ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 18–12–1967

Last Updated 17 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಗೃಹ ಸಚಿವ ಎಂ.ವಿ. ರಾಮರಾವ್ ರಾಜೀನಾಮೆ: ಮುಖ್ಯಮಂತ್ರಿಯಿಂದ ಅಂಗೀಕಾರ ಸಂಭವ
ಬೆಂಗಳೂರು, ಡಿ. 17–
ರಾಜ್ಯದ ಗೃಹ ಸಚಿವ ಶ್ರೀ ಎಂ.ವಿ. ರಾಮರಾವ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಇತ್ತಿದ್ದಾರೆ.

‘ಈಗ ಉಂಟಾಗಿರುವ ವಾತಾವರಣ ಹಾಗೂ ವ್ಯಕ್ತವಾಗಿರುವ ಅಭಿಪ್ರಾಯದ ಕಾರಣ’ ತಾವು ರಾಜೀನಾಮೆ ಕೊಡುವುದು ಒಳ್ಳೆಯದೆಂದು ಸಚಿವ ಶ್ರೀ ರಾಮರಾವ್ ಹೇಳಿದ್ದಾರೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ವರದಿಗಾರರಿಗೆ ತಿಳಿಸಿದರು.

ತಾವು ಸೋಮವಾರ ದೆಹಲಿಗೆ ತೆರಳುವ ಮುನ್ನ ರಾಜೀನಾಮೆ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿಯೂ ತಿಳಿಸಿದರು. ಶ್ರೀ ರಾಮರಾವ್ ಅವರು ಒತ್ತಾಯ ಮಾಡುತ್ತಿರುವ ಕಾರಣ ಮುಖ್ಯಮಂತ್ರಿಗಳು ರಾಜೀನಾಮೆಯನ್ನು ಒಪ್ಪಿಕೊಳ್ಳುವ ಸಂಭವವಿದೆ.

ಮಧುಗಿರಿ ತಾಲ್ಲೂಕಿನಲ್ಲಿ ನಡೆಯಿತೆನ್ನಲಾದ ಪೊಲೀಸ್ ಆತ್ಯಾಚಾರದ ಬಗ್ಗೆ ನ್ಯಾಯಾಧಿಕಾರಿಯಿಂದ ವಿಚಾರಣೆ ಏರ್ಪಡಿಸಬೇಕೆಂಬುದು ಸಚಿವ ಶ್ರೀ ರಾಮರಾವ್ ಅವರ ಅಭಿಪ್ರಾಯವೆಂದು ಮುಖ್ಯಮಂತ್ರಿಗಳು ಇಂದು ಹೊರಗೆಡಹಿದರು.

ನೇತಾಜಿ ಖಡ್ಗಕ್ಕೆ ದೆಹಲಿ ಸ್ವಾಗತ
ನವದೆಹಲಿ, ಡಿ. 17–
ಕಲ್ಕತ್ತೆಯಿಂದ ಇಂದು ಇಲ್ಲಿಗೆ ತರಲಾದ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಐತಿಹಾಸಿಕ ಖಡ್ಗಕ್ಕೆ ಇಂದು ಸಂಜೆ ಕೆಂಪುಕೋಟೆಯಲ್ಲಿ ವೈಭವ ಪೂರ್ಣ ಸ್ವಾಗತ ದೊರೆಯಿತು. ‘ನೇತಾಜಿ ಜಿಂದಾಬಾದ್’ ಎಂದು ಜನರು ಖಡ್ಗದ ಆಗಮನವಾಗುತ್ತಿದ್ದಂತೇ ಹರ್ಷಧ್ವನಿಗೈದರು.

ರಾಷ್ಟ್ರಪತಿ ಡಾ. ಜಾಕಿರ್ ಹುಸೇನ್ ಅವರು ರಾಷ್ಟ್ರದ ಪರವಾಗಿ ಖಡ್ಗಕ್ಕೆ ಸ್ವಾಗತವಿತ್ತರು. ನೇತಾಜಿಯವರ ಬೂಟುಗಳು ಮತ್ತು ಟೋಪಿಯನ್ನೂ ಖಡ್ಗದ ಜೊತೆ ತರಲಾಯಿತು. ಮುಂದಿನ ಬುಧವಾರದವರೆಗೆ ಖಡ್ಗವನ್ನು ಸಾರ್ವಜನಿಕರ ವೀಕ್ಷಣೆಗಾಗಿ ದಿವಾನ್–ಎ–ಆಮ್‌ನಲ್ಲಿ ಇರಿಸಲಾಗುವುದು.

ಉಪರಾಷ್ಟ್ರಪತಿ ಶ್ರೀ ವಿ.ವಿ. ಗಿರಿ, ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತ್ತು ಸಂಸತ್ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

‘ಭಾಷಾ ನೀತಿ ದುರಂತಕಾರಿ’: ಕೆ.ಪಿ.ಕೆ. ಮೆನನ್
ತಿರುವನಂತರಪುರ, ಡಿ. 17–
‘ಲೋಕಭೆಯು ನಿನ್ನೆ ಅಂಗೀಕರಿಸಿದ ಅಧಿಕೃತ ಭಾಷಾ ಮಸೂದೆಯು ಭಾರತವನ್ನು ಇಬ್ಭಾಗವಾಗಿ ಒಡೆಯುವದು– ಹಿಂದೀ ಭಾರತ, ಹಿಂದೀತರ ಭಾರತ.

ಕೇಂದ್ರ ಸರ್ಕಾರದ ಭಾಷಾನೀತಿ ದುರಂತಕಾರಿ ಎಂದು ಕೇರಳದ ಪ್ರಮುಖ ದಿನಪತ್ರಿಕೆ ‘ಮಾತೃ ಭೂಮಿ’ಯ ಸಂಪಾದಕ ಶ್ರೀ ಕೆ.ಪಿ. ಕೇಶವಮೆನನ್ನರು ಇಂದು ಇಲ್ಲಿ ಹೇಳಿದರು.

ತಿರುವನಂತಪುರ ವಕೀಲರ ಸಂಘದ ಆಶ್ರಯದಲ್ಲಿ ನಡೆದ ‘ಭಾಷೆಯ ಬಗ್ಗೆ ವಿಚಾರ ಗೋಷ್ಠಿ’ಯ ಅಧ್ಯಕ್ಷತೆ ವಹಿಸಿದ್ದ ಅವರು, ‘ಭಾರತಕ್ಕೆ ಏಕೈಕ ಅಧಿಕೃತ ಭಾಷೆಯಿರಬೇಕು.  ಆ ಅಧಿಕೃತ ಭಾಷೆ ಇಂಗ್ಲಿಷ್ ಆಗಿರಬೇಕು’ ಎಂದರು.

ಸುಗಮವಾಗಿ ಐಕ್ಯದಿಂದ ಹೊಸ ನಾಯಕರ ಆಯ್ಕೆ: ನಿಜಲಿಂಗಪ್ಪ ನಿರೀಕ್ಷೆ
ಬೆಂಗಳೂರು, ಡಿ. 17–
ರಾಜ್ಯದ ಕಾಂಗ್ರೆಸ್ ಶಾಸಕರು ತಮ್ಮ ನೂತನ ನಾಯಕನನ್ನು ಸುಗಮವಾಗಿ ಆರಿಸಿ, ಐಕ್ಯ ಉಳಿಸಿಕೊಂಡು ಬಂದಿರುವ ಕೀರ್ತಿಯನ್ನು ಕಾಪಾಡಿಕೊಂಡು ಬರುವ ತಮ್ಮ ಖಚಿತ ವಿಶ್ವಾಸವನ್ನು ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾಗಿರುವ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ತಿಳಿಸಿದರು.

ತಮಗಿಷ್ಟ ಬಂದಂತೆ ಕೆಲಸ ನಡೆಯುವಂತೆ ಮಾಡಲು ತಾವು ಸರ್ವಾಧಿಕಾರಿಯಲ್ಲವೆಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT