7

ಓದಿಕೊಂಡು ತಪ್ಪು ಮಾಡಿದೆ!

Published:
Updated:

ತುಮಕೂರು: ‘ನೀವು ಹೇಳಿದ್ದು ನಿಜ. ನಾನು ಸ್ವಲ್ಪ ಓಶೋ, ಅದು ಇದು ಎಲ್ಲ ಓದಿಕೊಂಡು ಹೀಗೆ ಮಾತನಾಡುತ್ತಿದ್ದೇನೆ. ಒಂದು ವೇಳೆ ಓದದಿದ್ದರೆ ಬಾಯಿಗೆ ಬಂದಂತೆ ಮಾತನಾಡಿ ಹೋಗಬಹುದಿತ್ತು. ಓದಿ ತಪ್ಪು ಮಾಡಿದೆ...’

ಮಾಧ್ಯಮಗೋಷ್ಠಿಯಲ್ಲಿ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಪಟೇಲ್ ಅವರ ಮಾತುಗಳಲ್ಲಿ ಪರ್ಯಾಯ ರಾಜಕಾರಣ ಮತ್ತು ಅಧ್ಯಾತ್ಮ ಇಣುಕಿತ್ತು. ಪತ್ರಕರ್ತರು ರಾಜಕೀಯದಲ್ಲಿ ಇದೆಲ್ಲ ಸಲ್ಲುವ ಮಾತೇ ಎಂದಿದ್ದಕ್ಕೆ ಮಹಿಮಾ ಹೀಗೆ ಉತ್ತರಿಸಿದ್ದರು.

ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯ ಪ್ರಸ್ತಾಪವಾಗುತ್ತಲೇ, ‘ಎಲ್ಲರೂ ನಾವು ಹಿಂದುಳಿದವರು, ನಾವು ಹಿಂದುಳಿದವರು ಎಂದು ಕೂಗಿ ಹೇಳುತ್ತಿದ್ದಾರೆ. ಆದರೆ ಎಲ್ಲರಿಗಿಂತ ಮುಂದುವರಿದವನು ನಾನು’ ಎಂದು ಮುಗುಳ್ನಕ್ಕರು.

ಜೆ.ಎಚ್‌.ಪಟೇಲರು ಮುಖ್ಯಮಂತ್ರಿ ಆಗಿದ್ದಾಗ ಅವರನ್ನು ಒಬ್ಬರು ಕೇಳಿದರು, ‘ನೀವು ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ ಹಾಗೂ ಬೊಮ್ಮಾಯಿ ಅವರಲ್ಲಿ ಯಾರ ಗುಂಪಿಗೆ ಸೇರಿದ್ದೀರಿ’ ಎಂದು. ಅದಕ್ಕೆ ಪಟೇಲರು ‘ಈ ಮೂವರೂ ನನ್ನ ಗುಂಪಿನಲ್ಲಿ ಇದ್ದಾರೆ’ ಎಂದಿದ್ದರು. ಅದರಂತೆ ನಾನು ಯಾವ ಗುಂಪಿಗೂ ಸೇರಿಲ್ಲ. ನೀವು (ಪತ್ರಕರ್ತರು) ಸೇರಿದಂತೆ ಎಲ್ಲರೂ ನನ್ನ ಗುಂಪು’ ಎಂದಾಗ ನಗುವ ಸರದಿ ಪತ್ರಕರ್ತರದ್ದು.

ಗೋಷ್ಠಿ ಮುಗಿಸಿ ಹೊರಟಿದ್ದ ಪತ್ರಕರ್ತರನ್ನು ಮತ್ತೆ ಕರೆದು, ‘ನಾನು ಮಾತನಾಡಿದ್ದು ಮುಗಿದಿದೆ. ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ’ ಎಂದರು.

‘ಸ್ವರ್ಣಯುಗ ಪಕ್ಷ ಕಟ್ಟಿದಾಗ ವ್ಯವಸ್ಥೆ ವಿರುದ್ಧ ಆಕ್ರೋಶ ಇತ್ತು. ಈಗ ನನಗೆ ವಯಸ್ಸು 50 ದಾಟಿದೆ. 50 ದಾಟಿದ ಮೇಲೆ ಸ್ವಲ್ಪ ಸಮಾಧಾನ ಬರುತ್ತದೆಯಂತೆ’ ಎನ್ನುತ್ತಲೇ ಪತ್ರಕರ್ತರ ಮಾತುಗಳನ್ನು ಕೇಳಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry