ಲಿಂಗತತ್ವದೊಡನೆ ಬೆರೆತ ವಚನ ವಿಚಾರ

7

ಲಿಂಗತತ್ವದೊಡನೆ ಬೆರೆತ ವಚನ ವಿಚಾರ

Published:
Updated:
ಲಿಂಗತತ್ವದೊಡನೆ ಬೆರೆತ ವಚನ ವಿಚಾರ

ವಚನಗಳು ಅರಿವಿನ ಮೂಲ ಸೆಲೆಗಳು. ಸರಳ ಶುದ್ಧ ಕಾಯಕಜೀವಿಗಳಾದ ಶರಣರ ಅಂತಃಕರಣದ ಪ್ರಾಮಾಣ್ಯದಲ್ಲಿ ಹುಟ್ಟಿದಂಥವು. ಸಮಾಜಮುಖಿ ಚಿಂತನೆಗಳನ್ನು ಲಿಂಗತತ್ವದೊಂದಿಗೆ ಬೆರೆಸಿದ ದರ್ಶನವೇ ವಚನಗಳ ಒಡಲು. ಕಲ್ಯಾಣ ಕ್ರಾಂತಿಯ ಸರ್ವ ಸಮಾತೆಯ ಬೀಜಗಳೂ ಇಲ್ಲಿ ಹುದುಗಿವೆ. ಹೀಗಾಗಿ ಬೇರೆ ಬೇರೆ ಆಯಾಮಗಳಲ್ಲಿ ಅವುಗಳನ್ನು ನೋಡಬೇಕಾಗುತ್ತದೆ. ಅಂಥದೊಂದು ಪ್ರಯತ್ನವೇ ಪ್ರಸ್ತುತ ಪುಸ್ತಕ. ವಚನಗಳ ವೈಚಾರಿಕತೆ ಮತ್ತು ಆಧ್ಯಾತ್ಮಿಕತೆಯ ಬೆಸುಗೆಯಲ್ಲಿ ಅಡಕವಾಗಿರುವ ಧರ್ಮ ಮತ್ತು ನೀತಿಗಳನ್ನು ಅಷ್ಟಾವರಣ, ಪಂಚಾಚಾರ ಮತ್ತು ಷಟಸ್ಥಲಗಳ ಮೂಲಕ ಡಾ.ಎನ್.ಜಿ.ಮಹಾದೇವಪ್ಪನವರು ತೆರೆದು ತೋರಿಸಿದ್ದಾರೆ. ಈ ಹಿಂದೆ ‘ವಚನಗಳಲ್ಲಿ ತತ್ವ ಮೀಮಾಂಸೆ’ ಎಂಬ ಮೌಲಿಕ ಪುಸ್ತಕವನ್ನು ಬರೆದಿದ್ದ ಲೇಖಕರು ಲಿಂಗಾಯತ ಧರ್ಮದ ಧಾರ್ಮಿಕ ವಿಷಯಗಳನ್ನು ಇಲ್ಲಿ ಚರ್ಚಿಸಿದ್ದಾರೆ.

ಬಾಹ್ಯ ಪರಿಕರಗಳಾದ ಅಷ್ಟಾವರಣಗಳು ವ್ಯಕ್ತಿಯನ್ನು ಲಿಂಗಾಯತ ಧರ್ಮದ ಪರಿಧಿಯೊಳಗೆ ತರಲು ನೆರವಾದರೆ, ಷಟಸ್ಥಲಗಳ ಸಾಧನೆಯಿಂದ ವ್ಯಕ್ತಿಯು ಧರ್ಮದ ಚೌಕಟ್ಟನ್ನು ಮೀರಿ ಬಯಲಲ್ಲಿ ಬಯಲಾಗಿ ಲಿಂಗಾಂಗ ಯೋಗಿಯಾಗುತ್ತಾನೆ. ಅಷ್ಟಾವರಣಗಳಾದ ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ ಮತ್ತು ಪ್ರಸಾದ ಶಬ್ದಗಳು ಬಸವ ಪೂರ್ವದಲ್ಲೇ ಇದ್ದರೂ ಬಸವಣ್ಣನವರ ಕಾಲದಲ್ಲಿ ಇವುಗಳಿಗೆ ವಿಶಿಷ್ಟ ಅರ್ಥ ಮತ್ತು ಆಚರಣೆಗಳು ಸೇರಿಕೊಂಡವು. ಜಂಗಮ ಪದದ ಅರ್ಥವ್ಯಾಪ್ತಿಯನ್ನು ವಿಸ್ತರಿಸುತ್ತಾ ‘ಸಾಧ್ಯ ಜಂಗಮ’ ಎನ್ನುವ ಹೊಸ ವಿಚಾರವನ್ನು ಲೇಖಕರು ಮಂಡಿಸಿದ್ದಾರೆ. ಜಾತಿಯ ಸೀಮಿತ ವಲಯಕ್ಕೆ ಯಾವ ಸಂಬಂಧವೂ ಇಲ್ಲದ ಶರಣರ ‘ಜಂಗಮ’ ಪರಿಕಲ್ಪನೆಯಲ್ಲಿ ಯಾರು ಬೇಕಾದರೂ ಸಾಧನೆಯಿಂದ ಜಂಗಮಲಿಂಗವಾಗಬಹುದು. ಅಂದರೆ ಎಲ್ಲರೂ ‘ಸಾಧ್ಯ ಜಂಗಮರೇ’. ಪ್ರಸಾದ ಮತ್ತು ಪಾದೋದಕ ತತ್ವಗಳು ವಾಚ್ಯಾರ್ಥವನ್ನೂ ಮೀರಿ ನಿಲ್ಲುವ ಪ್ರಮುಖ ಪರಿಕಲ್ಪನೆಗಳು. ಅವುಗಳನ್ನು ಆ ನಿಟ್ಟಿನಲ್ಲಿ ಸ್ವಲ್ಪ ಮಟ್ಟಿಗೆ ನೋಡಿದ್ದರೂ ಮತ್ತಷ್ಟು ವೈಚಾರಿಕವಾಗಿ ವಿವೇಚಿಸಬಹುದಿತ್ತು ಎನಿಸುತ್ತದೆ.

ಸತ್ತಾಗ ಸಿಗುವ ಮೋಕ್ಷದ ಪರಿಕಲ್ಪನೆ ಶರಣರಲ್ಲಿ ಇಲ್ಲ. ಅವರು ಬದುಕಿರುವಾಗಲೇ ನಿತ್ಯ ಮುಕ್ತರು. ಇದಕ್ಕೆ ನೆರವಾಗುವ ಷಟಸ್ಥಲ ಯೋಗವನ್ನು ಲೇಖಕರು ವಿಶ್ಲೇಷಿಸುವ ರೀತಿ ಕುತೂಹಲಕಾರಿಯಾಗಿದೆ. ಇಲ್ಲಿ ಆರು ಭಕ್ತಿಗಳನ್ನು ವಿವರಿಸಿದ್ದಾರೆ. ಅದರಲ್ಲೂ ಭಕ್ತ ಸ್ಥಲದ ವಿಶ್ವಾಸ ಭಕ್ತಿಯನ್ನು ಸಾದ್ಯಂತವಾಗಿ ಹೇಳುತ್ತಾ ನಂಬಿಕೆ ಮತ್ತು ವಿಶ್ವಾಸಗಳ ನಡುವೆ ಸ್ಪಷ್ಟತೆ ನೀಡುವ ರೀತಿ ಗಮನ ಸೆಳೆಯುತ್ತದೆ. ಸಾಧಕರು ಒಂದಾದ ನಂತರ ಒಂದು ಹಂತವನ್ನೇರುವ ಕ್ರಮವೇ ಷಟಸ್ಥಲಗಳೆಂದು ಡಾ. ಆರ್.ಸಿ. ಹಿರೇಮಠ ಅವರಿಂದ ಹಿಡಿದು ಇದುವರೆಗಿನ ಅನೇಕ ವಿದ್ವಾಂಸರ ಅಭಿಪ್ರಾಯವಾಗಿತ್ತು. ಆದರೆ ‘ಸ್ಥಲಗಳು ಹಂತಗಳೋ, ಅಂಗಗಳೋ’ ಎನ್ನುವ ಉಪ ಅಧ್ಯಾಯದಲ್ಲಿ ಇವು ಒಟ್ಟಿಗೆ ವ್ಯಕ್ತಿಯಲ್ಲಿ ಸಂಭವಿಸಬೇಕಾದ ಅವಶ್ಯಕ ಗುಣಗಳು ಎಂಬುದನ್ನು ಸೊಗಸಾಗಿ ನಿರೂಪಿಸಿದ್ದಾರೆ.

ಶುದ್ಧ ಶೈವ, ವೀರಶೈವ ಹಾಗೂ ವೈದಿಕಗಳಿಗಿಂತ ಲಿಂಗಾಯತ ಧರ್ಮವು ಹೇಗೆ ಭಿನ್ನವಾಗಿದೆ ಎಂಬ ಮಹತ್ವದ ಚಾರಿತ್ರಿಕ ಅಂಶವು ಅಲ್ಲಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪಗೊಂಡಿದೆ. ಬೌದ್ಧ ಧರ್ಮ ಹಾಗೂ ಇತರೆ ತತ್ವಜ್ಞಾನಗಳ ಹೋಲಿಕೆಗಳನ್ನು ನೀಡುತ್ತಾ ವಿಚಾರಗಳನ್ನು ಸ್ಪಷ್ಟಪಡಿಸುವ ರೀತಿ ಪರಿಣಾಮಕಾರಿಯಾಗಿದೆ. ಆತ್ಮಶುದ್ಧಿಗೆ ಮತ್ತು ಆ ಮೂಲಕ ಸ್ವಚ್ಛ ಸಮಾಜದ ನಿರ್ಮಾಣಕ್ಕೆ ನೆರವಾಗುವ ನೀತಿಯನ್ನು ನೂರಾರು ವಚನಗಳಲ್ಲಿ ಶರಣರು ಬರೆದಿಟ್ಟಿದ್ದಾರೆ. ಅವುಗಳ ಕುರಿತ ಸಂಕ್ಷಿಪ್ತ ಮಾಹಿತಿಯೂ ಇಲ್ಲಿದೆ. ಶರಣರ ಶುದ್ಧ ವಿಚಾರಗಳು ಸಂಕುಚಿತ ಜಾತಿಯ ಅರ್ಥ ಪಡೆದುಕೊಂಡದ್ದು ಹೇಗೆ? ಕಾಲದ ಹೊಗೆಯಲ್ಲಿ ಕಾಣದಾಗಿದೆ ಎಂಬ ಲೇಖಕರ ವಿಷಾದವು ಓದುಗರಲ್ಲೂ ಮೂಡುತ್ತದೆ. ಲಿಂಗಾಯತ ಧರ್ಮದ ಆಚರಣೆಗಳನ್ನು ವಚನಗಳ ಆಧಾರದಲ್ಲಿ ತಿಳಿದುಕೊಳ್ಳಲು ನೆರವಾಗುವ ಒಂದು ಮಹತ್ವದ ಪುಸ್ತಕ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry