7

ಅಚರ್ಚಿತ

Published:
Updated:
ಅಚರ್ಚಿತ

ನನ್ನೊಳಗೆ ಅಡಗಿಕೊಂಡಿದ್ದ ಅವಳು ಇದ್ದಕ್ಕಿದ್ದ ಹಾಗೆ ಹೊರಕ್ಕೆ ಬಂದಳು.

ಅದೆಷ್ಟೋ ವರ್ಷಗಳ ಬಂಧನದಿಂದಾಗಿ ಕಣ್ಣುಗಳ ಕೆಳಗೆ ಕಪ್ಪಾವರಿಸಿ, ಮೊಲೆಗಳು ಬತ್ತಿಹೋಗಿದ್ದವು. ಎಣ್ಣೆ ಕಾಣದೇ ಒಣಹುಲ್ಲಿನ ರಾಶಿಯಂತೆ ಬೀಸುಗಾಳಿಗೆ ಅತ್ತಿತ್ತ ಅಲುಗಾಡುತ್ತಿದ್ದ ತಲೆಗೂದಲನ್ನು ಶ್ರಮಪಟ್ಟು ಕಟ್ಟಿಹಾಕಿದಳು. ದಿಕ್ಕೆಟ್ಟ ಹುಬ್ಬುಗಳನ್ನು ಸವರಿಕೊಂಡು ಆಕಾಶವನ್ನೊಮ್ಮೆ ದಿಟ್ಟಿಸಿದಳು. ಅಲ್ಲೇನಿದೆ? ಚೂರುಪಾರು ಮೋಡ, ಭಯಂಕರ ಬಿಸಿಲು ಸೂಸುತ್ತಿರುವ ಕೆಂಡಾಮಂಡಲ ಸೂರ‍್ಯ. ಬೆಳಕು ನೋಡಿ ಯಾವ ಕಾಲವಾಗಿತ್ತೋ? ಆಕಾಶದತ್ತಲಿಂದ ಕಣ್ಣುಕಿತ್ತು ತನ್ನ ಹಸ್ತಗಳಲ್ಲಿ ಮುಖಮುಚ್ಚಿಕೊಂಡಳು... ಅವಳ ದೇಹ ಧಗಧಗಿಸುತ್ತಿತ್ತು... ತುಟಿಗಳು ಅದುರುತ್ತಿದ್ದವು... ‘ಈ ಸೂರ‍್ಯನನ್ನು ಯಾರೂ ಇನ್ನೂ ಕೊಂದಿಲ್ಲವಾ?!’

ಸ್ವಾತಂತ್ರ್ಯ ಬಯಸಿ ಹೊರಕ್ಕೆ ಬಂದು ಹುಚ್ಚಿ... ಹುಚ್‌ಹುಚ್ಚಾಗಿ ಏನೇನೋ ಬಡಬಡಿಸುತ್ತಿದ್ದಾಳೆ. ಸೂರ‍್ಯನನ್ನು ಯಾರಾದ್ರೂ ಕೊಲ್ಲೋಕೆ ಸಾಧ್ಯಾನಾ?!- ನನ್ನೊಳಗೆ ನನ್ನ ಮಾತು. ಒಳಗೂ ಹೊರಗೂ ಉರಿಯುತ್ತಿದ್ದ ಅವಳ ಮುಂದೆ ನನ್ನೊಳಗಿನ ಮಾತು ಆಡಿಬಿಟ್ಟರೆ ಮತ್ತಷ್ಟು ಉಗ್ರರೂಪ ತಾಳುವ ಸಾಧ್ಯತೆಯಿತ್ತು.

ಸ್ವಲ್ಪ ಸುಧಾರಿಸಿಕೊಂಡ ಅವಳು ಮೆಲ್ಲಗೆ ಕಣ್ಣುಬಿಟ್ಟು ಸುತ್ತಲಿನ ಪರಿಸರ ಗಮನಿಸಿದಳು. ಅಲ್ಲಿಯೇ ಬಿದ್ದಿದ್ದ ಒಡೆದ ಕನ್ನಡಿಯ ಚೂರೊಂದನ್ನು ಎತ್ತಿಕೊಂಡು ತನ್ನ ಮುಖದ ಚೂರು ದೃಶ್ಯ ನೋಡಿಕೊಂಡವಳೇ ಅದನ್ನು ಸೂರ‍್ಯನತ್ತ ತನ್ನಷ್ಟೂ ಶಕ್ತಿ ಸೇರಿಸಿ ಎಸೆದಳು. ಎಸೆತದ ವೇಗ ಎಷ್ಟಿತ್ತೆಂದರೆ ಆಕಾಶದಲ್ಲಿ ಪಥನಕ್ರಿಯೆ ನಡೆಸುತ್ತಿರುವ ಗ್ರಹ-ಉಪಗ್ರಹಗಳೆಲ್ಲ ಕ್ಷಣಕಾಲ ತಬ್ಬಿಬ್ಬಾಗಿ ಅವಳನ್ನು ನೋಡುವಂತಾಯ್ತು. ಸಂಜೆಯಾಗಿದ್ದರಿಂದಲೋ ಅವಳೆಸೆದ ಗಾಜಿನ ಚೂರಿಗೆ ಹೆದರಿಯೋ ಸೂರ‍್ಯ ನಾಪತ್ತೆಯಾಗಿಬಿಟ್ಟ.

ಸೂರ‍್ಯನನ್ನು ತಾನೇ ಕೊಂದೆ ಎಂಬ ವಿಚಿತ್ರ ಸಂತೋಷ ಅವಳಲ್ಲಿ ಉಕ್ಕಿಉಕ್ಕಿ ಚೆಲ್ಲತೊಡಗಿತು. ‘ಕೊಂದ್ಬಿಟ್ಟೆ... ಕೊಂದ್ಬಿಟ್ಟೆ... ನಾನೇ ಕೊಂದ್ಬಿಟ್ಟೆ... ಅಂತ ಜೋರುಜೋರಾಗಿ ಕೂಗಿಕೊಂಡು ಕುಣಿಯತೊಡಗಿದಳು. ಅವಳ ಕಾಲ್ಗೆಜ್ಜೆಯ ಸದ್ದು ನಾಲ್ಕುದಿಕ್ಕಿಗೂ ಘಲ್‌ಘಲ್ಲಾಗಿ ಕೇಳತೊಡಗಿತು. ಬೆಳಕು ಮೆಲ್ಲಗೆ ಕಣ್ಣುಮುಚ್ಚಿ ಕತ್ತಲೆಗೆ ಜಾರುತ್ತಿತ್ತು. ತನ್ನ ಪಾಡಿಗೆ ತಾನು ಹರಿಯುತ್ತಿದ್ದ ತುಂಗೆಯ ನೀರನ್ನೊಮ್ಮೆ, ಅವಳನ್ನೊಮ್ಮೆ ನೋಡುತ್ತಾ ಮೌನವಾಗಿರುವುದು ಬಿಟ್ಟರೆ ನನ್ನ ಬಳಿ ಬೇರೆ ದಾರಿಯಿರಲಿಲ್ಲ. ಅವಳು ಕುಣಿಕುಣಿದರೂ ದಣಿವ ಯಾವ ಲಕ್ಷಣಗಳೂ ಅಲ್ಲಿ ಕಾಣಲಿಲ್ಲ.

***

ಕಗ್ಗತ್ತಲ ರಾತ್ರಿ. ಆಕಾಶದಿಂದ ಸೂರ‍್ಯ ಕಳಚಿಹೋದ ಮೇಲೆ ಮತ್ಯಾರೂ ಅಲ್ಲಿ ಕಾಣಿಸಿಕೊಳ್ಳಲು ಬರಲೇಯಿಲ್ಲ. ಎಂದಿನಂತೆ ನಕ್ಷತ್ರಗಳಿರಲಿಲ್ಲ. ಚಂದಿರನಿಗೋ ಋತುಚಕ್ರದ ಸಮಸ್ಯೆಯೇ ಇರಬೇಕು. ಇಡೀ ಆಕಾಶವೇ ಕತ್ತಲೋಕತ್ತಲು.

‘ನೀ ಸೂರ‍್ಯನನ್ನು ಕೊಲ್ಲಬಾರದಿತ್ತು’ ಎಂದೆ. ಕೇಳಲೇಬಾರದೆಂದರೂ ಕೇಳಿದೆ. ಏನುತ್ತರ ಕೊಟ್ಟಾಳು? ಎಂಬ ಕುತೂಹಲವಿತ್ತು. ನನ್ನ ಮುಖವನ್ನೊಮ್ಮೆ ದುರುಗುಟ್ಟಿ ನೋಡಿದಳು. ತುಟಿ ಬಿಚ್ಚಿಕೊಂಡವು...

‘ನನ್ನ ಮೊಲೆಗಳನ್ನು ಬತ್ತಿಸಿದವನು ಅವನೇ... ನಿಂಗೆ ಗೊತ್ತಾ?’

ನಂಗೇನು ಗೊತ್ತು? ದರದರನೆ ದೃಷ್ಟಿನೆಟ್ಟು ದುರುಗುಟ್ಟಿ ಮತ್ತೆ ನನ್ನನ್ನೇ ನೋಡತೊಡಗಿದಳು. ಅವಳ ಉತ್ತರ ಸ್ಪಷ್ಟವಾಗಿದ್ದರೂ ನನ್ನ ಮಂದಬುದ್ಧಿಗೇಕೋ ಅದು ಸ್ಪಷ್ಟವಾಗಲೇ ಇಲ್ಲ.

‘ನಿನ್ನ ಮೊಲೆಗಳನ್ನು... ಬತ್ತಿಸಿದವ್ನಾ... ಸೂರ‍್ಯಾನಾ...?!’ ಮಾತು ತುಂಡರಿಸಿ, ತುಂಡರಿಸಿ ಪ್ರಶ್ನೆಯ ರೂಪ ತಾಳಿಸಿದ್ದೆ. ಅವಳ ವರ್ತನೆ, ಮಾತು ಯಾವುದೂ ಸಹಜವಾಗಿರಲಿಲ್ಲ. ನಾನೂ ನನ್ನ ಮಾತೂ ಅಸಹಜವಾಗುತ್ತಿರುವ ಅನುಭವ ನನಗೇ ಆಗುತ್ತಿತ್ತು.

‘ನನ್ನ ಮೊಲೆಗಳನ್ನೊಮ್ಮೆ ನೋಡು... ಇದು ನಿನ್ನ ತಾಯಿಯದೇ ಮೊಲೆ ಅಂದುಕೋ... ಆಗ ನನ್ನ ಮಾತು ನಿನಗೆ ಅರ್ಥವಾಗಬಹುದು... ಸಂಕೋಚ ಬೇಡ... ನೀನು ಮಗು ನಾನು ತಾಯಿ... ಈಗ ಮುಕ್ತವಾಗಿ ಮಾತಾಡೋಣ...’ ಅವಳು ಬತ್ತಳಿಕೆಯಿಂದ ಬ್ರಹ್ಮಾಸ್ತ್ರವನ್ನೇ ತೆಗೆದು ನನ್ನ ಮೇಲೆ ಪ್ರಯೋಗಿಸಿದಂತಿತ್ತು!

ತಲೆಮಾರುಗಳನ್ನೆಲ್ಲ ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಅವಳು ಮಡಿಲಾದವಳು. ನಾನು ಮೂಕಪ್ರೇಕ್ಷಕನಾಗಿ ಅದನ್ನೆಲ್ಲಾ ನೋಡುತ್ತಲೇ ನನ್ನ ತಲೆಮಾರುಗಳ ಭಾರವನ್ನು ಅವಳದೇ ಮಡಿಲಿಗೆ ಹಾಕಿ ‘ಗಂಡಸು’ ಆಗುವ ಪ್ರಯತ್ನದಲ್ಲಿದ್ದೆ... ‘ಅತಲ ಸುತಲ ಪಾತಾಳಗಳಲ್ಲಿ ನಾನೊಬ್ಬನೇ ಗಂಡಸಾ?’

ಪ್ರಶ್ನೆ ಏಳುತ್ತಿದ್ದಂತೆ ಅವಳು ಉತ್ತರವಾಗಿಬಿಡುತ್ತಾಳೆ. ಪ್ರಶ್ನೆಗೂ ಉತ್ತರಕ್ಕೂ ಕೊನೇಪಕ್ಷ ಒಂದಿಷ್ಟು ಗ್ಯಾಪು ಇರಬೇಕು. ಇಲ್ಲದಿದ್ದರೆ ಪ್ರಶ್ನೆ ಮೂಡಿದ್ದಕ್ಕೂ ಅದಕ್ಕೆ ತಕ್ಕ ಉತ್ತರ ಬಂದಿದ್ದಕ್ಕೂ ಯಾವುದೇ ಮಾನವೂ ಇರಲ್ಲ. ಮರ‍್ಯಾದೆಯೂ ಇರಲ್ಲ.

ಈಗ ಕುಣಿಕುಣಿದು ಒಂದಿಷ್ಟು ವಿಶ್ರಾಂತಿಗೆ ಅವಳು ಕುಳಿತಿದ್ದಳು. ಅವಳ ಪೂರ್ತಿ ಕಥೆ ನನ್ನ ಅನುಭವಕ್ಕೆ ದಕ್ಕಬಹುದೇ? ಎಂಬ ಪ್ರಯತ್ನದಲ್ಲಿದ್ದೆ. ಹಾಗೇ ವಾಚ್ಯವಾಗಿ ಕೇಳಿಬಿಟ್ಟಿದ್ದರೆ ಅವಳ ಪೂರ್ತಿ ಕಥೆ ವಾಚ್ಯವಾಗಿಯೇ ಕಿವಿಗೆ ಬೀಳುವ ಅಪಾಯವೂ ಇತ್ತು. ಅವಳ ಯುಗಮನ್ವಂತರಗಳ ದಷ್ಟ,ದುಷ್ಟ ಅನುಭವದ ಕಥೆಯನ್ನು ಹೇಳಿಯಾಳೇ?! ಯಾರು ತಾನೇ ಹೇಳಿದ್ದಾರೆ ಈವರೆಗೆ?! ಅವಳ ಕಥೆ ಕೇಳುವ ಆಸೆಯಿಂದ ಹತ್ತಿರಕ್ಕೆ ಹೋದೆ. ಅವಳು ಏನೇನನ್ನೋ ಗುನುಗುತ್ತಿದ್ದಳು. ನನ್ನ ಹೆಜ್ಜೆಗಳು ಅವಳು ಕುಳಿತ ಜಾಗಕ್ಕೆ ಹತ್ತಿರವಾದಂತೆಲ್ಲ ಆ ಗುನುಗುವಿಕೆಯ ಧ್ವನಿ ಸ್ಪಷ್ಟವಾಗತೊಡಗಿತು;

ಕಾಡಿನ ಬಿದಿರೊಂದು ಕೊಳಲಾಯಿತು

ಕಣ್ಣೀರ ಹನಿಯೊಂದು ಕಡಲಾಯಿತು

ಕಣ್ಣೆವೆಯ ಮೂಡಣದ ಬಾಗಿಲ ತೆಗೆದು

ಬಂದಾಳೋ ನಿಂದಾಳೋ ಬೆಳ್ಳಿ ಚಂದ್ರಮ...

- ಎಲ್ಲೋ ಕೇಳಿದಂತಿತ್ತು! ರಂಗಗೀತೆ ಎಂಬ ಸ್ಪಷ್ಟತೆ. ನಮ್ಮದೇ ರಂಗಕಲಾವಿದರ ತಂಡಕ್ಕೆ ಹಮ್ಮಿಕೊಂಡಿದ್ದ ರಂಗಗೀತೆಗಳ ಶಿಬಿರದೊಳಗೆ ಇದೆಲ್ಲ ಹಾಡಲಾಗಿತ್ತಲ್ಲ. ಕೆವೈಎನ್ ರಂಗಗೀತೆಯಲ್ಲವೇ? ಇವಳಿಗೆ ಹೇಗೆ ತಲೆತುಂಬಿಕೊಂಡಿತು? ಆ ಶಿಬಿರದಲ್ಲಿ ಇವಳೂ ಇದ್ದಳಾ? ಪ್ರಶ್ನೆಗಳು ಲೆಕ್ಕವಿಲ್ಲದಷ್ಟು ಮೂಡತೊಡಗಿದವು.

ರಂಗಗೀತೆ ಪೂರ್ಣ ಹಾಡುವ ಮಧ್ಯವೇ ನಾ ಧೈರ‍್ಯದಿಂದ ತಡೆದು ಕೇಳಿದೆ;

‘ರಂಗಗೀತೆ ಹಾಡುತ್ತಿದ್ದೀಯಲ್ಲ... ಎಲ್ಲಿ ಕಲಿತೆ?’

‘ನಾನು ಹೊರ‍್ಗಾದ ಟೇಮಲ್ಲಿ ಕಲ್ತಿದ್ದೋ ಮಾರಾಯ... ಆಗ ನೀ ಒಳಗಿದ್ದೆ... ಶಿಬಿರದಲ್ಲಿ!’

ಹಾಗೆಂದು ಹೇಳಿದವಳೇ ಮಲೆಗಳಲ್ಲಿ ಮದುಮಗಳು ನಾಟಕದ ರಂಗಗೀತೆ ಹಾಡಿ ಕುಣಿದು ಕುಪ್ಪಳಿಸಲು ಶುರುಮಾಡಿದಳು;

‘ಕಿನ್ನುರಿ ನುಡಿಸುತ್ತಾರೆ

ಮಲೆಗಳಲ್ಲಿ ಮದುಮಗಳು

ಪುಟ್ಟಪ್ಪನ ತವರಿನ ಪುಟ್ಟಮಗಳು

ಕಿರುಗೆಜ್ಜೆ ಕಟ್ಟುತ್ತಾರೆ

ಊರೂರು ತಿರುಗುತ್ತಾರೆ

ರಾಗಗಳಾಡುತ್ತಾರೆ...

- ಇನ್ನೂ ಹಾಡುವವಳಿದ್ದಳೇನೋ... ನಾನು ತಡೆದು, ‘ಸೂರ‍್ಯನ ಕೊಲೆ ಮಾಡಿದ್ದೀ... ನೆನಪಿದೆಯಲ್ವಾ? ಅವನ ಹೆಣಕ್ಕೊಂದು ಗತಿ ಕಾಣಿಸಬೇಕಲ್ವಾ!’ ಎಂದು ಅವಳ ರಂಗಗೀತೆಗಳ ಮಧ್ಯೆ ತಡೆಗೋಡೆ ಕಟ್ಟಿ, ಅವಳ ಮನಸನ್ನು ಬೇರೆ ಕಡೆಗೆ ಸೆಳೆಯೋ ಪ್ರಯತ್ನದಲ್ಲಿ ತಲ್ಲೀನನಾದೆ.

ನಿಜವಾಗಲೂ ಅವಳ ಮನಸಿಗೆ ಘಾಸಿಯಾಗಿರಬೇಕು;

‘ಸೂರ‍್ಯನನ್ನು ಕೊಲ್ಲುವವರು ಬೇಕಿತ್ತು. ಕೊಂದಿದ್ದೇನೆ. ಅವನ ಹೆಣ ಸುಡುವವರೋ, ಹೂಳುವವರೋ, ಪೆಟ್ಟಿಗೆಯಲ್ಲಿಟ್ಟು ಮೊಳೆ ಹೊಡೆಯುವವರೋ ಇದ್ದೇ ಇರುತ್ತಾರೆ ಅಸಂಖ್ಯ ಜನ. ನಿನ್ನದ್ಯಾವ ಜಾತಿ? ನಿನ್ನದ್ಯಾವ ಧರ್ಮ? ಹೂಳುವವರದೋ? ಸುಡುವವರದೋ? ಪೆಟ್ಟಿಗೆಯಲ್ಲಿಟ್ಟು ಮೊಳೆ ಹೊಡೆಯುವವರದೋ? ಅಥವಾ ಮತ್ಯಾವುದೋ? ಹೋಗು ಅಲ್ಲೇ ಇದೆಯಲ್ಲ ಹೆಣ... ನಿನ್ನ ಜಾತಿ, ಧರ್ಮ, ಸಂಸ್ಕೃತಿ ತೋರಿಸ್ಕೋ...’

ಪಟಪಟನೆ ಅವಳು ಮಾತಾಡಿ ಮತ್ತೆ ರಂಗಗೀತೆಗಳ ಸಖ್ಯದಲ್ಲಿ ಮುಳುಗಿಹೋದಳು. ಅವಳಾಡಿದ ಮಾತುಗಳು ನನ್ನೊಳಗೆ ಜಗತ್ತಿನ ಎಲ್ಲಾ ಧರ್ಮಗಳ, ಜಾತಿಗಳ, ಸಂಸ್ಕೃತಿಗಳ ಅಧ್ಯಯನಕ್ಕೆ ಮುನ್ನುಡಿ ಬರೆದಂತಿತ್ತು. ನಾನು ಸೂರ‍್ಯನ ಹೆಣವನ್ನು ಕಲ್ಪಿಸಿಕೊಂಡು ಅದರ ಶವಸಂಸ್ಕಾರ ಹೇಗೆ ಮಾಡಲೆಂದು ಯೋಚಿಸುತ್ತಾ, ಯೋಜಿಸುತ್ತಾ ಕೂತುಕೊಂಡೆ. ನನಗೊಂದೂ ಅರ್ಥವಾಗಲಿಲ್ಲ. ಸೂರ‍್ಯನ ಮೈಮೇಲೆ ಯಾವ ಧರ್ಮದ, ಜಾತಿಯ, ಸಂಸ್ಕೃತಿಯ ಸಂಕೇತಗಳೂ ಲಕ್ಷಣಗಳೂ ಇರಲಿಲ್ಲ. ಕಲ್ಪಿಸಿಕೊಂಡ ಸೂರ‍್ಯನ ಹೆಣ ನೋಡುತ್ತಲೇ ಅಲ್ಲೇನಾದರೂ ಧರ್ಮಸೂಚಕವಾದ, ಜಾತಿ, ಸಂಸ್ಕೃತಿ ಸೂಚಕವಾದ ಏನಾದರೂ ಸಿಗಬಹುದೆಂಬ ನನ್ನ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಕನಸು ಹೇಗೆ ಬಿತ್ತೆಂದರೆ, ನನ್ನ ತೋಳಲ್ಲಿ ಸೂರ‍್ಯನ ಹೆಣ ಹೊತ್ತುಕೊಂಡು ಅವಳ ಮುಂದೆ ನಿಸ್ಸಹಾಯಕನಾಗಿ ನಿಂತುಬಿಟ್ಟಿದ್ದೇನೆ.

‘ನಿನ್ನ ಕೈಯಲ್ಲಿ ಕೊಲೆಯಾದ ಈ ಸೂರ‍್ಯನನ್ನು ಹೇಗೆ ಮುಕ್ತಿ ಕಾಣಿಸಲಿ? ನೀನೇ ಹೇಳಿ ನನ್ನ ಗೊಂದಲ ನಿವಾರಿಸೇ’ ಎಂದೆ. ಅದೇ ತಪ್ಪಾಯಿತೇನೋ!

‘ಐಸು ನೀರಲ್ಲಿ ಆ ಸೂರ‍್ಯನನ್ನು ಮುಳುಗಿಸೋ... ನೀ ಕುಡಿಯುವ ಎಣ್ಣೆಯೊಳಗೆ ಅದನ್ನು ತೇಲಿಸೋ... ಅವನ ಅಸ್ತಿತ್ವವೇ ಇರದ ಹಾಗೆ ಕುಡಿದು ತೂರಾಡೋ...’

***

ಅವಳು ತನ್ನ ಮುಖ ಕಳೆದುಕೊಂಡು ಬೆತ್ತಲಾಗಿದ್ದಾಳೆ. ಹಾಗಂತ ಎಲ್ಲೆಲ್ಲೂ ವಿಮರ್ಶೆಗಳು ಅವಳ ಬಗ್ಗೆ. ನನಗೆ ಹಾಗನಿಸುತ್ತಿಲ್ಲ. ಅವಳ ನಿಜವಾದ ಮುಖ ಈಗ ಹೊರಹೊಮ್ಮುತ್ತಿದೆಯೇನೋ! ಸ್ವತಃ ಅವಳು ತನ್ನದೇ ಉಸಿರನ್ನು ಸಂತೈಸಿಕೊಳ್ಳಲು ಕೂಡ ಹೋಗುತ್ತಿಲ್ಲ. ಪೊರೆ ಕಳಚಿ ಹೊಸ ಚರ್ಮ ಹೊದ್ದುಕೊಳ್ಳುವುದಕ್ಕೆ ಅವಳು ಹಾವೂ ಅಲ್ಲ ಅನಿಸತೊಡಗಿ ಅವಳ ಬಗ್ಗೆ ಮತ್ತಷ್ಟು ಕುತೂಹಲಿಯಾದೆ.

ಹುಟ್ಟಿದಾಗಿನಿಂದ ಅದೆಷ್ಟು ಬಾರಿ ಕತ್ತು ಕತ್ತರಿಸಿಕೊಂಡಿದ್ದಾಳೋ? ಕತ್ತಿನ ಸುತ್ತ ಇನ್ನೂ ಒಣಗದ ಗಾಯಗಳಿವೆ. ಆ ಗಾಯಗಳಲ್ಲಿ ರಕ್ತ, ಕೀವು ಸೋರುತ್ತಿದ್ದರೂ ನೋವಿನ ಬದಲು ಸಾವಿರ ಸಾವಿರ ಪ್ರಶ್ನೆಗಳಿದ್ದಂತಿವೆ. ಯಾರಿಗಾಗಿ ಪ್ರಶ್ನೆಗಳು? ಯಾಕಾಗಿ ಪ್ರಶ್ನೆಗಳು?

ಅವಳನ್ನು ಮುಂದೆ ಕೂರಿಸಿಕೊಂಡು ಒಂದು ಲೋಟ ಟೀ ಮಾಡಿಕೊಟ್ಟೆ. ಹೊಟ್ಟೆ ಹಸಿದಿರಬೇಕು... ಅವಳ ನೋಟದಲ್ಲಿಯೇ ಅರ್ಥ ಮಾಡಿಕೊಂಡೆ. ಒಂದಿಷ್ಟು ಉಳಿದಿದ್ದ ಬ್ರೆಡ್ಡಿನ ತುಂಡುಗಳನ್ನು ಕೊಟ್ಟೆ. ಹಸಿದ ಹೊಟ್ಟೆಯ ಆರ್ತನಾದ ಬಾಯಿಗೂ ನಾಲಿಗೆಗೂ ಕೈಗೂ ಅದ್ಹೇಗೆ ಗೊತ್ತಾಗಿ ಹೋಯ್ತೋ!

ಗಬಗಬನೆ ಟೀಯಲ್ಲದ್ದಿ ತಿಂದು ಮುಗಿಸಿದ್ದಳು. ಹಸಿವಿಗೆ ಆಹಾರ ಸಿಕ್ಕಿದ್ದರಿಂದ ಅವಳ ಕಣ್ಣುಗಳಲ್ಲಿದ್ದ ಬಳಲಿಕೆ ಮಾಸುತ್ತಿರುವುದು ಹತ್ತಿರದಲ್ಲೇ ಕೂತಿದ್ದ ನನ್ನ ಗಮನಕ್ಕೆ ಬರತೊಡಗಿತ್ತು. ತುಟಿಗಳು ಬರಬಿದ್ದ ಜಾಗದಲ್ಲಿ ಜೊಲ್ಲೊರೆಸಿಕೊಂಡು ಹೊಳೆಯಲು ಆರಂಭಿಸಿದ್ದವು. ನಾಲಿಗೆ ಇನ್ನು ಗಟ್ಟಿಯಾಗಿಯೇ ಮಾತಾಡಬಹುದೇನೋ?

‘ಪಂಜರದೊಳಗೇ ಇದ್ದೆಯಲ್ಲ, ಸಿಕ್ಕಿತ್ತಲ್ಲ ಸ್ವಾತಂತ್ರ್ಯ... ಮುಂದೇನು?’

ನನ್ನ ಮಾತು ಕೇಳುತ್ತಿದ್ದಂತೆಯೇ ಗಹಗಹಿಸಿ ನಕ್ಕಳು. ಅಲ್ಲಿ-ಇಲ್ಲಿ-ಎಲ್ಲೆಲ್ಲೋ ಕೂತಿದ್ದ ಹಕ್ಕಿಗಳೆಲ್ಲ ಈ ನಗುವಿಗೆ ಹೆದರಿ ಏಕಕ್ಷಣದಲ್ಲಿ ಪುರ್‍ರನೆ ಹಾರಿದ್ದು ಮಾತ್ರ ಸುಳ್ಳಲ್ಲ.

‘ಯಾವ ಪಂಜರ? ಕಣ್ಣಿಗೆ ಕಾಣುವ ಪಂಜರದಿಂದಲೋ... ಕಣ್ಣಿಗೆ ಕಾಣದ ಪಂಜರದಿಂದಲೋ ಸಿಕ್ಕಿದ್ದು ಸ್ವಾತಂತ್ರ್ಯ?’ - ನನಗೇ ಮರಳಿ ಪ್ರಶ್ನಿಸಿದ್ದಳು. ಅವಳುಟ್ಟಿದ್ದ ಸೀರೆಯ ಸೆರಗಿನಲ್ಲಿ ನೂರೆಂಟು ಗಂಟುಗಳಿದ್ದವು. ಯಾವ ಗಂಟಲ್ಲಿ ಏನಿದೆಯೋ? ಗಂಟು ಕಟ್ಟಿದ್ದಾಳೆಂದರೆ ಅಲ್ಲೇನೋ ಇಟ್ಟಿಯೇ ಗಂಟು ಕಟ್ಟಿರುತ್ತಾಳೆ... ಏನಿಟ್ಟಿರಬಹುದು ಈ ಸೀರೆಯ ಸೆರಗಿನ ಗಂಟುಗಳಲ್ಲಿ? ನನ್ನ ಕುತೂಹಲವೆಲ್ಲ ಈ ಗಂಟುಗಳ ಮೇಲೆಯೇ ಕೇಂದ್ರೀಕೃತವಾಗತೊಡಗಿತು. ನನ್ನ ಕುತೂಹಲಕ್ಕೆ ತಾಳ್ಮೆಯ ಗುಣವಿರಲಿಲ್ಲ. ಕೇಳಿಬಿಟ್ಟೆ ಕೊನೆಗೂ...

‘ಏನಿದೆ ಈ ಗಂಟುಗಳಲ್ಲಿ?’

ಪ್ರಶ್ನೆ ಕೇಳುತ್ತಿದ್ದಂತೆಯೇ ದೆವ್ವ ಮೈಮೇಲೇರಿ ಮಾತಾಡಿದಂತೆ ಮಾತಾಡುತ್ತಿದ್ದ, ಗಹಗಹಿಸಿ ನಕ್ಕು ಶಾಂತಿ ಕದಡುತ್ತಿದ್ದ ಅವಳ ಮುಖಭಾವ ನಿರ್ಲಿಪ್ತತೆಯ ಕಡೆ ವಾಲತೊಡಗಿತು. ಕಣ್ಣುಗಳು ಹದಗೊಂಡು ತೇವ ಸೃಷ್ಟಿಸಿಕೊಳ್ಳತೊಡಗಿದವು. ಪ್ರಾಯಶಃ ಅವಳು ಅವಳಾಗುತ್ತಿದ್ದಳೇನೋ! ಸೀರೆಯ ಸೆರಗಿನ ಗಂಟುಗಳ ಮೂಲ ಶೋಧನೆಗೆ ನಾ ಇಳಿದಿದ್ದು ಒಳ್ಳೆಯದಾಯಿತೋ ಅಥವಾ ಆ ಕೆಲಸಕ್ಕೆ ನಾ ಇಳಿಯಲೇಬಾರದಿತ್ತೋ... ಗೊಂದಲದಲ್ಲಿಯೇ ಅವಳನ್ನು ಗಮನಿಸುತ್ತಿದ್ದೆ. ಕ್ಷಣ ಕಳೆದಂತೆಲ್ಲ ಅವಳು ಭಾವಾತಿರೇಕಕ್ಕೆ ಒಳಗಾಗುವ ಸಾಧ್ಯತೆಗಳೂ ಅಲ್ಲಿದ್ದವು. ಆದರೆ ಹಾಗಾಗಲಿಲ್ಲ. ಅವಳು ಸಂಕೋಚದ ಕವಚದಿಂದ ಹೊರಕ್ಕೆ ಬಂದು, ನಿಶ್ಶಬ್ದವಾಗಿ, ಲಜ್ಜೆ ಬಿಟ್ಟು, ಸೂತಕದೊಂದಿಗೆ ಮಾತಾಡಿದಳು... ಮಾತಾಡಿದಳಾ? ಸ್ಫೋಟಗೊಂಡಳು-

‘ಸೂರ‍್ಯ ಮೃಗದಂತೆ ಮೊಲೆ ಹಿಂಡಿದಾಗಲೆಲ್ಲ ತೊಟ್ಟಿಕ್ಕಿದ ಹಾಲನ್ನು ಗಂಟ್ಹಾಕಿಟ್ಟಿದ್ದೇನೆ ಕಣೋ...’

ಅವಳ ಮಾತಿನ ಖಚಿತತೆ ಸುಲಭವಾಗಿ ಅರ್ಥವಾಗುವಂತಿರಲಿಲ್ಲ! ಅವಳು ಸೂರ‍್ಯನನ್ನು ಕೊಲ್ಲಲು ಹೊರಟ ಹಾಗೂ ಅವನನ್ನು ಭಯಾನಕ ದ್ವೇಷದ ವ್ಯಾಪ್ತಿಯೊಳಗಿಟ್ಟ ಕಾರಣ ಹಂತ ಹಂತವಾಗಿ ನನಗರ್ಥವಾಗತೊಡಗಿತು.

ಕತ್ತಲು ಕಗ್ಗತ್ತಲಾಗಿ ಪರಿವರ್ತನೆಯಾದಂತೆಲ್ಲ ಅವಳು ನನ್ನೊಳಗೆ ಬೆಳಕಾಗುತ್ತಾ ಹೋಗುತ್ತಿದ್ದಳು. ಧೈರ‍್ಯ ಮಾಡಿ ಆಕಾಶವನ್ನೊಮ್ಮೆ ನೋಡಿದೆ; ಅಲ್ಲಿ ಆ ಸೂರ‍್ಯ ಮತ್ತೆ ಹುಟ್ಟುವ ಯಾವ ಲಕ್ಷಣಗಳೂ ಕಂಡುಬರಲಿಲ್ಲ.

‘ಅಲ್ಲಿ ನೀನೇ ಹುಟ್ಟಿಬಿಡು’ ಎಂದೆ. ಮೂಲೆಯಲ್ಲಿ ಮಶಾಲು ಉರಿಯುತ್ತಿತ್ತು. ಅವಳಿಗಿಂತ ಚೆನ್ನಾಗಿ ಉರಿದುದನ್ನು, ಬೆಳಕು ನೀಡಿದುದನ್ನು ನಾನು ನೋಡೇ ಇರಲಿಲ್ಲ... ಅವಳನ್ನು ಏಕಭಾವದಿಂದ ನೋಡಿ ಅಲ್ಲಮನ ಕಡೆ ಹೊರಳಿದೆ;

ಆಕಾರ ನಿರಾಕಾರವೆಂಬೆರಡೂ ಸ್ವರೂಪಂಗಳು

ಒಂದು ಆಹ್ವಾನ, ಒಂದು ವಿಸರ್ಜನ

ಒಂದು ವ್ಯಾಕುಳ, ಒಂದು ನಿರಾಕುಳ

ಉಭಯಕುಳರಹಿತ ಗುಹೇಶ್ವರಾ, ನಿಮ್ಮ ಶರಣ ನಿಶ್ಚಿಂತನು.

***

ಬಹಳ ಕಾಲವಾಗಿತ್ತು. ಅವಳನ್ನು ನೋಡಿರಲಿಲ್ಲ. ಮೊದಲೆಲ್ಲ ನನ್ನೊಳಗೇ ಇರುತ್ತಿದ್ದಳು. ನನ್ನೊಳಗಿಣುಕಿಕೊಂಡರೆ ಸಾಕಿತ್ತು; ಅವಳು ಕಾಣುತ್ತಿದ್ದಳು. ಈಗ ಹಾಗೆ ಸಾಧ್ಯವಿಲ್ಲ. ನನ್ನೊಳಗಿಂದ ಹೊರಕ್ಕೆ ಬಂದು ಸ್ವತಂತ್ರಳಾಗಿದ್ದಾಳೆ. ಅವಳು ಸ್ವತಂತ್ರಳಾದಳೋ? ನಾನೋ? ಗೊಂದಲ ಅದೆಷ್ಟೋ ವರ್ಷಗಳಿಂದ ಹಾಗೇ ಇದೆ. ನನಗಷ್ಟೇ ಗೊಂದಲಾನಾ? ಅವಳಿಗಿಲ್ಲವಾ? ನನ್ನದು ನನಗೆ ಅವಳದ್ದು ಅವಳಿಗೆ. ಅವರವರ ಮೂಗಿನ ನೇರದ ಕಥೆ ಅದು. ಯಾರ‍್ಯಾರಿಗೆ ಎಷ್ಟೆಷ್ಟು ಅರ್ಥವಾಗುತ್ತೋ... ಅಪಾರ್ಥವಾಗುತ್ತೋ... ಅಷ್ಟಷ್ಟೇ ಬದುಕು ಅನ್ನೋ ಹಾಗೆ!

ಬೆಳಕಿನಿಂದ ಮೋಸ ಹೋದವಳಿಗೆ ಕತ್ತಲ ಮೇಲೆ ಪ್ರೀತಿ ಸಹಜ. ಕತ್ತಲ ಮೇಲೆ ಅವಳಿಗೆ ವಿಪರೀತ ಅನ್ನೋ ಹಾಗೆಯೇ ಇತ್ತು ಆ ಪ್ರೀತಿ. ಯಾಕಿರಬಾರದು? ಬೆಳಕೆಂಬುದು ಬೆಂಕಿಯಾಗಿ, ವಿಚಿತ್ರವೂ ವಿಕೃತವೂ ಆಗಿ, ರೋಮ ರೋಮಕ್ಕೂ ನಂಜೇರಿಸಿ, ಅಂಗ ಅಂಗಕ್ಕೂ ಯೋನಿ ಯೋನಿಯೆಂದೇ ತಿಳಿದು ವೀರ‍್ಯ ಸೇರಿಸಿ ಸಂಭೋಗಿಸಿದಾಗ... ಕೆಂಪೇರಿ ಋತು ಋತುಗಳೇ ಸ್ರಾವವಾಗಿ ಸುರಿದರೂ ಲೆಕ್ಕಿಸದೇ ಮುಕ್ಕಿ ತಿಂದಿರುವಾಗ... ಬೆತ್ತಲಾಗುವುದೆಂದರೆ ಹಸಿದ ಕಿರುಬಕ್ಕೆ ಮೈಮಾಂಸದ ತುತ್ತು ತಿನ್ನಿಸುತ್ತಿದ್ದೇನೆಂಬ ಭಯದ ದೃಶ್ಯ ಮನಸಿನಲ್ಲಿ ಮೂಡುವಾಗ... ಕಾಮವೆಂಬುದು ಕ್ರೂರವೇ? ಇಷ್ಟೊಂದು ಕ್ರೂರವೇ? ಅನಿಸಿದ್ದು ಅವಳನ್ನು ನೋಡಿ, ಅವಳು ಮಾತಾಡದೇ ಇದ್ದುದನ್ನು ಕೇಳಿ!

ನನಗಿರುವಷ್ಟು ಕುತೂಹಲಗಳು ಸ್ವತಃ ಅವಳಿಗೂ ಇಲ್ಲವೇನೋ! ಹೊಲದೊಳಗಿನ ಕಾಲ್ದಾರಿಯಲ್ಲಿ ಹಾದುಹೋಗುವಾಗೊಮ್ಮೆ ಕೇಳಿದ್ದೆ;

‘ಕೊಳಲಿನ ಮೋಹಕ ಗಾನ ನಿನಗಿಷ್ಟವಾಗುವುದಿಲ್ಲವೇ?’

ತಲೆಮಾರುಗಟ್ಟಲೆ ಮೈ-ಮನಕ್ಕೆ ಬೆಂಕಿ ಹಚ್ಚಿಕೊಂಡವಳಿಗೆ ಸಾಮಾನ್ಯ ಪ್ರಶ್ನೆಯೊಂದನ್ನು ಕೇಳಿಬಿಟ್ಟಿದ್ದೆ. ಅವಳಿಗೆ ಕಾಮದ ಜಗತ್ತು ಗೊತ್ತು. ಮೋಹಕ ಗಾನ ಸೂಸುವ ಕೊಳಲಿನ ಹಕೀಕತ್ತೂ ಗೊತ್ತು ಎಂದು ನಾನು ಅಂದುಕೊಂಡಿರಲಿಲ್ಲ. ಸಾಹಿತ್ಯ ಎಂಬುದು ಕಠೋರತೆಯನ್ನೂ ಹಿತವಾಗಿ ಹೇಳಬಲ್ಲದು. ಆದರೆ, ಅವಳಿಗೆ ಹಿತವಾಗಿ ಹೇಳುವ ಸಾಹಿತ್ಯದ ದೋಣಿಯ ಅವಶ್ಯಕತೆ ಇರಲಿಲ್ಲ. ‘ನಾನು ದೋಣಿಯನ್ನು ನಂಬಿ ಸಮುದ್ರ ದಾಟುವವಳಲ್ಲ. ನನ್ನ ಕೈ ರೆಕ್ಕೆಗಳಲ್ಲಿ ಇರುವ ಸಾಮರ್ಥ್ಯವನ್ನು ನಂಬಿಕೊಂಡಿರುವವಳು ಎಂದೇ ಉತ್ತರಿಸಿ, ಹಠ ಸಾಧಿಸಿ ಸಮುದ್ರವೋ, ಕೆರೆಯೋ, ನದಿಯೋ, ವಿಧಿಯೋ ದಾಟುವವಳು!

ನಾನು ಬ್ರಹ್ಮಾಂಡದ ದಾಖಲೆಯನ್ನು ಇಡಬಲ್ಲ, ಬರೆಯಬಲ್ಲ ಲೇಖಕನೋ, ಸಾಹಿತಿಯೋ, ಪತ್ರಕರ್ತನೋ ಆಗಿರಬಹುದು. ದಾರಿಯೇ ಇಲ್ಲದ ಜಾಗದಲ್ಲಿ ದಾರಿ ಹುಡುಕಿ ಬದುಕಿನ, ಸಮಾಜದ, ದೇಶ-ಲೋಕದ ವರ್ತಮಾನದ ಕ್ಷಣಗಳನ್ನು ಬರೆದು ದಾಖಲಿಸಿಡುವ ಶಕ್ತಿಯೂ, ಸಾಮರ್ಥ್ಯವೂ ನನ್ನಲ್ಲಿ ಇರುವುದರಿಂದ ‘ಅವಳದ್ದು ಬರೆಯುವ ಸಾಹಸಕ್ಕೆ ಇಳಿದಿದ್ದೇನೆ. ಅದು ಅವಳಿಗೂ ಗೊತ್ತಿರುವುದರಿಂದ ರಾತ್ರಿ ಮುಗಿಯುವುದನ್ನೇ ಅವಳು ಕಾಯುತ್ತಿರಬಹುದು. ಅದಾಗದೇ ಇದ್ದಲ್ಲಿ...

ನಾಯಿಗೆ ಬೊಗಳುವ ಹಕ್ಕು ಕೊಟ್ಟವರ‍್ಯಾರು? ನರಿಗೆ ಊಳಿಡುವ, ಹುಂಜಕ್ಕೆ ಬಾಂಗ್ ಕೊಡುವ, ಕಪ್ಪೆಗೆ ವಟವಟ ಎನ್ನುವ, ಕೋಗಿಲೆಗೆ ಕುಹೂ ಕುಹೂ ಎನ್ನುವ, ಕಾಗೆಗೆ ಕಾಕಾ ಎಂದು ಕರೆಯುವ, ಗಿಳಿಗೆ ಮಾತಾಡುವ, ಆಕಳಿಗೆ ಅಂಬಾ ಎನ್ನುವ, ಮೀನಿಗೆ ಈಜುವ, ಹಾವಿಗೆ ಸರಸರನೆ ದಾಟುವ... ಹಕ್ಕು ಕೊಟ್ಟವರ‍್ಯಾರು? ಮೊದಲು ಆನಂದದಲ್ಲಿ ನಿತ್ಯವೂ ತೇಲಿಬಿಡುವ ಆಸೆಯಾಗಿಬಿಡುತ್ತದೆ. ಆದರೆ, ಸೂರ‍್ಯನನ್ನೇ ಕೊಂದಿರುವ ಭ್ರಮೆಯಲ್ಲಿರುವ ಅವಳನ್ನು ಪರಿತ್ಯಾಗ ಮಾಡಲ್ಹೇಗೆ?

ಅವಳನ್ನು ಪಡೆಯಲೇಬೇಕೆಂಬ ಭ್ರಮೆ, ಒಮ್ಮುಖ ನಿರ್ಧಾರ, ಹೃದಯವಂತಿಕೆ, ಮಧುರತೆ, ಒಂದೇ ಗುರಿ, ಹೂ ನೀಡಿ ಒಲಿಸಿಕೊಳ್ಳಬೇಕಾದ ಅನಿವಾರ‍್ಯತೆ, ಆತ್ಮ ಮೀರಿದ ಕರುಣೆ; ನನ್ನಲ್ಲೇಕೋ ಉದ್ಭವವಾಗುತ್ತಲೇ ಇಲ್ಲ!

‘ನಾನು ನಿನ್ನ ಜೊತೆ ನಾಲ್ಕು ಹೆಜ್ಜೆ ನಡೆಯಬಹುದೆ?’- ಮೊದಲ ಬಾರಿಗೆ ಅವಳು ಅವಳಾಗೇ ಮಾತಾಡಿದಳು. ಹಾಗೆ, ಮೊದಲೇ ಪ್ರಶ್ನಿಸುವ ಜಾಯಾಮಾನದವಳಲ್ಲ. ಸಹಜವಾಗಿ ನನಗೆ ಅವಳ ಪ್ರಶ್ನೆಯಿಂದ ಆಶ್ಚರ‍್ಯವೂ ಆಯಿತು! ಹೆದರಿಕೆಯೂ ಆಗಿ, ‘ನಿನ್ನ ಕೈಹಿಡಿಯಲೇ?’ ಎಂದೆ. ನನ್ನ ಕೈ ಹಿಡಿದು ನೀ ಗಂಡ್ಸಾಗೋದು ಬೇಡ ಎಂದುಬಿಟ್ಟಿದ್ದರೆ... ನನ್ನ ನವರಂಧ್ರಗಳ ಅದುರುವಿಕೆಯನ್ನು ಹಾಗೂ ಸೋಸುವಿಕೆಯನ್ನು ತೋರಿಸಲಾದರೂ ಸಾಧ್ಯವಿರಲಿಲ್ಲ!!

ನಾನು ಹೆದರಿ ಹೋಗಿದ್ದೆ. ನಾನು ಹೆದರಿ ಹೋಗಿದ್ದು ಯಾರಿಂದ? ಹಸಿವು ಮತ್ತು ಬಂಧನದಿಂದಾನಾ? ದುರ್ದೈವ, ದಾಳಿ ಮಾಡುವ ಮನುಷ್ಯ ಮೃಗಗಳಿಂದಾನಾ? ಜೀವ ಸರಪಳಿಯ ಆಳ-ಅಗಲ ಪತ್ತೆಹಚ್ಚಲು ಪ್ರಯತ್ನಿಸಿದೆ. ಆದರೆ, ಅವಳು ಅಲ್ಲಲ್ಲಿ ಪ್ರತ್ಯಕ್ಷವಾಗುತ್ತಲೇ ಇದ್ದಳು- ಇಡೀ ನನ್ನ ವಂಶವೃಕ್ಷದ ತುಂಬಾ...

ನಿಖರ ಗುರಿ ಇಟ್ಟುಕೊಂಡು... ಇಂತಿಷ್ಟೇ ಬೆಳಕು ಚೆಲ್ಲಬೇಕೆಂಬ ಉರಿಸಿಟ್ಟ ಮಶಾಲಿನಂತೆ!

***

ನಾನೀಗ ನಡೆಯಲೇಬೇಕು... ಹಾರಲೇಬೇಕು... ಆಕಾಶದಲ್ಲ್ಯಾರೋ ಗಂಡು ಸೂರ‍್ಯನಿದ್ದಾನೆ ಎಂಬ ಕಾರಣದಿಂದ ಅಲ್ಲ. ಅವನ ಜಾಗಕ್ಕೆ ನಾ ಜಿಗಿಯಬೇಕು. ನನ್ನೊಳಗೊಂದು ಭೂತವಿದೆ. ಯಾರದ್ದೋ? ಅವಳಿಗೆ ಮಾತಾಡಿದೆ... ಕಿಚಾಯಿಸಿದೆ...

ಪವಾಡ ಅಲ್ಲಿತ್ತು...

ಆತ್ಮ ಎಂಬುದು ತುಂಗಾ ನದಿಯಲ್ಲಿ ಕೊಳೆತು ತೇಲುತ್ತಿತ್ತು!

ಅಲ್ಲಿಯೂ ಗರ್ಭದ, ಹಾರೋ ಗಾಳಿಪಟದ, ಸುಮ್ಮನಿರೋ ಗಾಯದ ದೇಹದ ದುರ್ವಾಸನೆಗೆ ಅಲ್ಲಿಯೂ ಮಶಾಲು ಹಚ್ಚಿಟ್ಟಿದ್ದಳು ಅವಳು. ನದಿಯ ದಡದಲ್ಲಿದ್ದ ಮರಗಳೆಲ್ಲ ಕತ್ತಲಿಗೋ ಮೂಳೆ ಕೊರೆವ ಚಳಿಗೋ ಮರಗಟ್ಟಿಹೋಗಿದ್ದವು. ಕತ್ತಲ ಹೆಣವನ್ನೆತ್ತಿಕೊಂಡು ನದಿ ಚರಮಗೀತೆ ಹಾಡುತ್ತಾ ಮುಂದೆ ಸಾಗುತ್ತಿರುವಂತೆ ನನಗೆ ಅನಿಸಲು ಕಾರಣವೂ ಇತ್ತು; ಮಶಾಲು ಹೆಬ್ಬಾವಿನ ರೂಪ ತಾಳಿ ಎಲ್ಲದನ್ನೂ ನುಂಗುತ್ತಿತ್ತು- ಮಳೆ, ಮೋಡ, ಗುಡುಗು, ಮಿಂಚು, ಆಕಾಶ, ಭೂಮಿ, ಹುಳ, ಕ್ರಿಮಿ... ಯಾವುಯಾವುದನ್ನೂ ಬಿಡದೇ ನುಂಗುತ್ತಲೇ ಇತ್ತು.

ಅವಳು ಮುದ್ದು ಮಗುವಿನಂತೆ ಭಯವಿಲ್ಲದೆ ತನ್ನ ಪಾಡಿಗೆ ತಾನು ನಿಂತೇ ಇದ್ದಳು. ಗೋಡೆ ಮೇಲಿನ ಹಲ್ಲಿ ತಲೆ ಮೇಲೆ ಉಚ್ಚೆ ಹೊಯ್ದರೂ ಅಲುಗಾಡದಿದ್ದಾಗ ನಿದ್ದೆಯಿಂದ ಕೂಸನ್ನೆಬ್ಬಿಸುವಂತೆ ನಾನೇ ಅವಳನ್ನು ಎಬ್ಬಿಸಲು ಪ್ರಯತ್ನಿಸಿದೆ. ಜಗದ ಪ್ರೀತಿ ಹಣೆಯ ಮೇಲೆ ಫಳಫಳ ಹೊಳೀತಿತ್ತು. ಕಣ್ಣುಗಳಲ್ಲಿ ಮಾತ್ರ ರಕ್ತದ ಕಲರಿನ ನಿಗಿನಿಗಿ ಕೆಂಡ. ಬಹಳ ಹೊತ್ತು ಆ ಕ್ಷಣಗಳನ್ನು ನೋಡಲಾಗದೇ ಕಣ್ಣುಜ್ಜಿಕೊಂಡೆ. ಕಣ್ಣುಜ್ಜಿಕೊಳ್ಳುತ್ತಲೇ ‘ಮುಂದೇನು’- ಪ್ರಶ್ನಿಸಿದೆ.

ಸುತ್ತಿಗೆ, ಉಳಿ ಹಿಡಿದು ಬಂದಳು;

‘ನಿನ್ನ ಕೆತ್ತಬೇಕು... ಮತ್ತೆ ನನ್ನ ಕೆತ್ತಬೇಕು’

ಮಶಾಲಿನ ಅಸ್ಪಷ್ಟ ಬೆಳಕ ನಡುವೆ ಲೋಕವೊಂದು ಬಾಗಿಲು ತೆರೆಯುತ್ತಿತ್ತು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry