದಿದೆ. ಅದರಲ್ಲೂ ಪರ ಊರುಗಳಿಂದ ಬರುವವರು ಹೆಚ್ಚಿನ ತೊಂದರೆಗೆ ಒಳಗಾಗುತ್ತಿದ್ದಾರೆ. ಗೂಡು ಕಳ್ಳತನ ನಿಯಂತ್ರಣಕ್ಕೆ ಅಗತ್ಯಬಿದ್ದಲ್ಲಿ ಪೊಲೀಸರ ನೆರವು ಪಡೆಯಲಾಗುವುದು ಎಂದು ಹೇಳಿದರು.

ಅಧಿಕಾರಿಗಳ ವಿರುದ್ಧವೇ ದೂರು: ಇದಕ್ಕೂ ಮುನ್ನ ರೀಲರ್‌ಗಳು ಮಾರು ಕಟ್ಟೆಗೆ ಸಂಬಂಧಿಸಿದ ದೂರುಗಳನ್ನು ನಿರ್ದೇಶಕರ ಮುಂದಿಟ್ಟರು. ‘ಸದ್ಯ ಮಾರುಕಟ್ಟೆಯಲ್ಲಿನ ಎಲ್ಲ ಅವಾಂತರಗಳಲ್ಲಿ ಇಲ್ಲಿನ ಅಧಿಕಾರಿಗಳ ಪಾಲೂ ಇದೆ. ಅವರಿಗೆ ಗೂಡು ಕೊಳ್ಳುವವರು ಯಾರು, ಕಳ್ಳರು ಯಾರು ಎಂಬುದು ಚೆನ್ನಾಗಿ ಗೊತ್ತಿದೆ. ಅಂತ ಹವರ ಜೊತೆ ಶಾಮೀಲಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ದೂರಿದರು.

‘ಮಾರುಕಟ್ಟೆಗೆ ಸದ್ಯ ದಿನಕ್ಕೆ 35ರಿಂದ 40 ಟನ್‌ನಷ್ಟು ಗೂಡು ಬರುತ್ತಿದೆ. ಅದರಲ್ಲಿ ರೈತರಿಂದ ನಿತ್ಯ 800–1ಸಾವಿರ ಕೆ.ಜಿ.ಗಳಷ್ಟು ಗೂಡು ಕಳ್ಳರ ಪಾಲಾಗುತ್ತಿದೆ. ಮಾರುಕಟ್ಟೆಯಲ್ಲಿ 3050 ನೋಂದಾಯಿತ ರೀಲರ್‌ಗಳು ಇದ್ದಾರೆ. ಇವರಲ್ಲಿ ನಿತ್ಯ ಸುಮಾರು ಒಂದು ಸಾವಿರ ಮಂದಿ ಮಾರುಕಟ್ಟೆಗೆ ಬರುತ್ತಾರೆ. ಜೊತೆಗೆ 600–800 ಮಂದಿ ಅಕ್ರಮವಾಗಿ ಪ್ರವೇಶ ಮಾಡುತ್ತಿದ್ದಾರೆ. ಈ ಮೂಲಕ ರೈತರನ್ನು ಯಾಮಾರಿಸಿ ಕಡಿಮೆ ಬೆಲೆಗೆ ಗೂಡು ಖರೀದಿಸಲಾಗುತ್ತಿದೆ. ಹೀಗಾಗಿ ಅಧಿಕೃತ ರೀಲರ್ ಅಲ್ಲದವರಿಗೆ ಮಾರುಕಟ್ಟೆಗೆ ಪ್ರವೇಶ ನಿಷೇಧಿಸಬೇಕು’ ಎಂದು ಆಗ್ರಹಿಸಿದರು.

ಹೊರಗಡೆಯೇ ಖರೀದಿ: ಮಾರುಕಟ್ಟೆಗೆ ಬರುವ ಗೂಡು ತರುವ ರೈತರನ್ನು ಕೆಲವರು ನಗರದ ಹೊರವಲಯದಲ್ಲಿಯೇ ಅಡ್ಡಗಟ್ಟಿ ಕಡಿಮೆ ಬೆಲೆಯಲ್ಲಿ ಖರೀದಿ ಮಾಡು ತ್ತಿದ್ದಾರೆ. ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿಲ್ಲ. ಸರ್ಕಾರಕ್ಕೆ ಶುಲ್ಕ ನಷ್ಟವಾಗುವ ಜೊತೆಗೆ ರೈತರಿಗೂ ಅನ್ಯಾಯವಾಗುತ್ತಿದೆ ಎಂದು ರೀಲರ್‌ಗಳ ಸಂಘದ ಅಧ್ಯಕ್ಷ ಮುಹೀಬ್ ಪಾಷ ಆರೋಪಿಸಿದರು.

‘ಗೌಸಿಯಾ ಕಾಲೇಜು, ಕೆಂಪೇಗೌಡನ ದೊಡ್ಡಿ ಹಾಗೂ ರೈಲು ನಿಲ್ದಾಣಗಳ ಬಳಿ ಹೀಗೆ ಖಾಸಗಿಯಾಗಿ ಗೂಡು ಖರೀದಿ ಸಲಾಗುತ್ತಿದೆ. ಹೀಗೆ ಮುಕ್ತವಾಗಿಯೇ ಗೂಡು ಕೊಳ್ಳಲು ಅವಕಾಶ ಇದ್ದರೆ ಮಾರುಕಟ್ಟೆಯ ಅಗತ್ಯ ಏನಿದೆ? ಮಾರುಕಟ್ಟೆಯನ್ನು ಬಂದ್ ಮಾಡಿ ನಮಗೂ ಮುಕ್ತವಾಗಿ ಖರೀದಿಗೆ ಅವಕಾಶ ನೀಡಿ’ ಎಂದು ಉದ್ಯಮಿ ಫರ್ವೀಜ್‌ ಪಾಷ ಆಗ್ರಹಿಸಿದರು.

ಮಾರುಕಟ್ಟೆಗೆ ದಕ್ಷ ಅಧಿಕಾರಿಗಳನ್ನು ನಿಯೋಜಿಸಬೇಕು. ಹೊರಗುತ್ತಿಗೆ ಆಧಾರದಲ್ಲಿ ಹೆಚ್ಚುವರಿ ನೌಕರರನ್ನು ನೇಮಿಸಿಕೊಳ್ಳಬೇಕು. ಅಧಿಕೃತ ರೀಲರ್‌ಗಳಿಗೆ ಗುರುತಿನ ಚೀಟಿ ವ್ಯವಸ್ಥೆ ಮಾಡಬೇಕು. ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಬೇಕು. ಮೂಲ ಸೌಕರ್ಯಗಳನ್ನು ವಿಸ್ತರಿಸಬೇಕು. ಆರ್‌ಟಿಜಿಎಸ್‌ ಮೂಲಕ ರೈತರಿಗೆ ಹಣ ಸಂದಾಯ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ನಿರ್ದೇಶಕರ ಮುಂದೆ ಇಡಲಾಯಿತು. ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಕುಮಾರ್, ಉಪ ನಿರ್ದೇಶಕ ಮುನ್ಶಿ ಬಸಯ್ಯ ಇದ್ದರು.

ಭೇಟಿ ವೇಳೆ ಗೂಡು ಕಳವು!

ನಿರ್ದೇಶಕರು ಮಾರುಕಟ್ಟೆಗೆ ಭೇಟಿ ನೀಡಿದ್ದ ವೇಳೆಯಲ್ಲಿಯೇ ಕಳ್ಳರು ಕೈಚಳಕ ತೋರಿದ್ದು, ಗೂಡು ಕದಿಯುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಸಭೆಯ ಸಂದರ್ಭ ರೀಲರ್‌ಗಳು ಈ ವಿಷಯವನ್ನು ನಿರ್ದೇಶಕರ ಗಮನಕ್ಕೆ ತಂದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿ ಬೆಳಿಗ್ಗೆ 11.47ರ ಸುಮಾರಿಗೆ ವ್ಯಕ್ತಿಯೊಬ್ಬರು ರೈತರಿಂದ ಸುಮಾರು ಏಳೆಂಟು ಕೆ.ಜಿ.ಯಷ್ಟು ಗೂಡು ಕದ್ದು ಬ್ಯಾಗಿಗೆ ಇಳಿಸುತ್ತಿರುವುದು ಕಂಡುಬಂದಿತು.

‘ಹೀಗೆ ಕದ್ದ ಗೂಡುಗಳನ್ನು ಕಳ್ಳರು ಇದೇ ಮಾರುಕಟ್ಟೆಯಲ್ಲಿಯೇ ವ್ಯಾಪಾರ ಮಾಡುತ್ತಿದ್ದಾರೆ. ಅಧಿಕಾರಿಗಳು ಕ್ರಮ ಕೈಗೊಳ್ಳದೇ ಮಧ್ಯವರ್ತಿಗಳಂತೆ ವರ್ತಿಸುತ್ತಿದ್ದಾರೆ’ ಎಂದು ಫರ್ವೀಜ್‌ ಪಾಷ ದೂರಿದರು.

* * 

ಕೇವಲ ಉದ್ದಿಮೆಯಲ್ಲಿ ತೊಡಗಿಸಿಕೊಂಡವರಿಗೆ ರೀಲರ್‌ ಗುರುತು ಪತ್ರ ವಿತರಿಸಿ, ಮಾರುಕಟ್ಟೆಗೆ ಪ್ರವೇಶ ನೀಡಲಾಗುವುದು
ಕೆ.ಎಸ್. ಮಂಜುನಾಥ್‌ ನಿರ್ದೇಶಕ, ರೇಷ್ಮೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT