5

ಅಫ್ಗಾನಿಸ್ತಾನಕ್ಕೆ ಮತ್ತೊಂದು ‘ಟೆಸ್ಟ್‌’...

Published:
Updated:
ಅಫ್ಗಾನಿಸ್ತಾನಕ್ಕೆ ಮತ್ತೊಂದು ‘ಟೆಸ್ಟ್‌’...

ಉಗ್ರರ ಅಟ್ಟಹಾಸಕ್ಕೆ ನಲುಗಿದ ಪ್ರದೇಶಗಳ ಸುತ್ತ ಒಂದಷ್ಟು ಜಾಗ ಹುಡುಕಿಕೊಂಡು ಯುವಕರು ಕ್ರಿಕೆಟ್‌ ಆಡುತ್ತಿದ್ದರು. ಕಾಲುಗಳಲ್ಲಿ ಚಪ್ಪಲಿಗಳಿದ್ದವು. ಎಲ್ಲಿಯೋ ಬಿದ್ದಿದ್ದ ಮೂರು ಕಟ್ಟಿಗೆಗಳೇ ಸ್ಟಂಪ್‌ಗಳಾಗಿದ್ದವು.

ಇನ್ನೂ ಕೆಲವರು ಕ್ರಿಕೆಟ್ ಆಡುತ್ತಿದ್ದ ಸುತ್ತಲಿನ ಜಾಗದ ಕಟ್ಟಡಗಳೆಲ್ಲವೂ ಉಗ್ರರ ದಾಳಿಗೆ ಛಿದ್ರಛಿದ್ರವಾಗಿದ್ದವು. ಇನ್ನೊಂದಿಷ್ಟು ಯುವಕರು ಕೆಟ್ಟು ನಿಂತ ಯುದ್ಧ ವಿಮಾನದ ಪಕ್ಕದ ಜಾಗವನ್ನು ಮೈದಾನ ಮಾಡಿಕೊಂಡಿದ್ದರು. ಯಾವಾಗ, ಯಾವ ದಿಕ್ಕಿನಿಂದ ಬಾಂಬ್‌ ಸಿಡಿಯುತ್ತದೆಯೋ ಎನ್ನುವ ಆತಂಕ ಅವರಲ್ಲಿ. ಆದರೂ ಆಟದ ಮೇಲಿನ ಪ್ರೀತಿ ಅವರನ್ನು ಮತ್ತೆ ಮತ್ತೆ ಕ್ರಿಕೆಟ್‌ ಆಡುವಂತೆ ಪ್ರೇರೇಪಿಸುತ್ತಿತ್ತು.

2010ರಲ್ಲಿ ಅಫ್ಗಾನಿಸ್ತಾನ ತಂಡ ಮೊದಲ ಬಾರಿಗೆ ಐಸಿಸಿ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಆಡಲು ಅರ್ಹತೆ ಪಡೆದಾಗ ಮಾಧ್ಯಮಗಳಲ್ಲಿ ಪ್ರಕಟವಾದ ಅಲ್ಲಿನ ಪರಿಸ್ಥಿತಿ ಕುರಿತ ಚಿತ್ರಗಳು ಎಂಥವರಲ್ಲಿಯೂ ಜೀವನ ಪ್ರೀತಿ ಹೆಚ್ಚಿಸುವಂತಿದ್ದವು. ಅಫ್ಗಾನಿಸ್ತಾನ ಈ ಸಾಧನೆ ಮಾಡಿದ ಬಳಿಕ ಇಂಗ್ಲಿಷ್‌ನಲ್ಲಿ ‘ಔಟ್‌ ಆಫ್‌ ದಿ ಆ್ಯಷಸ್‌’ ಎನ್ನುವ ಸಾಕ್ಷ್ಯಚಿತ್ರ ಕೂಡ ಬಂತು.

ಉಗ್ರರ ದಾಳಿಯ ಭೀತಿಯ ನಡುವೆ ಬದುಕಬೇಕಾದ ಅನಿವಾರ್ಯತೆ ಅಫ್ಗಾನಿಸ್ತಾನ ಜನರದ್ದು. ನಾಲ್ಕೈದು ತಿಂಗಳ ಹಿಂದೆಯೂ ಅಲ್ಲಿನ ಹೆರಾತ್‌ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರ ದಾಳಿ ನಡೆದಿತ್ತು. ಕಾಬೂಲ್‌ನಲ್ಲಿ ಯಾವಾಗಲೂ ಉಗ್ರರ ಉಪಟಳ. ಜಲಾಲಾಬಾದ್‌ನಲ್ಲಿಯೂ ಆತ್ಮಾಹುತಿ ಬಾಂಬ್‌ ದಾಳಿ ಸಹಜವಾಗಿದೆ.

ಜೀವವನ್ನು ನಿತ್ಯ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಸ್ಥಿತಿಯಿರುವ ಅಫ್ಗಾನಿಸ್ತಾನದಲ್ಲಿ ಕ್ರಿಕೆಟ್‌ ಹೊಸ ಆಶಾವಾದ ಮೂಡಿಸಿದೆ. ಈ ತಂಡದವರು ಕೆಲವೇ ವರ್ಷಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಏಳು ವರ್ಷಗಳ ಹಿಂದೆ ಮೊದಲ ಬಾರಿಗೆ ಏಕದಿನ ಮಾದರಿ ಆಡುವ ಅವಕಾಶ ಪಡೆದಿದ್ದ ತಂಡ ಈಗ ಟೆಸ್ಟ್‌ಗೂ ಮಾನ್ಯತೆ ಗಳಿಸಿಕೊಂಡಿದೆ.

ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಸಭೆಯಲ್ಲಿ ಐರ್ಲೆಂಡ್‌ ಮತ್ತು ಅಫ್ಗಾನಿಸ್ತಾನ ತಂಡಗಳಿಗೆ ಐಸಿಸಿಯ ಪೂರ್ಣ ಸದಸ್ವತ್ಯ ಲಭಿಸಿದೆ. ಈ ಎರಡೂ ರಾಷ್ಟ್ರಗಳು 2018ರಲ್ಲಿ ಟೆಸ್ಟ್‌ ಆಡಲಿವೆ. ಅಫ್ಗಾನಿಸ್ತಾನದಲ್ಲಿ ಕ್ರಿಕೆಟ್‌ ಈ ಮಟ್ಟಕ್ಕೆ ಬೆಳೆಯಲು ಕಾರಣವಾದ ಭಾರತದ ವಿರುದ್ಧವೇ ಮೊದಲ ಟೆಸ್ಟ್‌ ನಡೆಯಲಿರುವುದು ವಿಶೇಷ.

ಸಣ್ಣ ರಾಷ್ಟ್ರಗಳೊಂದಿಗೆ ಪೈಪೋಟಿ

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಪರ್ಧಾತ್ಮಕತೆ ತೋರಿಸಬೇಕಿದ್ದ ಕಾರಣ ಅಫ್ಗಾನಿಸ್ತಾನ ಆರಂಭದ ವರ್ಷಗಳಲ್ಲಿ ಸ್ಕಾಟ್ಲೆಂಡ್‌, ಐರ್ಲೆಂಡ್‌, ಅಮೆರಿಕ ಹೀಗೆ ಕ್ರಿಕೆಟ್‌ನ ‘ಲಿಲ್ಲಿಪುಟ್‌’ ದೇಶಗಳ ಜೊತೆ ಆಡಿ ಸಾಮರ್ಥ್ಯ ಸಾಬೀತು ಮಾಡಿತ್ತು.

2010ರಲ್ಲಿ ಐಸಿಸಿ ಅಂತರರಾಷ್ಟ್ರೀಯ ಕಪ್‌ನಲ್ಲಿ ಚಾಂಪಿಯನ್‌, 2010ರಲ್ಲಿ ರನ್ನರ್ಸ್‌ ಅಪ್‌, ಟ್ವೆಂಟಿ–20 ವಿಶ್ವಕಪ್‌ಗೆ ಅರ್ಹತೆ ಪಡೆಯಲು ನಡೆದ ಟೂರ್ನಿಯಲ್ಲಿ ಮೊದಲ ಸ್ಥಾನ, 2010 ಮತ್ತು 2014ರ ಏಷ್ಯನ್‌ ಕ್ರೀಡಾಕೂಟಗಳಲ್ಲಿ ಬೆಳ್ಳಿ ಪದಕ, 2011 ಮತ್ತು 2013ರಲ್ಲಿ ಎ.ಸಿ.ಸಿ. ಟ್ವೆಂಟಿ–20 ಕಪ್‌ನಲ್ಲಿ ಚಾಂಪಿಯನ್‌ ಹೀಗೆ ಸಣ್ಣ ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ಜಯಿಸಿದ್ದ ಅಫ್ಗಾನಿಸ್ತಾನ ಈಗ ಟೆಸ್ಟ್‌ ಆಡುವ ತಂಡಗಳಿಗೆ ಸವಾಲೊಡ್ಡುವ ಮಟ್ಟಕ್ಕೆ ಬೆಳೆದಿದೆ.

ಅಫ್ಗಾನಿಸ್ತಾನ ತಂಡಕ್ಕೆ 2009ರಲ್ಲಿ ಏಕದಿನ ಕ್ರಿಕೆಟ್‌ ಆಡುವ ಮಾನ್ಯತೆ ಲಭಿಸಿದ ಬಳಿಕ ಇದುವರೆಗೆ 86 ಪಂದ್ಯಗಳನ್ನಾಡಿದ್ದು, 43ರಲ್ಲಿ ಗೆಲುವು ಪಡೆದಿದೆ. 41ರಲ್ಲಿ ಸೋಲು ಕಂಡಿದ್ದು, 2 ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ. ಟೆಸ್ಟ್‌ ಆಡುವ ಮಾನ್ಯತೆ ಹೊಂದಿರುವ ಜಿಂಬಾಬ್ವೆ ಎದುರು ಏಕದಿನ ಮತ್ತು ಟ್ವೆಂಟಿ–20 ಸರಣಿ ಜಯಿಸಿದೆ. ಹೋದ ವರ್ಷ ನಾಗಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ವಿಶ್ವ ಟ್ವೆಂಟಿ–20 ಟೂರ್ನಿಯ ಚಾಂಪಿಯನ್‌ ವೆಸ್ಟ್‌ ಇಂಡೀಸ್ ತಂಡವನ್ನು ಮಣಿಸಿತ್ತು.

ಅಫ್ಗಾನಿಸ್ತಾನ ತಂಡ ವರ್ಷದಿಂದ ವರ್ಷಕ್ಕೆ ತನ್ನ ಬೆಳವಣಿಗೆಯ ವೇಗ ಹೆಚ್ಚಿಸಿಕೊಳ್ಳುತ್ತಿದೆ. 2010ರ ಟ್ವೆಂಟಿ–20 ವಿಶ್ವ ಟೂರ್ನಿಯಲ್ಲಿ ಆಡಿದ ಎಲ್ಲಾ 12 ಪಂದ್ಯಗಳಲ್ಲಿ ಸೋತಿತ್ತು. 2012ರಲ್ಲಿ ಒಂದು ಪಂದ್ಯದಲ್ಲಷ್ಟೇ ಗೆಲುವು ಪಡೆದಿತ್ತು. ನಂತರದ ವಿಶ್ವ ಟೂರ್ನಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಹೋದ ವರ್ಷ ಭಾರತದಲ್ಲಿ ನಡೆದ ಟೂರ್ನಿಯಲ್ಲಿ ಏಳು ಪಂದ್ಯಗಳಲ್ಲಿ ಜಯ ಸಾಧಿಸಿತ್ತು.

ಆ ಟೂರ್ನಿಯಲ್ಲಿ ಸ್ಕಾಟ್ಲೆಂಡ್‌, ಹಾಂಕಾಂಗ್‌, ಜಿಂಬಾಬ್ವೆ ತಂಡಗಳನ್ನು ಮಣಿಸಿತ್ತು. ‘ಸೂಪರ್‌–10’ ಹಂತದಲ್ಲಿ ಬಲಿಷ್ಠ ಶ್ರೀಲಂಕಾ ತಂಡಕ್ಕೆ ಕಠಿಣ ಪೈಪೋಟಿ ಒಡ್ಡಿತ್ತು. ಅಫ್ಗಾನಿಸ್ತಾನ ತಂಡ ಇದೇ ರೀತಿಯ ಸಾಮರ್ಥ್ಯ ಟೆಸ್ಟ್‌ನಲ್ಲಿಯೂ ತೋರಿಸಿದರೆ ಬಲಿಷ್ಠ ತಂಡವಾಗಿ ಬೆಳೆಯುವ ಕಾಲ ದೂರವೇನಿಲ್ಲ.

17 ವರ್ಷಗಳ ಬಳಿಕ ಅವಕಾಶ

ಟೆಸ್ಟ್‌ ಕ್ರಿಕೆಟ್‌ ಆಡಲು 17 ವರ್ಷಗಳ ನಂತರ ಐಸಿಸಿ ಅವಕಾಶ ಕೊಟ್ಟಿದೆ. 1982ರವರೆಗೆ ಏಳು ರಾಷ್ಟ್ರಗಳಷ್ಟೇ ಟೆಸ್ಟ್ ಆಡುತ್ತಿದ್ದವು. ಅದೇ ವರ್ಷ ಶ್ರೀಲಂಕಾ ಟೆಸ್ಟ್‌ನಲ್ಲಿ ಪಾಲ್ಗೊಳ್ಳುವ ಮಾನ್ಯತೆ ಪಡೆದುಕೊಂಡಿತು. 1992ರಲ್ಲಿ ಜಿಂಬಾಬ್ವೆ ಮತ್ತು 2000ರಲ್ಲಿ ಬಾಂಗ್ಲಾದೇಶ ಚೊಚ್ಚಲ ಟೆಸ್ಟ್‌ ಆಡಿದವು. ಈಗ ಐರ್ಲೆಂಡ್‌ ಮತ್ತು ಅಫ್ಗಾನಿಸ್ತಾನ ಮುಂದಿನ ವರ್ಷ ಚೊಚ್ಚಲ ಟೆಸ್ಟ್‌ ಆಡಲಿವೆ. ಅಫ್ಗಾನಿಸ್ತಾನ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ ಸರಣಿ ಆಯೋಜಿಸಲು ಐಸಿಸಿ ನಿರ್ಧರಿಸಿತ್ತು. ಆದರೆ ಭಾರತದ ಜೊತೆ ಆಫ್ಗನ್‌ಗೆ ಐತಿಹಾಸಿಕ ನಂಟು ಇರುವುದರಿಂದ ಈ ತಂಡಗಳ ನಡುವೆ ಟೆಸ್ಟ್‌ ನಡೆಸಲು ಐಸಿಸಿ ಸಮ್ಮತಿಸಿತು.

ಭಾರತದ ನೆರವು

ಅಫ್ಗಾನಿಸ್ತಾನದಲ್ಲಿ ಕಡಿಮೆ ಅವಧಿಯಲ್ಲಿ ಕ್ರಿಕೆಟ್‌ ಬೆಳೆಯಲು ಬಿಸಿಸಿಐ ನೀಡಿದ ನೆರವು ಕಾರಣ. ಅಭ್ಯಾಸ ನಡೆಸಲು, ಪಂದ್ಯಗಳನ್ನಾಡಲು ಅಲ್ಲಿ ಕ್ರಿಕೆಟ್‌ ಕ್ರೀಡಾಂಗಣಗಳಿಲ್ಲ. ಕ್ರೀಡಾಂಗಣ ನಿರ್ಮಿಸಿದರೂ ಅಲ್ಲಿಗೆ ಹೋಗಿ ಸರಣಿ ಆಡುವಷ್ಟು ಸುರಕ್ಷತೆ ಇಲ್ಲ. ಆದ್ದರಿಂದ ಗ್ರೇಟರ್‌ ನೋಯ್ಡಾದಲ್ಲಿರುವ ಕ್ರೀಡಾಂಗಣವನ್ನು ಅಫ್ಗಾನಿಸ್ತಾನ ತಂಡಕ್ಕೆ ‘ತವರಿನ’ ಕ್ರೀಡಾಂಗಣ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ಕೊಟ್ಟಿದೆ. ಭಾರತದ ಕೆಲ ಮಾಜಿ ಕ್ರಿಕೆಟಿಗರನ್ನು ಅಲ್ಲಿನ ತಂಡಕ್ಕೆ ಸಿಬ್ಬಂದಿಯಾಗಿ ಕಳುಹಿಸಿಕೊಟ್ಟಿದೆ. ಆರ್ಥಿಕ ನೆರವನ್ನೂ ನೀಡಿದೆ. ಶ್ರೀಲಂಕಾದ ದಂಬುಲ್ಲಾ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿನ ಮೈದಾನಗಳು ಅಫ್ಗಾನಿಸ್ತಾನಕ್ಕೆ ತವರಿನ ಕ್ರೀಡಾಂಗಣಗಳು. ಈಗ ಕಂದಹಾರ್‌ ಮತ್ತು ಜಲಾಲಬಾದ್‌ನಲ್ಲಿ ಕ್ರೀಡಾಂಗಣ ನಿರ್ಮಾಣ ಕಾರ್ಯ ನಡೆಯುತ್ತಿದೆ.

***

ಐಪಿಎಲ್‌ನಲ್ಲಿ ಮಿಂಚಿದ ಅಫ್ಗಾನಿಸ್ತಾನ ಕ್ರಿಕೆಟಿಗರು

ಅಂತರರಾಷ್ಟ್ರೀಯ ಕ್ರಿಕೆಟ್‌ ಆಡಲು ಆರಂಭಿಸಿದ ಕೆಲವೇ ವರ್ಷಗಳಲ್ಲಿ ಅಫ್ಗಾನಿಸ್ತಾನ ಕೆಲವು ಆಟಗಾರರು ಐಪಿಎಲ್‌ನಲ್ಲಿ ಅವಕಾಶ ಪಡೆದಿದ್ದು ವಿಶೇಷ.

ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ 2017ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿ ಆಡಿದ್ದರು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅವರಿಗೆ ಅಂತಿಮ ಹನ್ನೊಂದರ ತಂಡದಲ್ಲಿಯೂ ಅವಕಾಶ ಲಭಿಸಿತ್ತು.

ಇದರಿಂದ ಅರ್ಮಾನ್‌ ಐಪಿಎಲ್‌ನಲ್ಲಿ ಆಡಿದ ಆಫ್ಗನ್‌ ಮೊದಲ ಕ್ರಿಕೆಟಿಗ ಎನ್ನುವ ಐತಿಹಾಸಿಕ ದಾಖಲೆ ಮಾಡಿದರು. ಈ ಆಟಗಾರನಿಗೆ ಸನ್‌ರೈಸರ್ಸ್‌ ಫ್ರಾಂಚೈಸ್‌ ₹ 4 ಕೋಟಿ ನೀಡಿ ಖರೀದಿಸಿತ್ತು. ಆಲ್‌ರೌಂಡರ್‌ ಮೊಹಮ್ಮದ್‌ ನಬಿ ಅವರನ್ನು ₹ 30 ಲಕ್ಷಕ್ಕೆ ಸನ್‌ರೈಸರ್ಸ್‌ ಆಯ್ಕೆ ಮಾಡಿಕೊಂಡಿತ್ತು. ಇವರಿಬ್ಬರೂ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿಯೂ ಆಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry