ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಜ ಜೀವನಕ್ಕಾಗಿ ಹಳ್ಳಿಗಳಿಗೆ ಹಿಂತಿರುಗಿ: ಕೃಷಿ ತಜ್ಞ ನಾರಾಯಣ ರೆಡ್ಡಿ ಸಲಹೆ

Last Updated 17 ಡಿಸೆಂಬರ್ 2017, 15:53 IST
ಅಕ್ಷರ ಗಾತ್ರ

ಬೆಂಗಳೂರು: ‘ಸಹಜ ಜೀವನ ನಡೆಸಬೇಕೆಂದರೆ ಮೊದಲು ಹಳ್ಳಿಗಳಿಗೆ ಹಿಂದಿರುಗಿ. ಕೃಷಿ ಗೌರವಯುತ ವೃತ್ತಿ. ಇದರ ಬಗ್ಗೆ ಆಳವಾದ ತಿಳಿವಳಿಕೆ ಪಡೆದು, ಕೃಷಿ ಕಸುಬು ಆರಂಭಿಸಿ’ ಎಂದು ಕೃಷಿ ತಜ್ಞ ನಾರಾಯಣರೆಡ್ಡಿ ಯುವಜನರಿಗೆ ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ'ಯ ತಿಂಗಳ ಅತಿಥಿಯಾಗಿ ಅವರು ಮಾತನಾಡಿದರು.

‘ನಗರದಲ್ಲಿ ಎಷ್ಟು ಬೇಕಾದರೂ ಸಂಪಾದಿಸಬಹುದು. ಆದರೆ, ನೆಮ್ಮದಿ, ಆರೋಗ್ಯದ ಬದುಕು ಗಳಿಸಲಾಗದು. ನಗರದ ವ್ಯಾಮೋಹದಿಂದ ಹಳ್ಳಿ ತೊರೆದು ಬಂದವರು, ಸಹಜ, ಸರಳ ಹಾಗೂ ಆರೋಗ್ಯದ ಬದುಕು ನಡೆಸಲು ಪುನಃ ಹಳ್ಳಿಗಳಿಗೆ ವಾಪಸಾಗಬೇಕು. ಅಲ್ಲಿ 10 ಗುಂಟೆಯಲ್ಲಾದರೂ ಕೃಷಿ ಮಾಡಿಕೊಂಡು ಪಶುಪಕ್ಷಿಗಳ ಕಲರವ ಆಲಿಸುತ್ತಾ ನೆಮ್ಮದಿ ಜೀವನ ಸಾಗಿಸಬಹುದು’ ಎಂದರು.

‘ರೈತರು ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿದಾಗ ನಗು ಮತ್ತು ಅಳು ಎರಡೂ ಬರುತ್ತದೆ. ಕಸುಬಿನ ಸರಿಯಾದ ತಿಳಿವಳಿಕೆ ಇಲ್ಲದೆ ನಮ್ಮ ಕೃಷಿಕರು ನಷ್ಟ ಅನುಭವಿಸುತ್ತಿದ್ದಾರೆ. ಬೀಜ-ಗೊಬ್ಬರ ಕಂಪೆನಿಗಳ ಆಮಿಷಗಳಿಗೆ ಮರುಳಾಗಿ ಕೆಡುತ್ತಿದ್ದಾರೆ. ನಾನೂ 40 ವರ್ಷಗಳಿಂದ ಕೃಷಿ ಮಾಡುತ್ತಿದ್ದೇನೆ. ರಾಸಾಯನಿಕ ಕೃಷಿ ಬಿಟ್ಟು, ಸಾವಯವ ಕೃಷಿಗೆ ಮರಳಿದ ಮೇಲೆ ಬದುಕಿನಲ್ಲಿ ಹಿಂತಿರುಗಿ ನೋಡಿಲ್ಲ. ಯಾವತ್ತೂ ಸಾಲ ಮಾಡಿಲ್ಲ. ಕೃಷಿಯಿಂದಲೇ ₹ 150 ಕೋಟಿ ಸಂಪಾದಿಸಿದ್ದೇನೆ. ವರ್ಷಕ್ಕೆ 40 ಬಡಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು.

‘ಬಾಲ್ಯದಲ್ಲಿ ಮನೆ ಬಿಟ್ಟುಬಂದು ಬೆಂಗಳೂರಿನಲ್ಲಿ ಹೋಟೆಲ್‌ನಲ್ಲಿ ಲೋಟ ತೊಳೆಯುತ್ತಿದ್ದೆ. ಕೆಲಸದ ಶ್ರದ್ಧೆ ನೋಡಿ ಮಾಲೀಕರು ಮೂರೇ ದಿನಗಳಲ್ಲಿ ಅಡುಗೆ ಕೋಣೆ ಮತ್ತು ದಿನಸಿ ಪದಾರ್ಥಗಳ ಸಂಗ್ರಹ ಕೊಠಡಿಯ ಮೇಲ್ವಿಚಾರಣೆ ವಹಿಸಿದರು. ನಾನು ಬದುಕಿಲ್ಲವೆಂದೇ ಪೋಷಕರು ಭಾವಿಸಿದ್ದರು. ಹೋಟೆಲ್‌ನಲ್ಲಿದ್ದ ದಿನಗಳು ಬದುಕಿನ ಪಾಠ ಕಲಿಸಿದವು. ಜಿಲ್ಲಾಧಿಕಾರಿಯೊಬ್ಬ ತಿಂಗಳಿಗೆ ₹250ರಿಂದ ₹300 ಸಂಬಳ ಪಡೆಯುತ್ತಿದ್ದ ಕಾಲದಲ್ಲೇ ನನ್ನ ಸಂಬಳ ತಿಂಗಳಿಗೆ ₹800 ಇತ್ತು’ ಎಂದು ನೆನಪಿಸಿಕೊಂಡರು.

‘ಪೇಟೆ ವ್ಯವಹಾರದ ಮೋಸ, ‌ವಂಚನೆ ನೋಡಿ ಈ ಬದುಕು ನಮಗಲ್ಲವೆಂದು ಹಳ್ಳಿಗೆ ಹಿಂತಿರುಗಿದೆ. ತಂದೆಯಿಂದ ಬಳುವಾಗಿ ಬಂದ ಒಂದೂವರೆ ಎಕರೆ ಭೂಮಿ ಜತೆಗೆ, ಹೋಟೆಲ್‌ ಕೆಲಸದಲ್ಲಿ ಕೂಡಿಟ್ಟಿದ್ದ ಹಣದಿಂದ ಮತ್ತಷ್ಟು ಕೃಷಿ ಭೂಮಿ ಖರೀದಿಸಿದೆ. ದೊಡ್ಡಬಳ್ಳಾಪುರದ ಹಳ್ಳಿಯೊಂದರಲ್ಲಿರುವ ನನ್ನ ಸ್ವರ್ಗದಂತಹ ಕೃಷಿ ಭೂಮಿಗೆ ಸಹಜ ಕೃಷಿ ಪ್ರತಿಪಾದಕ ಜಪಾನಿನ ಫುಕುವೊಕಾ ಬಂದು ಹೋಗಿದ್ದಾರೆ. ಸಾಯುವ ಮೊದಲು ಅವರನ್ನೊಮ್ಮೆ ಕಾಣುವ ಕನಸು ಕಂಡಿದ್ದೆ. ಆದರೆ, ಆ ಪುಣ್ಯಾತ್ಮನೇ ನನ್ನನ್ನು ಹುಡುಕಿ ಬಂದಾಗ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ’ ಎಂದರು.

‘ಪ್ರತಿ ದಿನ ಒಂದು ಗಿಡ ನೆಡಿ, ನಿಮಗೆ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎನ್ನುವ ಫುಕುವೊಕಾ ಅವರ ಮಾತು ನನ್ನ ಬದುಕಿನಲ್ಲಿ ಅಪಾರ ಪ್ರಭಾವ ಬೀರಿದೆ’ ಎಂದರು

‘ಸಾವಯವ ಪದಾರ್ಥ ಮಾರುವವರಲ್ಲಿ ಕೆಲವರು ಕಟುಕರು ಮತ್ತು ಕಳ್ಳರಿದ್ದಾರೆ. ಸಾವಯವ ಕಬ್ಬು ಬೆಳೆದು ಬೆಲ್ಲ ಮಾಡಿದ ರೈತರಿಂದ ಕೆ.ಜಿ. ಬೆಲ್ಲವನ್ನು ₹40 ಖರೀದಿಸಿ, ಕೆ.ಜಿ.ಗೆ ₹145ರಂತೆ ಮಾರುತ್ತಿದ್ದಾರೆ. ರೈತರ ಜೊತೆ ಗ್ರಾಹಕರನ್ನೂ ಏಕಕಾಲದಲ್ಲಿ ಸುಲಿಗೆ ಮಾಡುತ್ತಿದ್ದಾರೆ. ನಗರವಾಸಿಗಳು ಇಂತಹವರ ಮೋಸದ ಜಾಲಕ್ಕೆ ಸಿಲುಕದೆ,  ರೈತರೊಂದಿಗೆ ನೇರ ಸಂಪರ್ಕ ಸಾಧಿಸಬೇಕು. ರಜೆ ದಿನಗಳನ್ನು ರೈತರ ಭೂಮಿಯಲ್ಲಿ ಕಳೆಯಬೇಕು. ಮಕ್ಕಳಿಗೆ ಕೃಷಿ ಸಂಸ್ಕಾರ ಪರಿಚಯಿಸಬೇಕು’ ಎಂದು ಸಲಹೆ ನೀಡಿದರು.

ರೆಡ್ಡಿ ಪ್ರೇರಣೆಯಿಂದ ಕೆಲಸ ತೊರೆದ ನೌಕರ

ನಾರಾಯಣ ರೆಡ್ಡಿ ಅವರ ಕೃಷಿ ಸಾಧನೆ ಹಾಗೂ ಅವರು ನೀಡಿದ ಸಲಹೆಗಳಿಂದ ಪ್ರೇರಣೆ ಪಡೆದು ನಗರದ ಬಹುರಾಷ್ಟ್ರೀಯ ಕಂಪೆನಿ ಉದ್ಯೋಗಿಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿ ಹಳ್ಳಿಗೆ ಮರಳಿದ್ದಾರೆ.

‘ಯೂಟ್ಯೂಬ್‌ನಲ್ಲಿ ರೆಡ್ಡಿ ಅವರ ಮಾತುಗಳನ್ನು ವೀಕ್ಷಿಸಿದ್ದೆ. ಅವರ ಮಾತುಗಳಿಂದ ಪ್ರೇರಣೆ ಪಡೆದು ನಾನು ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ. ಹೊಸ ವರ್ಷದಿಂದ ಹಳ್ಳಿಯಲ್ಲಿ ಕೃಷಿ ಬದುಕು ಶುರು ಮಾಡುತ್ತೇನೆ. ಹಳ್ಳಿಯಲ್ಲಿರುವ ನಮ್ಮ ಜಮೀನಿನನಲ್ಲಿ ಈಗಾಗಲೇ 30 ಹೆಬ್ಬೇವಿನ ಗಿಡ ಹಾಗೂ 20 ಸಿಲ್ವರ್‌ ಗಿಡಗಳನ್ನು ನೆಟ್ಟಿದ್ದೇನೆ. 6 ಎಕರೆಯಲ್ಲಿ ಕಬ್ಬು ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದೇನೆ’ ಎಂದು ಗೋಕಾಕ್‌ನ ಹಿರೇಮಠ ಅವರು ತಿಳಿಸಿದರು.

ಹಿರೇಮಠ ಅವರು ಬೆಂಗಳೂರಿನಲ್ಲಿರುವ ಬಹುರಾಷ್ಟ್ರೀಯ ಕಂಪೆನಿಯ ಕಚೇರಿಯೊಂದರಲ್ಲಿ 18 ವರ್ಷ ಉದ್ಯೋಗಿಯಾಗಿದ್ದರು.

* ನೆಲ, ಜಲ, ಗಾಳಿ ಪೂರ್ವಿಕರ ಬಳುವಳಿಯಲ್ಲ. ಅವು ಮುಂದಿನ ಪೀಳಿಗೆಯಿಂದ ಕಡ ಪಡೆದವು. ಭೂಮಿ ಹಾಳುಮಾಡಿ, ವಿಷದ ಬಟ್ಟಲನ್ನು ಬಿಟ್ಟುಹೋದರೆ ಅವರು ಎಂದಿಗೂ ಕ್ಷಮಿಸುವುದಿಲ್ಲ.

–ನಾರಾಯಣ ರೆಡ್ಡಿ, ಕೃಷಿ ಸಾಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT