3

ಟಿ.ವಿ. ವಾಹಿನಿಗಳ ನೈತಿಕ ಪ್ರಜ್ಞೆ

Published:
Updated:
ಟಿ.ವಿ. ವಾಹಿನಿಗಳ ನೈತಿಕ ಪ್ರಜ್ಞೆ

ಟಿ.ವಿ. ಮಾಧ್ಯಮ ಮತ್ತು ಉದ್ಯಮ ಹೆಚ್ಚು ಅಪಾಯಕಾರಿಯಾಗಲು ಹಲವು ಕಾರಣಗಳಿವೆ. ದೃಶ್ಯ, ಧ್ವನಿ ಮತ್ತು ಅನೇಕ ಸಿನಿಮೀಯ ತಂತ್ರಗಳು, ಮಾದಕ ನಟ, ನಟಿಯರು ಮತ್ತು ಇಫೆಕ್ಟ್‌ಗಳಿಂದಾಗಿ ಟಿ.ವಿ. ಮಾಧ್ಯಮ ಅತ್ಯಂತ ಆಕರ್ಷಕ ಮತ್ತು ಪರಿಣಾಮಕಾರಿ. ನಾವು ನಮ್ಮ ಮನೆಯಲ್ಲಿಯೇ ಟಿ.ವಿ. ನೋಡುತ್ತೇವೆ. ಮಕ್ಕಳು, ದೊಡ್ಡವರು ಎಲ್ಲರೂ ಒಟ್ಟಿಗೆ ಕುಳಿತು ನೋಡುತ್ತೇವೆ. ಕೆಲವೊಮ್ಮೆ, ಮುಖ್ಯವಾಗಿ ವ್ಯಕ್ತಿತ್ವ ಇನ್ನೂ ವಿಕಾಸಗೊಳ್ಳುತ್ತಿರುವ ಹಂತದಲ್ಲಿರುವ ಎಳೆಯ ಮಕ್ಕಳು ಮತ್ತು ಯುವಜನ ಒಬ್ಬೊಬ್ಬರೇ ಏಕಾಂತದಲ್ಲಿಯೂ ಕುಳಿತು ನೋಡಬಹುದು. ಇವೆಲ್ಲವೂ ಟಿ.ವಿ.ಯನ್ನು ಎಚ್ಚರಿಕೆಯಿಂದ ಗಮನಿಸಬೇಕಾದ ಮಾಧ್ಯಮವನ್ನಾಗಿಸುತ್ತವೆ.

ಇನ್ನು ಟಿ.ವಿ. ಒಂದು ಬಹುಕೋಟಿ ಬಂಡವಾಳಶಾಹಿ ಉದ್ಯಮವೂ ಆಗಿದೆ. ಹಣ ಹಾಕಿ ಹಣ ಗಳಿಸುವುದು ಅದರ ಮೂಲ ಉದ್ದೇಶ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಇನ್ನೊಂದು ಬಹುದೊಡ್ಡ ಸಮಸ್ಯೆಯೆಂದರೆ ಬಾಹುಳ್ಯ. 1990ಕ್ಕಿಂತ ಮುಂಚೆ ಭಾರತದಲ್ಲಿದ್ದದ್ದು ಕೇವಲ ಕೇಂದ್ರ ಸರಕಾರದ ಸ್ವಾಮ್ಯದ ದೂರದರ್ಶನ ಸಂಸ್ಥೆ ಮಾತ್ರ. ಆದರೆ. ಇವತ್ತು ದೇಶದಲ್ಲಿ 850ಕ್ಕೂ ಹೆಚ್ಚು ವಾಹಿನಿಗಳಿವೆ. ದಿನಕ್ಕೆ 24 ಗಂಟೆ ಕಾರ್ಯಕ್ರಮ ಪ್ರಸಾರ ಮಾಡುತ್ತಿವೆ. ನಮ್ಮ ಮನೆಯ ಟಿ.ವಿ.ಯಲ್ಲಿ ಬರೀ 200 ಚಾನೆಲ್‌ಗಳು ಬರುತ್ತವೆ ಎಂದಾದರೆ, ನಾವು ದಿನಕ್ಕೆ ಸರಾಸರಿ 4 ಗಂಟೆ ಕಾಲ ಟಿ.ವಿ. ನೋಡುತ್ತೇವೆ ಎಂದಾದರೆ, ಆ ನಾಲ್ಕು ಗಂಟೆಯಲ್ಲಿ ನಮಗೆ ನಿಜವಾಗಿಯೂ ಲಭ್ಯವಿರುವ ಕಾರ್ಯಕ್ರಮಗಳ ಅವಧಿ 200x24= 4,800 ಗಂಟೆ.

ಹೀಗಾಗಿ, ಪ್ರತಿಯೊಂದು ಚಾನೆಲ್‌ನ ಪ್ರತಿ ಕಾರ್ಯಕ್ರಮವೂ ನಿಗದಿತ ಸಮಯದಲ್ಲಿ ಇರುವಷ್ಟೇ ವೀಕ್ಷಕರನ್ನು ಸೆಳೆಯಬೇಕಾಗುತ್ತದೆ. ಇತರ ಚಾನೆಲ್‌ ತೊರೆದು ತನ್ನತ್ತ ಬರಮಾಡಿಕೊಳ್ಳುವ ಪ್ರಯತ್ನ ಮಾಡಬೇಕಾದುದು ಅನಿವಾರ್ಯ. ಇದಕ್ಕೆ ಜನಪ್ರಿಯ ಹೆಸರು ಟಿ.ಆರ್‌.ಪಿ. ಇದನ್ನು ಗಳಿಸಲು ಸಂಸ್ಥೆಗಳು ಏನನ್ನು ಬೇಕಾದರೂ ಮಾಡುವುದಕ್ಕೆ ಸಿದ್ಧವಾಗಿಬಿಡುವುದೇ ಉದ್ಯಮದ ಧರ್ಮವಾಗಿಬಿಡುತ್ತದೆ.

ಹಲವರು ಮೋಸ, ದರೋಡೆ, ಕೊಲೆ, ಸ್ವಹತ್ಯೆ ಮಾಡಿಕೊಂಡು ಸಿಕ್ಕಿಹಾಕಿಕೊಂಡಾಗ ತಮ್ಮ ಅಂಥ ಕೃತ್ಯಕ್ಕೆ ನಿರ್ದಿಷ್ಟ ಸಿನಿಮಾ ಅಥವಾ ಟಿ.ವಿ. ಧಾರಾವಾಹಿ ಕಾರಣ ಎಂದು ಹೇಳಿರುವುದನ್ನು ನೋಡುತ್ತೇವೆ. ಇದು ಕೆಲವೊಮ್ಮೆಯಾದರೂ ನಿಜವಾಗಿದ್ದರೆ ಇದು ಅತ್ಯಂತ ಗಂಭೀರ ವಿಚಾರವೇ. ಆದರೆ, ಇಂಥ ಯಾವುದೇ ಕುಕೃತ್ಯ, ದುಸ್ಸಾಹಸಕ್ಕಾಗಿ ಒಂದು ವಾಹಿನಿ, ಒಂದು ಕಾರ್ಯಕ್ರಮವನ್ನು ನಿರ್ದಿಷ್ಟವಾಗಿ ದೂಷಿಸುವುದು ಕಾನೂನು ರೀತಿಯಲ್ಲಂತೂ ನಿಲ್ಲುವುದಿಲ್ಲ. ಇಲ್ಲಿ ನಿಯಮವಿದೆ. ನೀತಿ ಇದೆ. ಟಿ.ವಿ. ವಾಹಿನಿಗಳು ನೆಲದ ನಿಯಮಗಳನ್ನು ಅಲ್ಪಸ್ವಲ್ಪ ಅನುಸರಿಸುವ ಸೋಗನ್ನು ಹಾಕುತ್ತವೆ, ಆದರೆ, ನೀತಿ?

ಈ ಕುರಿತು ಕೇಳಿದಾಗ– ನಾವು ಜನ ಕೇಳಿದ್ದನ್ನು ಕೊಡುತ್ತೇವೆ. ಎಲ್ಲ ಬಗೆಯ ವೀಕ್ಷಕರನ್ನು ನಾವು ತಲುಪಬೇಕಾಗಿದೆ. ನೀವು ನಮ್ಮ ಕಾರ್ಯಕ್ರಮ ನೋಡಲೇಬೇಕೆಂದಿಲ್ಲವಲ್ಲ. ನಿಮ್ಮ ಕೈಯಲ್ಲಿ ರಿಮೋಟ್ ಇದೆಯಲ್ಲ! ನಾವು ನಿಮಗೆ ಆಯ್ಕೆಯ ಸ್ವಾತಂತ್ರ್ಯ ನೀಡಿದ್ದೇವೆ ಎನ್ನಲಾಗುತ್ತದೆ. ನಿಮಗೆ ದರಿ ಬೇಕೋ, ಪುಲಿ ಬೇಕೋ ಆಯ್ಕೆ ನಿಮ್ಮದೇ ಎನ್ನುವಂತೆ.

ಈ ಸ್ಥಿತಿಯ ಮೇಲೆ ಏನಾದರೂ ನಿಯಂತ್ರಣ ಸಾಧ್ಯವೇ? ಸೆನ್ಸಾರ್ ಮೂಲಭೂತ ಕಾನೂನಿನ ಪ್ರಕಾರ ನಿಜವೆಂದರೆ ಒಬ್ಬರ ಮದುವೆಯ ವಿಡಿಯೋವನ್ನೂ ಕೂಡ ತಾವಷ್ಟೇ ಅಲ್ಲದೇ ಇತರರಿಗೆ (ಸಾರ್ವಜನಿಕವಾಗಿ) ತೋರಿಸಬೇಕು ಎಂದರೆ ಅದಕ್ಕಾಗಿ ಪ್ರಮಾಣ ಪತ್ರ ಪಡೆದಿರಬೇಕು ಎಂಬ ನಿಯಮವಿದೆ. ಆದರೆ, ವಾಸ್ತವದಲ್ಲಿ ಕೇಂದ್ರ ಚಲನಚಿತ್ರ ಪ್ರಮಾಣ ಮಂಡಳಿ (ಸೆನ್ಸಾರ್ ಬೋರ್ಡ್) ಸಿನಿಮಾ ಮತ್ತು ಜಾಹೀರಾತುಗಳನ್ನಷ್ಟೇ ನೋಡಿ ಪ್ರಮಾಣ ಪತ್ರ ನೀಡುವುದರಲ್ಲಿ ಹೈರಾಣಾಗಿಬಿಡುತ್ತದೆ. ಇನ್ನು ನೂರಾರು ಚಾನೆಲ್‌ಗಳ ಲಕ್ಷಾಂತರ ಕಾರ್ಯಕ್ರಮಗಳ ತುಣುಕುಗಳನ್ನು ನೋಡಿ ಅವು ಸಾರ್ವಜನಿಕ ವೀಕ್ಷಣೆಗೆ ಯೋಗ್ಯವಾಗಿವೆಯೆ ಎಂಬುದನ್ನು ಪರಿಶೀಲಿಸುವುದು ಆಗಲಾರದ ಕೆಲಸ.

ಟಿ.ವಿ. ಚಾನೆಲ್‌ಗಳ ನಿರ್ವಾಹಕರೇ ಸ್ವಲ್ಪ ಸಾಮಾಜಿಕ ಕಳಕಳಿಯಲ್ಲದಿದ್ದರೂ ಜವಾಬ್ದಾರಿ ತೋರಿದರೆ ಆದೀತು. ಆದರೆ, ಪರಸ್ಪರ ತುಳಿದೇ ಮೇಲೆ ಬರುವ ಕ್ರೂರ ಸ್ಪರ್ಧೆಯ ಸುಳಿಯಲ್ಲಿ ಸಿಲುಕಿರುವ ಟಿ.ವಿ. ಸಂಸ್ಥೆಗಳಿಗೆ ಈ ನೈತಿಕತೆ ತುಂಬಾ ದುಬಾರಿಯಾಗಿಬಿಡುತ್ತದೆ. ಉದಾಹರಣೆಗೆ ಎಲ್ಲಾ ಟಿ.ವಿ. ಸಂಸ್ಥೆಗಳು ಅನುಸರಿಸಲೇಬೇಕಾದ ಹಲವು ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಗಳಲ್ಲಿ ಒಂದು, ಕೇಬಲ್ ಟೆಲಿವಿಷನ್ ರೆಗ್ಯುಲೇಷನ್ ಆಕ್ಟ್ 1995. ಇದರ ಸೆಕ್ಷನ್ 6: ಕಾರ್ಯಕ್ರಮ ಸಂಹಿತೆಯಲ್ಲಿ ಇರುವ ಒಂದೆರಡು ನಿಬಂಧನೆಗಳನ್ನು ಮಾತ್ರ ನೋಡಿ:

(ಎ) ಸದಭಿರುಚಿ ಮತ್ತು ಸಭ್ಯತೆ, ಶಿಷ್ಟತೆಗೆ ಧಕ್ಕೆ ತರುವಂಥ; (ಡಿ) ಅಶ್ಲೀಲ, ಮಾನನಷ್ಟಕರ, ಉದ್ದೇಶಪೂರ್ವಕ, ಸುಳ್ಳು ಮತ್ತು ಸೂಚಿತ ದ್ವಂದ್ವಾರ್ಥದ ಮತ್ತು ಅರೆಸತ್ಯವಾದ; (ಐ) ಅತೀಂದ್ರಿಯ ನಂಬಿಕೆ ಅಥವಾ ಕುರುಡು ನಂಬಿಕೆ ಪ್ರೋತ್ಸಾಹಿಸುವಂಥ; (ಕೆ) ಸ್ತ್ರೀಯ ಮೈಕಟ್ಟು, ಆಕೆಯ ಆಕಾರ ಅಥವಾ ದೇಹ ಅಥವಾ ಅದರ ಯಾವುದೇ ಅಂಗ ಇವುಗಳನ್ನು ಅಸಭ್ಯ ರೀತಿಯಲ್ಲಿ ಅಥವಾ ಸ್ತ್ರೀಗೆ ಅವಹೇಳನಕಾರಿಯಾಗಿ ತೋರಿಸುವ ಮೂಲಕ ಸ್ತ್ರೀಯರಿಗೆ ಕಳಂಕ ತರುವಂಥ, ಈ ಮೂಲಕ ಸಾರ್ವಜನಿಕ ನೈತಿಕತೆಯನ್ನು ತುಚ್ಛೀಕರಿಸುವಂಥ, ಅಲ್ಲಗಳೆಯುವಂಥ, ಭ್ರಷ್ಟಗೊಳಿಸುವಂಥ, ಘಾಸಿಗೊಳಿಸುವಂಥ ಕಾರ್ಯಕ್ರಮಗಳನ್ನು ಬಿತ್ತರಿಸಕೂಡದು.

ಇದು ಸ್ಪಷ್ಟ ನಿಷೇಧ. ಈ ನಿಬಂಧನೆಗಳನ್ನು ಸ್ವಲ್ಪವೇ ನಿಷ್ಠುರತೆಯಿಂದ ಹೇರಿದರೂ ಬಹುಶಃ ಇವತ್ತಿನ ಯಾವುದೇ ಖಾಸಗಿ ಚಾನೆಲ್‌ನ ನೂರಕ್ಕೆ ಎಂಬತ್ತರಷ್ಟು ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಸಾಧ್ಯವೇ ಇಲ್ಲವೇನೋ! ಆದರೆ, ಈ ನಿಯಮಾವಳಿಗಳನ್ನು ಹೇರುವುದಕ್ಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರ‌ದಲ್ಲಿ ಯಾವುದೇ ನಿರ್ದಿಷ್ಟ ಇಲಾಖೆ ಇಲ್ಲ.

ಇನ್ನು ಉಳಿದಿರುವುದು ಪತ್ರಿಕೆ, ಜಾಹೀರಾತು ಕ್ಷೇತ್ರಗಳಿಗೆ ಇರುವಂತೆ ಕ್ಷೇತ್ರದವರೇ ಕಟ್ಟಿಕೊಂಡಿರುವ ಸಂಸ್ಥೆಗಳ ಮೂಲಕ ಸ್ವಯಂ ನಿಯಂತ್ರಣ ಕಾಯ್ದುಕೊಳ್ಳುವುದು. ಟಿ.ವಿ. ಕಾರ್ಯಕ್ರಮಗಳಿಗೂ ಇಂಥದೊಂದು ಸಂಸ್ಥೆ ಇದೆ. ನೀವು ಕಾರ್ಯಕ್ರಮಗಳನ್ನು ನೋಡುವಾಗ ಈ ಸಂಸ್ಥೆಯ ವಿಳಾಸವೂ ಕೆಲವೊಮ್ಮೆ ತೆರೆಯ ಕೆಳಗಿನ ಭಾಗದಲ್ಲಿ ಪ್ರದರ್ಶಿತವಾಗುತ್ತದೆ. ವೇಗವಾಗಿ ಓಡಿ ಮರೆಯಾಗುತ್ತದೆ, ಬೇಕೆಂದರೆ ರಿಮೋಟ್‌ನಿಂದ ಸ್ಥಗಿತ(ಪಾಜ್‌) ಮಾಡಿ ಬರೆದುಕೊಳ್ಳಬೇಕು.

1999ರಲ್ಲಿಯೇ ಸ್ಥಾಪಿತವಾದ ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಫೌಂಡೇಷನ್ (ಐ.ಬಿ.ಎಫ್‌) ಇಂಥ ಒಂದು ಸಂಸ್ಥೆಯಾಗಿದೆ. ಇದರ ಅಡಿಯಲ್ಲಿ ರಚಿಸಲಾದ ಬ್ರಾಡ್‌ಕಾಸ್ಟಿಂಗ್ ಕಂಟೆಂಟ್ ಕಂಪ್ಲೇಂಟ್ಸ್ ಕೌನ್ಸಿಲ್(ಬಿ.ಸಿ.ಸಿ.ಸಿ) ಸಾರ್ವಜನಿಕ ವೀಕ್ಷಣೆಗೆ ಯೋಗ್ಯವಲ್ಲದ ಕಾರ್ಯಕ್ರಮ ಅಥವಾ ಅದರ ಯಾವುದೇ ಅಂಶದ ಕುರಿತು ವೀಕ್ಷಕರಿಂದ ದೂರು ಸ್ವೀಕರಿಸುತ್ತದೆ. ಹಲವು ಪ್ರಕರಣಗಳಲ್ಲಿ ಸಂಬಂಧಿತ ಚಾನೆಲ್‌ಗಳಿಗೆ ಕೌನ್ಸಿಲ್ ಎಚ್ಚರಿಕೆ ನೀಡಿದೆ. ದಂಡ ಕೂಡ ವಿಧಿಸಿದೆ. ಆದರೂ, ಒಂದು ಕಡೆ ಹಿಮಾಲಯ ಬೆಟ್ಟದಷ್ಟು ಕಾರ್ಯಕ್ರಮಗಳ ಬಾಹುಳ್ಯ, ಇನ್ನೊಂದು ಕಡೆ ವೀಕ್ಷಕರಲ್ಲಿ ತಮ್ಮ ಹಕ್ಕುಗಳ ಕುರಿತು ಸಾಸಿವೆಯಷ್ಟೂ ಜಾಗೃತಿ ಇಲ್ಲದಿರುವುದು ಈ ಅವಕಾಶದ ವಿಡಂಬನೆಯಾಗಿದೆ.

ಇತ್ತೀಚೆಗಷ್ಟೇ ಕೇಂದ್ರ ವಾರ್ತಾ ಇಲಾಖೆಯು ಒಂದು ಕಾಂಡೋಮ್ ಕುರಿತ ಮಿಡ್ ನೈಟ್ ಮಸಾಲ ಮಾದರಿಯ ಜಾಹೀ‌ರಾತನ್ನು ರಾತ್ರಿ ಹತ್ತಕ್ಕಿಂತ ಮುಂಚೆ ಪ್ರಚಾರ ಮಾಡಬಾರದು ಎಂದು ಕಠಿಣ ನಿಷೇಧ ಹೇರಿದೆ. ನಿಷೇಧ ಹೇರುವಷ್ಟರಲ್ಲಿ ಚಾನೆಲ್‌ಗಳು ಮತ್ತೆ ಮತ್ತೆ ಪ್ರಸಾರ ಮಾಡಿ ಈಗಾಗಲೇ ಕೋಟಿ ಕೋಟಿ ಹಣ ಗಳಿಸಿಕೊಂಡಿವೆ. ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಮನೆಯಲ್ಲಿ ಕುಳಿತು ನೋಡುವ ಚಾನೆಲ್‌ಗಳಲ್ಲಿ ಈ ತರದ ದೃಶ್ಯಾವಳಿಗಳನ್ನು ಪ್ರಸಾರ ಮಾಡಬಾರದು ಎಂಬ ಕಾಸಿನಷ್ಟು ನೈತಿಕ ಪ್ರಜ್ಞೆಯೂ ಟಿ.ವಿ. ಸಂಸ್ಥೆಗಳಿಗೆ ಇಲ್ಲ ಎನ್ನುವುದಕ್ಕೆ ಇದೊಂದು ಚಿಕ್ಕ ನಿದರ್ಶನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry