7

ಸಾಧಕ ಅಂಗವಿಕಲರು ಸ್ಫೂರ್ತಿಯಾಗಲಿ

Published:
Updated:
ಸಾಧಕ ಅಂಗವಿಕಲರು ಸ್ಫೂರ್ತಿಯಾಗಲಿ

ಚಾಮರಾಜನಗರ: ‘ಅಂಗವೈಕಲ್ಯ ಶಾಪವಲ್ಲ. ನೂರಾರು ಅಂಗವಿಕಲರು ಸಾಧನೆ ಮಾಡಿ ತೋರಿಸಿದ್ದಾರೆ. ಅವರು ಎಲ್ಲರಿಗೂ ಸ್ಫೂರ್ತಿಯಾಗಬೇಕು. ಈ ನಿಟ್ಟಿನಲ್ಲಿ ಅಂಗವಿಕಲರು ಸಾಧಿಸುವ ಮನೋಭಾವ ಬೆಳೆಸಿಕೊಂಡರೆ ಸಾಧನೆ ಮಾಡುವುದು ಸುಲಭ’ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಎಂ.ಸಿ. ಮೋಹನಕುಮಾರಿ ಹೇಳಿದರು.

ನಗರದ ಜೆ.ಎಚ್. ಪಟೇಲ್‌ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಅಂಗವಿಕಲ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿ ತಂದಿದೆ. ಪೋಷಕರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ 21 ವಿಧದ ಅಂಗವಿಕಲತೆಯುಳ್ಳ 13.24 ಲಕ್ಷ ಜನರಿದ್ದಾರೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ 1988ರಲ್ಲಿ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯನ್ನು ಸ್ಥಾಪಿಸಲಾಯಿತು ಎಂದು ತಿಳಿಸಿದರು.

2014ರಲ್ಲಿ ಅಂಗವಿಕಲರ ಹಕ್ಕುಗಳ ಅಧಿನಿಯಮ ಕಾಯ್ದೆ ಅನುಷ್ಠಾನ ಗೊಳಿಸಲಾಯಿತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇತ್ತೀಚೆಗೆ ಅಂಗವಿಕಲರ ಮೀಸಲಾತಿಯನ್ನು ಶೇ 3ರಿಂದ 5ಕ್ಕೆ ಹೆಚ್ಚಿಸಿದೆ. ಆಯವ್ಯಯದಲ್ಲಿ ಅಂಗವಿಕಲರ ಕಲ್ಯಾಣಕ್ಕೆ ₹ 1,000 ಕೋಟಿ ಅನುದಾನ ಮೀಸಲಿಟ್ಟಿದೆ ಎಂದರು.

ಜಿಲ್ಲಾಧಿಕಾರಿ ಬಿ. ರಾಮು ಮಾತನಾಡಿ, ಅಂಗವಿಕಲತೆಗೆ ಒಳಗಾದವರನ್ನು ನಿರ್ಲಕ್ಷಿಸುವುದು ಸರಿಯಲ್ಲ. ಅವರನ್ನು ಪ್ರೋತ್ಸಾಹಿಸಿ ನೈತಿಕ ಬೆಂಬಲ ನೀಡುವ ಅಗತ್ಯವಿದೆ. ಸಾಮಾನ್ಯ ಮಕ್ಕಳಿಗಿಂತ ಅಂಗವಿಕಲ ಮಕ್ಕಳು ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತಾರೆ. ಅದನ್ನು ಗುರುತಿಸುವಂತಹ ಜವಾಬ್ದಾರಿ ಪೋಷಕರ ಮತ್ತು ಶಿಕ್ಷಕರ ಮೇಲಿರುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಜೆ. ಯೋಗೇಶ್‌ ಮಾತನಾಡಿದರು. ಗ್ರಾಮೀಣ ಪುನರ್‌ ವಸತಿ ಕಾರ್ಯಕರ್ತರು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆರೆಹಳ್ಳಿ ನವೀನ್‌, ಬಿ.ಕೆ. ಬೊಮ್ಮಯ್ಯ, ಚೆನ್ನಪ್ಪ, ಉಮಾವತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು, ಚೂಡಾ ಅಧ್ಯಕ್ಷ ಸುಹೇಲ್‌ ಆಲಿಖಾನ್‌, ನಗರಸಭೆ ಸದಸ್ಯೆ ಎಸ್.ಎನ್‌. ರೇಣುಕಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ಹರೀಶ್‌ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜು, ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ರಂಗಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ್‌ ಹಾಜರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಚಾಮರಾಜೇಶ್ವರ ದೇವಸ್ಥಾನದಿಂದ ಜಿಲ್ಲಾಡಳಿತ ಭವನದವರೆಗೆ ವಿವಿಧ ಜಾನಪದ ಕಲಾತಂಡಗಳ ನೇತೃತ್ವದಲ್ಲಿ ಜಾಥಾ ನಡೆಯಿತು. ಬಳಿಕ, ಅರ್ಹ 32 ಫಲಾನುಭವಿಗಳಿಗೆ ಸಚಿವೆ ಮೋಹನಕುಮಾರಿ ಸ್ಕೂಟರ್‌ ವಿತರಿಸಿದರು.

ಚಾಮರಾಜನಗರ: ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲೆಯ ಅಂಗವಿಕಲರ ಸಂಘಟನೆಯ ಹೆಸರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಶನಿವಾರ ಅಂಗವಿಕಲರು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ಭವನದ ಪ್ರವೇಶದ್ವಾರದ ಮುಂಭಾಗ ಕುಳಿತುಕೊಂಡ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾ ಅಂಗವಿಕಲರ ಒಕ್ಕೂಟದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ನಮೂದಿಸಿಲ್ಲ. ಕಾರ್ಯಕ್ರಮಕ್ಕೆ ಬರುವ ಅಂಗವಿಕಲರಿಗೆ ಖಾಸಗಿ ಬಸ್‌ನಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿಲ್ಲ. ಈ ಮೂಲಕ ಅಂಗವಿಕಲರನ್ನು ನಿರ್ಲಕ್ಷಿಸಲಾಗಿದೆ ಎಂದು ದೂರಿದರು.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗೆ ನೋಟಿಸ್‌ ನೀಡಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಭರವಸೆ ನೀಡಿದಾಗ ಪ್ರತಿಭಟನೆ ಕೈ ಬಿಟ್ಟು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

‘ಅಂಗವಿಕಲರಿಗಾಗಿ ಸರ್ಕಾರ ಹಲವು ಕಾರ್ಯಕ್ರಮ ರೂಪಿಸುತ್ತಿದೆ. ಅವರ ಅನುಕೂಲಕ್ಕಾಗಿ ಸ್ಕೂಟರ್‌ ವಿತರಿಸಲಾಗುತ್ತಿದೆ. ಇದನ್ನು ಯಾರಿಗೆ ಮೊದಲು ನೀಡಬೇಕು ಎಂಬುದನ್ನು ಅಂಗವಿಕಲರ ಸಂಘಟನೆಯ ಸಲಹೆ ಪಡೆದು ವಿತರಿಸಲಾಗುತ್ತಿದೆ. ಈ ರೀತಿಯ ವಿಚಾರದ ಬಗ್ಗೆ ಚರ್ಚೆಯಾಗಬೇಕು. ಅದನ್ನು ಹೊರತುಪಡಿಸಿ ಸಣ್ಣ ಪುಟ್ಟ ವಿಚಾರಗಳನ್ನು ದೊಡ್ಡದು ಮಾಡಬಾರದು’ ಎಂದು ಜಿಲ್ಲಾಧಿಕಾರಿ ರಾಮು ಕಾರ್ಯಕ್ರಮದಲ್ಲಿ ಪ್ರತಿಭಟನಾಕಾರರಿಗೆ ಪರೋಕ್ಷವಾಗಿ ಉತ್ತರಿಸಿದರು.

* * 

ಅಂಗವಿಕಲ ಮಕ್ಕಳನ್ನು ನಿರ್ಲಕ್ಷ್ಯ ಮಾಡದೇ ಅವರ ಅಗತ್ಯಗಳನ್ನು ಪೂರೈಸಿ, ಉತ್ತಮ ಶಿಕ್ಷಣ ಕೊಡಿಸುವುದಕ್ಕೆ ಪೋಷಕರು ಮುಂದಾಗಬೇಕು

ಡಾ.ಎಂ.ಸಿ. ಮೋಹನಕುಮಾರಿ ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry