7

ರನ್‌ ‘ದಾಹ’...

Published:
Updated:
ರನ್‌ ‘ದಾಹ’...

ಕ್ರಿಕೆಟ್‌ನಲ್ಲಿ ದಾಖಲೆಗಳ ಪರ್ವ ಶುರುವಾಗಿದೆ. ದಶಕಗಳ ಹಿಂದೆ 200ರಿಂದ 250ರನ್‌ ಗಳಿಸಿದರೆ ಸುಲಭವಾಗಿ ಏಕದಿನ ಪಂದ್ಯ ಗೆದ್ದುಬಿಡಬಹುದೆಂಬ ಪರಿಸ್ಥಿತಿ ಇತ್ತು. ಆದರೆ ಈಗ ಇದು ಬದಲಾಗಿದೆ. ಪಂದ್ಯವೊಂದರಲ್ಲಿ ಆಟಗಾರನೊಬ್ಬನೇ ಇಷ್ಟು ಮೊತ್ತ ಪೇರಿಸುತ್ತಿದ್ದಾನೆ.

ಏಕದಿನ ಮಾದರಿಯಲ್ಲಿ 200 ರನ್‌ ಗಳಿಸುವುದು, ಟೆಸ್ಟ್‌ನಲ್ಲಿ ತ್ರಿಶಕ ಬಾರಿಸುವುದು, ಟಿ–20ಯಲ್ಲಿ ಶತಕ ಸಿಡಿಸುವುದು ಈಗ ಆಟಗಾರರಿಗೆ ನೀರು ಕುಡಿದಷ್ಟೇ ಸುಲಭ. ಈಚೆಗೆ ಭಾರತದ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಮತ್ತು  ಟಿ–20 ಪಂದ್ಯದಲ್ಲಿ ಕ್ರಿಸ್ ಗೇಲ್ ಹೊಡೆದ ಶತಕಗಳು ಇದಕ್ಕೆ ತಾಜಾ ಉದಾಹರಣೆ.

ಟೆಸ್ಟ್‌ನಲ್ಲಿ ತಂಡವೊಂದು ಮೊದಲ ದಿನವೇ 300 ರಿಂದ 350 ರನ್‌ ಗಳಿಸುವುದೂ ಸಾಮಾನ್ಯವಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ತಂಡವೊಂದು 350ರಿಂದ 400 ರನ್‌ ಗಳಿಸಿದರೂ ಗೆಲುವಿನ ಕನಸು ಕಾಣುವಂತಿಲ್ಲ. ಏಕೆಂದರೆ ಈ ಮೊತ್ತವನ್ನು ಎದುರಾಳಿ ತಂಡ ಮುಟ್ಟಿಬಿಡಬಲ್ಲದು. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಣ ಹಣಾಹಣಿ ಇದಕ್ಕೊಂದು ಉತ್ತಮ ಉದಾಹರಣೆ.

2006ರಲ್ಲಿ ಜೊಹಾನ್ಸ್‌ಬರ್ಗ್‌ನ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಕಾಂಗರೂಗಳ ನಾಡಿನ ತಂಡ 50 ಓವರ್‌ಗಳಲ್ಲಿ 4 ವಿಕೆಟ್‌ಗೆ 434ರನ್‌ ಗಳಿಸಿದಾಗ ಕ್ರಿಕೆಟ್‌ ಲೋಕವೇ ನಿಬ್ಬೆರಗಾಗಿತ್ತು. ದಕ್ಷಿಣ ಆಫ್ರಿಕಾ ಈ ಮೊತ್ತದ ಸನಿಹಕ್ಕೂ ಸುಳಿಯುವುದಿಲ್ಲ. ಈ ತಂಡಕ್ಕೆ ಸೋಲು ಖಚಿತ ಎಂದು ಕ್ರಿಕೆಟ್‌ ಪಂಡಿತರು ಪಂದ್ಯ ಮುಗಿಯುವ ಮುನ್ನವೇ ಷರಾ ಬರೆದುಬಿಟ್ಟಿದ್ದರು. ಆದರೆ ಅಂದು ನಡೆದಿದ್ದೇ ಬೇರೆ. ಕೆಚ್ಚೆದೆಯಿಂದ ಹೋರಾಡಿದ ಹರಿಣಗಳ ನಾಡಿನ ತಂಡ 49.5 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಜಯದ ಸಿಹಿ ಸವಿದಿತ್ತು. ಈ ಮೂಲಕ ಕ್ರಿಕೆಟ್‌ ಲೋಕದಲ್ಲಿ ಹೊಸ ಭಾಷ್ಯ ಬರೆದಿತ್ತು. ಹರ್ಷಲ್‌ ಗಿಬ್ಸ್‌ 111 ಎಸೆತಗಳಲ್ಲಿ 175 ರನ್‌ ಸಿಡಿಸಿದ್ದರು. ಪಂದ್ಯದಲ್ಲಿ ಒಟ್ಟಾರೆ 872 ರನ್‌ಗಳು ದಾಖಲಾಗಿದ್ದು ಇತಿಹಾಸ.

ಇದಾಗಿ ನಾಲ್ಕು ತಿಂಗಳಲ್ಲಿ (2006 ಜುಲೈ) ಶ್ರೀಲಂಕಾ ತಂಡ ಗರಿಷ್ಠ ಮೊತ್ತದ ಸಾಧನೆ ತನ್ನ ಹೆಸರಿಗೆ ಬರೆದುಕೊಂಡಿತ್ತು. ಆ್ಯಮ್‌ಸ್ಟೆಲ್‌ವೀನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ‘ಕ್ರಿಕೆಟ್‌ ಕೂಸು‘ ನೆದರ್ಲೆಂಡ್ಸ್‌ ವಿರುದ್ಧ ಸಿಂಹಳೀಯ ನಾಡಿನವರು 443ರನ್‌ ಸೇರಿಸಿದ್ದರು.

ದಶಕಗಳ ನಂತರ ಇಂಗ್ಲೆಂಡ್‌ ಈ ದಾಖಲೆ ಮೀರಿ ನಿಂತಿತು. 2016ರಲ್ಲಿ ಜರುಗಿದ್ದ ಪಾಕಿಸ್ತಾನ ಎದುರಿನ ಹೋರಾಟದಲ್ಲಿ ಆಂಗ್ಲರ ನಾಡಿನ ತಂಡ 444ರನ್‌ ಸೇರಿಸಿ ಹೊಸ ಮೈಲುಗಲ್ಲು ಸ್ಥಾಪಿಸಿತ್ತು.

2005ರಲ್ಲಿ ಐಸಿಸಿ ‘ಪವರ್‌ ಪ್ಲೇ’ ನಿಯಮ ಜಾರಿಗೆ ತಂದ ನಂತರ ಈ ದಾಖಲೆಗಳು ನಿರ್ಮಾಣವಾಗಿವೆ ಎಂಬುದು ಗಮನಾರ್ಹ.

ಸಚಿನ್‌ ಹಾಕಿಕೊಟ್ಟ ಬುನಾದಿ

1997ರ ಮೇ 21, ಪಾಕಿಸ್ತಾನದ ಸಯೀದ್‌ ಅನ್ವರ್‌ ಪಾಲಿಗೆ ಅವಿಸ್ಮರಣೀಯ ದಿನ. ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ಎದುರಿನ ಪಂದ್ಯದಲ್ಲಿ ಅನ್ವರ್‌ 194ರನ್‌ ದಾಖಲಿಸಿ ಕ್ರಿಕೆಟ್‌ ಪಂಡಿತರ ಹುಬ್ಬೇರುವಂತೆ ಮಾಡಿದ್ದರು. ಏಕದಿನ ಪಂದ್ಯವೊಂದರಲ್ಲಿ ಆಟಗಾರನೊಬ್ಬ ದಾಖಲಿಸಿದ ವೈಯಕ್ತಿಕ ಗರಿಷ್ಠ ರನ್‌ ಅದಾಗಿತ್ತು. ಬರೋಬ್ಬರಿ 12 ವರ್ಷಗಳ ಕಾಲ ಆ ದಾಖಲೆ ಮೀರಿ ನಿಲ್ಲಲು ಯಾರಿಗೂ ಸಾಧ್ಯವಾಗಿರಲಿಲ್ಲ. 2009ರಲ್ಲಿ ಜಿಂಬಾಬ್ವೆಯ ಚಾರ್ಲ್ಸ್‌ ಕೊವೆಂಟ್ರಿ (ಅಜೇಯ 194) ಇದನ್ನು ಸರಿಗಟ್ಟಿದ್ದರು.

2010ರಲ್ಲಿ ಸಚಿನ್‌ ತೆಂಡೂಲ್ಕರ್‌ ತಮ್ಮ ಸಾಧನೆಯ ಹಾದಿಯಲ್ಲಿ ಮತ್ತೊಂದು ಮೈಲುಗಲ್ಲು ನೆಟ್ಟರು. ಏಕದಿನ ಮಾದರಿಯಲ್ಲೂ ದ್ವಿಶತಕ ಗಳಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟರು. ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ‘ಮುಂಬೈಕರ್’ ಈ ಸಾಧನೆ  ಮಾಡಿದ್ದರು.

ಆ ನಂತರ ವೀರೇಂದ್ರ ಸೆಹ್ವಾಗ್‌, ರೋಹಿತ್‌ ಶರ್ಮಾ, ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌ ಮತ್ತು ನ್ಯೂಜಿಲೆಂಡ್‌ನ ಮಾರ್ಟಿನ್‌ ಗಪ್ಟಿಲ್‌ ಅವರೂ ಈ ಹಾದಿಯಲ್ಲಿ ಸಾಗಿದ್ದರು. ಹೋದ ವಾರ ಮೊಹಾಲಿಯಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್‌, ದ್ವಿಶತಕದ ಸಂಭ್ರಮ ಆಚರಿಸಿದ್ದರು. ಈ ಮೂಲಕ ‘ತ್ರಿವಳಿ’ ದ್ವಿಶತಕ ಗಳಿಸಿದ ವಿಶ್ವದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದರು. ಶ್ರೀಲಂಕಾ ಎದುರು 264ರನ್‌ ಗಳಿಸಿರುವುದು ರೋಹಿತ್‌, ವೈಯಕ್ತಿಕ ಗರಿಷ್ಠ ರನ್‌. 2014ರಲ್ಲಿ ಈಡನ್ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಜರುಗಿದ್ದ ಪಂದ್ಯದಲ್ಲಿ ಅವರು 50ನೇ ಓವರ್‌ನ ಕೊನೆಯ ಎಸೆತದಲ್ಲಿ ಔಟಾಗಿದ್ದರು. ಇನ್ನು ಎರಡು ಓವರ್‌ಗಳು ಸಿಕ್ಕಿದ್ದಿದ್ದರೂ ರೋಹಿತ್‌, ತ್ರಿಶತಕ ಬಾರಿಸಿಬಿಡುತ್ತಿದ್ದರು ಎಂದು ಪಂದ್ಯದ ಬಳಿಕ ಕೆಲ ಹಿರಿಯ ಕ್ರಿಕೆಟಿಗರು ಹೇಳಿದ್ದರು.

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಟೆಸ್ಟ್‌ ಮಾದರಿಯಲ್ಲಿ ಸತತವಾಗಿ ದ್ವಿಶತಕ ಸಿಡಿಸಿ ಹೊಸ ಅಧ್ಯಾಯ ತೆರೆದಿದ್ದನ್ನೂ ಮರೆಯುವಂತಿಲ್ಲ. ದಕ್ಷಿಣ ಆಫ್ರಿಕಾದ ಎ.ಬಿ.ಡಿವಿಲಿಯರ್ಸ್‌ ಏಕದಿನದಲ್ಲಿ ಅತಿವೇಗದ ಅರ್ಧಶತಕ ಮತ್ತು ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ.

ಟಿ–20ಯಲ್ಲಿ ಗೇಲ್‌ ದರ್ಬಾರ್‌

ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಸೆಳೆಯುವ ಉದ್ದೇಶದಿಂದ 2003ರಲ್ಲಿ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಟ್ವೆಂಟಿ –20 ಕ್ರಿಕೆಟ್‌ ಆರಂಭಿಸಲು ನಿರ್ಧರಿಸಿತು‌. 2003ರಲ್ಲಿ ಜರುಗಿದ ಮೊಟ್ಟ ಮೊದಲ ಕೌಂಟಿ ಟ್ವೆಂಟಿ–20 ಚಾಂಪಿಯನ್‌ಷಿಪ್‌ಗೆ ಅಪಾರ ಜನಮನ್ನಣೆ ಸಿಕ್ಕಿತು. ಇದರಿಂದ ಪ್ರೇರಿತವಾದ ಐಸಿಸಿ 2005ರಲ್ಲಿ ಈ ಮಾದರಿಗೆ ಅಧಿಕೃತ ಮುದ್ರೆ ಒತ್ತಿತ್ತು. ಫೆಬ್ರುವರಿ 17 ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ನಡುವೆ ಮೊದಲ ಚುಟುಕು ಪಂದ್ಯ ನಡೆದಿತ್ತು.

ವಿಶ್ವದ ಎಲ್ಲಾ ಭಾಗಗಳಿಗೂ ಕ್ರಿಕೆಟ್‌ ಕಂಪು ಪಸರಿಸುವ ಉದ್ದೇಶದಿಂದ ಐಸಿಸಿ 2007ರಲ್ಲಿ ವಿಶ್ವ ಟ್ವೆಂಟಿ–20 ಟೂರ್ನಿಗೆ ಚಾಲನೆ ನೀಡಿತು. ಚೊಚ್ಚಲ ಟೂರ್ನಿ ಸಾಕಷ್ಟು ಪ್ರಸಿದ್ಧಿ ಪಡೆಯಿತು. ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತದ ಯುವರಾಜ್‌ ಸಿಂಗ್ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ ಸಿಡಿಸಿದ್ದು, ಅತಿ ವೇಗವಾಗಿ ಅರ್ಧಶತಕ (12 ಎಸೆತ) ಗಳಿಸಿದ್ದು ದಾಖಲೆಯ ಪುಟ ಸೇರಿದವು.

ಕ್ರಮೇಣ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಎಂಬ ‘ಮಿಲಿಯನ್‌ ಡಾಲರ್ ಬೇಬಿ’ಗೆ ಜನ್ಮ ನೀಡಿತು. ಐಪಿಎಲ್‌ ಶುರುವಾದ ನಂತರ ಆಟಗಾರರ ಮನಸ್ಥಿತಿ ಬದಲಾಯಿತು.  ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಆಡುವ ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌, ಪುಣೆ ವಾರಿಯರ್ಸ್‌ ಎದುರಿನ ಪಂದ್ಯದಲ್ಲಿ ಅಜೇಯ 175ರನ್‌ ಗಳಿಸಿದ್ದು ಅಭಿಮಾನಿಗಳನ್ನು ಆಕರ್ಷಿಸಿತು. ಕರ್ನಾಟಕದ ಮನೀಷ್‌ ಪಾಂಡೆ ಲೀಗ್‌ನಲ್ಲಿ ಶತಕ ಗಳಿಸಿದ ಭಾರತದ ಮೊದಲ ಆಟಗಾರ. ಗೇಲ್‌, ಚುಟುಕು ಕ್ರಿಕೆಟ್‌ನಲ್ಲಿ 11,000ಕ್ಕೂ ಅಧಿಕ ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಪಂದ್ಯವೊಂದರಲ್ಲಿ ಹೆಚ್ಚು ಸಿಕ್ಸರ್ (18), ಹೆಚ್ಚು ಶತಕ (20) ಸಿಡಿಸಿದ ದಾಖಲೆಗೂ ಅವರು ಪಾತ್ರರಾದರು. ಹೋದ ವಾರ ನಡೆದಿದ್ದ ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌ನಲ್ಲಿ ಅವರಿಂದ ಈ ಸಾಧನೆಗಳು ಅರಳಿದ್ದವು.

ಬ್ಯಾಟ್ಸ್‌ಮನ್‌ಗಳ ಪರಾಕ್ರಮದ ಹಿಂದಿನ ಗುಟ್ಟು

 

ಕ್ರಿಕೆಟ್‌ನ ಜನಪ್ರಿಯತೆ ಹೆಚ್ಚಿಸುವ ಆಶಯದಿಂದ ಐಸಿಸಿ, ಕಾಲಕಾಲಕ್ಕೆ ಹೊಸ ನಿಯಮಗಳನ್ನು ಪರಿಚಯಿಸುತ್ತಾ ಸಾಗುತ್ತಿದೆ. ಇವು ಬೌಲರ್‌ಗಳಿಗಿಂತಲೂ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಅನುಕೂಲಕರವಾಗಿವೆ. ಕ್ರಿಕೆಟ್‌ನಲ್ಲಿ ಅಳವಡಿಸಿರುವ ಕೆಲ ತಂತ್ರಜ್ಞಾನಗಳೂ ಬ್ಯಾಟ್ಸ್‌ಮನ್‌ ಸ್ನೇಹಿಯಾಗಿವೆ.

 

2011ರಲ್ಲಿ ಪಂದ್ಯವೊಂದರ ವೇಳೆ ಎರಡು ಹೊಸ ಚೆಂಡಿನ ಬಳಕೆಗೆ ಹಸಿರು ನಿಶಾನೆ ತೋರಲಾಯಿತು.ಇದರಿಂದ ಬೌಲರ್‌ಗಳ ಬದಲು ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಲಾಭವಾಯಿತು. 2015ರಲ್ಲಿ ಅಳವಡಿಸಲಾದ ಫೀಲ್ಡಿಂಗ್‌ ನಿಯಮಾವಳಿ ಕೂಡ ಬ್ಯಾಟ್ಸ್‌ಮನ್‌ಗಳು ಅಂಗಳದಲ್ಲಿ ರನ್‌ ಮಳೆ ಸುರಿಸಲು ಸಹಕಾರಿಯಾಗುವಂತಿದೆ.

1960ರಲ್ಲಿ ಐಸಿಸಿ, ಪಿಚ್‌ ಮೇಲೆ ಹೊದಿಕೆ ಹಾಕುವ ನಿಯಮ ಜಾರಿಗೆ ತಂದಿತು. ಇದು ಕೂಡ ಬ್ಯಾಟ್ಸ್‌ಮನ್‌ಗಳಿಗೆ ಪ್ರಯೋಜನಕಾರಿಯಾಗಿದೆ. ಇದಕ್ಕೂ ಮುನ್ನ  ಹೊದಿಕೆ ಹಾಕುವ ಪದ್ದತಿ ಇರಲಿಲ್ಲ. ಹೀಗಾಗಿ ಪಿಚ್ ಮೇಲೆ ಇಬ್ಬನಿ ಬೀಳುವುದು, ಮಳೆ ನೀರು ನಿಲ್ಲುವುದು ಸಾಮಾನ್ಯವಾಗಿತ್ತು. ಪಿಚ್‌ನಲ್ಲಿ ಹೆಚ್ಚು ತೇವಾಂಶ ಇರುತ್ತಿದ್ದುದರಿಂದ ಅವು ಬೌಲರ್‌ಗಳಿಗೆ ಹೆಚ್ಚು ನೆರವು ನೀಡುತ್ತಿದ್ದವು.

1937ರಲ್ಲಿ ಮೆಲ್ಬರ್ನ್‌ನಲ್ಲಿ ನಡೆದಿದ್ದ ಆ್ಯಷಸ್‌ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ 76ರನ್‌ಗಳಿಗೆ ಆಲೌಟ್‌ ಆಗಿದ್ದು ಇದಕ್ಕೊಂದು ನಿದರ್ಶನ.

ಬ್ಯಾಟ್‌ಗಳ ಕ್ರಾಂತಿ: ಐಸಿಸಿ ನಿಯಮದ ಅನುಸಾರ ಆಟಗಾರರು ಬಳಸುವ ಬ್ಯಾಟ್‌ 10.8 ಸೆಂಟಿ ಮೀಟರ್‌ ಅಗಲ ಮತ್ತು 96.5 ಸೆಂಟಿ ಮೀಟರ್‌ ಉದ್ದ ಇರಬೇಕು.

ಆದರೆ ಈಗ ಬಳಸಲಾಗುತ್ತಿರುವ ಬ್ಯಾಟ್‌ಗಳು ಸಾಕಷ್ಟು ಉದ್ದವಾಗಿದ್ದು, ತುಂಬಾ ಹಗುರವಾಗಿವೆ. ಆಟಗಾರರು ಚೆಂಡನ್ನು ಸರಾಗವಾಗಿ ಬೌಂಡರಿ ಗೆರೆ ದಾಟಿಸಲು ಇವು ನೆರವಾಗುತ್ತಿವೆ ಎಂದು ಇಂಪೀರಿಯಲ್‌ ಕಾಲೇಜ್‌ ಲಂಡನ್‌ ತಂಡ ಕೆಲ ವರ್ಷಗಳ ಹಿಂದೆ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು.

ಫಿಟ್‌ನೆಸ್‌: ಆರಂಭದ ದಿನಗಳಿಗೆ ಹೋಲಿಸಿದರೆ ಈಗ ಒಂದಾದ ನಂತರ ಮತ್ತೊಂದು ಸರಣಿ ಆಯೋಜಿಸಲಾಗುತ್ತಿದೆ.ಹೀಗಾಗಿ ಆಟಗಾರರು ಫಿಟ್‌ನೆಸ್‌ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಆಟಗಾರರ ಫಿಟ್‌ನೆಸ್‌ ಪರೀಕ್ಷೆಗಾಗಿ ಯೊ ಯೊ ಪದ್ದತಿಯನ್ನೂ ಜಾರಿಗೆ ತರಲಾಗಿದೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರಿಂದ ಯುವರಾಜ್‌ ಸಿಂಗ್‌ ಮತ್ತು ಸುರೇಶ್‌ ರೈನಾ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ತಂಡದಿಂದ ಹೊರಗಿಟ್ಟಿರುವುದನ್ನು ಗಮನಿಸಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry