7

ಬಸವಳಿದ ಬದುಕಿಗೆ ಬೆಳಕಿನ ಕೋಟೆ

Published:
Updated:
ಬಸವಳಿದ ಬದುಕಿಗೆ ಬೆಳಕಿನ ಕೋಟೆ

1998ರ ಘಟನೆ ಇದು. ಉತ್ತರ ಕೇರಳದ ಕಣ್ಣೂರಿನ ಕಲ್ಲಿಕಂಡಿ ಗ್ರಾಮದಲ್ಲಿ 9 ವರ್ಷದ ಅನಾಥ ಹುಡುಗನೊಬ್ಬ ರಸ್ತೆ ಬದಿಯ ತಿಪ್ಪೆಯಲ್ಲಿ ಚಿಂದಿ ಆಯುತ್ತಿದ್ದಾಗ ಕೈಗೆ ಸಿಕ್ಕ ನಾಡಬಾಂಬ್‌ ಸ್ಫೋಟಗೊಂಡು ಆತನ ದೇಹದ ಒಂದು ಪಾರ್ಶ್ವವೇ ಸುಟ್ಟುಹೋಯಿತು. ಹುಡುಗನಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ತಿಂಗಳೊಪ್ಪತ್ತಿನಲ್ಲಿ ನಿಧಾನವಾಗಿ ಚೇತರಿಸಿಕೊಳ್ಳಲಾರಂಭಿಸಿದ.

ಅದೊಂದು ದಿನ ಸ್ಥಳೀಯ ಪತ್ರಕರ್ತನೊಬ್ಬ ಈ ಹುಡುಗನನ್ನು ಆಸ್ಪತ್ರೆಗೆ ಹೋಗಿ ಭೇಟಿ ಮಾಡಿ ಮಾತನಾಡಿಸಿದ. ದಿಕ್ಕು ದೆಸೆಯಿಲ್ಲದ ಎಳೆ ಬಾಲಕನ ಕರುಳು ಕಿವುಚುವ ಕಥೆಗೆ ಕಿವಿಯೊಡ್ಡಿದ. ‘ಮುಂದೆ ಏನು ಮಾಡುತ್ತೀಯಾ’ ಎಂದು ಕೇಳಿದ. ಅದಕ್ಕೆ ಹುಡುಗ, ‘ಇನ್ನೇನು ಮಾಡಲಿ, ಒಂದು ಕೈ ಇಲ್ಲವಾಗಿದೆ. ಒಂದು ಕಣ್ಣನ್ನೂ ಕಳೆದುಕೊಂಡಿದ್ದೇನೆ. ಈ ಸ್ಥಿತಿಯಲ್ಲಿ ಯಾವ ಕೆಲಸ ಮಾಡಲಿ, ಎಲ್ಲಾದರೂ ರೈಲ್ವೇ ಸ್ಟೇಷನ್‌ ಅಥವಾ ಬಸ್‌ ಸ್ಟ್ಯಾಂಡ್‌ನಲ್ಲಿ ಭಿಕ್ಷೆ ಬೇಡಿ ಹೇಗೊ ಬದುಕುತ್ತೇನೆ ಬಿಡಿ’ ಎಂದ.

ಕಲ್ಲೆದೆಯನ್ನೂ ಕರಗಿಸುವಂತಹ ಹುಡುಗನ ದಾರುಣ ಬದುಕನ್ನು ಪತ್ರಕರ್ತ ಸಾದ್ಯಂತವಾಗಿ ಚಿತ್ರಿಸಿದ. ಕೊಟ್ಟಾಯಂ ಜಿಲ್ಲೆ ಪೂತುಪಲ್ಲಿಯ ಆ ಎಳೆ ಹುಡುಗನ ಹೆಸರು ‘ಅಮವಾಸಿ’. ಪತ್ರಿಕೆಯಲ್ಲಿ ಪ್ರಕಟವಾದ ಇವನ ವೃತ್ತಾಂತ ಕೇರಳ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಚಂದ್ರಶೇಖರ ಮೆನನ್‌ (ಈಗ ಬದುಕಿಲ್ಲ) ಹಾಗೂ ಕೆ.ಎನ್.ಆನಂದಕುಮಾರ್ ಅವರ ದೃಷ್ಟಿಗೂ ಬಿತ್ತು. ಇಬ್ಬರೂ ನ್ಯಾಯಮೂರ್ತಿಗಳು ಇವನನ್ನು ದತ್ತು ತೆಗೆದುಕೊಳ್ಳುವ ತೀರ್ಮಾನಕ್ಕೆ ಬಂದರು. ತಡಮಾಡದೆ ವೈದ್ಯರ ಜೊತೆ ಚರ್ಚಿಸಿ, ಅಮವಾಸಿಯನ್ನು ತಿರುವನಂತಪುರಂನಲ್ಲಿರುವ ಸತ್ಯಸಾಯಿ ಆಶ್ರಮಕ್ಕೆ ಕಳುಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಅಮವಾಸಿಯು ಆಶ್ರಮದಲ್ಲಿ ಗೆಲುವಾಗಿ ನಡೆದಾಡುವಂತಾದ. ದತ್ತು ತೆಗೆದುಕೊಂಡಿದ್ದ ಇಬ್ಬರೂ ನ್ಯಾಯಮೂರ್ತಿಗಳು ಅಮವಾಸಿಆಗುಹೋಗುಗಳ ಸಂಪೂರ್ಣ ಹೊಣೆ ಹೊತ್ತುಕೊಂಡರು. ಆಶ್ರಮದಲ್ಲೇ ಶಿಕ್ಷಣ ಸಿಗುವ ವ್ಯವಸ್ಥೆಯನ್ನೂ ಮಾಡಿದರು. ರಜಾ ದಿನಗಳಲ್ಲಿ ಬಂದು ಇವನನ್ನು ವಿಚಾರಿಸಿಕೊಂಡು ಹೋಗಲಾರಂಭಿಸಿದರು.

ಅಮವಾಸಿ ಸ್ವಭಾವತಃ ಚುರುಕಿನ ಹುಡುಗ. ಆಶ್ರಮದ ಮೇಲ್ವಿಚಾರಕರಿಗೆ ಇವನೊಳಗೆ ಅಡಗಿದ್ದ ಸುಪ್ತ ಸಂಗೀತ ಪ್ರತಿಭೆಯನ್ನು ಗುರುತಿಸಲು ಹೆಚ್ಚು ದಿನ ಬೇಕಾಗಲಿಲ್ಲ. ಆಶ್ರಮಕ್ಕೇ ಬರುತ್ತಿದ್ದ ಸಂಗೀತ ಗುರುಗಳ ಬಳಿ ಇವನಿಗೂ ಅಭ್ಯಾಸಕ್ಕೆ ಅನುವು ಮಾಡಿಕೊಟ್ಟರು. ಸಂಗೀತ ಕಲಿಯಲು ಆರಂಭಿಸಿದ ಅಮವಾಸಿಯ ಜೀವನ, ಗಾನದ ಜೇನುಗೂಡಾಯಿತು. ಲೌಕಿಕ ಪ್ರೀತಿ ದಿನೇ ದಿನೇ ಚಿಗುರತೊಡಗಿತು. ಒಳಗಿನ ಪ್ರತಿಭೆ ಹಾಲು ನಗೆ ಚೆಲ್ಲಲು ಸಜ್ಜಾಯಿತು.

ಅಮವಾಸಿ, ರಾಗ ಸಾಮ್ರಾಜ್ಯದಲ್ಲಿ ಹೆಚ್ಚು ಹೆಚ್ಚು ಮಗ್ನನಾದಂತೆ ಸಂಗೀತವೂ ಒಲಿಯತೊಡಗಿತು. ಅವನು ಬೇಟೆಯ ಬೇಗುದಿಗೆ ಬಿದ್ದವನಂತೆ ರಾಗಗಳ ಹಿಂದೆ ನಡೆದಿದ್ದ. ಋತುಗಳು ಉರುಳಿದಂತೆ ಅವನ ಸುಶ್ರಾವ್ಯ ಕಂಠ ಹೊಸ ಹೊಸ ಮಜಲುಗಳಿಗೆ ಮಗ್ಗುಲಾಗತೊಡಗಿತು. ಅರಿವಿಲ್ಲದಂತೆಯೇ ಅವನ ಎದೆಯಂಗಳದಲ್ಲಿ ಹುಣ್ಣಿಮೆಯ ಬೆಳಕು ಹರಡತೊಡಗಿತ್ತು.

ಆವೊತ್ತು ಆಶ್ರಮದಲ್ಲೊಂದು ಕಾರ್ಯಕ್ರಮ. ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಮುಖ್ಯ ಅತಿಥಿಯಾಗಿ ಬಂದಿದ್ದರು. ಸಭಾ ಪ್ರಾರ್ಥನೆಯನ್ನು ಅಮವಾಸಿಯೇ ಪ್ರಸ್ತುತಪಡಿಸಿದ. ಅವನ ಗಾನ ಮಾಧುರ್ಯಕ್ಕೆ ಚಾಂಡಿ ಮನಸೋತರು. ಅದ್ಭುತ ಶಾರೀರಕ್ಕೆ ನಿಬ್ಬೆರಗಾದರು. ಆದರೆ, ಅವನ ವಿಕಾರ ಶರೀರ ಕಂಡು ನಿಡುಸುಯ್ದರು. ವಂದನಾರ್ಪಣೆ ಆಗುತ್ತಿದ್ದಂತೆಯೇ ಅಮವಾಸಿಯ ವಿವರವನ್ನೆಲ್ಲಾ ಕೇಳಿ ತಿಳಿದುಕೊಂಡರು. ಮುಂದೆ ಸಚಿವ ಸಂಪುಟದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಚಾಂಡಿ, ಅಮವಾಸಿಗೆ ಒಂದು ಸರ್ಕಾರಿ ಉದ್ಯೋಗ ನೀಡುವ ತೀರ್ಮಾನ ಕೈಗೊಂಡರು.

ಈ ತೀರ್ಮಾನವನ್ನು ಅಮವಾಸಿಗೆ ತಿಳಿಸಲಾಯಿತು. ಅದಕ್ಕವನು, ‘ನನ್ನನ್ನು ಯಾವುದಾದರೂ ಸಂಗೀತ ಶಾಲೆಗೆ ಸೇರಿಸಿ. ಅಲ್ಲೇ ಜೀವನ ಮಾಡಿಕೊಂಡಿರುತ್ತೇನೆ’ ಎಂದು ಒಳಗಿನ ಬಯಕೆ ಬಿಚ್ಚಿಟ್ಟ. ಅವನಿಚ್ಛೆಗೆ ಚಾಂಡಿ ತಥಾಸ್ತು ಎಂದರು.

ತಿರುವನಂತಪುರಂನಲ್ಲಿರುವ ದಕ್ಷಿಣ ಭಾರತದ ಪ್ರತಿಷ್ಠಿತ ‘ಸ್ವಾತಿ ತಿರುನಾಳ್ ಕಾಲೇಜ್‌ ಆಫ್‌ ಮ್ಯೂಸಿಕ್‌’ನಲ್ಲಿ ಅವನಿಗೊಂದು ನೌಕರಿ ಕೊಟ್ಟರು. ಘನತೆಯ ಬಾಳು ಬಾಳುವುದಕ್ಕೆ ಅವಕಾಶ ಕಲ್ಪಿಸಿದರು.

ಅಮವಾಸಿ ಬಗೆಗಿನ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮಾರ್ಕ್ಸ್‌ವಾದಿ ಕವಿ ಪಿ.ಗೋವಿಂದ ಪಿಳ್ಳೈ ಅದೊಂದು ಸುಸಂದರ್ಭದಲ್ಲಿ ಅಮವಾಸಿಯ ಹೆಸರನ್ನು ‘ಪೂರ್ಣಚಂದ್ರನ್’ ಎಂದು ಬದಲಾಯಿಸಿದರು!

ಪೂರ್ಣಚಂದ್ರನ್‌ ಹೇಗಿದ್ದಾನೆ ಎಂದು ನೋಡಲು ಪತ್ರಕರ್ತರು ಅವನ ಮನೆಗೊಂದು ದಿನ ಭೇಟಿ ಕೊಟ್ಟರು. ಒಳಗೆ ಕಾಲಿಡುತ್ತಿದ್ದಂತೆಯೇ ಗೋಡೆಯ ಮೇಲೆ ಚೌಕಟ್ಟುಗಳಲ್ಲಿ ರಾರಾಜಿಸುತ್ತಿದ್ದ ಮೂವರ ಫೋಟೊಗಳು ಗಮನ ಸೆಳೆದವು.

ಆ ಫೋಟೊಗಳಲ್ಲಿ ಇದ್ದವರು; ಇಬ್ಬರು ನ್ಯಾಯಮೂರ್ತಿಗಳಾದ ಚಂದ್ರಶೇಖರ್, ಆನಂದಕುಮಾರ್ ಮತ್ತು ಮುಖ್ಯಮಂತ್ರಿ ಉಮ್ಮನ್‌ ಚಾಂಡಿ...!

ಪತ್ರಕರ್ತರಿಗೆ ಪೂರ್ಣಚಂದ್ರ ವಿವರಿಸಿದ; ‘ನೋಡಿ, ನಾನು ಅನಾಥ. ಆಸ್ಪತ್ರೆಯ ಹಾಸಿಗೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದವನಿಗೆ ಚಿಕಿತ್ಸೆ ಕೊಡಿಸಿ ಬದುಕಿಸಿದವರು ಈ ನ್ಯಾಯಮೂರ್ತಿಗಳು. ಇವರೇ ನನ್ನ ಬದುಕಿನ ನೀಲಾಂಜನಗಳು! ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಕೆಲಸ ಕೊಟ್ಟ ಪುಣ್ಯಾತ್ಮ. ಅವರು ನನ್ನ ಪಾಲಿನ ದೇವರು’ ಎಂದು ಗದ್ಗದಿತನಾದ. ಮುಂದೆ ಇವನ ಕಥೆ ‘ಸಫಲಮೀ ಜೀವಿದಮ್‌’ ಹೆಸರಿನಲ್ಲಿ 30 ನಿಮಿಷಗಳ ಸಾಕ್ಷ್ಯಚಿತ್ರವಾಗಿ ಖ್ಯಾತಿ ಪಡೆಯಿತು.

ಇಂತಹುದೇ ಒಂದು ನೈಜ ದುರಂತ ಘಟನೆಗೆ ನಮ್ಮ ಲಿಷಾಳೂ ಸಾಕ್ಷಿ. ಬೆಂಗಳೂರಿನ ಮಲ್ಲೇಶ್ವರದ 11ನೇ ಕ್ರಾಸ್‌ನ ಬಿಜೆಪಿ ಕಚೇರಿ ಮುಂಭಾಗ 2013ರ ಏಪ್ರಿಲ್‌ 17ರಂದು ಬೆಳಿಗ್ಗೆ 10.30ಕ್ಕೆ ಬಾಂಬ್‌ ಸ್ಫೋಟ ಸಂಭವಿಸಿತು. ಈ ವೇಳೆ ರಸ್ತೆಯಲ್ಲಿ ಕಾಲೇಜಿಗೆ ನಡೆದು ಹೋಗುತ್ತಿದ್ದ 19ರ ತರುಣಿ ಲಿಷಾ ಮತ್ತು ಆಕೆಯ ಸಹಪಾಠಿ ರಕ್ಷಿತಾ ಸೇರಿದಂತೆ 12 ಜನ ಪೊಲೀಸ್ ಸಿಬ್ಬಂದಿ ಗಾಯಗೊಂಡರು. ಸ್ಫೋಟದಲ್ಲಿ ಲಿಷಾಳ ಎಡಗಾಲಿಗೆ ಗಂಭೀರ ಪೆಟ್ಟಾಗಿತ್ತು. ಮೈ, ಕೈ ಎಲ್ಲಾ ಸುಟ್ಟು ಅಲ್ಲಲ್ಲಿ ಆಳದ ಗಾಯಗಳಾಗಿದ್ದವು. ತಕ್ಷಣವೇ ಆಕೆಯನ್ನು ಸಮೀಪದಲ್ಲೇ ಇರುವ ಕೆ.ಸಿ.ಜನರಲ್‌ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹಾಸ್‌ಮ್ಯಾಟ್‌, ಅಲ್ಲಿಂದ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಲಿಷಾಳ ಕಾಲಿಗೆ ಮೇಲಿಂದ ಮೇಲೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಕಡೆಗೊಂದು ದಿನ ವೈದ್ಯರು ‘ಈಕೆ ಶಾಶ್ವತ ಅಂಗವಿಕಲತೆಗೆ ಒಳಗಾಗಿದ್ದಾಳೆ’ ಎಂದು ಘೋಷಿಸಿದರು. ಸರ್ಕಾರ ಲಿಷಾ ಒಳರೋಗಿಯಾಗಿ ಚಿಕಿತ್ಸೆ ಪಡೆದ ವೆಚ್ಚವನ್ನು ಮಾತ್ರವೇ ಭರಿಸಿತು.

ನಂದಿನಿ ಲೇಔಟ್ ನಿವಾಸಿ ಲಿಷಾಳ ತಂದೆ ದೊರೆಸ್ವಾಮಿಗೆ ಒಬ್ಬ ಮಗ ಮತ್ತು ಮಗಳು. ಕೆಲಸ ವಾಹನಗಳ ಬ್ಯಾಟರಿ ರಿಪೇರಿ ಮಾಡುವುದು. ಬಡತನಕ್ಕೆ ಕಷ್ಟಗಳೆಲ್ಲಾ ನೆಂಟರು ಎನ್ನುವಂತೆ ಮಗಳ ದುಃಸ್ಥಿತಿ ದೊರೆಸ್ವಾಮಿಯನ್ನು ಕಂಡವರ ಮುಂದೆ ಕೈಯೊಡ್ಡುವಂತೆ ಮಾಡಿತು. ಚಿಕಿತ್ಸೆಗೆ ಸರಿಸುಮಾರು ₹ 30 ಲಕ್ಷ ಹೊಂದಿಸುವಲ್ಲಿ ಹೈರಾಣಾಗಿ ಹೋದರು. ಸಾಲದ ಬಾಧೆ ಹೆಗಲೇರಿತು. ಹೆಚ್ಚಿನ ನೆರವಿಗಾಗಿ ದೊರೆಸ್ವಾಮಿ ತಟ್ಟಿದ್ದು ಕೋರ್ಟ್ ಕದವನ್ನು.

ಅವು 2014ರ ಜನವರಿ– ಫೆಬ್ರುವರಿ ನಡುವಿನ ಚಳಿಗಾಲದ ದಿನಗಳು. ಹೈಕೋರ್ಟ್ ಕಾರಿಡಾರ್‌ನಲ್ಲಿ ಗಾಲಿ ಕುರ್ಚಿಯಲ್ಲಿ ಕುಳಿತ ಹುಡುಗಿಯೊಬ್ಬಳು ನನ್ನತ್ತಲೇ ಧಾವಂತದಿಂದ ಬರುತ್ತಿದ್ದಳು. ಅವಳ ಕೈಯಲ್ಲೊಂದು ಕಾಗದದ ಕಂತೆಯಿತ್ತು. ಬಳಿ ಬಂದವಳೇ, ‘ಅಣ್ಣಾ ನನಗೆ ಸಹಾಯ ಮಾಡಿ’ ಎಂದು ಕೇಳಿದಳು. ‘ಏನು’ ಎಂದೆ. ‘ನಾನು ಸರ್ಕಾರದ ನೆರವಿಗೆ ಪರದಾಡುತ್ತಿದ್ದೇನೆ. ಇದಕ್ಕಾಗಿ ನನಗೆ ಗೊತ್ತಿದ್ದ ವಕೀಲರೊಬ್ಬರ ಬಳಿ ವಿಚಾರಿಸಿದ್ದೆ. ಅವರು ನಿಮ್ಮ ಹೆಸರು ಸೂಚಿಸಿದರು. ಅದಕ್ಕೇ ಹುಡುಕಿಕೊಂಡು ಬಂದಿದ್ದೇನೆ. ನನ್ನ ಕೇಸ್ ನಡೆಸಿಕೊಡಿ’ ಎಂದು ತನ್ನ ಕಥೆಯನ್ನು ಬಿಚ್ಚಿಟ್ಟಳು. ಅವಳ ಗೋಳನ್ನು ಕೇಳಿದ ಕ್ಷಣ ನನಗೆ ಏನೊಂದೂ ಮಾತನಾಡಲು ಆಗಲೇ ಇಲ್ಲ. ‘ಫೋನ್‌ ಮಾಡುತ್ತೇನೆ’ ಎಂದು ಹೇಳಿ ಕಳುಹಿಸಿದೆ.

ದಿನವಿಡೀ ದುಃಖದಲ್ಲಿದ್ದ ನನಗೆ ರಾತ್ರಿ ನಿದ್ದೆಯೂ ಸುಳಿಯಲಿಲ್ಲ. ಲಿಷಾಳ ಮೈ ಮೇಲಿನ ಗಾಯದ ಗುರುತುಗಳು, ಕಳೆದು ಹೋದ ಕಾಲು, 7 ಬಾರಿ ಶಸ್ತ್ರಚಿಕಿತ್ಸೆ. ತುಂಬು ಪ್ರಾಯದ ಮುಗುದೆ ದಯನೀಯ ಸ್ಥಿತಿಯಲ್ಲಿ ಬಂದು ಅಂಗಲಾಚಿದ್ದು ಚಿಂತೆಗೀಡು ಮಾಡಿತ್ತು.

‘ದೇವರೇ ಯಾವ ಶತ್ರುವಿಗೂ ಇಂತಹ ಯಾತನೆ ಕೊಡಬೇಡ’ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಲೇ ಲಿಷಾಗೆ ಏನೆಲ್ಲಾ ಸಹಾಯ ಮಾಡಬಹುದೆಂಬ ಜಿಜ್ಞಾಸೆಯಲ್ಲಿ ಎರಡು, ಮೂರು ದಿನ ಕಳೆದೆ. ಉತ್ತರ ಹೊಳೆದ ಮೇಲೆ ಫೋನ್‌ ಮಾಡಿ, ‘ನೀನೇನೂ ಚಿಂತಿಸಬೇಡ. ನನ್ನ ಕೈಲಾಗುವ ಗರಿಷ್ಟ ಮಟ್ಟದ ಕಾನೂನು ನೆರವಿನ ಪ್ರಾಮಾಣಿಕ ಪ್ರಯತ್ನಕ್ಕೆ ತಯಾರಾಗಿದ್ದೇನೆ. ನಿನ್ನಿಂದ ನಾನು ಫೀಸನ್ನೂ ನಿರೀಕ್ಷಿಸುವುದಿಲ್ಲ. ದೇವರು ನಮ್ಮ ಜೊತೆಗಿದ್ದಾನೆ’ ಎಂದು ಹುರಿದುಂಬಿಸಿದೆ.

ಲಿಷಾ ಕೇವಲ ಕಾಲು ಕಳೆದುಕೊಂಡಿರಲಿಲ್ಲ. ಬದುಕನ್ನೇ ಕಳೆದುಕೊಂಡಿದ್ದಳು. ಜಿಂಕೆಯಂತೆ ಚಿಮ್ಮುತ್ತಾ, ನಲಿಯುತ್ತಾ ಇರಬೇಕಿದ್ದವಳು ಕುಂಟುವುದಿರಲಿ ನಡೆಯಲಿಕ್ಕೇ ಆಗದಂತಹ ವಿಕಲತೆಗೆ ತುತ್ತಾಗಿದ್ದಳು. ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ ಇವಳಿಗೆ ಸರ್ಕಾರದ ಪೂರ್ಣ ಪ್ರಮಾಣದ ನೆರವಿನ ಅವಶ್ಯಕತೆ ಇದೆ ಎಂಬ ಅಂಶವನ್ನು ಮನವರಿಕೆ ಮಾಡಿಕೊಂಡೆ. ಈಕೆಯ ಗೌರವಯುತ ಬದುಕುವ ಹಕ್ಕಿಗೆ ಸರ್ಕಾರದಿಂದ ಹೇಗೆ ಲೋಪವಾಗಿದೆ ಎಂಬು

ದನ್ನು ಕಂಡುಕೊಂಡೆ. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ಪ್ರಕರಣ ತಡಕಾಡುತ್ತಿದ್ದಾಗಲೇ ನನಗೆ ಅಮವಾಸಿಯ ಕಥೆ ಸಿಕ್ಕದ್ದು. ಈ ತಳಹದಿಯಲ್ಲೇ ರಿಟ್ ಅರ್ಜಿ ತಯಾರಿಸಿ, ‘ಭಯೋತ್ಪಾದನಾ ಕೃತ್ಯಗಳಲ್ಲಿ ಸಂತ್ರಸ್ತರಾದವರಿಗೆ ಪರಿಹಾರ ನೀಡುವ ದಿಸೆಯಲ್ಲಿ ರಾಷ್ಟ್ರೀಯ ನೀತಿ ರೂಪಿಸಬೇಕು ಹಾಗೂ ಲಿಷಾಗೆ ₹ 1 ಕೋಟಿ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಪ್ರಾರ್ಥಿಸಿದೆ.

ಪಂಜಾಬ್‌ ಭಯೋತ್ಪಾದನಾ ದಾಳಿಗಳಲ್ಲಿ ಸತ್ತವರಿಗೆ ದೊರೆತ ಪರಿಹಾರ, ಜಮ್ಮು ಮತ್ತು ಕಾಶ್ಮೀರದ ನೀತಿಗಳು, ಈಶಾನ್ಯ ರಾಜ್ಯಗಳಲ್ಲಿ ಉಗ್ರರ ಚಟುವಟಿಕೆಗೆ ಬಲಿಯಾದವರಿಗೆ ಕೊಟ್ಟಂತಹ ಪರಿಹಾರ, ನಕ್ಸಲ್‌ ಚಟುವಟಿಕೆಗಳಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರಿಗೆ ನೀಡಿದ ನೆರವು... ಹೀಗೆ ಹತ್ತಾರು ನಿರ್ಣೀತ ನಿದರ್ಶನಗಳ ಅಡಿಯಲ್ಲಿ ಲಿಷಾಳ ಘಟನೆಯೂ ಹೇಗೆ ಪ್ರಸ್ತುತವಾಗುತ್ತದೆ ಎಂಬುದನ್ನು ಕೋರ್ಟ್‌ಗೆ ವಿಶದಪಡಿಸಿದೆ.

‘ಲಿಷಾಗೆ ಒಂದು ಸರ್ಕಾರಿ ಉದ್ಯೋಗ ನೀಡಲು ಆದೇಶಿಸಬೇಕು’ ಎಂದು ವಿನಂತಿಸಿದೆ. ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ನಮ್ಮ ಅಳಲನ್ನೆಲ್ಲಾ ಆಲಿಸಿದರು. ಪ್ರತಿವಾದಿಗಳಾದ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದರು.

ಸುದೀರ್ಘ ವಾದ–ಪ್ರತಿವಾದಗಳ ಬಳಿಕ, ‘ಘಟನೆಗೆ ಗುಪ್ತಚರ ವಿಭಾಗದ ವೈಫಲ್ಯ ಕಾರಣ ಎಂಬ ಅರ್ಜಿದಾರರ ಆರೋಪವನ್ನು ಒಪ್ಪಿಕೊಳ್ಳುವುದು ಅಷ್ಟೊಂದು ಸಮಂಜಸ ಎನಿಸುವುದಿಲ್ಲ. ಘಟನೆಯಲ್ಲಿ ಲಿಷಾ ಶೇ 50ಕ್ಕೂ ಹೆಚ್ಚು ಅಂಗವಿಕಲತೆಗೆ ತುತ್ತಾಗಿದ್ದಾಳೆ ಮತ್ತು ಇದು ಈಕೆಯ ಭವಿಷ್ಯಕ್ಕೆ ಭರಿಸಲಾಗದ ನಷ್ಟ ಉಂಟು ಮಾಡಿದೆ. ಆದ್ದರಿಂದ ಕೇಂದ್ರ ಸರ್ಕಾರ ಇದನ್ನೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರದ ಮೊತ್ತವನ್ನು ವಿವೇಚನೆಯಿಂದ ನಿರ್ಧರಿಸಬೇಕು’ ಎಂದು ಆದೇಶಿಸಿದರು.

‘ಭಯೋತ್ಪಾದಕರ ದಾಳಿಗೆ ತುತ್ತಾದವರಿಗೆ ವಿಶ್ವದ ಇತರೆ ರಾಷ್ಟ್ರಗಳಲ್ಲಿ ಯಾವ ರೀತಿ ಪರಿಹಾರ ನೀಡಲಾಗುತ್ತಿದೆ ಎಂಬುದನ್ನು ಅವಲೋಕಿಸಬೇಕು. ಈ ನಿಟ್ಟಿನಲ್ಲಿ ಅಮೆರಿಕ 2012ರಲ್ಲಿ ಅಳವಡಿಸಿಕೊಂಡ ನೀತಿಗಳನ್ನು ಮನನ ಮಾಡಬೇಕು. ಭಯೋತ್ಪಾದಕರ ದುಷ್ಕೃತ್ಯಗಳಿಗೆ ತುತ್ತಾದವರಿಗೆ ಇಂಗ್ಲೆಂಡ್‌ ರೂಪಿಸಿರುವ ಕಾನೂನು ನಮಗೆ ಮಾರ್ಗದರ್ಶಿಯಾಗಿದೆ’ ಎಂದು ಸರ್ಕಾರದ ಕಣ್ತೆರೆಸಿದರು.

‘ರಾಜ್ಯ ಸರ್ಕಾರ ಲಿಷಾಗೆ ಮೂರು ತಿಂಗಳಿನಲ್ಲಿ ಸರ್ಕಾರಿ ಉದ್ಯೋಗ ನೀಡಬೇಕು’ ಎಂದು 2016ರ ಅಕ್ಟೋಬರ್ 17ರಂದು ಆದೇಶಿಸಿದರು. ಆದರೆ, ಈ ಆದೇಶ ವರ್ಷವಾದರೂ ಪಾಲನೆಯಾಗಲಿಲ್ಲ. ಪುನಃ ನಾನು ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದೆ.

‘ರಾಜ್ಯ ಸರ್ಕಾರ ಕಾಯಿಲೆ–ಕಸಾಲೆ ಬಿದ್ದ ಸಚಿವರನ್ನೆಲ್ಲಾ (ಜನಪ್ರಿಯ ಸಿನಿಮಾ ನಟರೂ ಹೌದು) ವಿಶೇಷ ವಿಮಾನದಲ್ಲಿ ವಿದೇಶಕ್ಕೆ ಕಳುಹಿಸುತ್ತದೆ. ಅವರ ವೈದ್ಯಕೀಯ ಚಿಕಿತ್ಸೆ ವೆಚ್ಚ ₹ 1.24 ಕೋಟಿಯನ್ನು ಬೊಕ್ಕಸದಿಂದಲೇ ಭರಿಸುತ್ತದೆ. ಆದರೆ, ಹೈಕೋರ್ಟ್‌ ಆದೇಶವಿದ್ದರೂ ಲಿಷಾಳಂತಹ ಸಂತ್ರಸ್ತೆಗೆ ಒಂದು ಸರ್ಕಾರಿ ಉದ್ಯೋಗ ನೀಡಲು ಮೀನಮೇಷ ಎಣಿಸುತ್ತಿದೆ’ ಎಂದು ವಾಸ್ತವವನ್ನು ತೆರೆದಿಟ್ಟೆ.

(ಬಿ.ಎಸ್‌.ಯಡಿಯೂರಪ್ಪ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ರಾಮಚಂದ್ರೇಗೌಡ ಅವರು ಲಂಡನ್‌ನಿಂದ ಸರ್ಕಾರದ ಹಣದಲ್ಲಿ ಶ್ರವಣ ಸಾಧನ ತರಿಸಿಕೊಂಡಿದ್ದರು. ಅಂತೆಯೇ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರಾಗಿದ್ದ ಅಲ್ಲಮಪ್ರಭು ಪಾಟೀಲ ಸರ್ಕಾರಿ ವೆಚ್ಚದಲ್ಲಿ ತಲೆಗೂದಲು ನಾಟಿ ಮಾಡಿಸಿಕೊಂಡಿದ್ದರು...!).

ಸರ್ಕಾರದ ನಿರ್ಲಕ್ಷ್ಯ ಆರೋಪಕ್ಕೆ ಕ್ರುದ್ಧರಾದ ನ್ಯಾಯಮೂರ್ತಿ ಜಯಂತ್ ಪಟೇಲ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಚಾಟಿ ಬೀಸಿತು. ಈ ಏಟಿಗೆ ತಡವರಿಸಿಕೊಂಡು ಎಚ್ಚೆತ್ತ ಸರ್ಕಾರ, ಕಡೆಗೂ 2017ರ ಆಗಸ್ಟ್‌ ತಿಂಗಳಿನಲ್ಲಿ ‘ಲಿಷಾಳಿಗೆ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ

(ಗುಂಪು–ಬಿ) ನೇರ ನೇಮಕಾತಿ ಮಾಡಲಾಗಿದೆ’ ಎಂದು ಆದೇಶ ಪತ್ರ ನೀಡಿತು. ಏತನ್ಮಧ್ಯೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಿಷಾಗೆ ₹ 13 ಲಕ್ಷದ ನೆರವನ್ನೂ ಒದಗಿಸಿದವು.

ಕಾನೂನು ಹೋರಾಟದ ನಡುವೆಯೇ ಎಂಸಿಎ ಪದವಿಯನ್ನೂ ಪೂರೈಸಿದ ಲಿಷಾ ಈಗ ಹಲಸೂರಿನ ಹೋಂ ಗಾರ್ಡ್ಸ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಳೆ. ಮೂರು ಗಾಲಿಯ ಮೋಟಾರು ಬೈಕಿನಲ್ಲಿ ನಿತ್ಯವೂ ತನ್ನ ಮನೆಯಿಂದ 30 ಕಿ.ಮೀ. ದೂರ ಕ್ರಮಿಸಿ ಬದುಕಿನ ಬಂಡಿ ಓಡಿಸುತ್ತಿದ್ದಾಳೆ. ಕುಸಿದು ಹೋದ ಕನಸುಗಳ ಚಪ್ಪರಕ್ಕೆ ಹೊಸ ಅರ್ಥಗಳನ್ನು ಹೊದಿಸುತ್ತಿದ್ದಾಳೆ!

ಲೇಖಕ ಹೈಕೋರ್ಟ್‌ ವಕೀಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry