7

ವಿಮಾನ ನಿಲ್ದಾಣ ಇನ್ನು ನಿಶ್ಶಬ್ದ ವಲಯ

Published:
Updated:
ವಿಮಾನ ನಿಲ್ದಾಣ ಇನ್ನು ನಿಶ್ಶಬ್ದ ವಲಯ

ಮಂಗಳೂರು: ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನು ನಿಶ್ಯಬ್ದ ವಲಯವಾಗಲಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿ ಕಾರವು ಈ ವಿಮಾನ ನಿಲ್ದಾಣವನ್ನು ನಿಶ್ಯಬ್ದ ವಲಯವಾಗಿ ಘೋಷಿಸಿದೆ.

ಇದರಿಂದಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಕ್ಕೆ ಸಂಬಂಧಿಸಿದ ಯಾವುದೇ ಘೋಷಣೆಗಳು ಕೇಳಿ ಬರುವುದಿಲ್ಲ. ಆದರೆ, ಅಂಗವಿಕಲ ಪ್ರಯಾಣಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಪ್ರಾಧಿಕಾರವು ಸೂಚಿಸಿದೆ.

ಪ್ರಯಾಣಿಕರಿಗೆ ಪ್ರಶಾಂತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಜನವರಿ 2 ರಿಂದ ಈ ಆದೇಶ ಜಾರಿಗೆ ಬರಲಿದೆ ಎಂದು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ. ರಾವ್‌ ತಿಳಿಸಿದ್ದಾರೆ.

ವಿಮಾನದ ವೇಳಾಪಟ್ಟಿ ಸೇರಿದಂತೆ ಇತರ ಮಾಹಿತಿಗಳನ್ನು ಡಿಜಿಟಲ್‌ ಫಲಕ, ಎಸ್‌ಎಂಎಸ್‌ ಮೂಲಕ ತಿಳಿಸಲಾಗುತ್ತಿದೆ. ಅಲ್ಲದೇ ಸಂಬಂಧಿಸಿದ ಏರ್‌ಲೈನ್‌ಗಳು ಪ್ರಯಾಣಿಕರಿಗೆ ಈ ಮಾಹಿತಿ ನೀಡಲಿವೆ.

ದೇಶದ ಅನೇಕ ವಿಮಾನ ನಿಲ್ದಾಣಗಳು ನಿಶ್ಯಬ್ದ ವಲಯಗಳಾಗಿ ಘೋಷಣೆಯಾಗಿವೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದ ಕೆಲ ವರ್ಷಗಳಿಂದ ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳ ಸಂಖ್ಯೆ ಹೆಚ್ಚಾಗಿದ್ದು, ಉದ್ಘೋಷಣೆಯಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಹೀಗಾಗಿ ಪ್ರಾಧಿಕಾರವು ಈ ಕ್ರಮಕ್ಕೆ ಮುಂದಾಗಿದೆ.

ಸಂಬಂಧಿಸಿದ ಏರ್‌ಲೈನ್‌ಗಳು ಅಂಗವಿಕಲರಿಗೆ ನೆರವು ನೀಡಲಿವೆ. ಅಲ್ಲದೇ ಅವರಿಗಾಗಿಯೇ ಪ್ರತ್ಯೇಕ ಕೌಂಟರ್‌ ಅನ್ನು ತೆರೆದು, ಅಗತ್ಯ ಸಹಾಯ ಒದಗಿಸಲಾಗುವುದು ಎಂದು ರಾವ್‌ ತಿಳಿಸಿದ್ದಾರೆ.

ವಿಮಾನ ನಿಲ್ದಾಣವನ್ನು ಇನ್ನಷ್ಟು ಪ್ರಯಾಣಿಕ ಸ್ನೇಹಿಯಾಗಿ ಮಾಡಲು ಮತ್ತೊಂದು ಕ್ರಮಕ್ಕೆ ಮುಂದಾಗಿದ್ದು, ಪ್ರಯಾಣಿಕರ ಬ್ಯಾಗ್‌ಗಳಿಗೆ ಮುದ್ರೆ ಹಾಗೂ ಟ್ಯಾಗ್‌ ಹಾಕುವುದನ್ನು ಇದೇ 15 ರಿಂದ ಸ್ಥಗಿತಗೊಳಿಸಲಾಗಿದೆ. ವಿಮಾನ ಪ್ರಯಾಣಕ್ಕೂ ಮುನ್ನ ತಪಾಸಣಾ ಕೇಂದ್ರದಲ್ಲಿ ಇನ್ನು ಮುಂದೆ ಮುದ್ರೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry