ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಮೇಲಿನ ಅನಧಿಕೃತ ಮಳಿಗೆ ತೆರವು

Last Updated 16 ಡಿಸೆಂಬರ್ 2017, 6:50 IST
ಅಕ್ಷರ ಗಾತ್ರ

ಶಹಾಪುರ: ನಗರದ ಬೀದರ್‌–ಶ್ರೀರಂಗಪಟ್ಟಣದ ರಾಜ್ಯ ಹೆದ್ದಾರಿಯನ್ನು ಒತ್ತುವರಿ ಮಾಡಿಕೊಂಡು ಎಡ ಮತ್ತು ಬಲಭಾಗದಲ್ಲಿ ಅನಧಿಕೃತವಾಗಿ ಸ್ಥಾಪಿಸಿದ್ದ ಮಳಿಗೆಗಳನ್ನು ನಗರಸಭೆ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು.

‘ಕೆಲ ವ್ಯಾಪಾರಿಗಳು ರಸ್ತೆಯನ್ನು ಅತಿಕ್ರಮಿಸಿಕೊಂಡು ಚರಂಡಿ ಮೇಲೆ ಮಳಿಗೆಗಳನ್ನು ಸ್ಥಾಪಿಸಿದ್ದರು. ಇದರಿಂದ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗಿತ್ತು. ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ನಗರಸಭೆಯ ಆಡಳಿತಾಧಿಕಾರಿಯು ಆಗಿರುವ ಜೆ.ಮಂಜುನಾಥ ಅವರು ನಿರ್ದೇಶನ ನೀಡಿದ್ದರಿಂದ ತೆರವು ಕಾರ್ಯ ನಡೆಸಲಾಗಿದೆ’ ಎಂದು ಪೌರಾಯುಕ್ತ ರಮೇಶ ನಾಯಕ ತಿಳಿಸಿದರು.

‘ರಸ್ತೆ ಬದಿಯಲ್ಲಿ ಮಳಿಗೆ ಇಟ್ಟು ಕೊಂಡು ಹೊಟ್ಟೆಪಾಡು ನಡೆಸುತ್ತಿದ್ದೆವು. ಪಾದಚಾರಿಗಳಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆ ನೀಡುತ್ತಿರಲಿಲ್ಲ. ಅಧಿಕಾರಿಗಳು ಅನವಶ್ಯಕವಾಗಿ ಮಳಿಗೆಯನ್ನು ತೆರವುಗೊಳಿಸಿ ಬೀದಿಗೆ ತಳ್ಳಿದ್ದಾರೆ. ಅಲ್ಲದೆ, ಡಿ.17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅದೇ ದಿನ ಬಸವೇಶ್ವರ ಪ್ರತಿಮೆ ಅನಾವರಣ ಕಾರ್ಯಕ್ರಮ ಇರುವ ಕಾರಣ ತೆರವು ಮಾಡಿರುವುದು ಸರಿಯಲ್ಲ’ ಎಂದು ಬೀದಿಬದಿಯ ವ್ಯಾಪಾರಿಯೊಬ್ಬರು ದೂರಿದ್ದಾರೆ.

‘ಹೆದ್ದಾರಿ ಅಕ್ಕಪಕ್ಕದಲಿಯೇ ವಾಣಿಜ್ಯ ಮಳಿಗೆ, ವಸತಿಗೃಹ, ಬಾರ್ ಹಾಗೂ ರೆಸ್ಟೋರೆಂಟ್‌ಗಳನ್ನು ಪ್ರಭಾವಿ ರಾಜಕೀಯ ವ್ಯಕ್ತಿಗಳು ಸ್ಥಾಪಿಸಿದ್ದಾರೆ. ವಾಹನ ನಿಲುಗಡೆಯ ಸ್ಥಳದಲ್ಲಿ ಮಳಿಗೆ ಯನ್ನು ನಿರ್ಮಿಸಿದ್ದರಿಂದ ರಸ್ತೆಯ ಮೇಲೆ ವಾಹನವನ್ನು ನಿಲ್ಲಿಸುತ್ತಾರೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲವೇ? ಬಡವರಿಗೆ ಒಂದು ನ್ಯಾಯ; ಶ್ರೀಮಂತರಿಗೆ ಇನ್ನೊಂದು ನ್ಯಾಯವನ್ನು ಅಧಿಕಾರಿಗಳು ಚಲಾಯಿಸುತ್ತಿರುವುದು ಸರಿಯಲ್ಲ’ ಎಂದು ಸಿಪಿಐ (ಎಂ) ಮುಖಂಡ ಮಲ್ಲಯ್ಯ ದೋರನಹಳ್ಳಿ ಆರೋಪಿಸಿದ್ದಾರೆ.

‘ವಾಣಿಜ್ಯ ಮಳಿಗೆಗಳಲ್ಲಿ ವಾಹನ ನಿಲುಗಡೆಗೆ ಇರುವ ಜಾಗವನ್ನು ತೆರವುಗೊಳಿಸಬೇಕು’ ಎಂದು ಮಲ್ಲಯ್ಯ ಪೊಲಂಪಲ್ಲಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT