3

ಶೌಚಾಲಯ ಕಲ್ಪಿಸುವಂತೆ ಪ್ರತಿಭಟನೆ

Published:
Updated:

ಚಿಂತಾಮಣಿ: ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು, ಶೌಚಾಲಯ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ನಗರದ ಮಹಿಳಾ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಎಬಿವಿಪಿ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟಿಸಿದರು.

ಕಾಲೇಜಿನಿಂದ ಹೊರಟ ವಿದ್ಯಾರ್ಥಿನಿಯರು, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಯೋಗಿನಾರೇಯಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸ್ವಲ್ಪ ಕಾಲ ಸಾಂಕೇತಕವಾಗಿ ರಸ್ತೆ ತಡೆ ನಡೆಸಿದರು. ನಂತರ ನಗರಸಭೆಗೆ ಮುತ್ತಿಗೆ ಹಾಕಿದರು.

ಎಬಿವಿಪಿ ವಿಭಾಗೀಯ ಸಂಚಾಲಕ ಮಂಜುನಾಥರೆಡ್ಡಿ ಮಾತನಾಡಿ, ಗ್ರಾಮೀಣ ಭಾಗಗಳಿಂದ ಸಾವಿರಾರು ವಿದ್ಯಾರ್ಥಿನಿಯರು ಕಾಲೇಜಿಗೆ ಬರುತ್ತಾರೆ. ಕುಡಿಯುವ ನೀರು, ಶೌಚಾಲಯ ಸೌಲಭ್ಯ ಸಮರ್ಪಕವಾಗಿಲ್ಲ. ಕೊಠಡಿಗಳ ಕೊರತೆಯಿಂದ ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೂ ತರಗತಿಗಳು ನಡೆಯುತ್ತವೆ. ಕನಿಷ್ಠ ಮೂಲ ಸೌಲಭ್ಯಗಳಿಲ್ಲದೆ ಅನೇಕ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿದ್ದಾರೆ. ಅನೇಕ ಬಾರಿ ಈ ಬಗ್ಗೆ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಜಿಲ್ಲಾ ಸಂಚಾಲಕ ಸುರೇಶ್‌ ಮಾತನಾಡಿ, ಕಾಲೇಜಿನಲ್ಲಿ 2,650 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಬಹುತೇಕ ಬಡವರು, ದಲಿತರು, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಇದ್ದಾರೆ. ಬಿಎ, ಬಿಎಸ್ಸಿ, ಬಿ.ಕಾಂ, ಎಂ.ಎ, ಎಂಎಸ್ಸಿ, ಎಂ.ಕಾಂ ತರಗತಿಗಳು ನಡೆಯುತ್ತಿವೆ. 4 ವರ್ಷಗಳಿಂದ ಸಾಕಷ್ಟು ಬಾರಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಲಾಗಿದೆ. ಪ್ರತಿಭಟನೆಗಳನ್ನು ನಡೆಸಿದ್ದರೂ ಸ್ಪಂದಿಸಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಹಳ್ಳಿಯಿಂದ ದೆಹಲಿಯವರೆಗೂ ಎಲ್ಲ ನಾಯಕರು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಭಾಷಣ ಮಾಡುತ್ತಾರೆ. ಹೆಣ್ಣುಮಕ್ಕಳ ಕಾಲೇಜಿಗೆ ಕನಿಷ್ಠ ಕುಡಿಯುವ ನೀರು, ಶೌಚಾಲಯ ಸೌಲಭ್ಯವನ್ನು ಒದಗಿಸುತ್ತಿಲ್ಲ. ಕೊನೆಯದಾಗಿ ಮನವಿಯನ್ನು ನೀಡುತ್ತಿದ್ದೇವೆ. ಇದಕ್ಕೂ ಸ್ಪಂದಿಸದಿದ್ದರೆ ಮುಂದೆ ಉಗ್ರವಾದ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಸುಜಾತಾ ಶಿವಣ್ಣ ವಿದ್ಯಾರ್ಥಿಗಳಿಂದ ಮನವಿ ಸ್ವೀಕರಿಸಿದರು. 2–3 ದಿನಗಳ ಒಳಗಾಗಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ವಿದ್ಯಾರ್ಥಿ ಮುಖಂಡರಾದ ಸೌಜನ್ಯ, ತೇಜು, ಸ್ನೇಹಾ, ಶಿರೀಷ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry