7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಗುರುನಾಥ ಪತ್ತಾರ ಕೈಯಲ್ಲಿ ಕಲೆಯ ಚಿತ್ತಾರ

Published:
Updated:
ಗುರುನಾಥ ಪತ್ತಾರ ಕೈಯಲ್ಲಿ ಕಲೆಯ ಚಿತ್ತಾರ

ಹನುಮಸಾಗರ: ಸಮೀಪದ ಹನುಮನಾಳದಲ್ಲಿ ಜನವರಿ 1ರಿಂದ ಆರಂಭವಾಗುವ ‘ಹನುಮನಾಳ ಹಬ್ಬ’ ದ ಅಂಗವಾಗಿ ಗುರುಗಂಗಾಧರ ಸ್ವಾಮಿ ಸಂಗೀತ ಕಲಾ ಬಳಗ ಮುಖ್ಯಸ್ಥ ಗುರುನಾಥ ಪತ್ತಾರ ಅವರು ಗ್ರಾಮದ ಗೋಡೆಗಳಲ್ಲಿ ಆಕರ್ಷಕ ಚಿತ್ರಗಳ ಬಿಡಿಸಿ ಗಮನ ಸೆಳೆದಿದ್ದಾರೆ. ಕೈಯಲ್ಲಿ ಕುಂಚ ಹಿಡಿದು ಗ್ರಾಮದ ಆವರಣ ಗೋಡೆಗಳ ಮೇಲೆ ಐತಿಹಾಸಿಕ ಚಿತ್ರ ಬಿಡಿಸಿ ಹಳ್ಳಿಗೆ ರಂಗು ತುಂಬುತ್ತಿರುವುದರಲ್ಲಿ ನಿರತರಾಗಿದ್ದಾರೆ.

ಕುಂಚ ಕಲಾವಿದ: ಮೂಲತಃ ಸಂಗೀತ ಕಲಾವಿದರಾಗಿರುವ ಗುರುನಾಥ ಪತ್ತಾರ 5 ವಾದ್ಯ ನುಡಿಸುವ ಕಲಾವಿದ. ಈಗ ಕೆಲಸಗಾರರಂತೆ ಕೈಯಲ್ಲಿ ಬಣ್ಣದ ಡಬ್ಬ ಹಿಡಿದು ಚಿತ್ರ ಬರೆಯುತ್ತಿದ್ದಾರೆ. ಗ್ರಾಮದ ಬಸ್‌ ನಿಲ್ದಾಣ, ಕಾಲೇಜು, ಮನೆಗಳ ಗೋಡೆ, ದೇವಸ್ಥಾನದ ಗೋಡೆಗಳಿಗೆ ಸುಮಾರು ಹದಿನೈದು ದಿನಗಳಿಂದ ಈ ಕಾಯಕ ಮಾಡುತ್ತಿದ್ದಾರೆ.

ಬಾಟಲಿಯಲ್ಲೂ ಕಲೆ ಬಿಂಬಿಸುವ ಕಲಾವಿದ: ನಾವು ನೀವೆಲ್ಲ ಇಲ್ಲಿಯವರೆಗೆ ಕೊಳವೆ ಆಕಾರದಷ್ಟೆ ದ್ವಾರ ಹೊಂದಿರುವ ಬಾಟಲಿಯೊಳಗೆ ಹತ್ತಿಯಿಂದ, ದಾರದಿಂದ, ಸ್ಪಂಜಿನಿಂದ ಕಲಾಕೃತಿಗಳನ್ನು ಮಾಡಿರುವುದನ್ನು ನೋಡಿದ್ದೇವೆ. ಆದರೆ ಗುರುನಾಥ ಪತ್ತಾರ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಬಾಟಲಿಯೊಳಗೆ ಚೌಕಟ್ಟು ಹಾಕಿದ ಭಾಚಿತ್ರಗಳು, ರಥ... ಹೀಗೆ ಅಲಂಕಾರವುಳ್ಳ ಕಲಾಕೃತಿಗಳನ್ನು ತಯಾರಿಸಿ ನೋಡಗರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಕಲಾಕೃತಿಯ ಹಿಂದೆ ಕೈಚಳಕ:ಕೈ ಕಿರು ಬೆರಳು ಹೋಗಲು ಸಾಧ್ಯವಿಲ್ಲದಂತಹ ಗಾಜಿನ ಬಾಟಲಿಯ ಬಾಯಿಯೊಳಗೆ ಗುರುನಾಥ ತಮ್ಮ ಕೈಚಳಕದ ಮೂಲಕ ದೊಡ್ಡದಾಗಿರುವ ಕಚ್ಚಾ ವಸ್ತುಗಳನ್ನು ತುಂಡಾಗಿಸಿ ಒಳಗಡೆ ತೂರಿಸಿ ತಂತಿ, ಕಡ್ಡಿಗಳ ಸಹಾಯದಿಂದ ಬಾಟಲಿಯ ಒಳಗಡೆ ಸುಂದರ ಕಲಾಕೃತಿಗಳನ್ನು ತಯಾರಿಸಿದ್ದಾರೆ.

ಈಚೆಗೆ ಇವರು ತಯಾರಿಸಿದ ಇಂತಹ ಕಲಾಕೃತಿಯಲ್ಲಿ ಚಲಿಸುವ ರಥ ಅದ್ಭುತವಾದ ಇವರ ಕಲಾಕೃತಿಯಾಗಿದೆ. ಈ ಬಾಟಲಿಯನ್ನು ಅಲುಗಾಡಿಸಿದರೆ ಅಥವಾ ಉರುಳಿಸಿದರೆ ಒಳಗಡೆ ಇರುವ ರಥ ತನ್ನ ಚಕ್ರಗಳನ್ನು ಉರುಳಿಸುತ್ತಾ ಮುಂದೆ ಚಲಿಸಿದಂತೆ ಭಾಸವಾಗುತ್ತದೆ.

ತಾಳ್ಮೆ, ಶ್ರದ್ಧೆ ಹಾಗೂ ಉತ್ಸಾಹ ಇದ್ದರೆ ಇದಕ್ಕಿಂತಲೂ ಮಿಗಿಲಾದ ಕಲಾಕೃತಿಗಳನ್ನು ತಯಾರಿಸಬಹುದು ಎಂದು ಹೇಳುವ ಗುರುನಾಥ, ಬಾಟಲಿಯ ವ್ಯಾಸದ ಅಳತೆಗೆ ತಕ್ಕಂತೆ ಕಟ್ಟಿಗೆಯ ರಥ, ಭಾವಚಿತ್ರಕ್ಕೆ ಹಾಕಿರುವ ಕಟ್ಟಗಳನ್ನು ಮೊದಲೆ ತಯಾರಿಸಿಕೊಂಡಿರುತ್ತಾರೆ. ಬಾಟಲಿ ಒಳಗಡೆ ತೂರುವ ಮುಂಚೆ ಅದನ್ನೆಲ್ಲ ಅಳತೆಗೆ ತಕ್ಕಂತೆ ತುಂಡಾಗಿ ಕತ್ತರಿಸುತ್ತಾರೆ. ಬಾಟಲಿಯೊಳಗೆ ಸೇರಿಸಿದ ನಂತರ ಕತ್ತರಿಸಿದ ಭಾಗಗಳು ಒಂದಕ್ಕೊಂದು ಜೋಡಿಸಲು ಸರಳವಾಗಲೆಂದು ಕೆಲವೆಡೆ ಸ್ಕ್ರೂ ಜೋಡಿಸಲು ಬರುವಂತೆ ಮತ್ತು ಕೆಲವೆಡೆ ತ್ರಿಕೋನಾಕಾರದಲ್ಲಿ ಮೊದಲೆ ಕಟ್ಟಿಗೆಗಳ ಮೂಲೆಗಳು ಒಂದಕ್ಕೊಂದು ಕೂಡುವಂತೆ ಕೊರೆದಿರುತ್ತಾರೆ. ಇನ್ನು ಕೆಲವೆಡೆ ಅಂಟಿನ ಮೂಲಕ ಒಂದೊಂದೆ ವಸ್ತುಗಳು ಜೋಡಿಸಲು ಅನುವಾಗುವಂತೆ ಮೊದಲೆ ಸಿದ್ಧ ಮಾಡಿಕೊಂಡಿರುತ್ತಾರೆ.

ತದನಂತರದಲ್ಲಿ ತಯಾರಾದ ಕಲಾಕೃತಿಗಳನ್ನು ಅಳತೆಗೆ ತಕ್ಕಂತೆ ತುಂಡು ಮಾಡುತ್ತಾರೆ. ಹೀಗೆ ತುಂಡಾದ ಒಂದೊಂದೆ ಭಾಗಗಳನ್ನು ಸ್ಕ್ರೂ ಡ್ರೈವರ್, ತಂತಿ, ಸೂಜಿ, ದಾರಗಳ ಸಹಾಯದಿಂದ ಬಾಟಲಿಯೊಳಗಡೆ ಸೇರಿಸುತ್ತಾರೆ. ತಮ್ಮ ವಿವಿಧ ಸೂಕ್ಷ್ಮ ಸಾಧನಗಳ ಸಹಾಯದಿಂದ ಪ್ರತಿಯೊಂದು ಬಿಡಿ ಭಾಗಗಳನ್ನು ಒಂದಕ್ಕೊಂದು ಜೋಡಿಸುತ್ತಾರೆ. ನಂತರ ಬ್ರಶ್ ಸಹಾಯದಿಂದ ಕಲಾಕೃತಿಗಳಿಗೆ ವಿವಿಧ ಬಣ್ಣ ಲೇಪಿಸುತ್ತಾರೆ. ಹೀಗೆ ಬಣ್ಣ ಲೇಪಿಸಿದ ನಂತರ ಕಲಾಕೃತಿಗಳನ್ನು ಯಾವ ಭಾಗದಲ್ಲಿ ಕತ್ತರಿಸಲಾಗಿದೆ ಎಂಬುದು ನೋಡುಗರಿಗೆ ತಿಳಿಯಲು ಸಾಧ್ಯವೇ ಇಲ್ಲ.

ಈ ಕೌಶಲವೆ ಅವರು ತಯಾರಿಸುವ ಪ್ರತಿಯೊಂದು ವಸ್ತುಗಳ ಹಿಂದೆ ಅಡಗಿರುವ ಚಾಣಾಕ್ಷತನ. ಆದರೆ ಒಂದು ಕಲಾಕೃತಿ ತಯಾರಾಗಲು ಸುಮಾರು ಹದಿನೈದು ದಿನಗಳಾದರೂ ಬೇಕಾಗುತ್ತವೆ ಎನ್ನುವ ಅವರು ‘ಬಾಟಲಿಯಲ್ಲಿ ರಥ ಕಲಾಕೃತಿ ತಯಾರಿಸಲು ಬರೋಬ್ಬರಿ ಒಂದು ತಿಂಗಳು ಕಾಲ ಹಿಡಿಯಿತು. ಕೇವಲ ನಾಲ್ಕು ಚಕ್ರಗಳನ್ನು ತಿರುಗುವ ಹಾಗೆ ಜೋಡಿಸಲು ನಾಲ್ಕು ದಿನಗಳೇ ಬೇಕಾ ದವು' ಎಂದು ಗುರುನಾಥ ಹೇಳುತ್ತಾರೆ.

ಕಲಾಕೃತಿಗಳು ವ್ಯವಹಾರಕ್ಕಲ್ಲ:ಹೀಗೆ ತಯಾರಿಸಿದ ಕಲಾಕೃತಿಗಳನ್ನು ಮಾರಾಟ ಮಾಡಬೇಕು, ಕಾಸು ಸಂಪಾದನೆ ಮಾಡಬೇಕು ಎಂಬ ಉದ್ದೇಶ ಅವರದಾಗಿಲ್ಲ. ಕೇವಲ ತಮ್ಮ ಹವ್ಯಾಸಕ್ಕಾಗಿ ಅದು ಬಿಡುವಿನ ಸಮಯದಲ್ಲಿ ಕಲಾಕೃತಿಗಳನ್ನು ತಯಾರಿಸುತ್ತಾರೆ.

ಅಲ್ಲದೆ ಪ್ರಸಿದ್ಧ ಸಿತಾರ್‌ ವಾದಕರಾಗಿರುವ ಗುರುನಾಥ ಗುರುಗಂಗಾಧರೇಶ್ವರ ಸಂಗೀತ ಶಾಲೆಯನ್ನು ತೆರೆದು ಸುಮಾರು ಹತ್ತು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸಂಗೀತ ಸೇವೆ ನೀಡುತ್ತಿದ್ದಾರೆ.

ಪುಂಗಿಕಾಯಿಗಳಲ್ಲಿ ಅಲಂಕಾರಿಕ ವಸ್ತು

ಜನರು ನಿರುಪಯುಕ್ತವೆಂದು ತಿಳಿದ ಸಣ್ಣ ಸಣ್ಣ ಪುಂಗಿಕಾಯಿಗಳಲ್ಲಿ ಹಲವಾರು ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಪುಂಗಿಕಾಯಿಗಳಲ್ಲಿ ಹೀಗೂ ಬಳಸಿಕೊಳ್ಳಬಹುದೇ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇವರು ತಯಾರಿಸಿದ ಕಲಾಕೃತಿಗಳಲ್ಲಿನ ಶಹನಾಯಿ ಅದ್ಭುತವಾದ ಕಲಾಕೃತಿಯಾಗಿದೆ. ಪುಂಗಿಕಾಯಿಗಳ ಎರಡು ಬದಿಗಳ ತುದಿಗಳನ್ನು ಕತ್ತರಿಸಿ ಒಂದಕ್ಕೊಂದು ಜೋಡಿಸಿದ್ದಾರೆ ಅಷ್ಟೆ ಅಲ್ಲ ಅದು ವಿಶಿಷ್ಠವಾದ ನಾದವನ್ನು ಹೊಮ್ಮಿಸುತ್ತದೆ. ಅದೇ ರೀತಿ ಹೂದಾನಿ, ತಂಬೂರಿ, ಬುಟ್ಟಿಗಳು, ಪೂಜಾಪಾತ್ರೆ, ದೀಪಸ್ಥಂಭದಂತಹ ಅನೇಕ ಕಲಾಕೃತಿಗಳನ್ನು ತಯಾರಿಸಿದ್ದಾರೆ.

* * 

ಗುರುನಾಥ ಪತ್ತಾರ ನೂರಾರು ಮಕ್ಕಳಿಗೆ ಉಚಿತ ಸಂಗೀತ ಶಿಕ್ಷಣ ನೀಡುವುದರ ಜತೆಗೆ ನಮ್ಮೂರ ಹೆಮ್ಮೆ ಹೆಚ್ಚಿಸುವುದಕ್ಕಾಗಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ.

ಕೆ.ಆರ್‌.ಕುಲಕರ್ಣಿ, ನಿವೃತ್ತ ಶಿಕ್ಷಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry