ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸಂತ ಪ್ರಕಾಶನಕ್ಕೆ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ

Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ 2016ನೇ ಸಾಲಿನ ‘ಅತ್ಯುತ್ತಮ ಪ್ರಕಾಶನ ಪ್ರಶಸ್ತಿ’ಗೆ ಬೆಂಗಳೂರಿನ ವಸಂತ ಪ್ರಕಾಶನ ಭಾಜನವಾಗಿದೆ.

‘ಡಾ.ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’ಗೆ ಧಾರವಾಡದ ಸಂಗಮೇಶ ಸವದತ್ತಿಮಠ, ‘ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’ಗೆ ಗದಗಿನ ಅರ್ಜುನ ಯಲ್ಲಪ್ಪ ಗೊಳಸಂಗಿ, ‘ಡಾ. ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ಗೆ ಕಲಬುರ್ಗಿಯ ಪಿ.ಎಸ್. ಶಂಕರ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಗಳು ಕ್ರಮವಾಗಿ ತಲಾ ₹ 1 ಲಕ್ಷ,  ₹ 75,000, ₹ 50,000 ಮತ್ತು ₹ 25,000  ನಗದು ಪುರಸ್ಕಾರ ಒಳಗೊಂಡಿವೆ.

2016ನೇ ಸಾಲಿನ ‘ಪುಸ್ತಕ ಸೊಗಸು’ ಬಹುಮಾನವನ್ನೂ ಪ್ರಾಧಿಕಾರ ಪ್ರಕಟಿಸಿದ್ದು, ಮೊದಲನೇ ಬಹುಮಾನಕ್ಕೆ ಎಚ್.ಬಿ.ಎಲ್. ರಾವ್ ಅವರ ‘ಅಣಿ ಅರದಲ ಸಿರಿ ಸಿಂಗಾರ’ ಪುಸ್ತಕ ಆಯ್ಕೆಯಾಗಿದೆ. ಈ ಪುಸ್ತಕವನ್ನು ನವಿ ಮುಂಬಯಿನ ಸಾಹಿತ್ಯ ಬಳಗ ಪ್ರಕಟಿಸಿದೆ. ಬಹುಮಾನ ₹ 25,000 ನಗದು ಪುರಸ್ಕಾರ ಒಳಗೊಂಡಿದೆ.

ಮಾನಸ ಅವರ ‘ಕನಕ ಮಹಾ ಸಂಪುಟ’ ಎರಡನೇ ಬಹುಮಾನಕ್ಕೆ ಆಯ್ಕೆಯಾಗಿದ್ದು, ಕೃತಿಯನ್ನು ಮೈಸೂರಿನ ತನು–ಮನ ಪ್ರಕಾಶನ ಪ್ರಕಟಿಸಿದೆ. ₹ 20,000 ನಗದು ಬಹುಮಾನ ಒಳಗೊಂಡಿದೆ. ಮೂರನೇ ಬಹುಮಾನಕ್ಕೆ ಶಿವಾನಂದ ಎಂ. ಜಾಮದಾರ ಅವರ ‘ತಾರತಮ್ಯ’ ಕೃತಿ ಆಯ್ಕೆಯಾಗಿದ್ದು, ಈ ಕೃತಿಯನ್ನು ಧಾರವಾಡದ ಗ್ರಂಥ ಮಾಲಾ ಪ್ರಕಾಶನ ಪ್ರಕಟಿಸಿದೆ. ಪ್ರಶಸ್ತಿಯು ₹ 15,000 ನಗದು ಪುರಸ್ಕಾರ ಹೊಂದಿದೆ.

‘ಮಕ್ಕಳ ಪುಸ್ತಕ ಸೊಗಸು ಬಹುಮಾನ’ಕ್ಕೆ ಪಾತಮುತ್ತಕಹಳ್ಳಿ ಎಂ. ಚಲಪತಿಗೌಡ ಅವರ ‘ಬಣ್ಣದ ಚಿಟ್ಟೆ’ ಆಯ್ಕೆಯಾಗಿದೆ. ಚಿಕ್ಕಬಳ್ಳಾಪುರದ ಚಂದು ಪ್ರಕಾಶನ ಈ ಪುಸ್ತಕ ಪ್ರಕಟಿಸಿದ್ದು, ₹ 10,000 ನಗದು ಬಹುಮಾನ ಒಳಗೊಂಡಿದೆ.

ಮುಖಪುಟ ಚಿತ್ರ ವಿನ್ಯಾಸ ಬಹುಮಾನಕ್ಕೆ ರಾಜೇಂದ್ರ ಪ್ರಸಾದ್ ಅವರ ‘ಲಾವೋನ ಕನಸು’ ಪುಸ್ತಕ ಆಯ್ಕೆಯಾಗಿದೆ. ಕಿರಣ್ ಮಾಡಾಳು, ಸೌಮ್ಯ ಕಲ್ಯಾಣಕರ್‌ ಮುಖಪುಟ ವಿನ್ಯಾಸ ಮಾಡಿದ್ದಾರೆ. ₹ 10,000 ನಗದುಪುರಸ್ಕಾರವನ್ನು ಈ ಪ್ರಶಸ್ತಿ ಹೊಂದಿದೆ.

ಮುಖಪುಟ ಚಿತ್ರ ಕಲೆಯ ಬಹುಮಾನಕ್ಕೆ ಬಿ. ಶ್ರೀಪಾದ್ ಭಟ್‌ ಅವರ ‘ಬಿಸಿಲು ಬಯಲು ನೆಳಲು’ ಆಯ್ಕೆಯಾಗಿದೆ. ಈ ಪುಸ್ತಕದ ಮುಖಪುಟ ಚಿತ್ರವನ್ನು ಸೃಜನ್ ರಚಿಸಿದ್ದಾರೆ. ₹ 8,000 ನಗದು ಪುರಸ್ಕಾರವನ್ನು ಈ ಪ್ರಶಸ್ತಿ ಒಳಗೊಂಡಿದೆ.

2018ರ ಜನವರಿ 16ರಂದು ನಯನ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗವುದು ಎಂದು ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT