7

ಪರೀಕ್ಷಾ ಭಯವಿಲ್ಲದ ಹೊಸ ವಿಧಾನ

Published:
Updated:
ಪರೀಕ್ಷಾ ಭಯವಿಲ್ಲದ ಹೊಸ ವಿಧಾನ

ದೇಶದಲ್ಲಿ ಸದ್ಯಕ್ಕೆ ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ), ಐಸಿಎಸ್‌ಇ (ಇಂಡಿಯನ್‌ ಸರ್ಟಿಫಿಕೆಟ್‌ ಫಾರ್‌ ಸೆಕೆಂಡರಿ ಎಜುಕೇಷನ್‌) ಹಾಗೂ ವಿವಿಧ ರಾಜ್ಯಗಳ ಪಠ್ಯಕ್ರಮ ಆಧಾರಿತ ಶಾಲೆಗಳೇ ಹೆಚ್ಚಾಗಿವೆ. ಬಹುತೇಕ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಈ ಪಠ್ಯಕ್ರಮಗಳನ್ನೇ ಅಳವಡಿಸಿಕೊಂಡಿವೆ.

ಇವುಗಳ ಜೊತೆಗೆ ಮಕ್ಕಳಿಗೆ ಸರಳವಾಗಿ ಅರ್ಥವಾಗುವಂತೆ ಮಾಡಲು ಮಾಂಟೆಸ್ಸರಿ ವಿಧಾನವೂ ಜನಪ್ರಿಯವಾಗಿದೆ. ಮಗು ಆಡುತ್ತಾ, ನಲಿಯುತ್ತಾ ಕಲಿಯುವ ವಿಧಾನ ಇದು. ಪಾಶ್ಚಾತ್ಯ ದೇಶಗಳಲ್ಲಂತೂ ಮಕ್ಕಳ ಕಲಿಕಾ ವಿಧಾನಗಳಲ್ಲಿ ಸಾಕಷ್ಟು ವಿಭಿನ್ನ ಪ್ರಯೋಗಗಳು ಆಗಿವೆ.

ಶಿಕ್ಷಣದಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ ಹಂತಗಳಿವೆ. ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಹಂತವು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಬುನಾದಿ ಇದ್ದಂತೆ. ಈ ವಯಸ್ಸಿನಲ್ಲಿ ಮಕ್ಕಳು ಹೆಚ್ಚು ಸೃಜನಶೀಲರಾಗಿರುತ್ತಾರೆ. ಅವರ ಕಲಿಕಾ ಸಾಮರ್ಥ್ಯವೂ ಹೆಚ್ಚಿರುತ್ತದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಅವರ ಬೌದ್ಧಿಕ, ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಪೂರಕವಾದ ಶಿಕ್ಷಣಕ್ರಮ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ದೇಶದಲ್ಲಿಯೂ ಹಲವು ಪ್ರಯೋಗಗಳು ನಡೆಯುತ್ತಿವೆ.

ಕ್ರಿಸಾಲಿಸ್‌ನಿಂದ ನೂತನ ವಿಧಾನ ಪರಿಚಯ: ಈ ನಿಟ್ಟಿನಲ್ಲಿ ಚೆನ್ನೈ ಮೂಲದ ‘ಕ್ರಿಸಾಲಿಸ್‌’ ಸಂಸ್ಥೆಯೂ ಒಂದು. ಕ್ರಿಸಾಲಿಸ್‌ ಎಂದರೆ ಚಿಟ್ಟೆ ಅಥವಾ ಪತಂಗದ ರೂಪ ತಾಳುವ ಹುಳು ಎಂದರ್ಥ. ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ 16 ವರ್ಷದಿಂದ ಕೆಲಸ ಮಾಡುತ್ತಿರುವ ಈ ಸಂಸ್ಥೆಯು, ಅಂಗನವಾಡಿಯಿಂದ 6ನೇ ತರಗತಿವರೆಗಿನ ಮಕ್ಕಳಿಗೆ ಪರೀಕ್ಷಾ ಭಯವಿಲ್ಲದ ‘ನೂತನ ಶಿಕ್ಷಣ ವಿಧಾನ’ ರೂಪಿಸಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಅದನ್ನು ಅಳವಡಿಸಿಕೊಳ್ಳಲು ದೇಶದ ಶಾಲೆಗಳಿಗೆ ಅವಕಾಶ ಕಲ್ಪಿಸಿದೆ. ಮಕ್ಕಳ ಮನೋ, ಬೌದ್ಧಿಕ ಮತ್ತು ಕಲಿಕಾ ಸಾಮರ್ಥ್ಯಕ್ಕೆ ಪೂರಕವಾಗಿ ಈ ವಿಧಾನ ರೂಪಿಸಿರುವುದಾಗಿ ಸಂಸ್ಥೆ ಹೇಳಿದೆ.

ಮಕ್ಕಳನ್ನು ಚಿಂತನೆಗೆ ಹಚ್ಚಲು ಪ್ರೇರೇಪಿಸಿ, ಅವರ ಯೋಚನಾ ಮತ್ತು ಕಲ್ಪನಾಶಕ್ತಿಯನ್ನು ಉದ್ದೀಪಿಸುವುದು, ಅವರ ಕುತೂಹಲ ತಣಿಸುವುದರ ಜತೆಗೆ ಪ್ರಶ್ನಿಸುವ ಮನೋಭಾವ ಬೆಳೆಸುವುದು, ಮಕ್ಕಳ ಆಂತರಿಕ ಸೌಂದರ್ಯ, ಸಾಮರ್ಥ್ಯ ಮತ್ತು ಕೌಶಲವನ್ನು ಗುರುತಿಸಿ, ಪ್ರೋತ್ಸಾಹಿಸಿ, ಪೋಷಿಸಲು ನೂತನ ವಿಧಾನ ಪೂರಕವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಶಿಕ್ಷಣತಜ್ಞರು, ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳಿಗೆ ಚೆನ್ನೈನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಕ್ರಿಸಾಲಿಸ್‌ ಸಂಸ್ಥೆ ತನ್ನ ‘ನೂತನ ಶೈಕ್ಷಣಿಕ ವಿಧಾನ’ದ ರೂಪುರೇಷೆಗಳ ಕುರಿತು ಮಾಹಿತಿ ನೀಡಿದೆ.

ಭಯ ಮುಕ್ತ ವಿಧಾನ: ‘ದೇಶದಲ್ಲಿ ಈಗಿರುವ ಶೈಕ್ಷಣಿಕ ವಿಧಾನಗಳು ಪರೀಕ್ಷಾ ಭಯ, ಅಂಕಗಳಿಸುವ ಒತ್ತಡ, ಉದ್ಯೋಗದ ಆಕಾಂಕ್ಷೆಯನ್ನು ಮಕ್ಕಳು ಮತ್ತು ಪೋಷಕರಲ್ಲಿ ಹುಟ್ಟುಹಾಕಿವೆ. ಈ ಭೀತಿಯಿಂದ ಮಕ್ಕಳನ್ನು ಹೊರತಂದು, ಖುಷಿಯಿಂದ ಕಲಿಕೆಯಲ್ಲಿ ತೊಡಗುವಂತೆ ಈ ನೂತನ ವಿಧಾನ ಮಾಡುತ್ತದೆ’ ಎನ್ನುತ್ತಾರೆ, ಸಂಸ್ಥೆಯ ಸಂಸ್ಥಾಪಕಿ ಮತ್ತು ಸಿಇಒ ಚಿತ್ರಾ ರವಿ.

‘ಮಕ್ಕಳಲ್ಲಿರುವ ವಿಶೇಷ ಮತ್ತು ವಿಭಿನ್ನ ಗುಣಗಳನ್ನು ಗುರುತಿಸುವಲ್ಲಿ ಈಗಿನ ವಿಧಾನಗಳು ವಿಫಲವಾಗಿವೆ. ಆದರೆ ನೂತನ ಶಿಕ್ಷಣ ವಿಧಾನವು ಕಲಿಕಾ ವರ್ಷದ ಪೂರ್ತಿ ಮಕ್ಕಳ ಯೋಚನೆ – ಚಿಂತನೆಯನ್ನು ಗುರುತಿಸಿ, ಅದನ್ನು ಪ್ರೋತ್ಸಾಹಿಸುತ್ತದೆ. ಜತೆಗೆ ನಿರಂತರ ಮೌಲ್ಯಮಾಪನ ಮಾಡುತ್ತದೆ. ಮಕ್ಕಳ ಆಸಕ್ತಿಯ ಕ್ಷೇತ್ರ ತಿಳಿಯಲೂ ಅನುಕೂಲಕರವಾಗಿದೆ’ ಎನ್ನುತ್ತಾರೆ ಅವರು.

ಪಠ್ಯದಲ್ಲಿ ಸಂಯೋಜನೆ: ‘ಮಕ್ಕಳು ಶಾಲಾ ಕೊಠಡಿಗಳಲ್ಲಿಯೇ ಶೇ.76ರಷ್ಟು ಸಮಯ ಕಳೆಯುತ್ತಾರೆ. ಹೀಗಾಗಿ ಪಠ್ಯದ ಮೂಲಕವೇ ನೂತನ ಶೈಕ್ಷಣಿಕ ವಿಧಾನವನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಕುರಿತು ಸಮಗ್ರ ಪಠ್ಯ ಲಭ್ಯವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಆಸಕ್ತ ಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡುತ್ತೇವೆ’ ಎಂದು ಅವರು ವಿವರಿಸುತ್ತಾರೆ.

‘ದೇಶದ ಯಾವುದೇ ಭಾಗದ ಸಿಬಿಎಸ್‌ಇ, ಐಸಿಎಸ್‌ಇ, ರಾಜ್ಯ ಪಠ್ಯಕ್ರಮಗಳ ಶಾಲೆಗಳು ಈ ವಿಧಾನ ಅಳವಡಿಸಿಕೊಳ್ಳಬಹುದು. ಈ ಪದ್ಧತಿಯಲ್ಲಿ ಪರೀಕ್ಷೆಗಳು ಮುಖ್ಯವೇ ಅಲ್ಲ. ಈ ವಿಧಾನದಲ್ಲಿ ಪರೀಕ್ಷೆಗಳನ್ನು ಆಧರಿಸಿ, ಮಕ್ಕಳ ಕಲಿಕಾ ಮಟ್ಟವನ್ನು ಅಳೆಯುವುದಿಲ್ಲ’ ಎಂದು ಅವರು ತಮ್ಮ ನೂತನ ಶಿಕ್ಷಣ ವಿಧಾನದ ಕುರಿತು ಮಾಹಿತಿ ನೀಡಿದರು.

ಈಗಿನ ವಿಧಾನಗಳಲ್ಲಿ ಪರೀಕ್ಷಾ ಭಯದಿಂದಾಗಿಯೇ ‘ಕಲಿಕೆಯಲ್ಲಿ ಹಿಂದುಳಿದ ಮಕ್ಕಳ’ ಸಂಖ್ಯೆ ಹೆಚ್ಚುತ್ತಿವೆ. ನೂತನ ವಿಧಾನದಲ್ಲಿ ಹೀಗಾಗುವುದಿಲ್ಲ. ಪ್ರತಿ ಮಕ್ಕಳ ಕಲಿಕೆಯನ್ನು ಇದು ಉತ್ತಮ ಪಡಿಸುತ್ತದೆ’ ಎಂದು ಅವರು ಹೇಳಿದರು.

ಮಾಹಿತಿಗೆ ವೆಬ್‌ಸೈಟ್‌ (http://dream.chrysalis.world) ವೀಕ್ಷಿಸಬಹುದು.***

ಉತ್ತಮ ಪ್ರತಿಕ್ರಿಯೆ

‘ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶದ ಕೆಲವು ಶಾಲೆಗಳಲ್ಲಿ ಮೂರು ವರ್ಷಗಳಿಂದ ಪ್ರಾಯೋಗಿಕವಾಗಿ ಕೆಲವು ತರಗತಿಗಳಲ್ಲಿ ಈ ವಿಧಾನ ಅಳವಡಿಸಿ, ಪರೀಕ್ಷಿಸಲಾಗಿದ್ದು, ಉತ್ತಮ ಫಲಿತಾಂಶ ಬಂದಿದೆ’ ಎನ್ನುತ್ತಾರೆ, ‘ಕ್ರಿಸಾಲಿಸ್‌’ ಸಿಇಒ ಚಿತ್ರಾ.

‘ಈ ವಿಧಾನವನ್ನು ವಿವಿಧ ರಾಜ್ಯಗಳಲ್ಲಿ 450 ಶಾಲೆಗಳು ಅಳವಡಿಸಿಕೊಂಡಿವೆ. ಅಲ್ಲಿನ ಶಾಲಾ ಕೊಠಡಿಗಳು ಮಕ್ಕಳ ಯೋಚನಾ ಕೊಠಡಿಗಳಾಗಿ (Think Room) ರೂಪುಗೊಂಡಿವೆ. ದೇಶದ 15 ಲಕ್ಷ ಶಾಲೆಗಳಲ್ಲಿಯೂ ಈ ವಿಧಾನ ಅಳವಡಿಸಬೇಕು ಎಂಬ ಕನಸಿದೆ. ಅದಕ್ಕಾಗಿ ಅಭಿಯಾನ ಕೈಗೊಂಡಿದ್ದೇವೆ. ಈ ಕಾರ್ಯಕ್ಕೆ ದೇಶದ 1,420 ಶಾಲೆಗಳ ಮುಖ್ಯಸ್ಥರು, ವಿವಿಧೆಡೆಯ 800 ಪೋಷಕರು, 350 ಶಿಕ್ಷಕರು ಕೈಜೋಡಿಸಿದ್ದಾರೆ’ ಎಂದು ಅವರು ಪ್ರತಿಕ್ರಿಯಿಸುತ್ತಾರೆ.

‘ಈ ವಿಧಾನ ಕುರಿತ ಪ್ರಸ್ತಾವವನ್ನು ಈಗಾಗಲೇ ಮಾನವ ಸಂಪನ್ಮೂಲ ಸಚಿವಾಲಯ ಮತ್ತು ಎನ್‌ಸಿಇಆರ್‌ಟಿಗೆ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳು ಇದನ್ನು ಪಠ್ಯದಲ್ಲಿ ಅಳವಡಿಸಿಕೊಂಡರೆ ಮಕ್ಕಳ ಕಲಿಕೆಗೆ ಅನುಕೂಲವಾಗುತ್ತದೆ’ ಎಂಬುದು ಅವರ ವಿವರಣೆ.

‘ಕಲಿಕಾ ಗುಣಮಟ್ಟ ಹೆಚ್ಚಿಸಲು ಕ್ರಿಸಾಲಿಸ್‌ 16 ವರ್ಷದಿಂದ ಶ್ರಮಿಸುತ್ತಿದೆ. ಈ ಅವಧಿಯ ಅನುಭವವನ್ನು ಆಧರಿಸಿ ನೂತನ ವಿಧಾನ ಸಿದ್ಧಪಡಿಸಿದೆ. ಫಿನ್‌ಲೆಂಡ್‌, ನ್ಯೂಜಿಲೆಂಡ್‌ಗಳ ಶೈಕ್ಷಣಿಕ ಪದ್ಧತಿಯನ್ನು ಅಧ್ಯಯಿಸಿ, ನಮ್ಮ ಸಂಸ್ಕೃತಿಗೆ ಅನ್ವಯವಾಗುವ ವಿಧಾನವನ್ನು ಅಂತಿಮಗೊಳಿಸಲಾಗಿದೆ’ ಎಂದು ಅವರು ತಿಳಿಸುತ್ತಾರೆ.

‘ನಮ್ಮ ಸಂಸ್ಥೆ ಕೈಗೊಂಡಿರುವ ಶೈಕ್ಷಣಿಕ ಸುಧಾರಣಾ ಚಟುವಟಿಕೆಗಳಿಗೆ ಐಬಿಎಂ, ಮೈಕ್ರೋಸಾಫ್ಟ್‌, ಡೆಲ್‌ ಕಂಪೆನಿಗಳು ‘ಸಾಮಾಜಿಕ ಹೊಣೆಗಾರಿಕೆ’ಯಡಿ (ಸಿಎಸ್‌ಆರ್‌) ನೆರವು ನೀಡುತ್ತಿವೆ’ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry