ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಂತಿ ಕದಡುವುದು ಬಿಜೆಪಿ ಕಾಯಕ’

Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

* ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಟೀಕೆ ಇದೆಯಲ್ಲ?

ಮೊದಲು ಸ್ವಲ್ಪ ಅಶಾಂತಿ ಇತ್ತು. ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಬಳಿಕ ಶಾಂತಸ್ಥಿತಿಗೆ ಬಂದಿದೆ. ಬಿಜೆಪಿಯವರು ಸಾಮರಸ್ಯ ಕದಡುವ ಕೆಟ್ಟ ಉದ್ದೇಶದಿಂದ ಮಂಗಳೂರಿಗೆ ಬೈಕ್ ರ‍್ಯಾಲಿ ಹಮ್ಮಿಕೊಂಡರು. ಆದರೆ, ಸರ್ಕಾರ ಅವಕಾಶ ನೀಡದಿರುವುದರಿಂದ ಅವರ ಅಪೇಕ್ಷೆ ಈಡೇರಲಿಲ್ಲ. ಟಿಪ್ಪು
ಸುಲ್ತಾನ್ ಜಯಂತಿ, ದತ್ತಜಯಂತಿ ಬಳಸಿಕೊಂಡು ಗಲಾಟೆ ಎಬ್ಬಿಸಲಿದ್ದಾರೆ ಎಂಬ ಮುನ್ಸೂಚನೆ ಇತ್ತು. ಹುಣಸೂರಿನಲ್ಲಿ ಬಿಜೆಪಿ ಸಂಸದರೇ ಕಾನೂನು ಉಲ್ಲಂಘಿಸಿದರು. ಹೊನ್ನಾವರದಲ್ಲಿ ಈದ್ ಮಿಲಾದ್‌ ಹಾಗೂ ಹನುಮ ಜಯಂತಿಯನ್ನು ಒಂದೇ ದಿನ ಒಂದೇ ಕಡೆ ನಡೆಸಬೇಕು ಎಂದು ಕೆಲವರು ಹಟಕ್ಕೆ ಕುಳಿತರು. ಅವಕಾಶ ನೀಡದಿದ್ದುದನ್ನು ಖಂಡಿಸಿ ಮೆರವಣಿಗೆ ನಡೆಸಿ, ಕಲ್ಲು ತೂರಾಟ ನಡೆಸಿದರು. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಜನರಲ್ಲಿ ಒಡಕು ಮೂಡಿಸಿ, ವೋಟುಗಳ ಧ್ರುವೀಕರಣಕ್ಕೆ ಬಿಜೆಪಿ ಯತ್ನಿಸುತ್ತಿದೆ. ಚುನಾವಣೆ ಮುಗಿಯುವವರೆಗೆ ಈ ರೀತಿಯ ‘ಹೆಚ್ಚುವರಿ ಚಟುವಟಿಕೆ’ ಮಾಡುತ್ತಾರೆ.

* ಅನೈತಿಕ ಪೊಲೀಸ್‌ಗಿರಿ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆಯಲ್ಲವೇ?

ಬಿಜೆಪಿ ಸರ್ಕಾರ ಇದ್ದಾಗ ಎಲ್ಲ ಕಡೆ ಅನೈತಿಕ ಪೊಲೀಸ್‌ಗಿರಿಗೆ ಕುಮ್ಮಕ್ಕು ಕೊಡುತ್ತಿದ್ದರು. ಈಗ ಕಡಿಮೆಯಾಗಿದೆ. ಪದೇ ಪದೇ ಇಂಥ ಕೆಲಸದಲ್ಲಿ ಭಾಗಿಯಾಗುವವರ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡುವಂತೆ ಆದೇಶಿಸಿದ್ದೇನೆ.

* ಗಲಭೆಗ್ರಸ್ತ ವಾತಾವರಣ ವಿಸ್ತರಿಸುತ್ತಿದೆ ಎಂಬ ಆತಂಕ ಮೂಡಿದೆಯಲ್ಲವೇ?

ಅದು ಬಿಜೆಪಿಯವರ ಕಾರ್ಯಸೂಚಿ. ಅನಂತಕುಮಾರ್‌ ಹೆಗಡೆ, ಪ್ರತಾಪ್‌ ಸಿಂಹ ಅವರ ಮಾತುಗಳೇ ಅದನ್ನು ಹೇಳುತ್ತಿವೆ. ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

* ಗಲಭೆ, ಹಿಂಸೆ ನಡೆಯುವುದಕ್ಕೆ ಮುನ್ನ ಮುಂಜಾಗ್ರತೆ ತೆಗೆದುಕೊಳ್ಳುವುದಿಲ್ಲ ಏಕೆ?

ಎಲ್ಲ ಕಡೆಯಲ್ಲೂ ಬಂದೋಬಸ್ತ್‌ ಮಾಡಲಾಗಿತ್ತು. ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾದಾಗ, ಸೌಹಾರ್ದ ಕೆಡಿಸುವುದೇ ಉದ್ದೇಶವಾದಾಗ ಇಂಥ ಘಟನೆಗಳು ನಡೆಯುತ್ತವೆ.

* ಮೃದು ಹಿಂದುತ್ವ ಧೋರಣೆ ಕಡೆ ಕಾಂಗ್ರೆಸ್ ವಾಲುತ್ತಿದೆಯೇ?

ಅಂತಹದ್ದೇನಿಲ್ಲ. ಯಾರೇ ಕಾನೂನು ಉಲ್ಲಂಘಿಸಿದರೂ ಶಿಕ್ಷೆಗೆ ಗುರಿಪಡಿಸಲಾಗುವುದು. ಜಯಂತಿ ಆಚರಣೆ ಆಧರಿಸಿ ಹೀಗೆ ಹೇಳುತ್ತಿದ್ದರೆ ಅದು ಸರಿಯಲ್ಲ. ನಮ್ಮ ಸರ್ಕಾರ ಬಂದ ಮೇಲೆ ಆಯಾ ಸಮುದಾಯವರ ಆಗ್ರಹಕ್ಕೆ ಮಣಿದು ಶ್ರೀಕೃಷ್ಣ, ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆಗೆ ನಿರ್ಧರಿ
ಸಲಾಯಿತು. ಅದು ಮೃದು ಹಿಂದುತ್ವವಲ್ಲ.

* ಗಲಭೆ ಸಂಬಂಧ ಇಲ್ಲಿಯವರೆಗೆ ಎಷ್ಟು ಪ್ರಕರಣ ದಾಖಲಾಗಿದೆ. ‍ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಕ್ರಮ ಏನು?

ಕೋಮು ಗಲಭೆಗೆ ಸಂಬಂಧಿಸಿದಂತೆ 2011ರಿಂದ ಇಲ್ಲಿಯವರೆಗೆ 548, 2015ರಲ್ಲಿ ಮಾತ್ರ 254 ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಮೊಕದ್ದಮೆ ದಾಖಲಿಸುವ ಕೆಲಸ ನಡೆಯುತ್ತಿದೆ. ಕಾನೂನು ಎಲ್ಲರಿಗೂ ಒಂದೇ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನೆ ಮಾಡುತ್ತಿರುವವರ ಮೇಲೆ ನಿಗಾ ಇಡಲಾಗಿದೆ.

* ಕಲ್ಲಡ್ಕ ಪ್ರಭಾಕರ ಭಟ್ಟರ ಸೂಚನೆ ಮೇರೆಗೆ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗುತ್ತಿದೆ ಎಂಬ ಆಪಾದನೆ ಇದೆಯಲ್ಲ?

ಪ್ರಭಾಕರ ಭಟ್ಟರಿಗೂ ವರ್ಗಾವಣೆಗೂ ಸಂಬಂಧವಿಲ್ಲ. ಅವರೇನು ಸರ್ಕಾರದ ಭಾಗವೇ? ವರ್ಗಾವಣೆಯನ್ನು ಪೊಲೀಸ್ ಸಿಬ್ಬಂದಿ ಮಂಡಳಿ ಮಾಡುತ್ತದೆ.

* ಕಾಂಗ್ರೆಸ್ ಸರ್ಕಾರ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆಯೇ?

ಹಾಗೆಂದು ಬಿಜೆಪಿಯವರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಹಿಂದೂ ಕಾರ್ಯಕರ್ತರ ಕೊಲೆಯಾಗುತ್ತಿದೆ ಎಂದು ಬಿಜೆಪಿಯವರು ಹೇಳುತ್ತಾರೆ. ನಾವೂ ಅವರಿಗಿಂತ ಹೆಚ್ಚಿನ ನಿಷ್ಠೆ ಇರುವ ಹಿಂದೂಗಳು. 19 ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ ಎಂದು ಹೇಳುತ್ತಿದ್ದಾರೆ. ಹಿಂದೂ ಕಾರ್ಯಕರ್ತರು ಎಂಬ ಪದವೇ ಸರಿಯಲ್ಲ. ವಿಶ್ವಹಿಂದು ಪರಿಷತ್ತು, ಬಜರಂಗದಳ, ಶ್ರೀರಾಮಸೇನೆ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಎಂಬ ಪದ ಬಳಸಬೇಕು. 19 ಜನರ ಪೈಕಿ 11 ಜನ ಸಂಘ ಪರಿವಾರದ ಸಂಘಟನೆಗಳಿಗೆ ಸೇರಿದವರು, ಉಳಿದವರು ಪಿಎಫ್ಐ, ಎಸ್‌ಡಿಪಿಐ ಸಂಘಟನೆಗೆ ಸೇರಿದವರು. ಅಲ್ಲದೆ ಪಿಎಫ್‌ಐ, ಬಿಜೆಪಿ ಜಗಳದಿಂದ ಕೊಲೆಯಾದವರು 6 ಜನ ಮಾತ್ರ. ಉಳಿದ ಕೊಲೆ ಪ್ರಕರಣಗಳಲ್ಲಿ ಮುಸ್ಲಿಮರು ಆರೋಪಿಗಳಲ್ಲ. ವೈಯಕ್ತಿಕ ಕಾರಣಕ್ಕೆ ಕೊಲೆ ನಡೆದಿವೆ. ಅಷ್ಟಕ್ಕೂ ಪಿಎಫ್‌ಐ, ಕಾಂಗ್ರೆಸ್‌ ಸರ್ಕಾರದ ಭಾಗವಲ್ಲ. ಇಲ್ಲಿ ಸಮ್ಮಿಶ್ರ ಸರ್ಕಾರವೂ ಇಲ್ಲ. ಹಾಗಿರುವಾಗ ರಕ್ಷಣೆ ನೀಡುವ ಪ್ರಶ್ನೆಯೇ ಇಲ್ಲ.

* ಹಿಂಸಾ ರಾಜಕಾರಣಕ್ಕೆ ಬಿಜೆಪಿ ಪ್ರೋತ್ಸಾಹ ನೀಡುತ್ತದೆಯೇ?

ಅದನ್ನು ನಾನು ಹೇಳಬೇಕಿಲ್ಲ. ‘ನಿಮ್ಮ ಹೋರಾಟದಿಂದ ಲಾಠಿ ಚಾರ್ಜ್‌, ಟಿಯರ್ ಗ್ಯಾಸ್‌, ಗೋಲಿಬಾರ್ ಆಗಿದೆಯೇ ಎಂದು ಅಮಿತ್‌ ಷಾ ಕೇಳಿದ್ದರು, ಅಂತಹ ಹೋರಾಟ ಮಾಡುವುದಾಗಿ ತಿಳಿಸಿದ್ದೆ’ ಎಂದು ಪ್ರತಾಪ್‌ ಸಿಂಹ ಹೇಳಿದ್ದರು. ಮುಂದಿದೆ ಮಾರಿಹಬ್ಬ ಎಂದು ಅನಂತಕುಮಾರ್ ಹೆಗಡೆ ಹೇಳಿದ್ದರ ಅರ್ಥವೇನು? ಶೋಭಾ ಕರಂದ್ಲಾಜೆ ಅವರಂತೂ ಯಾವುದೇ ಹೆಣ ಕಂಡರೂ ಇದು ಸಂಘ ಪರಿವಾರದವರ ಕೊಲೆ ಎಂದೇ ಅಬ್ಬರಿಸುತ್ತಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಯಾವುದೇ ಕೋಮು ಗಲಭೆಯಾಗುವುದಿಲ್ಲ. ಈಗ ಅವರು ವಿರೋಧ ಪಕ್ಷದಲ್ಲಿ ಇರುವುದರಿಂದ ಏನೂ ಕೆಲಸವಿಲ್ಲ. ಜಾತಿಜಾತಿಗಳ ಮಧ್ಯೆ ಜಗಳ ತಂದಿಟ್ಟು ಸಾಮರಸ್ಯ ಕದಡುವ ಕೆಲಸ ಮಾಡುತ್ತಿದ್ದಾರೆ.

ಚಿತ್ರ: ಆನಂದ್‌ ಬಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT